ADVERTISEMENT

ಭಯೋತ್ಪಾದನೆ ಚಟುವಟಿಕೆ ಮೇಲೆ ತೀವ್ರ ನಿಗಾ: ತಿರುಮೂರ್ತಿ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮೊದಲ ಸಭೆಯ ಕಾರ್ಯಕ್ರಮ ಕುರಿತ ವಿವರಣೆ

ಪಿಟಿಐ
Published 3 ಆಗಸ್ಟ್ 2021, 10:51 IST
Last Updated 3 ಆಗಸ್ಟ್ 2021, 10:51 IST
ತಿರುಮೂರ್ತಿ
ತಿರುಮೂರ್ತಿ   

ವಿಶ್ವಸಂಸ್ಥೆ: ಭಯೋತ್ಪಾದನಾ ಚಟುವಟಿಕೆಗೆ ಆರ್ಥಿಕ ನೆರವು ನೀಡುತ್ತಿರುವುದು ಮತ್ತು ಉಗ್ರರು ದಾಳಿ ನಡೆಸಲು ಅತ್ಯಾಧುನಿಕ ವಿಧಾನಗಳನ್ನು ಬಳಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಟಿ.ಎಸ್. ತಿರುಮೂರ್ತಿ, ‘ಭಯೋತ್ಪಾದನಾ ಚಟುವಟಿಕೆಗಳ ಮೇಲೆ ಭಾರತ ನಿರಂತರವಾಗಿ ನಿಗಾ ಇಡಲಿದೆ‘ ಎಂದು ತಿಳಿಸಿದರು.

ಪ್ರಸ್ತುತ 2021–22ನೇ ಸಾಲಿನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿರುವ ಭಾರತ, ಆವರ್ತನಾ ನಿಯಮದ ಪ್ರಕಾರ, ಇದೇ ಆಗಸ್ಟ್ 1ರಿಂದ ಈ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ.

ಭಾರತ ತನ್ನ ಅಧಿಕಾರಾವಧಿಯಲ್ಲಿ ಕೈಗೊಳ್ಳುವ ಕಾರ್ಯಚಟುವಟಿಕೆಗಳ ಬಗ್ಗೆ ಸೋಮವಾರ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವರದಿಗಾರರಿಗೆ ಟಿ.ಎಸ್. ತಿರುಮೂರ್ತಿ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು. ‘ತನ್ನ ಅಧಿಕಾರಾವಧಿಯಲ್ಲಿ ಕಡಲ ಭದ್ರತೆ, ಶಾಂತಿ ಪಾಲನೆ ಮತ್ತು ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆ ನಡೆಸಿದೆ‘ ಎಂದು ತಿರುಮೂರ್ತಿ ತಿಳಿಸಿದರು.

ADVERTISEMENT

ಆಗಸ್ಟ್‌ 9ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಉನ್ನತ ಮಟ್ಟದ ವರ್ಚುವಲ್ ಸಭೆಯಲ್ಲಿ ಕಡಲ ಸುರಕ್ಷತೆ ಕುರಿತು ಮುಕ್ತ ಚರ್ಚೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಮೊದಲ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಆಫ್ರಿಕನ್‌ ಒಕ್ಕೂಟದ ಅಧ್ಯಕ್ಷರೂ ಆಗಿರುವ ಕಾಂಗೋದ ಅಧ್ಯಕ್ಷ ಫ್ಲೆಕ್ಸಿ ಆಂಟೊಯಿನೆ ಸಿಸೆಕೆಡಿ ಶಿಲೊಮಬೊ ಕೂಡ ಭಾಗವಹಿಸಲಿದ್ದಾರೆ. ಇವರು ಆಫ್ರಿಕಾದಲ್ಲಿರುವ ಕಡಲ ಸುರಕ್ಷತೆಯ ಪ್ರಾಮುಖ್ಯ ಕುರಿತು ಮಾತನಾಡಲಿದ್ದಾರೆ.

ವಿದೇಶಾಂಗ ಸಚಿವ ಎಸ್‌. ಜೈಶಂಕರ್ ಅವರು, ಆಗಸ್ಟ್‌ 18ರಂದು ಭದ್ರತಾ ಮಂಡಳಿಯ ‘ರಕ್ಷಕರಿಗೆ ರಕ್ಷಣೆ‘ ಥೀಮ್‌ ಅಡಿಯಲ್ಲಿ ನಡೆಯುವತಂತ್ರಜ್ಞಾನ ಮತ್ತು ಶಾಂತಿಪಾಲನೆ ಕುರಿತ ಮುಕ್ತ ಚರ್ಚೆಯ ಅಧ್ಯಕ್ಷತೆವಹಿಲಿದ್ದಾರೆ. ಆಗಸ್ಟ್‌19ರಂದು ಐಸಿಸ್‌ ಉಗ್ರ ಸಂಘಟನೆ ಕುರಿತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌ ಸಿದ್ಧಪಡಿಸಿರುವ ವರದಿಯ ಮೇಲೆ ನಡೆಯುವ ಚರ್ಚೆಯ ಅಧ್ಯಕ್ಷತೆಯನ್ನೂ ಜೈಶಂಕರ್ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.