ADVERTISEMENT

ಭಾರತಕ್ಕೆ ಆದ್ಯತೆ, ಅಮೆರಿಕ ವಿರುದ್ಧ ಪಾಕ್ ಪ್ರಧಾನಿ ಇಮ್ರಾನ್‌ ಖಾನ್ ಅಸಮಾಧಾನ

ಪಿಟಿಐ
Published 13 ಆಗಸ್ಟ್ 2021, 1:31 IST
Last Updated 13 ಆಗಸ್ಟ್ 2021, 1:31 IST
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್   

ಇಸ್ಲಾಮಾಬಾದ್: ಅಫ್ಗಾನಿಸ್ತಾನದಲ್ಲಿರುವ ಅವ್ಯವಸ್ಥೆಯನ್ನು ತೆರವುಗೊಳಿಸುವುದಕ್ಕೆ ಮಾತ್ರ ಪಾಕಿಸ್ತಾನವನ್ನು ಉಪಯುಕ್ತವಾಗಿ ಪರಿಗಣಿಸಿದೆ. ಆದರೆ ವ್ಯೂಹಾತ್ಮಕ ಸಹಭಾಗಿತ್ವದ ವಿಚಾರಕ್ಕೆ ಬಂದಾಗ ಭಾರತಕ್ಕೆ ಆದ್ಯತೆ ಕೊಡುತ್ತಿದೆ ಎಂದು ಅಮೆರಿಕ ವಿರುದ್ಧ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಸಮಾಧಾನ ಹೊರ ಹಾಕಿದ್ದಾರೆ.

ಆಗಸ್ಟ್ 31ರೊಳಗೆ ಅಫ್ಗಾನಿಸ್ತಾನದಿಂದ ನ್ಯಾಟೋ ಪಡೆಗಳನ್ನು ಹಿಂಪಡೆಯುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಘೋಷಿಸಿದ ಬೆನ್ನಲ್ಲೇ ಅಲ್ಲಿ ತಾಲಿಬಾನ್ ಹಿಂಸಾಚಾರ ಹೆಚ್ಚಿದೆ.

ವಿದೇಶಿ ಪತ್ರಕರ್ತರಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಅಮೆರಿಕವನ್ನು ಪಾಕಿಸ್ತಾನ ಪ್ರಧಾನಿ ತರಾಟೆಗೆ ತೆಗೆದುಕೊಂಡರು. ಕಳೆದ 20 ವರ್ಷಗಳಲ್ಲಿ ಮಿಲಿಟರಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ ಬಳಿಕ ಅಫ್ಗಾನಿಸ್ತಾನದಲ್ಲಿರುವ ಅವ್ಯವಸ್ಥೆಯನ್ನು ಹೋಗಲಾಡಿಸಲು ಪಾಕಿಸ್ತಾನವನ್ನು ಉಪಯುಕ್ತವಾಗಿ ಪರಿಗಣಿಸಿದೆ ಎಂದು ಹೇಳಿದ್ದಾರೆ.

ಅಮೆರಿಕವು ಭಾರತದೊಂದಿಗೆ ವ್ಯೂಹಾತ್ಮಕ ಸಹಭಾಗಿತ್ವದ ನಿರ್ಣಯದ ಬಳಿಕ ಪಾಕಿಸ್ತಾನವನ್ನು ವಿಭಿನ್ನವಾಗಿ ಪರಿಗಣಿಸುತ್ತಿದೆ ಎಂದು ಇಮ್ರಾನ್ ಖಾನ್ ಹೇಳಿಕೆಯನ್ನು ಪತ್ರಕರ್ತರೊಬ್ಬರು ಉಲ್ಲೇಖಿಸಿದ್ದಾರೆ.

ಅಮೆರಿಕದ ನೂತನ ಅಧ್ಯಕ್ಷರಾಗಿ ಜನವರಿಯಲ್ಲಿ ಪದಗ್ರಹಣ ಮಾಡಿರುವ ಜೋ ಬೈಡನ್ ಇದುವರೆಗೆ ಪಾಕಿಸ್ತಾನದ ಜೊತೆ ಮಾತುಕತೆ ನಡೆಸದಿರುವುದು ಇಮ್ರಾನ್ ಖಾನ್ ಅಸಮಾಧಾನಕ್ಕೆ ಕಾರಣವಾಗಿದೆ.

ಇದಕ್ಕೂ ಮೊದಲು ಅಮೆರಿಕ ಇದೇ ರೀತಿಯಾಗಿ ದೇಶದ ನಾಯಕತ್ವವನ್ನು ನಿರ್ಲಕ್ಷಿಸುವುದನ್ನು ಮುಂದುವರಿಸಿದರೆ ಇಸ್ಲಾಮಾಬಾದ್‌ ಬೇರೆ ಆಯ್ಕೆಗಳನ್ನು ಪರಿಗಣಿಸಲಿದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ಹೇಳಿಕೆ ನೀಡಿದ್ದರು.

ಅತ್ತ ಅಫ್ಗಾನಿಸ್ತಾನದಲ್ಲಿ ಶಾಂತಿಯನ್ನು ನೆಲೆಸಲು ಪಾಕಿಸ್ತಾನದ ಪಾತ್ರ ಮಹತ್ತರವಾಗಿದೆ ಎಂಬುದನ್ನು ಅಮೆರಿಕ ನಂಬಿದೆ. ಈ ವಾರದಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಜ್ವಾ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ಅಫ್ಗಾನಿಸ್ತಾನದ ಸ್ಥಿತಿಗತಿಯ ಕುರಿತು ಚರ್ಚೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.