ಕಾಶ್ ಪಟೇಲ್
ವಾಷಿಂಗ್ಟನ್: ಅಮೆರಿಕದ ತನಿಖಾ ಸಂಸ್ಥೆ ಫೆಡರಲ್ ಬ್ಯುರೋ ಆಫ್ ಇನ್‌ವೆಸ್ಟಿಗೇಷನ್ (ಎಫ್‌ಬಿಐ) ನಿರ್ದೇಶಕರಾಗಿ ಭಾರತ ಮೂಲದ ಕಾಶ್ ಪಟೇಲ್ ನೇಮಕಗೊಂಡಿದ್ದಾರೆ.
ಎಫ್‌ಬಿಐನ 9ನೇ ನಿರ್ದೇಶಕರಾಗಿ ಕಾಶ್ ಪಟೇಲ್ ಅವರನ್ನು ನೇಮಕಗೊಳಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಹಿ ಹಾಕಿದ್ದಾರೆ. ಎಫ್‌ಬಿಐ ಮುಖ್ಯಸ್ಥರಾಗಿದ್ದ ಕ್ರಿಸ್ಟೋಫರ್ ವ್ರೇ ಅವರ ಜಾಗಕ್ಕೆ ಈಗ ಪಟೇಲ್ ನೇಮಕಗೊಂಡಿದ್ದಾರೆ.
ಎಫ್‌ಬಿಐ ನಿರ್ದೇಶಕರಾದ ಮೊದಲ ಭಾರತೀಯ
ಅಮೆರಿಕದ ಪ್ರತಿಷ್ಠಿತ ಎಫ್‌ಬಿಐನ ಮೊದಲ ಭಾರತೀಯ ಮೂಲದ ನಿರ್ದೇಶಕರಲ್ಲದೆ, ಮೊದಲ ಏಷ್ಯನ್ ಮೂಲದವರು ಎನಿಸಿದ್ದಾರೆ. ಇವರ ಅವಧಿ 10 ವರ್ಷಗಳ ಕಾಲ ಇರಲಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಅವಧಿಯನ್ನು ಯಾರೂ ಪೂರ್ಣಗೊಳಿಸಿಲ್ಲ.
ಕಾಶ್ ಪಟೇಲ್ ಯಾರು?
ಕಾಶ್ ಪಟೇಲ್ ತಂದೆ–ತಾಯಿ ಗುಜರಾತ್ ಮೂಲದವರು. ಪಟೇಲ್ ಪೋಷಕರು ಅಮೆರಿಕದಲ್ಲಿ ನೆಲೆಸುವುದಕ್ಕಿಂತ ಮೊದಲು ಉಗಾಂಡದಲ್ಲಿದ್ದರು. ಅಲ್ಲಿಂದ ಕೆನಡಾಗೆ ಬಂದರು. ಈ ವೇಳೆ ಕಾಶ್ ಪಟೇಲ್ ತಂದೆಗೆ ಅಮೆರಿಕ ವಿಮಾನಯಾನ ಸಂಸ್ಥೆಯಲ್ಲಿ ಹಣಕಾಸು ಅಧಿಕಾರಿ ಕೆಲಸ ಸಿಕ್ಕಿದ್ದರಿಂದ ಅವರು ಕುಟುಂಬ ಸಮೇತರಾಗಿ ಅಮೆರಿಕಾಗೆ ಬಂದು ನೆಲೆಸಿದರು.
ನ್ಯೂಯಾರ್ಕ್‌ನ ಗಾರ್ಡನ್ ಸಿಟಿಯಲ್ಲಿ 1980ರಲ್ಲಿ ಕಾಶ್ ಪಟೇಲ್ ಜನಿಸಿದರು. ಇಲ್ಲಿಯೇ ಅವರು ಕಾಲೇಜು ಶಿಕ್ಷಣ ಪಡೆದರು. ನಂತರ ರಿಚ್ಮಂಡ್ ವಿಶ್ವವಿದ್ಯಾಲಯದಿಂದ ಇತಿಹಾಸ ಮತ್ತು ಕ್ರಿಮಿನಲ್ ಜಸ್ಟೀಸ್ ನಲ್ಲಿ ಪದವಿ ಪಡೆದರು. ಸಾರ್ವಜನಿಕ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಅವರು ಸರ್ಕಾರದ ವಿವಿಧ ತನಿಖಾ ಸಂಸ್ಥೆಗಳಲ್ಲಿ ಕೆಲಸ ಮಾಡಿದರು.
ಕಾಶ್ ಪಟೇಲ್ ಅವರು ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ (ಎನ್‌ಎಸ್‌ಸಿ) ಭಯೋತ್ಪಾದನಾ ನಿಗ್ರಹದ ಹಿರಿಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಹಲವಾರ ಉಗ್ರಗಾಮಿ ಸಂಘಟನೆಗಳ ಭಯೋತ್ಪಾದಕರ ಹತ್ಯೆ ಸೇರಿದಂತೆ ಅಮೆರಿಕದ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತಂದಿದ್ದಾರೆ.
ಟ್ರಂಪ್ ಅವರ ಮೊದಲ ಅವಧಿಯಲ್ಲಿ ರಕ್ಷಣಾ ಇಲಾಖೆಯಲ್ಲಿ ಮುಖ್ಯಸ್ಥರಾಗಿ ಮತ್ತು ರಾಷ್ಟ್ರೀಯ ಗುಪ್ತಚರ ಇಲಾಖೆಯ ಉಪನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈ ವೇಳೆ ಟ್ರಂಪ್ ಅವರ ಹಲವು ಪ್ರಮುಖ ಆದ್ಯತೆಗಳನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಕಾಶ್ ಪಟೇಲ್ ಅವರಿಗೆ ನೀಡಲಾಗಿತ್ತು ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.