
ದಕ್ಷಿಣ ಭೂಗೋಳದಲ್ಲಿಯೇ ಮೊದಲನೆಯದಾದ ಕೃತಕ ಬುದ್ಧಿಮತ್ತೆಯ ಜಾಗತಿಕ ಸಮ್ಮೇಳನ ‘ಎಐ ಇಂಪ್ಯಾಕ್ಟ್ ಸಮ್ಮಿಟ್’ ಶುಕ್ರವಾರ (ಫೆ. 20) ದೆಹಲಿಯಲ್ಲಿ ಮುಕ್ತಾಯಗೊಂಡಿದೆ. ಈ ಮಹತ್ತಾದ ಮತ್ತು ಬೃಹತ್ತಾದ ಶೃಂಗಸಭೆಯಲ್ಲಿ ತಂತ್ರಜ್ಞಾನ ಕೇಂದ್ರೀಕೃತವಾಗಿರುವ, ಪಶ್ಚಿಮದ ತುದಿಯ ಸಿಲಿಕಾನ್ ಕಣಿವೆಯ ಬಹುತೇಕ ಪ್ರಸಿದ್ಧರೂ ನಿರ್ಮಾತೃಗಳೂ ಪಾಲ್ಗೊಂಡಿದ್ದರು. ಪಶ್ಚಿಮದಿಂದ ಪೂರ್ವದ ತುದಿಯವರೆಗೂ ಪ್ರಾಚ್ಯದೇಶಗಳನ್ನೂ ಹೊದೆದು ಹಬ್ಬುತ್ತಿರುವ ಈ ತಂತ್ರಜ್ಞಾನದ ಪಾಲುದಾರ ದೇಶ–ಸಮುದಾಯಗಳ ಪ್ರತಿನಿಧಿಗಳೂ ಆ ಕೂಟದಲ್ಲಿ ನೆರೆದಿದ್ದರು. ಜನಸಮುದಾಯಗಳ ಬದುಕಿನ ಕ್ರಮವನ್ನೇ ಪಲ್ಲಟಿಸಬಲ್ಲ ತಂತ್ರಾಂಶಗಳು, ಅಪ್ಲಿಕೇಷನ್‌ಗಳು ಮತ್ತು ಯೋಚನಾಕ್ರಮಗಳನ್ನು ಅಭಿವೃದ್ಧಿಪಡಿಸುವ ರೂಪುರೇಷೆ ಕುರಿತು ಚರ್ಚಿಸುವ ನಾಯಕರು ಈ ಸಮಾವೇಶದಲ್ಲಿ ಒಟ್ಟುಗೂಡಿದ್ದರು.
ಪೀಪಲ್, ಪ್ಲಾನೆಟ್ ಮತ್ತು ಪ್ರೊಗ್ರೆಸ್ ಎಂಬ ಮೂರು ಸೂತ್ರಗಳನ್ನು ಕೇಂದ್ರವಾಗುಳ್ಳ ಮೇಳದಲ್ಲಿ ಸಾಮಾಜಿಕ ನ್ಯಾಯ ಮತ್ತು ಆರ್ಥಿಕತೆ, ನಾವೀನ್ಯ ಮತ್ತು ಸ್ಥೈರ್ಯ, ಪ್ರಜಾತಾಂತ್ರಿಕ ತಂತ್ರಜ್ಞಾನ, ಮಾನವ ಸಂಪನ್ಮೂಲ, ವಿಶ್ವಾಸ ಮತ್ತು ನಂಬಿಕಾರ್ಹತೆ, ವಿಜ್ಞಾನ ಮತ್ತು ಒಳಗೊಳ್ಳುವಿಕೆ ಹಾಗೂ ಸಮಾಜ ಸಂವರ್ಧನೆ ಎನ್ನುವ ಏಳು ತಾತ್ತ್ವಿಕ ಚಕ್ರಗಳ ಸುತ್ತ ಅಂತರರಾಷ್ಟ್ರೀಯ ಕಾರ್ಯತಂಡಗಳು ಏನೇನು