
ಜೆ.ಡಿ.ವ್ಯಾನ್ಸ್
ವಾಷಿಂಗ್ಟನ್: ‘ನಾನು ಮತ್ತು ನನ್ನ ಕುಟುಂಬ ಮನೆಯಲ್ಲಿ ಇಲ್ಲದಿರುವ ಸಮಯದಲ್ಲಿ ಹುಚ್ಚನೊಬ್ಬ ನಮ್ಮ ಮನೆಯೊಳಗೆ ನುಗ್ಗಲು ಯತ್ನಿಸಿದ್ದಾನೆ’ ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಭಾನುವಾರ ನಡೆದ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಒಹಿಯೊದ ಸಿನ್ಸಿನಾಟಿ ನಗರದ ಪೂರ್ವದಲ್ಲಿರುವ ಜೆ.ಡಿ.ವ್ಯಾನ್ಸ್ ಅವರ ಮನೆ ಮೇಲೆ ಭಾನುವಾರ ರಾತ್ರಿ ದಾಳಿ ನಡೆದಿತ್ತು. ಮನೆಯ ಆವರಣವನ್ನು ನುಗ್ಗಿದ ಆರೋಪಿಯು ಕಿಟಿಕಿ ಗಾಜುಗಳನ್ನು ಒಡೆದು ಮನೆ ಒಳಗೆ ನುಗ್ಗಲು ಪ್ರಯತ್ನಿಸಿದ್ದನು ಎಂದು ವರದಿಯಾಗಿದೆ.
ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ವ್ಯಾನ್ಸ್, ‘ನನಗೆ ತಿಳಿದಿರುವಂತೆ ಹುಚ್ಚನೊಬ್ಬ ಸುತ್ತಿಗೆಯಿಂದ ಕಿಟಿಕಿ ಗಾಜನ್ನು ಒಡೆದು ನಮ್ಮ ಮನೆ ಒಳಗೆ ನುಗ್ಗಲು ಪ್ರಯತ್ನಿಸಿದ್ದನು. ತಕ್ಷಣವೇ ಆರೋಪಿಯನ್ನು ಹಿಡಿದು ಬಂಧಿಸಿದ್ದಕ್ಕಾಗಿ ಸೀಕ್ರೆಟ್ ಸರ್ವೀಸ್ ಏಜೆಂಟರು ಮತ್ತು ಸಿನ್ಸಿನಾಟಿ ನಗರ ಪೊಲೀಸರಿಗೆ ಧನ್ಯವಾದಗಳು’ ಎಂದು ತಿಳಿಸಿದ್ದಾರೆ.
‘ಅದಾಗಲೇ ನಾವು ವಾಷ್ಟಿಂಗ್ಟನ್‌ಗೆ ಹಿಂತಿರುಗಿದ್ದರಿಂದ ದಾಳಿಯ ವೇಳೆ ಮನೆಯಲ್ಲಿ ಇರಲಿಲ್ಲ’ ಎಂದು ಹೇಳಿದ್ದಾರೆ.
ಅಲ್ಲದೇ, ಒಡೆದ ಕಿಟಕಿಯ ಚಿತ್ರಗಳನ್ನು ಮಾಧ್ಯಮದಲ್ಲಿ ಪ್ರಸಾರ ಮಾಡದಂತೆಯೂ ಮನವಿ ಮಾಡಿದ್ದಾರೆ. ಇದು ತಮ್ಮ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಅಮೆರಿಕದಲ್ಲಿ ರಾಜಕೀಯ ಮುಖಂಡರ ಮೇಲೆ ರಾಜಕೀಯ ಪ್ರೇರಿತ ದಾಳಿಗಳು ಹೆಚ್ಚುತ್ತಿದ್ದು, ಅವುಗಳಲ್ಲಿ ಇದು ಒಂದು. ಕಳೆದ ಜೂನ್‌ನಲ್ಲಿ ಡೆಮಾಕ್ರೆಟಿಕ್ ಪಕ್ಷದ ಹಿರಿಯ ಸದಸ್ಯೆ ಮತ್ತು ಆಕೆಯ ಪತಿಯ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಏಪ್ರಿಲ್‌ನಲ್ಲಿ ಪೆನ್ಸಿಲ್ವೇನಿಯಾ ಗವರ್ನರ್ ಜೋಶ್ ಶಪಿರೊ ಅವರ ನಿವಾಸಕ್ಕೆ ಬೆಂಕಿ ಹಚ್ಚಿದ್ದ ಘಟನೆಯೂ ನಡೆದಿದೆ.
2022ರ ಅಕ್ಟೋಬರ್‌ನಲ್ಲಿ ಡೆಮಾಕ್ರೆಟಿಕ್ ಪಕ್ಷದ ಸ್ಪೀಕರ್ ಆಗಿದ್ದ ನ್ಯಾನ್ಸಿ ಪೆಲೋಸಿ ಅವರ ಸ್ಯಾನ್ ಫ್ರಾನ್ಸಿಸ್ಕೋ ನಿವಾಸದ ಮೇಲೆ ದಾಳಿ ಮಾಡಿ ಅವರ ಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.