ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ವಲಸೆ ತಡೆಯುವ ಉದ್ದೇಶದಿಂದ ಅಮೆರಿಕದಲ್ಲಿ ನೆಲಸಲು ಮತ್ತು ಕೆಲಸ ಮಾಡಲು ಬರುವ ಭಾರತೀಯರು ಸೇರಿದಂತೆ ವಿದೇಶಿಯರು ಬಳಸುವ ಎಚ್–1ಬಿ ವೀಸಾ ಮೇಲೆ ವಾರ್ಷಿಕ 1 ಲಕ್ಷ ಅಮೆರಿಕನ್ ಡಾಲರ್ ಶುಲ್ಕ ವಿಧಿಸುವ ಪ್ರಸ್ತಾವಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಗೆ ಸೂಚಿಸಿದ್ದಾರೆ.
‘ಎಚ್–1ಬಿ ವೀಸಾ ಕಾರ್ಯಕ್ರಮದ ದುರುಪಯೋಗವು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದೆ. ಹಾಗಾಗಿ 1 ಲಕ್ಷ ಅಮೆರಿಕನ್ ಡಾಲರ್ ಪಾವತಿಸಿ ಎಚ್–1ಬಿ ವೀಸಾ ಪಡೆಯದ ಹೊರತು ಅಮೆರಿಕದಲ್ಲಿ ನೆಲಸಲು ಅನುಮತಿಸುವುದಿಲ್ಲ’ ಎಂದು ಹೇಳಿದ್ದಾರೆ.
‘ಎಚ್–1ಬಿ ವಲಸೆರಹಿತ ವೀಸಾ ಕಾರ್ಯಕ್ರಮವನ್ನು ತಾತ್ಕಾಲಿಕ ಕಾರ್ಮಿಕರನ್ನು ಅಮೆರಿಕಕ್ಕೆ ಕರೆತರಲು, ಹೆಚ್ಚಿನ ಕೌಶಲ್ಯದ ಕೆಲಸಗಳನ್ನು ನಿರ್ವಹಿಸಲು ರಚಿಸಲಾಗಿದೆ. ಆದರೆ, ಕಡಿಮೆ ಸಂಬಳ, ಕಡಿಮೆ ಕೌಶಲ್ಯದ ಕಾರ್ಮಿಕರೊಂದಿಗೆ ಅಮೆರಿಕನ್ ಕಾರ್ಮಿಕರನ್ನು ಬದಲಿಸಲು ಉದ್ದೇಶಪೂರ್ವಕವಾಗಿ ಬಳಸಿಕೊಳ್ಳಲಾಗಿದೆ’ ಎಂದು ಟ್ರಂಪ್ ದೂರಿದ್ದಾರೆ.
ಅಮೆರಿಕದ ಕಂಪನಿಗಳು ವಿದೇಶಿ ನೌಕರರನ್ನು ಮುಖ್ಯವಾಗಿ ತಾಂತ್ರಿಕ ಪರಿಣತ ಕ್ಷೇತ್ರಗಳಿಗೆ ನೇಮಕ ಮಾಡಿಕೊಳ್ಳಲು ಎಚ್–1ಬಿ ವೀಸಾ ಅಗತ್ಯವಾಗಿದೆ. ತಂತ್ರಜ್ಞಾನ ಕಂಪನಿಗಳು ಭಾರತ ಮತ್ತು ಚೀನಾ ಸೇರಿದಂತೆ ವಿವಿಧ ದೇಶಗಳ ಸಾವಿರಾರು ನೌಕರರನ್ನು ಪ್ರತಿ ವರ್ಷ ಈ ಮೂಲಕ ನೇಮಕ ಮಾಡಿಕೊಳ್ಳುತ್ತಿವೆ.
2016ರ ಬಳಿಕ ಮೊದಲ ಬಾರಿಗೆ 2024ರ ಫೆಬ್ರುವರಿ 1ರಂದು ವಲಸಿಗರಲ್ಲದವರಿಗೆ ನೀಡುವ ಎಚ್–1ಬಿ, ಎಲ್–1 ಮತ್ತು ಇಬಿ–5 ವೀಸಾಗಳ ಶುಲ್ಕವನ್ನು ಅಮೆರಿಕ ಸರ್ಕಾರ ಏರಿಕೆ ಮಾಡಿತ್ತು.
ಇಬಿ–5 ವೀಸಾ ಯೋಜನೆಯನ್ನು ಅಮೆರಿಕ ಸರ್ಕಾರವು 1990ರಲ್ಲಿ ಪರಿಚಯಿಸಿತ್ತು. ಹೂಡಿಕೆದಾರರಿಗೆ ಮತ್ತು ಅವರ ಕುಟುಂಬಕ್ಕೆ ಈ ವೀಸಾ ಪಡೆಯಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.