ಸಾಧ್ಯವೋ ಎಲ್ಲವನ್ನೂ ಚರ್ಚಿಸಿವೆ ಮತ್ತು ನಮ್ಮೆಲ್ಲರ ಮೇಲೂ ನೇರವಾಗಿಯೇ ಪರಿಣಾಮ ಬೀರುವ ಯೋಜನೆಗಳನ್ನು ರೂಪಿಸಲು ಯೋಜಿಸಿವೆ. ಯಾಂತ್ರಿಕ ಬುದ್ಧಿಮತ್ತೆಯ ಕುರಿತಾದ ಈ ಸಮಾವೇಶದ impact.indiaai.gov.in ಜಾಲತಾಣದಲ್ಲಿ ಚೋದ್ಯವೊಂದು ಅಡಕವಾಗಿದೆ. ಅದೆಂದರೆ, ಈ ಜಾಲತಾಣದಲ್ಲಿ ಅತ್ಯವಶ್ಯವಾಗಿ ಬಳಕೆಯಾಗಬೇಕಿದ್ದರೂ, ಒಮ್ಮೆಯೂ ಬಳಕೆಯೇ ಆಗದ ಶಬ್ದವೊಂದಿದೆ. ಅದು: ತಾಯ್ನುಡಿ ಅಥವಾ ಮಾತೃಭಾಷೆ.
ಕೆ.ವಿ. ಸುಬ್ಬಣ್ಣನವರು ತಮ್ಮ ‘ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು’ ಪುಸ್ತಕದಲ್ಲಿ ನೆಬ್ರಿಜಾ ಎಂಬುವವನ ಕಥೆಯೊಂದನ್ನು ಹೇಳುತ್ತಾರೆ. ಭಾಷೆಯನ್ನೇ ಮೂಲಾಧಾರವನ್ನಾಗಿ ಹೊಂದಿದ ತಂತ್ರಜ್ಞಾನವೊಂದರ ಜಾಗತಿಕ ಸಮಾವೇಶದ ಜಾಲತಾಣದಲ್ಲಿ ಭಾಷೆಯ ಕುರಿತ ಮಾತೇ ಇಲ್ಲದಿರುವುದು ಏಕಾಗಿರ
ಬಹುದು ಎಂಬುದಕ್ಕೆ ಆ ಕಥೆಯಲ್ಲಿ ಸುಳುಹುಗಳಿವೆ.
ಸ್ಪೇನ್‌ನ ಖ್ಯಾತ ರಾಣಿ ಇಸಾಬೆಲ್ಲಾಳ ಕಾಲದಲ್ಲಿದ್ದ ಅಂತೋನಿಯೋ ನೆಬ್ರಿಜಾ (ಕ್ರಿ.ಶ. 1444–1522) ಲ್ಯಾಟಿನ್ ವ್ಯಾಕರಣ ಗ್ರಂಥವನ್ನು ಬರೆದು ಪ್ರಸಿದ್ಧನಾಗಿದ್ದ ಭಾಷಾತಜ್ಞ, ವಯ್ಯಾಕರಣಿ. ಅಪರಿಮಿತ ರಾಜ್ಯ ವಿಸ್ತರಣೆಯ ಮಹತ್ವಾಕಾಂಕ್ಷೆಯಿದ್ದ ರಾಣಿಯ ಸಹಾಯ ಪಡೆದು– ಕೊಲಂಬಸ್ ಸಮುದ್ರಾಂತರ ಹೊರಟಿದ್ದ ಆ ಸಮಯದಲ್ಲಿ– ನೆಬ್ರಿಜಾ, ಸಾಮ್ರಾಜ್ಯ ವಿಸ್ತರಣೆಗೆ ಹಡಗುಗಳೊಂದೇ ಸಾಲದು ಅದಕ್ಕೆ ಸ್ಥಿರವಾದ ಭಾಷೆಯೊಂದು ಅಗತ್ಯವಿದೆ; ಈಗ ಛಿದ್ರವಾಗಿರುವ ಭಾಷೆಗಳನ್ನೆಲ್ಲ ಸಂಕಲಿಸಿ ತಾನೊಂದು ರಾಜಭಾಷೆ ರೂಪಿಸುತ್ತೇನೆ ಎಂದು ರಾಣಿಯನ್ನು ಒಪ್ಪಿಸಿ ಮೊತ್ತಮೊದಲ ಸ್ಪ್ಯಾನಿಶ್ ವ್ಯಾಕರಣವನ್ನು ರಚಿಸಿ ಪ್ರಕಟಿಸಿದ. ಅದು ಯುರೋಪಿಯನ್ ಭಾಷೆಗಳಲ್ಲಿ ಬಂದ ಮೊದಲ ವ್ಯಾಕರಣ ಗ್ರಂಥ. ರಾಜ್ಯ ಅಥವಾ ಸಾಮ್ರಾಜ್ಯವೊಂದರ ನಿರ್ಮಾಣಕ್ಕೆ ಮೊದಲು ಭಾಷೆಯೊಂದರ ಅಸ್ತಿವಾರವನ್ನು ಸಿದ್ಧಪಡಿಸಿಕೊಳ್ಳುವ ಪ್ರಕ್ರಿಯೆಯು ನೆಬ್ರಿಜಾನ ಹಿಂದೆಯೂ, ಚಾರಿತ್ರಿಕವಾಗಿ ಯಾವತ್ತೂ ಚಾಲ್ತಿಯಲ್ಲಿದ್ದುದನ್ನು ತೋರಿಸುವ ಅನೇಕ ಉದಾಹರಣೆಗಳನ್ನು ಸುಬ್ಬಣ್ಣನವರು ನಮ್ಮಮುಂದಿಡುತ್ತಾರೆ. ಅಮೆರಿಕ ಪ್ರಣೀತವಾದ ‘ಬೃಹತ್
ಭಾಷಾ ಮಾದರಿ’ಗಳ ಹಿಂದಿರುವ ಕಾರ್ಪೊರೇಟ್ ಸಂಸ್ಥೆಗಳು ಹೇಗೆ ಈಸ್ಟ್ ಇಂಡಿಯಾ ಕಂಪನಿಗಳ ಮುಂದುವರಿದ ರೂಪಗಳು ಎಂಬುದನ್ನೂ ಮತ್ತು ಸಾಮ್ರಾಜ್ಯವಾದಿ ವಿಸ್ತರಣೆಯ ಭಾಗ ಎಂಬುದನ್ನೂ, ಜಿಪಿಟಿಯ ಉದಯದ ತರುವಾಯ, ಅನೇಕ ಪ್ರಮುಖ ಚಿಂತಕರು ಈಗಾಗಲೇ ತೋರಿಸಿಕೊಡುತ್ತಲೂ ಬಂದಿದ್ದಾರೆ. ಭಾಷೆ–ಸಂಸ್ಕೃತಿಗಳ ಬಹುರೂಪಗಳನ್ನು ಬೇಕೆಂದೇ ಕಡೆಗಣಿಸಿ, ಏಕತ್ರ ಜಾಗತಿಕ ವ್ಯಾಕರಣ
ವೊಂದನ್ನು ಸಾಧಿಸಹೊರಟ ಆಧುನಿಕ ತಂತ್ರಜ್ಞಾನದ ಸ್ವರೂಪದಲ್ಲಿಯೇ ತಾಯ್ನುಡಿಯನ್ನು ಮರೆಯುವ ಮತ್ತು ಮರೆಸುವ ಕ್ರಮವೂ ಅಂತರ್ಗತವಾಗಿರುವುದು ಕಾಕತಾಳೀಯವಲ್ಲ.
