ಲಾನ್ಸ್ ಗೂಡೆನ್
(ರಾಯಿಟರ್ಸ್ ಚಿತ್ರ)
ವಾಷಿಂಗ್ಟನ್: ಉದ್ಯಮಿ ಗೌತಮ್ ಅದಾನಿ ಸೇರಿದಂತೆ ಅವರ ಕಂಪನಿಯ ವಿರುದ್ಧ ತನಿಖೆಗೆ ಅನುಮತಿ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ನಿರ್ಧಾರವನ್ನು ರಿಪಬ್ಲಿಕನ್ ಪಕ್ಷದ ಪ್ರಭಾವಿ ಸಂಸದ ಲಾನ್ಸ್ ಗೂಡೆನ್ ಅವರು ವಿರೋಧಿಸಿದ್ದಾರೆ. ಈ ಬಗ್ಗೆ ಅಮೆರಿಕದ ಅಟಾರ್ನಿ ಜನರಲ್ ಮೆರಿಕ್ ಬಿ. ಗಾರ್ಲೆಂಡ್ ಅವರಿಗೆ ಗೂಡೆನ್ ಅವರು ಜ.7ರಂದು ಪತ್ರ ಬರೆದಿದ್ದಾರೆ.
‘ಆಯ್ದ ಕೆಲವೇ ವಿದೇಶಿ ಉದ್ಯಮಿಗಳ ಮೇಲೆ ನ್ಯಾಯಾಂಗ ಇಲಾಖೆಯು ಕ್ರಮ ಕೈಗೊಳ್ಳುವುದು ಜಾಗತಿಕವಾಗಿ ದೇಶದ ಸಂಬಂಧ, ಆರ್ಥಿಕ ಬೆಳವಣಿಗೆಯನ್ನು ಹಾಳು ಮಾಡುತ್ತದೆ. ಈ ಪ್ರಕರಣದಲ್ಲಿ ಉದ್ಯಮಿ ಜಾರ್ಜ್ ಸೋರೋಸ್ ಅವರ ಕೈವಾಡವೇನಾದರೂ ಇದೆಯೇ’ ಎಂದು ನ್ಯಾಯಾಂಗ ಸಮಿತಿಯ ಸದಸ್ಯರೂ ಆಗಿರುವ ಲಾನ್ಸ್ ಗೂಡೆನ್ ಪ್ರಶ್ನಿಸಿದ್ದಾರೆ.
‘ಇಂಥ ನಿರ್ಧಾರಗಳಿಂದ ಭಾರತದಂಥ ಪ್ರಮುಖ ಪಾಲುದಾರ ದೇಶದೊಂದಿಗಿನ ಸಂಬಂಧ ಹಾಳಾಗುತ್ತವೆ. ನ್ಯಾಯಾಂಗ ಇಲಾಖೆಯು ಅಮೆರಿಕದ ಹಿತಾಸಕ್ತಿಗಾಗಿ ಕೆಲಸ ಮಾಡಬೇಕು. ದೇಶದೊಳಗೇ ಇರುವ ಘಾತುಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದನ್ನು ಮಾಡುವ ಬದಲು ವಿದೇಶದಲ್ಲಿ ವದಂತಿಗಳನ್ನು ಹಬ್ಬಿಸಬಾರದು’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.