ವಾಷಿಂಗ್ಟನ್: ಅಮೆರಿಕ ಆಮದು ಮಾಡಿಕೊಳ್ಳುವ ಚೀನಾದ ಉತ್ಪನ್ನಗಳ ಮೇಲೆ ಶೇ 245ರಷ್ಟು ಪ್ರತಿಸುಂಕ ವಿಧಿಸಲಾಗುತ್ತದೆ ಎಂದು ಶ್ವೇತಭವನ ಹೇಳಿದೆ.
ಇದರಿಂದ ಪ್ರತಿಸುಂಕ ಕುರಿತು ಜಗತ್ತಿನ ಎರಡು ದೊಡ್ಡ ಆರ್ಥಿಕ ಶಕ್ತಿಗಳಾದ ಅಮೆರಿಕ ಮತ್ತು ಚೀನಾ ನಡುವಿನ ಸಂಘರ್ಷ ಮತ್ತಷ್ಟು ತಾರಕಕ್ಕೇರಿದಂತಾಗಿದೆ.
‘ಅಮೆರಿಕದ ಬೋಯಿಂಗ್ ಕಂಪನಿಯಿಂದ ವಿಮಾನಗಳನ್ನು ಪಡೆಯದಂತೆ ಚೀನಾ ತನ್ನ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ಟ್ರೂತ್ ಸೋಷಿಯಲ್’ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಕಿಡಿಕಾರಿದ್ದಾರೆ.
‘ಈ ವ್ಯಾಪಾರ ಸಮರದಲ್ಲಿ ಅಮೆರಿಕ ಮತ್ತು ದೇಶದ ರೈತರ ಹಿತವನ್ನು ಕಾಪಾಡಲು ಪ್ರತಿಜ್ಞೆ ಮಾಡಿರುವುದಾಗಿ’ ಹೇಳಿದ್ದಾರೆ.
‘ದೇಶದ ಹೊಸ ವ್ಯಾಪಾರ ಒಪ್ಪಂದಗಳ ಕುರಿತು ಚರ್ಚಿಸಲು 75 ದೇಶಗಳು ಈಗಾಗಲೇ ಸಂಪರ್ಕ ಮಾಡಿವೆ. ಇದೆಲ್ಲದರ ಪರಿಣಾಮ, ಕೆಲ ಸರಕುಗಳ ಮೇಲಿನ ಗರಿಷ್ಠ ಪ್ರತಿಸುಂಕಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ. ಆದರೆ ಚೀನಾ ಮಾತ್ರ ಪ್ರತೀಕಾರ ತೀರಿಸಿಕೊಳ್ಳುತ್ತಿದೆ’ ಎಂದು ಶ್ವೇತಭವನ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ದೂರಿದೆ.
‘ಇದೆಲ್ಲದರ ಪರಿಣಾಮ, ಅಮೆರಿಕವು ಆಮದು ಮಾಡಿಕೊಳ್ಳುವ ಸರಕುಗಳಿಗೆ ಸಂಬಂಧಿಸಿ ಚೀನಾ ಶೇ 245ರಷ್ಟು ಪ್ರತಿಸುಂಕ ಭರಿಸಬೇಕಾಗುತ್ತದೆ’ ಎಂದು ಅದು ಹೇಳಿದೆ.
ಅಮೆರಿಕದ ಪ್ರತಿಸುಂಕದ ನೀತಿ ವಿರುದ್ಧ ಪ್ರತೀಕಾರದ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಏಕೈಕ ದೇಶ ಚೀನಾ ಆಗಿದೆ. ಚೀನಾದಿಂದ ಆಮದಾಗುವ ಉತ್ಪನ್ನಗಳ ಮೇಲೆ ಅಮೆರಿಕ ಕೆಲ ದಿನಗಳ ಹಿಂದೆಯಷ್ಟೇ ವಿಧಿಸಿದ್ದ ಶೇ 145ರಷ್ಟು ಪ್ರತಿಸುಂಕಕ್ಕೆ ಪ್ರತೀಕಾರವಾಗಿ ಚೀನಾವು, ಅಮೆರಿಕದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೆ ಶೇ 125ರಷ್ಟು ಪ್ರತಿಸುಂಕ ವಿಧಿಸಿ ಆದೇಶಿಸಿತ್ತು. ಅಲ್ಲದೆ ಟ್ರಂಪ್ ಪ್ರಕಟಿಸಿರುವ ಹೊಸ ಸುಂಕದ ಪ್ರಮಾಣ ಪ್ರಶ್ನಿಸಿ ವಿಶ್ವ ವಾಣಿಜ್ಯ ಸಂಘಟನೆಯಲ್ಲಿ (ಡಬ್ಲ್ಯುಟಿಒ)ನಲ್ಲಿ ಕಾನೂನು ಸಮರವನ್ನೂ ಕೈಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.