ಜಂಟಿ ಪತ್ರಿಕಾಗೋಷ್ಠಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ರಾಯಿಟರ್ಸ್ ಚಿತ್ರ
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೊದಿ ಅವರು, ಉಭಯ ದೇಶಗಳ ನಡುವಣ ಬಾಂಧವ್ಯ ವೃದ್ಧಿ, ವಾಣಿಜ್ಯ ಚಟುವಟಿಕೆ, ರಕ್ಷಣೆಗೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಚರ್ಚಿಸಿದ್ದಾರೆ. ಆದರೆ, ಸಭೆ ಬಳಿಕ ನೀಡಿರುವ ಸಾರ್ವಜನಿಕ ಹೇಳಿಕೆಯಲ್ಲಿ, ಮಾನವ ಹಕ್ಕುಗಳು ಮತ್ತು ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯಗಳಂತಹ ಸೂಕ್ಷ್ಮ ವಿಚಾರಗಳನ್ನು ಉಲ್ಲೇಖಿಸಿಲ್ಲ.
ಭಾರತವು ಅಮೆರಿಕದ ವ್ಯಾಪಾರವನ್ನು ಉತ್ತೇಜಿಸುವ ಮೂಲಕ ಚೀನಾಗೆ ಪ್ರತಿರೋಧ ಒಡ್ಡಬಲ್ಲ ಪಾಲುದಾರ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವುದರಿಂದ, ಭಾರತದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಯ ಬಗ್ಗೆ ಚರ್ಚಿಸುವ ವಿಚಾರದಲ್ಲಿ ಉಭಯ ನಾಯಕರು ಹಿಂದಡಿ ಇಟ್ಟಿದ್ದಾರೆ. ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿರುವ ಎರಡನೇ ಅವಧಿಯಲ್ಲಿ ಇದೇ ಪ್ರವೃತ್ತಿ ಮುಂದುವರಿಯಲಿದೆ ಎಂದು ರಾಜಕೀಯ ತಜ್ಞರು ಅಂದಾಜಿಸಿದ್ದಾರೆ.
ಶ್ವೇತಭವನದಲ್ಲಿ ಭೇಟಿಯಾಗಿರುವ ಟ್ರಂಪ್ ಹಾಗೂ ಮೋದಿ, ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅವರು ಮಾನವ ಹಕ್ಕುಗಳು ಮತ್ತು ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯಗಳ ಕುರಿತು ಔಪಚಾರಿಕವಾಗಿ ಯಾವುದೇ ಉಲ್ಲೇಖವನ್ನು ಮಾಡಿಲ್ಲ.
'ಟ್ರಂಪ್ ಅವರ ವಿದೇಶಾಂಗ ನೀತಿಯು ದೃಢವಾದ ಹಿತಾಸಕ್ತಿ ಆಧಾರದ್ದಾಗಿರುವುದರಿಂದ, ಭಾರತದಲ್ಲಿನ ಅಲ್ಪಸಂಖ್ಯಾತರ ಹಕ್ಕುಗಳ ವಿಚಾರವಾಗಿ ಅವರು ಯಾವುದೇ ನಿಲುವು ತಗೆದುಕೊಳ್ಳುವ ಸಾಧ್ಯತೆ ಇಲ್ಲ. ವಿದೇಶಗಳಲ್ಲಿನ ಮಾನವ ಹಕ್ಕುಗಳಂತಹ ಮೌಲ್ಯಾಧಾರಿತ ವಿಚಾರಗಳಿಗೆ ಕಡಿಮೆ ಪ್ರಾಶಸ್ತ್ಯ ನೀಡಬಹುದು' ಎಂದು ವಿಲ್ಸನ್ ಸೆಂಟರ್‌ನಲ್ಲಿರುವ ಚಿಂತಕರ ಚಾವಡಿಯ ದಕ್ಷಿಣ ಏಷ್ಯಾ ಸಂಸ್ಥೆಯ ನಿರ್ದೇಶಕ ಮೈಕಲ್ ಕುಗೆಲ್‌ಮನ್ ಹೇಳಿದ್ದಾರೆ.
ಮಾಜಿ ಅಧ್ಯಕ್ಷ ಜೋ ಬೈಡನ್ ಸಹ ಭಾರತದೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಂಡಿದ್ದರು. ಆದರೂ, ಅವರ ಆಡಳಿತದಲ್ಲಿ ಉನ್ನತಾಧಿಕಾರಿಯಾಗಿದ್ದ ಆ್ಯಂಟಿನಿ ಬ್ಲಿಂಕನ್ ಅವರು, ಆಗಾಗ್ಗೆ ಭಾರತದಲ್ಲಿನ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.