ಲಾಸ್ ಏಂಜಲೀಸ್: ‘ಸಂತಾ ಆನಾ’ ಎನ್ನುವ ರಕ್ಕಸ ಗಾಳಿಯು ಬುಧವಾರ ಬೆಳಿಗ್ಗೆಯ ಹೊತ್ತಿಗೆ ತನ್ನ ವೇಗವನ್ನು ತುಸು ತಗ್ಗಿಸಿಕೊಂಡಿತು. ಇನ್ನು ರಕ್ಷಣಾ ಕಾರ್ಯಗಳಿಗೆ ವೇಗ ದೊರೆಯುತ್ತದೆ ಎಂದುಕೊಳ್ಳುವ ಹೊತ್ತಿಗೆ ಚಾರಿತ್ರಿಕವಾದ ಹಾಲಿವುಡ್ ಹಿಲ್ಸ್ ನಗರಕ್ಕೆ ಬುಧವಾರ ರಾತ್ರಿ ಕಾಳ್ಗಿಚ್ಚು ಹೊತ್ತಿಕೊಂಡಿದೆ. ಲಿಡಿಯಾ ಎನ್ನುವ ಪ್ರದೇಶದಲ್ಲಿಯೂ ಬುಧವಾರ ಕಾಳ್ಗಿಚ್ಚು ಹೊತ್ತಿಕೊಂಡಿದೆ.
‘ಕಾಳ್ಗಿಚ್ಚು ತೀವ್ರವಾಗಿ ವ್ಯಾಪಿಸುತ್ತಿದೆ’ ಎಂದು ಹಾಲಿವುಡ್ ಹಿಲ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ. ಗುರುವಾರ ಹಾಲಿವುಡ್ ಸಿನಿ ರಂಗದ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿದ್ದವು. ಹಾಲಿವುಡ್ ಹಿಲ್ಸ್‌ನಲ್ಲಿ ನೆಲೆಸಿರುವ ಕೋಟಿ ಕೋಟಿ ವೆಚ್ಚದ ಹಾಲಿವುಡ್‌ನ ಹಲವು ಸಿನಿ ತಾರೆಯರ ಮನೆಗಳು ಸುಟ್ಟು ಭಸ್ಮವಾದವು. ನೂರಾರು ಸಿನಿ ತಾರೆಯರು ತಮ್ಮ ಮನೆಗಳನ್ನು ತೊರೆದು ಓಡಿದರು. ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿತ್ತು.
ಜ.17ಕ್ಕೆ ಆಸ್ಕರ್‌ಗೆ ನಾಮನಿರ್ದೇಶಿತಗೊಂಡವರ ಹೆಸರು ಘೋಷಣೆ ಮಾಡಲು ನಿರ್ಧರಿಸಲಾಗಿತ್ತು. ಇದನ್ನು ಎರಡು ದಿನಗಳಿಗೆ ಮುಂದೂಡಲಾಗಿದೆ.
ಆಧಾರ: ಎಪಿ, ಎಎಫ್‌ಪಿ, ರಾಯಿಟರ್ಸ್, ಬಿಬಿಸಿ, ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ, ಲಾಸ್ ಏಂಜಲೀಸ್ ಅಗ್ನಿಶಾಮಕ ಇಲಾಖೆ ವೆಬ್‌ಸೈಟ್
l ಪೆಸಿಫಿಕ್ ಪ್ಯಾಲಿಸೈಡ್ಸ್‌ನ ಇತಿಹಾಸಲ್ಲಿಯೇ ಇಷ್ಟೊಂದು ದೊಡ್ಡ ಪ್ರಮಾಣದ ಕಾಳ್ಗಿಚ್ಚು ಹಬ್ಬಿರಲಿಲ್ಲ
l ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಮಳೆಯಾಗುತ್ತಿಲ್ಲ. ಬರಡು ಸ್ಥಿತಿ ನಿರ್ಮಾಣಗೊಂಡಿದೆ. ಈ ಕಾರಣಕ್ಕಾಗಿ ಬೆಂಕಿ ನಂದಿಸಲು ನೀರಿನ ಕೊರತೆ ಉಂಟಾಗಿದೆ. ‘ಇಷ್ಟೊಂದು ದೊಡ್ಡ ಪ್ರಮಾಣದ ಅನಾಹುತವನ್ನು ನಿರ್ವಹಿಸುವಷ್ಟು ಅಗ್ನಿಶಾಮಕ ಸಿಬ್ಬಂದಿ ಇಲ್ಲ’ ಎಂದು ಪ್ಯಾಲಿಸೈಡ್‌ನ ಮೇಯರ್ ಹೇಳಿದ್ದಾರೆ
l ಲಾಸ್ ಏಂಜಲೀಸ್‌ನಲ್ಲಿ ತಂಗಿರುವ ನೂರಾರು ಭಾರತೀಯ ಅಮೆರಿಕನ್ನರೂ ತಮ್ಮ ಮನೆಗಳನ್ನು ಬಿಟ್ಟು ತೆರಳಬೇಕಾಯಿತು
l 2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ಒಲಿಂಪಿಕ್ಸ್ ನಡೆಯಲಿದೆ. ಇದಕ್ಕಾಗಿ ಕ್ರೀಡಾ ಗ್ರಾಮವನ್ನು ಸಿದ್ಧಪಡಿಸಲಾಗುತ್ತಿತ್ತು. ಈ ನಗರಕ್ಕೂ ಕಾಳ್ಗಿಚ್ಚು ಹಬ್ಬಿದ್ದರಿಂದ ತೀವ್ರ ಹಾನಿಯಾಗಿದೆ. ಕೋಟಿ ಕೋಟಿ ಡಾಲರ್ ವೆಚ್ಚದಲ್ಲಿ ಕ್ರೀಡಾ ಗ್ರಾಮವನ್ನು ಮರುನಿರ್ಮಾಣ ಮಾಡಬೇಕಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.