ಕ್ರಿ.ಶ. 860–870ರ ನಡುವೆ ರಚಿತವಾದ ಕವಿರಾಜಮಾರ್ಗ ಗ್ರಂಥವನ್ನಾಗಲೀ, ಅದರ ನೆಪ
ದಲ್ಲಿ ಸುಬ್ಬಣ್ಣನವರು ಕನ್ನಡ ಜಗತ್ತನ್ನು ಮತ್ತೊಮ್ಮೆ ತಲಸ್ಪರ್ಶಿಯಾಗಿ ಪರಿಭಾವಿಸಿ ಬರೆದ ಕೃತಿಯನ್ನಾಗಲೀ
ಅವಲೋಕನ ಮಾಡುವುದು ಈ ಬರಹದ ಉದ್ದೇಶವಲ್ಲ. ಸುಬ್ಬಣ್ಣನವರನ್ನು ಅವರ ಗುರುಗಳಾದ ಎಸ್.ವಿ. ಪರಮೇಶ್ವರ ಭಟ್ಟರು ‘ನಾಲ್ಕಾರು ದಿನ ಕೂರಿಸಿಕೊಂಡು ಓದಿ ಹೇಳಿದ್ದ’ ಕವಿರಾಜಮಾರ್ಗ
ಕಾರನ ಕೃತಿಯು, 1980ರದಶಕದ ಕನ್ನಡ–ಗೋಕಾಕ್ ಚಳವಳಿಯ ಸಮಯದ ಮರು ಓದಿನಲ್ಲಿ ಅವರಲ್ಲಿ ‘ನಿಜವಾಗಿ ಸ್ಫೋಟಿಸಿದ’ ಹೊಸ ಅರ್ಥಗಳನ್ನು ಮತ್ತು ಅವರಿಗೆ ‘ಬಹುಪಾಲು ನನ್ನೆದುರೇ ನಡೆದಿದ್ದ ನಮ್ಮ ಈಚಿನ ಇತಿಹಾಸವಾಹಿನಿಯ ಮೇಲೆ ಅದು ಬೆಳಕು ಚೆಲ್ಲಿ ಬೆಳಗಿಸುತ್ತಿರುವಂತೆ’ ಭಾಸವಾದ ಕೃತಿಯ ಮೂಲಕ ಅವರು ಪಡೆದ ಒಳನೋಟಗಳನ್ನು, 2026ರಲ್ಲಿ ನಮ್ಮ ಕಾಲಕ್ಕೆ ಅಗತ್ಯವಾದ ಪಾಠಗಳನ್ನು ಟಿಪ್ಪಣಿ ಮಾಡುವುದು ಈ ಬರಹದ ಉದ್ದೇಶ.
ತಂತ್ರಜ್ಞಾನವೆಂಬುದು ಯಾವತ್ತೂ ಕೇಂದ್ರೀಕರಣದ ಅಡಿಗೆ ಜನರನ್ನು ತಳ್ಳುವ ‘ಟಾಪ್–ಡೌನ್’ ಐಡಿಯಾ. ಅದರ ವಿರುದ್ಧವಾಗಿ ಭಾಷೆ ಎಂಬುದು ದಿನವೂ ಬದಲಾಗುತ್ತ ನಮ್ಮನ್ನು ವಿಕೇಂದ್ರೀಕೃತವಾಗಿ ಜೀವಂತವಿರಿಸಬಲ್ಲ ಒಂದು ಮೂಲ ತಂತ್ರಜ್ಞಾನ. ತಂತ್ರಜ್ಞಾನ ಇಟ್ಟಿಗೆಯಾದರೆ, ಭಾಷೆ ಮಣ್ಣು. ಮಣ್ಣನ್ನು ಮನುಷ್ಯರು ಕಲಸಬೇಕು ಮತ್ತು ಅದು ಯಾವ ಆಕಾರಗಳ ಇಟ್ಟಿಗೆಗಳಾಗಬೇಕು ಎಂಬುದನ್ನು
ಸಮಷ್ಟಿ ನಿರ್ಧರಿಸಬೇಕು. ಅದು ಏಕಾಕೃತಿ ಆಗದಂತೆ ತಡೆಯಬೇಕಾದರೆ, ಕನ್ನಡನಾಡಿನ ಒಳಗೇ ಬಾಳಿ
ಕೊಂಡಿರುವ ಭಾಷಾ ಸಮುದಾಯಗಳು ‘ಬಾಟಮ್ ಅಪ್’ ಆಗಿ ತಮ್ಮ ಅಸ್ತಿತ್ವವನ್ನು, ಲೋಕರೂಢಿಗಳನ್ನು, ಜಗತ್ತಿನ ಕುರಿತಾದ ತಮ್ಮ ನಿಲುವುಗಳನ್ನೂ ಪ್ರಕಟಿಸಬೇಕು. ಯಾಂತ್ರಿಕ ಬುದ್ಧಿಮತ್ತೆಯ ಮಹಾರಥಕ್ಕೆ ಬಹುಭಾಷೆಗಳ ಗಾಲಿ ತೊಡಿಸಿದರೆ ಮಾತ್ರವೇ ಬಹುಮುಖಿಯಾದ ಲೋಕವಾಸ್ತವಗಳು ಒಟ್ಟಿಗೆ ಬಾಳಿಕೊಳ್ಳುತ್ತವೆ.
