ADVERTISEMENT

ಪುಟಿನ್‌ರನ್ನು ರಷ್ಯಾದವರೇ ಯಾರಾದರೂ ಹತ್ಯೆ ಮಾಡಬೇಕು: ಅಮೆರಿಕದ ಸೆನೆಟರ್‌

ಏಜೆನ್ಸೀಸ್
Published 4 ಮಾರ್ಚ್ 2022, 7:43 IST
Last Updated 4 ಮಾರ್ಚ್ 2022, 7:43 IST
ಲಿಂಡ್ಸೆ ಗ್ರಹಾಂ, ವ್ಲಾಡಿಮಿರ್‌ ಪುಟಿನ್
ಲಿಂಡ್ಸೆ ಗ್ರಹಾಂ, ವ್ಲಾಡಿಮಿರ್‌ ಪುಟಿನ್    

ವಾಷಿಂಗ್ಟನ್‌: 'ರಷ್ಯಾದ ಯಾರಾದರೂ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಹತ್ಯೆ ಮಾಡಬೇಕು' ಎಂದು ಅಮೆರಿಕ ಸೆನೆಟ್‌ನ ರಿಪಬ್ಲಿಕನ್‌ ಪಕ್ಷದ ಸದಸ್ಯ ಲಿಂಡ್ಸೆ ಗ್ರಹಾಂ ಅವರು ಟಿ.ವಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

‘ಈ ಯುದ್ಧ ಹೇಗೆ ಕೊನೆಗೊಳ್ಳಬೇಕು? ರಷ್ಯಾದಲ್ಲಿರುವ ಯಾರಾದರೂ ಮುಂದೆ ಬರಬೇಕು. ಈ ವ್ಯಕ್ತಿಯನ್ನು ಮುಗಿಸಬೇಕು’ ಎಂದು ಸೆನೆಟರ್ ಫಾಕ್ಸ್ ನ್ಯೂಸ್ ಸಂದರ್ಶಕ ಸೀನ್ ಹ್ಯಾನಿಟಿಗೆ ಹೇಳಿದರು.

ಟಿ.ವಿ ಸಂದರ್ಶನದ ಬಳಿಕ ಅವರು ತಮ್ಮ ವೈಯಯಕ್ತಿಕ ಟ್ವಿಟರ್‌ ಖಾತೆಯಲ್ಲೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಇದನ್ನು ಸರಿಪಡಿಸಬೇಕಾದವರು ರಷ್ಯಾದ ಜನರು ಮಾತ್ರ’ ಎಂದು ಅವರು ಬರೆದುಕೊಂಡಿದ್ದಾರೆ.

ADVERTISEMENT

‘ರಷ್ಯಾದಲ್ಲಿ ಯಾರಾದರೂ ಬ್ರೂಟಸ್‌ನಂಥವರು ಇದ್ದಾರೆಯೇ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ರೋಮನ್ ಆಡಳಿತಗಾರ ಜೂಲಿಯಸ್ ಸೀಸರ್‌ನ ಹಂತಕರಲ್ಲಿ ಬ್ರೂಟಸ್‌ ಕೂಡ ಒಬ್ಬ. ಆತನ ಉದಾಹರಣೆಯನ್ನು ಲಿಂಡ್ಸೆ ಪುಟಿನ್‌ ವಿಚಾರದಲ್ಲೂ ನೀಡಿದ್ದಾರೆ.

ರಷ್ಯಾದ ಸೇನೆಯಲ್ಲಿ ಯಶಸ್ವಿ ‘ಕರ್ನಲ್ ಸ್ಟಾಫೆನ್‌ಬರ್ಗ್’ ಯಾರಾದರೂ ಇದ್ದಾರೆಯೇ ಎಂದೂ ಅವರು ಆಶ್ಚರ್ಯ ವ್ಯಕ್ತಪಡಿಸಿದರು. ಸ್ಟಾಫೆನ್‌ಬರ್ಗ್‌ ಅವರು 1944ರಲ್ಲಿ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ ಅವರನ್ನು ಕೊಲ್ಲಲ್ಲು ವಿಫಲ ಯತ್ನ ನಡೆಸಿದ ಸೇನಾ ಅಧಿಕಾರಿ.

‘ನೀವು ನಿಮ್ಮ ದೇಶ, ಜಗತ್ತಿಗೆ ಉತ್ತಮವಾದ ಸೇವೆಯನ್ನು ನೀಡುವಿರಿ’ ಎಂದೂ ಅವರು ಹುರಿದುಂಬಿಸುವ ಮಾತುಗಳನ್ನಾಡಿದ್ದಾರೆ.

ರಿಪಬ್ಲಿಕನ್‌ ಪಕ್ಷದವರಾದ ಲಿಂಡ್ಸೆ, ಅಮೆರಿಕ ಕಾಂಗ್ರೆಸ್‌ನಲ್ಲಿ 20 ವರ್ಷ ಸೇವೆ ಸಲ್ಲಿಸಿದ್ದಾರೆ. ಒಂದೊಮ್ಮೆ ಅಧ್ಯಕ್ಷ ಟ್ರಂಪ್‌ಗೆ ಆತ್ಮೀಯರಾಗಿದ್ದ ಅವರು, 2016ರ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್‌ ಪಕ್ಷದ ಪ್ರಾಥಮಿಕ ಸ್ಪರ್ಧಿಯಾಗಿದ್ದರು. ನಂತರ ಅವರು ನಾಮಪತ್ರ ಹಿಂಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.