ADVERTISEMENT

ಇಲ್ಲಿಗೆ ಅಕ್ಕಿ ತಂದು ಸುರಿಯಬೇಡಿ: ಭಾರತಕ್ಕೆ ಹೊಸ ಸುಂಕದ ಎಚ್ಚರಿಕೆ ನೀಡಿದ ಟ್ರಂಪ್

ಏಜೆನ್ಸೀಸ್
Published 9 ಡಿಸೆಂಬರ್ 2025, 5:05 IST
Last Updated 9 ಡಿಸೆಂಬರ್ 2025, 5:05 IST
   

ವಾಷಿಂಗ್ಟನ್‌: ಅಮೆರಿಕದ ಮಾರುಕಟ್ಟೆಗೆ ಅಕ್ಕಿ ತಂದು ಸುರಿಯುವುದನ್ನು ಭಾರತ ನಿಲ್ಲಿಸದಿದ್ದರೆ ಹೊಸದಾಗಿ ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಶ್ವೇತಭವನದಲ್ಲಿ ಕೃಷಿ ಕ್ಷೇತ್ರದ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಟ್ರಂಪ್‌, ಅಮೆರಿಕದ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ. ಈ ವೇಳೆ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ಕೃಷಿ ಕಾರ್ಯದರ್ಶಿ ಬ್ರೂಕ್ ರೋಲಿನ್ಸ್ ಸೇರಿದಂತೆ ಸಂಪುಟದ ಪ್ರಮುಖ ಸದಸ್ಯರು ಭಾಗವಹಿಸಿದ್ದರು.

ಈ ವೇಳೆ ದೇಶಿಯ ಅಕ್ಕಿ ಉತ್ಪಾದಕರ ಸಮಸ್ಯೆಗಳ ಬಗ್ಗೆ ಅಧ್ಯಕ್ಷರ ಗಮನ ಸೆಳೆದ ಲೂಸಿಯಾನ ಮೂಲದ ಅಕ್ಕಿ ಗಿರಣಿ ಮಾಲೀಕ ಮೆರಿಲ್ ಕೆನಡಿ, ಇತರ ರಾಷ್ಟ್ರಗಳು ಅಮೆರಿಕದ ಮಾರುಕಟ್ಟೆ ಅಕ್ಕಿ ತಂದು ಸುರಿಯುವುದರಿಂದ ದೇಶದ ದಕ್ಷಿಣ ಭಾಗದಲ್ಲಿ ಅಕ್ಕಿ ಉತ್ಪಾದಕರು ಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ಅಕ್ಕಿ ಸುರಿಯುತ್ತಿರುವವರು ಯಾರು? ಎಂದು ಟ್ರಂಪ್‌ ಕೇಳಿದ್ದು, ಭಾರತ ಮತ್ತು ಥಾಯ್ಲೆಂಡ್‌ ಎಂದು ಕೆನಡಿ ಹೇಳಿದ್ದಾರೆ.

ಮುಂದುವರಿದು, ‘ಚೀನಾ ಕೂಡ ಈ ಸಾಲಿನಲ್ಲಿ ಇದ್ದು, ಪೋರ್ಟೊ ರಿಕೊಗೆ ಅಕ್ಕಿ ರಫ್ತು ಮಾಡುತ್ತಿದೆ. ಪೋರ್ಟೊ ರಿಕೊ ಅಮೆರಿಕದ ಅಕ್ಕಿಗೆ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿತ್ತು. ಕಳೆದ ಒಂದು ವರ್ಷದಿಂದ ನಾವು ಅಲ್ಲಿಗೆ ಅಕ್ಕಿ ರವಾನಿಸಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಐದು ವರ್ಷಗಳಿಂದ ಈ ವ್ಯವಹಾರ ನಡೆಯುತ್ತಿದ್ದು, ಈಗ ಅದು ನಮ್ಮ ಮಾರುಕಟ್ಟೆಯನ್ನು ವ್ಯಾಪಿಸಿದೆ. ನೀವು ವಿಧಿಸಿರುವ ಸುಂಕಗಳಿಂದ ಅದರ ಮೇಲೆ ಸ್ವಲ್ಪ ಪರಿಣಾಮ ಬಿದ್ದಿದೆ. ಆದರೆ ನಾವು ಸುಂಕವನ್ನು ದ್ವಿಗುಣಗೊಳಿಸಬೇಕಾಗಿದೆ’ ಎಂದು ಸಲಹೆ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್‌, ಸುಂಕವು ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದಿದ್ದಾರೆ.

ನಂತರ ಈ ಬಗ್ಗೆ ಬೆಸೆಂಟ್ ಅವರಲ್ಲಿ ವಿಚಾರಿಸಿದ ಟ್ರಂಪ್‌, ‘ಅಕ್ಕಿ ತಂದು ಸುರಿಯಲು ಭಾರತಕ್ಕೆ ಅವಕಾಶವಿದೆಯೇ? ಅವರು ಸುಂಕ ಪಾವತಿಸುತ್ತಿದ್ದಾರೆಯೇ? ಅಕ್ಕಿ ರಫ್ತಿನ ಮೇಲೆ ಅವರಿಗೆ ವಿನಾಯಿತಿ ಇದೆಯೇ?" ಎಂದು ಕೇಳಿದ್ದಾರೆ.

ಇದಕ್ಕೆ ಬೆಸೆಂಟ್‌ ‘ಇಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ. ನಮ್ಮ ಮತ್ತು ಅವರ(ಭಾರತ) ನಡುವೆ ವ್ಯಾಪಾರ ಒಪ್ಪಂದದ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

‘ಇಂತಹ ದೇಶಗಳಿಗೆ ಸುಂಕ ವಿಧಿಸುವುದರಿಂದ ಈ ಸಮಸ್ಯೆ ತುಂಬಾ ಬೇಗನೆ ಪರಿಹಾರವಾಗುತ್ತದೆ. ಸುಂಕ ಕುರಿತ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದ್ದು, ಅದರಲ್ಲಿ ನಾವು ಗೆದ್ದರೆ ನಿಮ್ಮ ಸಮಸ್ಯೆಯನ್ನು ಒಂದೇ ದಿನದಲ್ಲಿ ಪರಿಹರಿಸುತ್ತೇನೆ’ ಎಂದು ಟ್ರಂಪ್‌ ಹೇಳಿದ್ದಾರೆ.

ಭಾರತವು ಅತಿ ಹೆಚ್ಚು ಅಕ್ಕಿ ಉತ್ಪಾದಿಸುವ ದೇಶವಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಶೇ 28 ರಷ್ಟು ಪಾಲನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.