ವಾಷಿಂಗ್ಟನ್: 30 ದಿನಗಳಿಗಿಂತ ಹೆಚ್ಚು ಕಾಲದಿಂದ ಅಕ್ರಮವಾಗಿ ಅಮೆರಿಕದಲ್ಲಿ ಇರುವ ವಿದೇಶಿ ಪ್ರಜೆಗಳು ಸರ್ಕಾರದ ನಿಯಮಾನುಸಾರ ನೋಂದಾಯಿಸಿಕೊಳ್ಳಬೇಕು ಮತ್ತು ಈ ನಿಯಮ ಪಾಲಿಸಲು ವಿಫಲವಾದರೆ ದಂಡ ಹಾಗೂ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಡೊನಾಲ್ಡ್ ಟ್ರಂಪ್ ಆಡಳಿತದ ಅಧೀನದಲ್ಲಿರುವ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ ತಿಳಿಸಿದೆ.
‘30 ದಿನಗಳಿಗಿಂತ ಹೆಚ್ಚು ಕಾಲ ಅಮೆರಿಕದಲ್ಲಿ ಇರುವ ವಿದೇಶಿ ಪ್ರಜೆಗಳು ಫೆಡರಲ್ ಸರ್ಕಾರದ ಜೊತೆ ನೋಂದಾಯಿಸಿಕೊಳ್ಳಬೇಕು. ಇಲ್ಲವಾದರೆ, ದಂಡ ಮತ್ತು ಜೈಲು ಶಿಕ್ಷೆಗೆ ಗುರಿಯಾಗುವ ಅಪರಾಧವಾಗುತ್ತದೆ.. ಅಕ್ರಮ ವಲಸಿಗರಿಗೆ ಟ್ರಂಪ್ ಸ್ಪಷ್ಟ ಸಂದೇಶ ನೀಡಿದ್ದಾರೆ. ಈಗಲೇ ದೇಶಬಿಟ್ಟು ಬಿಟ್ಟು ಸ್ವಯಂ ಗಡೀಪಾರಾಗಿ’ಎಂದು ಇಲಾಖೆ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಈ ನಿರ್ಧಾರವು ಎಚ್-1 ಬಿ ಅಥವಾ ವಿದ್ಯಾರ್ಥಿ ವೀಸಾಗಳನ್ನು ಹೊಂದಿರುವವರ ಮೇಲೆ ನೇರವಾಗಿ ಪರಿಣಾಮ ಬೀರುವುದಿಲ್ಲ. ಆದರೆ, ವಿದೇಶಿ ಪ್ರಜೆಗಳು ಸರಿಯಾದ ಅನುಮತಿಯಿಲ್ಲದೆ ಅಮೆರಿಕದಲ್ಲಿ ಉಳಿಯುವುದನ್ನು ತಡೆಯಲು ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದನ್ನು ಇದು ಸೂಚಿಸುತ್ತದೆ.
ಎಚ್-1 ಬಿ ವೀಸಾ ಪಡೆದಿರುವ ವ್ಯಕ್ತಿಯು ಕೆಲಸ ಕಳೆದುಕೊಂಡರೂ ನಿರ್ದಿಷ್ಟ ಅವಧಿಯೊಳಗೆ ದೇಶವನ್ನು ಬಿಡದಿದ್ದರೆ, ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಅದ ತಿಳಿಸಿದೆ.
'ಅಕ್ರಮ ವಿದೇಶಿಯರಿಗೆ ಸಂದೇಶ' ಎಂಬ ಶೀರ್ಷಿಕೆಯಡಿ ಮಾಡಲಾಗಿರುವ ಪೋಸ್ಟ್‌ನಲ್ಲಿ, ಗೃಹ ಭದ್ರತಾ ಇಲಾಖೆಯು ಅಧಿಕಾರಿಗಳ ಅನುಮತಿಯಿಲ್ಲದೆ ದೇಶದಲ್ಲಿ ವಾಸಿಸುವ ವಿದೇಶಿ ಪ್ರಜೆಗಳು ಸ್ವಯಂ-ಗಡೀಪಾರು ಆಗುವಂತೆ ಸೂಚಿಸಿದೆ. ಹಾಗೆ ಮಾಡುವುದರಿಂದಾಗುವ ಪ್ರಯೋಜನಗಳನ್ನು ಸಹ ಅದು ವಿವರಿಸಿದೆ.
ಸ್ವಯಂ ಗಡೀಪಾರು ಸುರಕ್ಷಿತವಾಗಿದೆ. ನೀವು ಅಪರಾಧಿಯಲ್ಲದ ಅಕ್ರಮ ವಿದೇಶಿಯಾಗಿ ಸ್ವಯಂ-ಗಡೀಪಾರಾದರೆ ಅಮೆರಿಕದಲ್ಲಿ ಗಳಿಸಿದ ಹಣ ಉಳಿಯುತ್ತದೆ ಎಂದು ಎಂದು ಅದು ಹೇಳುತ್ತದೆ.
ಸ್ವಯಂ ಗಡೀಪಾರು ಆಗುವವರಿಗೆ ಭವಿಷ್ಯದಲ್ಲಿ ಕಾನೂನುಬದ್ಧ ವಲಸೆಗೆ ಅವಕಾಶವಿರುತ್ತದೆ. ಅಂತಹವರಿಗೆ ರಿಯಾಯಿತಿ ದರ ವಿಮಾನದ ಟಿಕೆಟ್ ಸಹ ಸಿಗುತ್ತದೆ ಎಂದು ಅದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.