ADVERTISEMENT

ಖಂಡಾಂತರ ಕ್ಷಿಪಣಿ ತಯಾರಿಕೆಗೆ ನೆರವು: ಉತ್ತರ ಕೊರಿಯಾದ 6 ಮಂದಿಗೆ ಅಮೆರಿಕ ನಿರ್ಬಂಧ

ಐಎಎನ್ಎಸ್
Published 13 ಜನವರಿ 2022, 5:28 IST
Last Updated 13 ಜನವರಿ 2022, 5:28 IST
ಹೈಪರ್‌ಸಾನಿಕ್‌ ಕ್ಷಿಪಣಿಯ ಯಶಸ್ವಿ ಉಡಾವಣೆ ನಡೆಸಿದ ಉತ್ತರ ಕೊರಿಯಾ: ಎಪಿ ಚಿತ್ರ
ಹೈಪರ್‌ಸಾನಿಕ್‌ ಕ್ಷಿಪಣಿಯ ಯಶಸ್ವಿ ಉಡಾವಣೆ ನಡೆಸಿದ ಉತ್ತರ ಕೊರಿಯಾ: ಎಪಿ ಚಿತ್ರ   

ಸಿಯೋಲ್: ಖಂಡಾಂತರ ಕ್ಷಿಪಣಿ ಕಾರ್ಯಕ್ರಮಗಳು ಮತ್ತು ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳಿಗೆ (ಡಬ್ಲ್ಯುಎಂಡಿ) ಸಂಬಂಧಿಸಿದಂತೆ ಉತ್ತರ ಕೊರಿಯಾದ ಆರು ವ್ಯಕ್ತಿಗಳಿಗೆ ನಿರ್ಬಂಧ ಹೇರಿರುವುದಾಗಿ ಅಮೆರಿಕ ಘೋಷಿಸಿದೆ.

ಉತ್ತರ ಕೊರಿಯಾದ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರ (ಡಬ್ಲ್ಯುಎಂಡಿ) ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಗಳಿಗೆ ಅಕ್ರಮವಾಗಿ ವಸ್ತುಗಳನ್ನು ಸಂಗ್ರಹಿಸಿದ್ದಕ್ಕಾಗಿ ರಷ್ಯಾದಲ್ಲಿರುವ ಇಬ್ಬರು, ಚೀನಾದಲ್ಲಿರುವ ನಾಲ್ವರು ಸೇರಿ ಉತ್ತರ ಕೊರಿಯಾದ ಆರು ವ್ಯಕ್ತಿಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ಅಮೆರಿಕದ ಹಣಕಾಸು ಇಲಾಖೆ ಬುಧವಾರ ತಿಳಿಸಿದೆ ಎಂದು ಯೋನ್‌ಹಾಪ್ ಸುದ್ದಿ ಸಂಸ್ಥೆ ಗುರುವಾರ ವರದಿ ಮಾಡಿದೆ.

‘ವಿದೇಶಿ ಆಸ್ತಿ ನಿಯಂತ್ರಣಕ್ಕೆ ಸಂಬಂಧಿಸಿದ ಅಮೆರಿಕದ ಹಣಕಾಸು ಇಲಾಖೆ(ಒಎಫ್‌ಎಸಿ)ಯು ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳು (ಡಬ್ಲ್ಯುಎಂಡಿ) ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ-ಸಂಬಂಧಿತ ಕಾರ್ಯಕ್ರಮಗಳಿಗೆ ಸರಕುಗಳನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಹೊಂದಿದ್ದ ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ (ಡಿಪಿಆರ್‌ಕೆ)ಗೆ ಸೇರಿದ ಆರು ವ್ಯಕ್ತಿಗಳನ್ನು ನಿರ್ಬಂಧ ಹೇರಿದೆ’ಎಂದು ಇಲಾಖೆಯು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

‘ಈ ಕ್ರಮಗಳು ಡಿಪಿಆರ್‌ಕೆಯ ಡಬ್ಲ್ಯುಎಂಡಿ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಗಳ ಪ್ರಗತಿಯನ್ನು ತಡೆಗಟ್ಟುವ ಅಮೆರಿಕದ ಪ್ರಯತ್ನವಾಗಿದೆ. ಸೆಪ್ಟೆಂಬರ್ 2021 ರಿಂದ ಡಿಪಿಆರ್‌ಕೆಯು ಆರು ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆಗಳನ್ನು ನಡೆಸಿದ್ದು, ಪ್ರತಿಯೊಂದದರ ಉಡಾವಣೆ ವೇಳೆಯೂ ಅದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನು ಉಲ್ಲಂಘಿಸಿದೆ’ ಎಂದು ಪ್ರಕಟಣೆ ತಿಳಿಸಿದೆ.

ನಿನ್ನೆಯಷ್ಟೇ, ಉತ್ತರ ಕೊರಿಯಾ ನಡೆಸಿದ ಹೈಪರ್‌ ಸಾನಿಕ್‌ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದೆ ಎಂದು ಆ ದೇಶದ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಘೋಷಿಸಿದ್ದರು.

ಶಬ್ದಾತೀತ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದ್ದು, ಇದು ದೇಶದ ಪರಮಾಣು ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಉತ್ತರ ಕೊರಿಯಾ ತಿಳಿಸಿತ್ತು. ಕ್ಷಿಪಣಿ ಉಡಾವಣೆ ಕುರಿತ ಛಾಯಾಚಿತ್ರಗಳನ್ನು ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮ ಸುದ್ದಿಸಂಸ್ಥೆ ಬಿಡುಗಡೆ ಮಾಡಿದೆ. ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಅವರು ಸಣ್ಣ ಕೊಠಡಿಯೊಂದರಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಕುಳಿತು ಕ್ಷಿಪಣಿ ಪರೀಕ್ಷೆಯನ್ನು ವೀಕ್ಷಿಸಿದರು ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.