ಡೊನಾಲ್ಡ್ ಟ್ರಂಪ್, ನರೇಂದ್ರ ಮೋದಿ, ವ್ಲಾದಿಮಿರ್ ಪುಟಿನ್
(ರಾಯಿಟರ್ಸ್ ಚಿತ್ರಗಳು)
ಮಾಸ್ಕೊ: ಮೂರು ವರ್ಷಗಳಿಂದ ಉಕ್ರೇನ್ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ಅಂತ್ಯಗಾಣಿಸಲು ಪ್ರಯತ್ನಿಸುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜಾಗತಿಕ ನಾಯಕರಿಗೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಧನ್ಯವಾದ ಸಲ್ಲಿಸಿದ್ದಾರೆ.
ಈ ಕುರಿತು ಸುದ್ದಿಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.
'ಜಾಗತಿಕ ನಾಯಕರೆಲ್ಲರೂ ತಮ್ಮದೇ ಆದ ಆಂತರಿಕ ವಿಷಯಗಳನ್ನು ನೋಡಿಕೊಳ್ಳಬೇಕಿದೆ. ಈ ನಡುವೆಯೂ ಹಲವು ರಾಷ್ಟ್ರದ ನಾಯಕರು ಪ್ರಮುಖವಾಗಿ ಅಮೆರಿಕದ ಅಧ್ಯಕ್ಷರು, ಭಾರತದ ಪ್ರಧಾನಿ, ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾದ ಅಧ್ಯಕ್ಷರು, ಉಕ್ರೇನ್ ಕದನವನ್ನು ಕೊಣಿಗಾಣಿಸಲು ಹೆಚ್ಚಿನ ಸಮಯ ವ್ಯಯ ಮಾಡಿದ್ದಾರೆ. ಅವರೆಲ್ಲರ ಪ್ರಯತ್ನವು ಯುದ್ಧ ಹಾಗೂ ಪ್ರಾಣ ಹಾನಿಯನ್ನು ಅಂತ್ಯಗೊಳಿಸುವ ಧ್ಯೇಯವನ್ನು ಹೊಂದಿದೆ. ಅವರಿಗೆಲ್ಲ ನಾನು ಕೃತಜ್ಞನಾಗಿದ್ದೇನೆ' ಎಂದು ಪುಟಿನ್ ತಿಳಿಸಿದ್ದಾರೆ.
ಉಕ್ರೇನ್‌ನಲ್ಲಿ 30 ದಿನ ಅವಧಿಗೆ ಕದನವಿರಾಮ ಘೋಷಿಸಬೇಕು ಎಂಬ ಪ್ರಸ್ತಾವವನ್ನು ಅಮೆರಿಕ ಮುಂದಿಟ್ಟಿತು. ಇದಕ್ಕೆ ಉಕ್ರೇನ್ ಸಮ್ಮತಿ ಸೂಚಿಸಿದ್ದು, ರಷ್ಯಾ ಕೂಡಾ ತಾತ್ವಿಕವಾಗಿ ಒಪ್ಪಿಕೊಂಡಿದೆ. ಆದರೆ ಕದನ ವಿರಾಮ ಘೋಷಿಸುವ ಷರತ್ತುಗಳನ್ನು ಅಂತಿಮಗೊಳಿಸಬೇಕಾಗಿದ್ದು, ಇದು ಶಾಂತಿ ಪ್ರಕ್ರಿಯೆ ಸುದೀರ್ಘ ಅವಧಿ ಇರಲು ಪೂರಕವಾಗಿರಬೇಕಿದೆ ಎಂದು ಪುಟಿನ್ ಹೇಳಿದ್ದಾರೆ.
ಮಾರ್ಚ್ 11ರಂದು ಸೌದಿ ಅರೇಬಿಯಾದ ಜೆದ್ದಾದಲ್ಲಿ ಅಮೆರಿಕ ಹಾಗೂ ಉಕ್ರೇನ್ ನಡುವೆ ನಡೆದ ಚರ್ಚೆಯಲ್ಲಿ 30 ದಿನಗಳ ಕದನ ವಿರಾಮಕ್ಕೆ ಉಕ್ರೇನ್ ಸಮ್ಮತಿ ಸೂಚಿಸಿತ್ತು. ಉಕ್ರೇನ್ ನಿರ್ಧಾರವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವಾಗತಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.