ADVERTISEMENT

ಅಮೆರಿಕ: ಭಾರತ ಸೇರಿ ಏಳು ದೇಶಗಳಿಗೆ ಟಿ.ಬಿ ಚಿಕಿತ್ಸೆಗಾಗಿ ₹417 ಕೋಟಿ ನೆರವು

ಪಿಟಿಐ
Published 5 ಜೂನ್ 2021, 6:34 IST
Last Updated 5 ಜೂನ್ 2021, 6:34 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಕ್ಷಯರೋಗದ ವಿರುದ್ಧ ಹೋರಾಡಲು ಭಾರತ ಸೇರಿದಂತೆ ಇತರೆ ಏಳು ರಾಷ್ಟ್ರಗಳಿಗೆ ₹417 ಕೋಟಿ (57 ಮಿಲಿಯನ್‌ ಡಾಲರ್‌) ನೆರವು ನೀಡುವುದಾಗಿ ಅಮೆರಿಕ ಶುಕ್ರವಾರ ಘೋಷಿಸಿದೆ.

ಕ್ಷಯರೋಗದಿಂದ (ಟಿ.ಬಿ) ತೊಂದರೆಗೀಡಾಗಿರುವ ಏಳು ರಾಷ್ಟ್ರಗಳಾದ ಭಾರತ, ಬಾಂಗ್ಲಾದೇಶ, ಇಂಡೊನೇಷ್ಯಾ, ಫಿಲಿಪ್ಪೀನ್ಸ್‌, ದಕ್ಷಿಣ ಆಫ್ರಿಕಾ, ತಜಕಿಸ್ತಾನ ಮತ್ತು ಉಕ್ರೇನ್‌ಗೆ ಕ್ಷಯರೋಗದ ಚಿಕಿತ್ಸೆಗಾಗಿ ₹417 ಕೋಟಿ ನೆರವು ನೀಡುವುದಾಗಿ ಅಮೆರಿಕ ಹೇಳಿದೆ.

‘ಸಂಬಂಧಿಸಿದ ದೇಶಗಳ ಸರ್ಕಾರಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದ್ದು, ಇದು ಕೋವಿಡ್‌ನಿಂದ ತೊಂದರೆಗೀಡಾಗಿರುವ ದೇಶಗಳಿಗೆ ಚೇತರಿಸಿಕೊಳ್ಳಲು ನೆರವಾಗಲಿದೆ’ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

‘2019ಕ್ಕೆ ಹೋಲಿಸಿದರೆ 2020ರಲ್ಲಿ ಕೋವಿಡ್‌–19ರಿಂದಾಗಿ 23 ರಾಷ್ಟ್ರಗಳಲ್ಲಿ 10 ಲಕ್ಷಕ್ಕೂ ಕಡಿಮೆ ಕ್ಷಯರೋಗಿಗಳಿಗೆ ಚಿಕಿತ್ಸೆ ದೊರಕಿತ್ತು. ಕಡಿಮೆ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ಕೋವಿಡ್‌ನೊಂದಿಗೆ ಟಿ.ಬಿಯೂ ಸಾಂಕ್ರಾಮಿಕ ರೋಗವಾಗಿ ಮಾರ್ಪಾಡಾಗುತ್ತಿದೆ. ಈ ರಾಷ್ಟ್ರಗಳಲ್ಲಿ ಪ್ರತಿ ವರ್ಷ 1 ಕೋಟಿಗೂ ಹೆಚ್ಚು ಜನರು ಕ್ಷಯರೋಗಕ್ಕೆ ತುತ್ತಾಗುತ್ತಿದ್ದಾರೆ. ಅಲ್ಲದೆ 14 ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ’ ಎಂದು ಯುಎಸ್‌ ಏಜೆನ್ಸಿ ಫಾರ್‌ ಇಂಟರ್‌ನ್ಯಾಷನಲ್‌ ಡೆವಲಪ್‌ಮೆಂಟ್‌ (ಯುಎಸ್‌ಎಐಡಿ) ಹೇಳಿದೆ.

‘ಟಿ.ಬಿ ಚಿಕಿತ್ಸೆಗಳ ಮೇಲೆ ಈ ಸಾಂಕ್ರಾಮಿಕವು ಭಾರಿ ಪರಿಣಾಮ ಬೀರಿದೆ. ಈ ನೆರವಿನ ಮೂಲಕ ಟಿ.ಬಿ ಮತ್ತು ಕೋವಿಡ್‌–19 ಪರೀಕ್ಷೆಗಳನ್ನು ಹೆಚ್ಚಿಸಲಾಗುವುದು. ಕೊರೊನಾ ವೈರಸ್‌ನ ಪರಿಣಾಮದಿಂದಾಗಿ 2025ರ ವೇಳೆಗೆ 63 ಲಕ್ಷ ಜನರು ಕ್ಷಯ ರೋಗಕ್ಕೆ ಒಳಗಾಗಬಹುದು ಮತ್ತು 14 ಲಕ್ಷ ಜನರು ಹೆಚ್ಚುವರಿಯಾಗಿ ಸಾವಿಗೀಡಾಗಬಹುದು’ ಎಂದು ಯುಎಸ್‌ಎಐಡಿ ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.