ಕೀವ್: ರಷ್ಯಾ ಪಡೆ ಉಕ್ರೇನ್‌ನನಿಹುರಿವ್ಕಾ ಸಹಿತ ಹಲವು ಹಳ್ಳಿ ಹಾಗೂ ನಗರಗಳ ಮೇಲೆ ಬುಧವಾರ ಶೆಲ್ ದಾಳಿ ನಡೆಸಿದೆ. ಘಟನೆಯಲ್ಲಿ ಕನಿಷ್ಠ 9 ನಾಗರಿಕರು ಮೃತಪಟ್ಟಿದ್ದು, 24ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷರ ಕಚೇರಿ ತಿಳಿಸಿದೆ.
ದೇಶದ ಆಗ್ನೇಯ ಭಾಗದ 8 ಪ್ರದೇಶಗಳ ಮೇಲೆ ದಾಳಿ ಮಾಡಲು ರಷ್ಯಾ ಸ್ಫೋಟಕ ಡ್ರೋನ್, ರಾಕೆಟ್, ಭಾರೀ ಫಿರಂಗಿ ಮತ್ತು ವಿಮಾನಗಳನ್ನು ಬಳಸುತ್ತಿದೆ ಎಂದು ಉಕ್ರೇನ್ ಆರೋಪಿಸಿದೆ.
ದಕ್ಷಿಣ ನಗರವಾದ ಖೆರ್ಸನ್‌ನಿಂದ ಉತ್ತರಕ್ಕೆ 50 ಕಿ.ಮೀ. ದೂರದಲ್ಲಿರುವನಿಹುರಿವ್ಕಾ ಪಟ್ಟಣದಲ್ಲಿ ಉಕ್ರೇನ್ ಮತ್ತು ರಷ್ಯಾ ಪಡೆಗಳು ರಾತ್ರಿ ಇಡೀ ಘರ್ಷಣೆ ನಡೆಸಿದ್ದು, ಉಕ್ರೇನ್ ಸೇನೆಯು ನಿಹುರಿವ್ಕಾ ಪಟ್ಟಣದ ಒಂದು ನೆಲೆಯಲ್ಲಿ ರಷ್ಯಾ ಪಡೆಯನ್ನು ಹಿಮ್ಮೆಟ್ಟಿಸಿದೆ ಎಂದು ಕೆರ್ಸಾನ್ ಪ್ರದೇಶದ ಉಪಮುಖ್ಯಸ್ಥ ಕಿರಿಲ್ ಸ್ಟೆಮೊಸ್ಟ್ರೋವ್ ಟೆಲಿಗ್ರಾಂ ಸಂದೇಶದಲ್ಲಿ ತಿಳಿಸಿದ್ದಾರೆ.
ಕೆರ್ಸಾನ್‌ನಿಂದ ರಷ್ಯಾ ಸೇನೆ ಹಿಂದಕ್ಕೆ: ಇದೇ ವೇಳೆ ಆಕ್ರಮಿತ ಕೆರ್ಸಾನ್‌ನಿಂದ ಸಂಪೂರ್ಣ ರಕ್ಷಣಾ ಪಡೆಗಳನ್ನು ಹಿಂತೆಗೆದುಕೊಳ್ಳಲು ರಷ್ಯಾ ರಕ್ಷಣಾ ಸಚಿವ ಸೆರ್ಗಿ ಶೋಯಿಗು ಬುಧವಾರ ಆದೇಶ ನೀಡಿದ್ದಾರೆ.
ಕೆರ್ಸಾನ್ ಪ್ರಾಂತ್ಯದ ರಷ್ಯಾ ಸ್ಥಾಪಿತ ಉಪ ಮುಖ್ಯಸ್ಥ ಕಿರಿಲ್ ಸ್ಟ್ರೆಮೋಸೊವ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆದರೆ ಇದನ್ನು ಉಕ್ರೇನ್ ಉದ್ದೇಶಪೂರ್ವಕವಾಗಿ ಮಾಡಿದೆ ಎಂದು ರಷ್ಯಾ ದೂರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.