ADVERTISEMENT

ಆಸ್ಟ್ರೇಲಿಯಾಕ್ಕೆ ಅಮೆರಿಕದ ಪರಮಾಣು ಚಾಲಿತ ಜಲಾಂತರ್ಗಾಮಿ: ಚೀನಾ ಆಕ್ಷೇಪ

ಪಿಟಿಐ
Published 14 ಮಾರ್ಚ್ 2023, 12:22 IST
Last Updated 14 ಮಾರ್ಚ್ 2023, 12:22 IST
.
.   

ವಾಷಿಂಗ್ಟನ್‌: ಅಮೆರಿಕ, ಬ್ರಿಟನ್‌ ಹಾಗೂ ಆಸ್ಟ್ರೇಲಿಯಾಗಳು ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ ಯೋಜನೆಗೆ ಒಪ್ಪಿಗೆ ಸೂಚಿಸಿವೆ. ಇದಕ್ಕೆ ಚೀನಾದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಆಕ್ರಮಣಕಾರಿ ನಡವಳಿಕೆಯನ್ನು ಎದುರಿಸಲು ಮತ್ತು ಈ ಪ್ರದೇಶವು ‘ಸ್ವತಂತ್ರ ಮತ್ತು ಮುಕ್ತ’ ಎಂದು ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ಯೋಜನೆ ಹೊಂದಿದೆ.

ಎಯುಕೆಯುಎಸ್‌ (ಆಸ್ಟ್ರೇಲಿಯಾ–ಬ್ರಿಟನ್‌–ಅಮೆರಿಕ) ಒಪ್ಪಂದದಡಿ ಆಸ್ಟ್ರೇಲಿಯಾವು ಮೊದಲು ಅಮೆರಿಕದಿಂದ ಮೂರು ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ಪಡೆಯಲಿದೆ.

ADVERTISEMENT

ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್‌ ಅವರು ಸೋಮವಾರ ಸ್ಯಾನ್‌ ಡಿಯಾಗೋದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ಬಳಿಕ ಈ ಘೋಷಣೆ ಹೊರಡಿಸಲಾಗಿದೆ. ಇಂಡೋ– ಪೆಸಿಫಿಕ್‌ ಪ್ರದೇಶವನ್ನು ‘ಸ್ವತಂತ್ರ ಮತ್ತು ಮುಕ್ತ’ವಾಗಿಡುವುದಕ್ಕೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಘೋಷಣೆಯಲ್ಲಿ ಪ್ರತಿಪಾದಿಸಲಾಗಿದೆ.

ಒಪ್ಪಂದಕ್ಕೆ ಚೀನಾ ಖಂಡನೆ (ಬೀಜಿಂಗ್‌ ವರದಿ): ಪರಮಾಣು ಚಾಲಿತ ಜಲಾಂತರ್ಗಾಮಿ ಒಪ್ಪಂದವನ್ನು ಚೀನಾ ಮಂಗಳವಾರ ಖಂಡಿಸಿದ್ದು, ‘ಈ ಒಪ್ಪಂದವು ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದ’ವನ್ನು ಉಲ್ಲಂಘಿಸುತ್ತದೆ. ಈ ಮೂರು ದೇಶಗಳು ಹೆಚ್ಚು ಅಪಾಯಕಾರಿ ಮತ್ತು ತಪ್ಪು ದಾರಿಯಲ್ಲಿ ಸಾಗುತ್ತಿವೆ’ ಎಂದು ಹೇಳಿದೆ.

ಎರಡು ದೇಶಗಳ ನಡುವೆ ಹೆಚ್ಚುತ್ತಿರುವ ಹಗೆತನದ ಹಿನ್ನೆಲೆಯಲ್ಲಿ ತನ್ನ ಭದ್ರತೆಯನ್ನು ಹೆಚ್ಚಿಸಲು ಅಮೆರಿಕದ ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು ಪಡೆಯಲು ಆಸ್ಟ್ರೇಲಿಯಾಗೆ ಸಹಾಯ ಮಾಡುವ ಎಯುಕೆಯುಎಸ್‌ ಮೈತ್ರಿಯನ್ನು ಚೀನಾ ವಿರೋಧಿಸುತ್ತಿದೆ. ‘ಹಗೆತನವನ್ನು ಹೆಚ್ಚಿಸುವ ಗುರಿಯನ್ನು ಈ ಮೈತ್ರಿಕೂಟ ಹೊಂದಿದೆ’ ಎಂದೂ ಚೀನಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.