ADVERTISEMENT

ಅಮೆರಿಕ | ಹೂಸ್ಟನ್ ಮಾರ್ಕೆಟ್‌ನಲ್ಲಿ ಶೂಟೌಟ್; ಇಬ್ಬರು ಸಾವು, ಮೂವರಿಗೆ ಗಾಯ

ಏಜೆನ್ಸೀಸ್
Published 16 ಮೇ 2022, 1:27 IST
Last Updated 16 ಮೇ 2022, 1:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೂಸ್ಟನ್‌ (ಅಮೆರಿಕ): ಇಲ್ಲಿನ ಜನನಿಬಿಡ ಮಾರ್ಕೆಟ್‌ವೊಂದರಲ್ಲಿ ಭಾನುವಾರ ನಡೆದ ಗುಂಡಿನ ದಾಳಿ ವೇಳೆ ಇಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಹ್ಯಾರಿಸ್‌ ಕೌಂಟಿಯ ಶೆರಿಫ್‌ ಎಡ್‌ ಗೊನ್ಜಾಲೆಜ್‌ ಅವರ ಪ್ರಕಾರ, ತೆರೆದ ಮಾರುಕಟ್ಟೆಯಲ್ಲಿ ಐವರ ನಡುವೆ ನಡೆದ ವಾಗ್ವಾದದಿಂದಾಗಿ ಶೂಟೌಟ್‌ ನಡೆದಿದೆ. ಕನಿಷ್ಠ ಎರಡು ಬಂದೂಕುಗಳನ್ನು ಈ ವೇಳೆ ಬಳಸಲಾಗಿದೆ. ವಾಗ್ವಾದ ನಡೆಸಿದ್ದವರನ್ನು ಹೊರತುಪಡಿಸಿ ಬೇರೆ ಯಾರಿಗೂ ಅಪಾಯವಾಗಿಲ್ಲ ಎನ್ನಲಾಗಿದೆ.

ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವವರಲ್ಲಿ ಒಬ್ಬ ಗುಂಡು ಹಾರಿಸಿದವನೂ ಇದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಇನ್ನಿಬ್ಬರು ಶಂಕಿತ ಶೂಟರ್‌ಗಳನ್ನು ಘಟನಾ ಸ್ಥಳದಲ್ಲಿ ಬಂಧಿಸಲಾಗಿದೆ ಎಂದು ಶೆರಿಫ್‌ ಅವರ ಸಹಾಯಕರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ADVERTISEMENT

ಹೂಸ್ಟನ್‌ನ ಉತ್ತರಕ್ಕಿರುವ ಡೌನ್‌ಟೌನ್‌ ಪಟ್ಟಣದಿಂದ 22 ಕಿ.ಮೀ ದೂರದಲ್ಲಿರುವ ಈ ಮಾರ್ಕೆಟ್‌ನಲ್ಲಿ ಭಾನುವಾರ ಮಧ್ಯಾಹ್ನ 1ರ ಸುಮಾರಿಗೆಶೂಟೌಟ್ ನಡೆಯಿತು. ಈ ವೇಳೆಸಾವಿರಾರು ಜನರು ವಹಿವಾಟು ನಡೆಸುತ್ತಿದ್ದರು ಎಂದು ಗೊನ್ಜಾಲೆಜ್‌ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.

ನ್ಯೂಯಾರ್ಕ್‌ನ ಬಫಲೊ ನಗರದ ಸೂಪರ್‌ಮಾರ್ಕೆಟ್‌ನಲ್ಲಿ ಶನಿವಾರ ನಡೆದ 'ಜನಾಂಗೀಯ ಪ್ರೇರಿತ' ಗುಂಡಿನ ದಾಳಿಯಲ್ಲಿ 10 ಮಂದಿ ಆಫ್ರಿಕನ್ ಅಮೆರಿಕನ್ನರು ಮೃತಪಟ್ಟಿದ್ದರು. 18 ವರ್ಷದ ದುಷ್ಕರ್ಮಿಯೊಬ್ಬ ಈ ಕೃತ್ಯವೆಸಗಿದ್ದ. ಇದಾದ ಒಂದು ದಿನದ ಅಂತರದಲ್ಲೇ ಹೂಸ್ಟನ್‌ನಲ್ಲಿ ಶೂಟೌಟ್‌ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.