ADVERTISEMENT

ಅಮೆರಿಕ–ಚೀನಾ ರಾಜತಾಂತ್ರಿಕ ಸಭೆ ಪೂರ್ಣ: ಆರೋಪ–ಪ್ರತ್ಯಾರೋಪಗಳಿಗೆ ಸೀಮಿತವಾದ ಚರ್ಚೆ

ಅಮೆರಿಕ–ಚೀನಾ ರಾಜತಾಂತ್ರಿಕ ಸಭೆ ಪೂರ್ಣ

ಏಜೆನ್ಸೀಸ್
Published 20 ಮಾರ್ಚ್ 2021, 7:28 IST
Last Updated 20 ಮಾರ್ಚ್ 2021, 7:28 IST
ಅಮೆರಿಕ ಹಾಗೂ ಚೀನಾದ ರಾಜತಾಂತ್ರಿಕರ ಮಟ್ಟದ ಸಭೆ ಬಳಿಕ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟೊನಿ ಬ್ಲಿಂಕೆನ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್‌ ಸಲ್ಲಿವನ್‌ ಇದ್ದರು  – ರಾಯಿಟರ್ಸ್‌ ಚಿತ್ರ
ಅಮೆರಿಕ ಹಾಗೂ ಚೀನಾದ ರಾಜತಾಂತ್ರಿಕರ ಮಟ್ಟದ ಸಭೆ ಬಳಿಕ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟೊನಿ ಬ್ಲಿಂಕೆನ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್‌ ಸಲ್ಲಿವನ್‌ ಇದ್ದರು  – ರಾಯಿಟರ್ಸ್‌ ಚಿತ್ರ   

ಅಂಕರೇಜ್‌: ಅಮೆರಿಕ ಮತ್ತು ಚೀನಾದ ರಾಜತಾಂತ್ರಿಕರ ನಡುವೆ ಅಲಾಸ್ಕದ ಅಂಕರೇಜ್‌ನಲ್ಲಿ ನಡೆದ ಮೊದಲ ಸಭೆ ಯಾವುದೇ ಸ್ಪಷ್ಟ ನಿರ್ಣಯ ಕೈಗೊಳ್ಳದೇ ಮುಕ್ತಾಯವಾಯಿತು.

ಜೋ ಬೈಡನ್‌ ಅವರು ಅಮೆರಿಕದ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ನಡೆದ ಸಭೆಯಲ್ಲಿ ಮುಖಾಮುಖಿಯಾದ ಉಭಯ ದೇಶಗಳ ರಾಜತಾಂತ್ರಿಕರು, ಸಭೆಯುದ್ದಕ್ಕೂ ಆರೋಪ–ಪ್ರತ್ಯಾರೋಪ ಮಾಡಿದರು.

ಸಭೆಯ ಆರಂಭದಲ್ಲಿಯೇ ಚೀನಾ ವಿರುದ್ಧ ಟೀಕಾ ಪ್ರಹಾರ ಮಾಡಿದ ಅಮೆರಿಕ, ‘ಚೀನಾದ ನಿಯೋಗ ಒಂದು ಮಹಾನ್‌ ನಾಟಕ ಮಂಡಳಿ’ ಎಂದು ಜರಿಯಿತು. ಈ ಮಾತಿಗೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಚೀನಾ,‘ಅಮೆರಿಕ ಸಹ ಕೈಯಲ್ಲಿ ಬಂದೂಕು ಹಿಡಿದಿದ್ದರೂ, ನಾಟಕವಾಡಿತು’ ಎಂದು ತಿರುಗೇಟು ನೀಡಿತು.

ADVERTISEMENT

‘ನಮ್ಮ ಆದ್ಯತೆಗಳು, ನೀತಿಗಳು ಏನು, ಜಾಗತಿಕ ದೃಷ್ಟಿಕೋನ ಏನು ಎಂಬುದನ್ನು ತಿಳಿಸುವ ಉದ್ದೇಶ ಈಡೇರಿದೆ. ಚೀನಾದ ನಡೆಗಳ ಬಗ್ಗೆ ನಮ್ಮ ಮಿತ್ರ ರಾಷ್ಟ್ರಗಳು ವ್ಯಕ್ತಪಡಿಸಿದ್ದ ಆತಂಕಗಳನ್ನು ಸಹ ಆ ದೇಶದ ನಿಯೋಗಕ್ಕೆ ತಿಳಿಸಲಾಯಿತು’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟೊನಿ ಬ್ಲಿಂಕೆನ್‌ ಹೇಳಿದರು.

ಸಭೆ ಕುರಿತು ಪ್ರತ್ಯೇಕವಾಗಿ ಪ್ರತಿಕ್ರಿಯೆ ನೀಡಿದ ಚೀನಾ ನಿಯೋಗದ ನೇತೃತ್ವ ವಹಿಸಿದ್ದ ಯಾಂಗ್‌ ಜಿಯೆಚಿ, ‘ನಮ್ಮ ಸಾರ್ವಭೌಮತೆ, ಭದ್ರತೆ ಹಾಗೂ ದೇಶವನ್ನು ಅಭಿವೃದ್ಧಿಪಡಿಸಬೇಕು ಎಂಬ ವಿಷಯದಲ್ಲಿ ಚೀನಾ ರಾಜಿಯಾಗಲು ಸಿದ್ಧ ಇಲ್ಲ ಎಂಬುದನ್ನು ಸಭೆಯಲ್ಲಿ ಸ್ಪಷ್ಟಪಡಿಸಿದ್ಧೇವೆ’ ಎಂದರು.

‘ತನ್ನ ಗಡಿ, ತನ್ನ ಜನರ ಹಿತಾಸಕ್ತಿಯನ್ನು ರಕ್ಷಿಸುವ ಚೀನಾದ ಬದ್ಧತೆಗೆ ಅಮೆರಿ ಅಗೌರವ ತೋರಿಸುವುದಿಲ್ಲ ಎಂಬುದು ಚೀನಾದ ನಂಬಿಕೆ’ ಎಂದೂ ಯಾಂಗ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.