ಇದನ್ನು ಮಾರುಕಟ್ಟೆಯಾಗಲೀ, ಕಾರ್ಪೊರೇಟ್‌ಗಳಾಗಲೀ ಮಾಡುವುದಿಲ್ಲ. ಅವು ಹೆಚ್ಚು ಜನರು ಮಾತನಾಡುವ ಭಾಷೆಗಳಲ್ಲಿ ಮಾತ್ರವೇ ತಂತ್ರಜ್ಞಾನದ ಅಭಿವೃದ್ಧಿಗೆ ಗಮನ ಕೊಡುತ್ತಿರುತ್ತವೆ ಮತ್ತು ವೈವಿಧ್ಯವು ವ್ಯವಹಾರಕ್ಕೆ ಹಾನಿಕರ ಎಂಬ ತಾತ್ಪರ್ಯದ ಮೇಲೆ ಕಾರ್ಯ ನಿರ್ವಹಿಸುತ್ತಿರುತ್ತವೆ. ಇದು ವಾಸ್ತವದಲ್ಲಿ ಕವಿಗಳ (ಸಾಹಿತಿಗಳ) ಕೆಲಸ. ಆದರೆ, ಕವಿಲೋಕವಷ್ಟೇ ಇದನ್ನು ಮಾಡಲು ಸಾಧ್ಯವೆಂದು ಭಾವಿಸುವುದು ಅವಾಸ್ತವ. ನುಡಿಯ ಕುರಿತಾದ ಕೆಲಸಕ್ಕೆ ಜನರಷ್ಟೇ ಅಲ್ಲ, ರಾಜನ ನೆರವೂ ಬೇಕು. ಕನ್ನಡ ನಾಡಿನ ಅನೇಕ ನುಡಿಗಳನ್ನೂ ಮತ್ತು ಉಪನುಡಿಗಳನ್ನೂ ‘ಎಐ’ನ ಭಾಗವಾಗಿಸಲು ‘ಕವಿರಾಜಮಾರ್ಗ’ದಲ್ಲಿ ಸರ್ಕಾರವೂ ಕೈಜೋಡಿಸಿದಾಗ, ಭಾಷೆಗಳ ಭಿನ್ನ ವಿವೇಕಗಳು ಸಾಮಾಜಿಕ ಏಕಾಭಿಪ್ರಾಯ ನಿರ್ಮಾಣವಾಗದಂತೆ ಕಾಪಾಡುತ್ತವೆ.
