ವಾಷಿಂಗ್ಟನ್: ಉಕ್ರೇನ್ ವಿರುದ್ಧ ಯುದ್ಧ ನಿರತ ರಷ್ಯಾ, ಅಲ್ಲಿನ ಇಂಧನ ಮತ್ತು ಮೂಲಸೌಕರ್ಯಗಳನ್ನು ಗುರಿಯಾಗಿಸಿ ತಾನು ನಡೆಸುತ್ತಿರುವ ದಾಳಿಗೆ ಸಂಬಂಧಿಸಿ ‘ಸೀಮಿತ ಕದನ ವಿರಾಮ’ ಘೋಷಿಸುವ ಸಾಧ್ಯತೆ ಇದೆ ಎಂದು ಶ್ವೇತಭವನ ಮಂಗಳವಾರ ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿದ ವೇಳೆ ಈ ಕುರಿತು ಚರ್ಚೆನಡೆದಿದ್ದು, ‘ಸೀಮಿತ ಕದನ ವಿರಾಮ’ದ ಬಗ್ಗೆ ಉಭಯ ನಾಯಕರಲ್ಲಿ ಸಹಮತ ಮೂಡಿದೆ ಎಂದು ಶ್ವೇತಭವನ ತಿಳಿಸಿದೆ.
ಉಕ್ರೇನ್ ವಿರುದ್ಧದ ಯುದ್ಧ ಕೊನೆಗಾಣಿಸಿ, ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಇಟ್ಟಿರುವ ಮೊದಲ ಹೆಜ್ಜೆ ಇದು ಎಂದು ಶ್ವೇತಭವನ ಬಣ್ಣಿಸಿದೆ.
‘ಈ ಕದನ ವಿರಾಮವು, ಕಪ್ಪುಸಮುದ್ರದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೂ ಅನ್ವಯವಾಗಲಿದೆ ಹಾಗೂ ಆ ಮೂಲಕ ಉಭಯ ದೇಶಗಳ ನಡುವಿನ ಯುದ್ಧ ಸಂಪೂರ್ಣವಾಗಿ ನಿಲ್ಲುವ ವಿಶ್ವಾಸ ಇದೆ’ ಎಂದೂ ಹೇಳಿದೆ.
‘ಈ ಕುರಿತ ಮಾತುಕತೆಗಳಿಗೆ ಶೀಘ್ರವೇ ಚಾಲನೆ ನೀಡಲಾಗುವುದು’ ಎಂದು ಶ್ವೇತಭವನ ಹೇಳಿದ್ದರೂ, ಹಂತಹಂತವಾಗಿ ಜಾರಿಯಾಗುವ ಕದನ ವಿರಾಮ ಕುರಿತ ಮಾತುಕತೆಯಲ್ಲಿ ಉಕ್ರೇನ್ ಕೂಡ ಪಾಲ್ಗೊಳ್ಳಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಮೂಲಗಳು ಹೇಳಿವೆ.
ಅಧ್ಯಕ್ಷ ಟ್ರಂಪ್ ಹಾಗೂ ವ್ಲಾಡಿಮಿರ್ ಪುಟಿನ್ ಅವರು ಸುದೀರ್ಘ ಮಾತುಕತೆ ನಡೆಸಿದರು. ಯುದ್ಧ ನಿಲ್ಲಿಸುವುದಕ್ಕೆ ಸಂಬಂಧಿಸಿ ತಾನು ಮುಂದಿಟ್ಟಿರುವ 30 ದಿನಗಳ ಕದನ ವಿರಾಮ ಕುರಿತ ಮಾತುಕತೆಗೆ ಶ್ವೇತಭವನ ಒತ್ತು ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.