ADVERTISEMENT

Iran-Israel War: ಖಮೇನಿ ಹತ್ಯೆ ಬಳಿಕ ಇರಾನ್‌ನ ಸರ್ವೋಚ್ಚ ನಾಯಕ ಯಾರು ?

ಏಜೆನ್ಸೀಸ್
Published 1 ಮಾರ್ಚ್ 2026, 5:07 IST
Last Updated 1 ಮಾರ್ಚ್ 2026, 5:07 IST
   

ಪರಮಾಣು ಒಪ್ಪಂದಕ್ಕೆ ಒಪ್ಪಿಕೊಂಡಿಲ್ಲ ಎನ್ನುವ ಕಾರಣಕ್ಕೆ ಇರಾನ್‌ ಮೇಲೆ ಇಸ್ರೇಲ್ ಹಾಗೂ ಅಮೆರಿಕ ಸೇರಿಕೊಂಡು ನಡೆಸಿದ್ದ ದಾಳಿಯಲ್ಲಿ ಅಲ್ಲಿನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡಲಾಗಿದೆ.

ಖಮೇನಿ ಹತ್ಯೆಯ ಬಳಿಕ ಶಿಯಾ ಮುಸ್ಲಿಂರ ಪ್ರಾಬಲ್ಯವಿರುವ ಇರಾನ್‌ನಲ್ಲಿ ಅಧಿಕಾರದ ಚುಕ್ಕಾಣಿಯು ಯಾರ ಪಾಲಿಗೆ ಸಿಗಬಹುದು ಎನ್ನುವುದು ಕುತೂಹಲಕ್ಕೆ ಕಾರಣವಾಗಿದ್ದು, ಇದೀಗ ಜಗತ್ತಿನ ಗಮನವು ಇರಾನ್‌ ಕಡೆಗಿದೆ.

ಸರ್ವೋಚ್ಚ ನಾಯಕನನ್ನು ಯಾರು ಆಯ್ಕೆ ಮಾಡುತ್ತಾರೆ ?

‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್‌’ ಎಂದು ಕರೆಯಲ್ಪಡುವ 88 ಮಂದಿಯ ಸಮಿತಿಯು ಇರಾನ್‌ನ ಸರ್ವೋಚ್ಚ ನಾಯಕನನ್ನು ನೇಮಕ ಮಾಡುತ್ತದೆ.

ADVERTISEMENT

ಈ ಸಮಿತಿಯು ಸಂಪೂರ್ಣವಾಗಿ ಶಿಯಾ ಧರ್ಮಗುರುಗಳನ್ನು ಒಳಗೊಂಡಿದೆ. ಇವರನ್ನು ಪ್ರತಿ ಎಂಟು ವರ್ಷಗಳಿಗೊಮ್ಮೆ ಆಯ್ಕೆ ಮಾಡಲಾಗುತ್ತದೆ. ಅವರ ಉಮೇದುವಾರಿಕೆಗಳನ್ನು ಅಲ್ಲಿನ ಸಂವಿಧಾನದ ರಕ್ಷಕ ಎಂದೇ ಕರೆಯಲ್ಪಡುವ ‘ಗಾರ್ಡಿಯನ್ ಕೌನ್ಸಿಲ್’ ಅನುಮೋದಿಸುತ್ತದೆ.

ಈ ಸಮಿತಿಗೆ ಅಧಿಕಾರದಲ್ಲಿರುವವರನ್ನು ಕಿತ್ತುಹಾಕುವ ಅಧಿಕಾರ ಕೂಡ ಇದೆ. ಆದರೆ, ಇದುವರೆಗೂ ಯಾರನ್ನೂ ಆ ಸಮಿತಿಯು ಪದಚ್ಯುತಗೊಳಿಸಿಲ್ಲ.

ಖಮೇನಿ ಉತ್ತರಾಧಿಕಾರಿ ಯಾರು ?

ಇರಾನ್‌ನ ಮುಂದಿನ ಸರ್ವೋಚ್ಚ ನಾಯಕ ಯಾರಾಗಲಿದ್ದಾರೆ ಎನ್ನುವ ಕುತೂಹಲವು ಗರಿಗೆದರಿದ್ದು, ಖಮೇನಿ ಅವರ ಪುತ್ರ ಮೊಜ್ತಬಾ ಖಮೇನಿ, ಅಲಿರೇಜಾ ಅರಾಫಿ, ಅಲಿ ಅಸ್ಘರ್ ಹೆಜಾಜಿ ಹಾಗೂ ಮೊಹಮ್ಮದ್‌ ಗೊಲ್ಪಯೇಗನಿ ಅವರ ಹೆಸರುಗಳು ಮುಂಚೂಣಿಯಲ್ಲಿದೆ.

