ಪ್ರಾತಿನಿಧಿಕ ಚಿತ್ರ
ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಫಲದಾಯಕ ಹಾಗೂ ಶಾಂತಿಯುತ ಸಂಬಂಧ ಏರ್ಪಡಬೇಕೆಂದು ಬಯಸುತ್ತಿರುವುದಾಗಿ ಅಮೆರಿಕ ತಿಳಿಸಿದೆ.
ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಎರಡನೇ ಅವಧಿಗೆ ಆಯ್ಕೆಯಾಗಿರುವ ಶೆಹಬಾಜ್ ಷರೀಫ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಕೋರಿರುವ ಕುರಿತು ಅಮೆರಿಕದ ರಾಜ್ಯ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್ ಪ್ರತಿಕ್ರಿಯಿಸಿದ್ದಾರೆ.
'ಖಂಡಿತವಾಗಿಯೂ ನಾವು, ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಸ್ವಾಗತಿಸುತ್ತೇವೆ. ಭಾರತ ಮತ್ತು ಪಾಕಿಸ್ತಾನದೊಂದಿಗೆ ಸಂಬಂಧವನ್ನು ಅಮೆರಿಕೆ ಗೌರವಿಸುತ್ತದೆ. ಆ ಎರಡೂ ರಾಷ್ಟ್ರಗಳು ಫಲದಾಯಕ ಶಾಂತಿಯುತ ಸಂಬಂಧ ಹೊಂದುವುದನ್ನು ನಾವು ಕಾಣಬಯಸುತ್ತೇವೆ' ಎಂದಿದ್ದಾರೆ.
ಮುಂದುವರಿದು, 'ಆದರೆ, ಈ ವಿಚಾರಕ್ಕೆ ಸಂಬಂಧಿಸಿದ ಯಾವುದೇ ಸಂಭಾಷಣೆಯ ರೀತಿ, ವ್ಯಾಪ್ತಿ ಮತ್ತು ಪ್ರಾಮುಖ್ಯತೆಯನ್ನು ಆ ರಾಷ್ಟ್ರಗಳೇ ನಿರ್ಧರಿಸಬೇಕು' ಎಂದು ಸ್ಪಷ್ಟಪಡಿಸಿದ್ದಾರೆ.
ಪಾಕ್ ಪ್ರಧಾನಿಯಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದ ಷರೀಫ್ ಅವರಿಗೆ ಮೋದಿ ಅವರು ಮಂಗಳವಾರ ಶುಭಕೋರಿದ್ದರು.
ಭಾರತ ಮತ್ತು ಪಾಕಿಸ್ತಾನದ ಸಂಬಂಧವು ಶೀಘ್ರದಲ್ಲಿ ವೃದ್ಧಿಯಾಗುವ ಸಾಧ್ಯತೆಗಳಿಲ್ಲ ಎಂದು ಶೆಹಬಾಜ್ ಷರೀಫ್ ಅವರು ಅಧಿಕಾರಕ್ಕೇರಿದ ಹಿನ್ನೆಲೆಯಲ್ಲಿ ರಾಜಕೀಯ ಪರಿಣತರು ವಿಶ್ಲೇಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.