ಇರಾನ್‌ನ ಅಧ್ಯಕ್ಷ ಹಾಗೂ ಖಮೇನಿಯ ಆಪ್ತನಾಗಿದ್ದ ಇಬ್ರಾಹಿಂ ರೈಸಿ ಅವರು ಖಮೇನಿಯ ಉತ್ತರಾಧಿಕಾರಿ ಎಂದೇ ಗುರುತಿಸಿಕೊಂಡಿದ್ದರು. ಆದರೆ, ಕಟ್ಟರ್ ನಿಲುವಿನ ರೈಸಿ, ಮೇ 2024 ರಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದರು.

ಇದೀಗ ಖಮೇನಿ ಅವರ ಪುತ್ರ ಮೊಜ್ತಬಾ ಖಮೇನಿ ಅವರೇ ಉತ್ತರಾಧಿಕಾರಿಯಾಗುವ ಸಾಧ್ಯತೆ ಹೆಚ್ಚಿದೆ. ಸದ್ಯ, ಅವರು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್‌ (ಐಆರ್‌ಜಿಸಿ) ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ದೇಶದ ಆಡಳಿತದ ಮೇಲೆ ಪ್ರಬಲ ಹಿಡಿತವನ್ನೂ ಹೊಂದಿದ್ದಾರೆ.

ಶಿಯಾ ಧರ್ಮಗುರುವಾಗಿರುವ 56 ವರ್ಷದ ಮೊಜ್ತಬಾ ಖಮೇನಿ, ಇದುವರೆಗೂ ರಾಜಕೀಯ ಹುದ್ದೆಗಳನ್ನು ಅಲಂಕರಿಸಿಲ್ಲ. ಆದರೆ ಇವರಿಗೆ ‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್‌’ಬೆಂಬಲವಿದೆ. ಆದರೆ, ಇವರ ಆಯ್ಕೆಯು ತಂದೆಯಿಂದ ಮಗನಿಗೆ ಅಧಿಕಾರವನ್ನು ಹಸ್ತಾಂತರಿಸುವುದು ಕೆಲವು ಧರ್ಮಗುರುಗಳ ವಿರೋಧಕ್ಕೆ ಕಾರಣವಾಗಬಹುದು ಎಂದು ಅಂದಾಜಿಸಲಾಗುತ್ತಿದೆ.

ಖಮೇನಿ ಅವರ ಅತ್ಯಂತ ನಂಬಿಕಸ್ಥ ವ್ಯಕ್ತಿಯಾಗಿದ್ದ ಅಲಿರೇಜಾ ಅರಾಫಿ, ಮೊಹಮ್ಮದ್ ಗೊಲ್ಪಯೇಗನಿ ಹಾಗೂ ಖಮೇನಿ ಅವರ ರಾಜಕೀಯ ವ್ಯವಹಾರಗಳ ಮೇಲ್ವಿಚಾರಣೆ ಮಾಡುತ್ತಿದ್ದ ಅಲಿ ಅಸ್ಘರ್ ಹೆಜಾಜಿ ಕೂಡ ಸರ್ವೋಚ್ಚ ನಾಯಕರಾಗಬಹುದು ಎಂದು ಹೇಳಲಾಗುತ್ತಿದೆ.

ಇರಾನ್‌ ಕಾನೂನಿನ ಪ್ರಕಾರ ‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್‌’ ತಕ್ಷಣವೇ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡಬೇಕು. ಒಂದು ವೇಳೆ ಅದು ವಿಳಂಬವಾದರೆ, ತಾತ್ಕಾಲಿಕ ನಾಯಕತ್ವ ಮಂಡಳಿಯು ಅಧಿಕಾರವನ್ನು ವಹಿಸಿಕೊಳ್ಳುವ ಸಾಧ್ಯತೆಯೂ ಇದೆ. ಇದರಲ್ಲಿ ಇರಾನ್‌ನ ಈಗಿನ ಅಧ್ಯಕ್ಷ, ನ್ಯಾಯಾಂಗದ ಮುಖ್ಯಸ್ಥರು ಹಾಗೂ ‘ಗಾರ್ಡಿಯನ್ ಕೌನ್ಸಿಲ್’ ಸದಸ್ಯರು ಇರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.