ಸರಳವಾಗಿಯೂ ಮತ್ತು ತಾಂತ್ರಿಕವಾಗಿಯೂ ಹೇಳುವುದಾದರೆ, ನಮ್ಮ ಜ್ಞಾನವ್ಯವಸ್ಥೆಗಳನ್ನು ಅನೇಕ ಭಾಷೆಗಳಲ್ಲಿ ಅನೋಟೇಟ್ ಮಾಡುವ ಮತ್ತು ಅಂತರ್ ಭಾಷೆಗಳಲ್ಲಿ ಅನುವಾದಗಳನ್ನು ಮಾಡುವ ಕೆಲಸವನ್ನು ಒಂದು ಯೋಜನೆಯಂತೆ ಸಂಯೋಜಿಸಬೇಕು. ಅದು ತಂತ್ರಜ್ಞಾನದ ಪ್ರವಾಹಕ್ಕೆ ಕ್ರಮವಾಗಿ ಎದುರಾಗಿ ಅಣೆಕಟ್ಟು–ಸೇತುವೆಗಳನ್ನು ಕಟ್ಟುವುದಕ್ಕೆ ಸಹಾಯ ಮಾಡುತ್ತದೆ. ಕವಿರಾಜಮಾರ್ಗದ ಮೊದಲ ಪರಿಚ್ಛೇದ ‘ದೋಷಾನಿರ್ಣಯ’ವನ್ನು ಕುರಿತಾದುದು ಎಂದು ಗಮನಿಸುವ ಸುಬ್ಬಣ್ಣನವರು ‘ಭಾಷೆ–ಜನಪದ–ರಾಜ್ಯಗಳ ಸಮಷ್ಟಿಯು ಅದೇ ಮೊದಲ ಬಾರಿಗೆ ಉದಯಗೊಳ್ಳುತ್ತಿದ್ದ ಸಂದರ್ಭದಲ್ಲಿ ಈ ಗ್ರಂಥವು ಹೀಗೆ ಭಾಷೆಯಲ್ಲಿನ ದೋಷಗಳ ಬಗ್ಗೆ ಹೆಚ್ಚು ಜಾಗೃತವಾಗಿದ್ದುದು ಸಹಜವಾದದ್ದೇ’ ಎಂದು ಗುರುತಿಸುತ್ತಾರೆ. ಆದರೆ, ಈ ದೋಷಾನಿರ್ಣಯವು ಬರೀ ತಪ್ಪನ್ನು ಹೇಳುವುದಾಗದೆ, ಕನ್ನಡದ ವೈವಿಧ್ಯ ಕಸುವುಗಳನ್ನು ಹೇಳುವುದಕ್ಕೂ ಆಗಿದೆ. ಈಗಿನ ಕಾಲವು ಮತ್ತು ಕನ್ನಡವು ಕೂಡ ಒಂದು ‘ದೋಷಾನಿರ್ಣಯ’ದ ಘಟ್ಟದಲ್ಲಿ ನಿಂತಿದೆ ಎಂದು ಯಾರಿಗಾದರೂ ಅನ್ನಿಸುವ ಪಕ್ಷದಲ್ಲಿರುವ ಯಾರೂ ಮತ್ತೂ ಎಲ್ಲರೂ ಈ ಸೃಜನಶೀಲ ಕಟ್ಟುವಿಕೆಯಲ್ಲಿ ಪಾಲ್ಗೊಳ್ಳಬೇಕು. ಆಗ ಒಟ್ಟೂ ಕನ್ನಡನಾಡು ಮತ್ತು ನುಡಿಯ ಸತುವನ್ನು– ಎಲ್ಲ ಮತ್ತು ಎಲ್ಲರ ಕನ್ನಡವನ್ನು– ಯಾಂತ್ರಿಕ ಬುದ್ಧಿಮತ್ತೆ ಹಾಗೂ ಅದರ ತಳಹದಿಯಾದ ‘ವೈಶ್ವಿಕ ವ್ಯಾಕರಣ’ದ ಅರ್ಥಪೂರ್ಣ ಮತ್ತು ಅಗತ್ಯ ಭಾಗವಾಗಿಸಬಹುದು.
ಬಹುತ್ವವನ್ನು ತಾಳಿಕೊಳ್ಳಬಲ್ಲ ಮತ್ತು ಒಳಗೊಳ್ಳಬಲ್ಲ ಕರ್ನಾಟಕದ ಬಹುಭಾಷಿಕ ಗುಣದ ಕಾರಣ
ದಿಂದಲೇ ಬೆಂಗಳೂರು ಎಂಬ ನಗರ ರೂಪುಗೊಳ್ಳಲು ಸಾಧ್ಯವಾದುದು ಮತ್ತು ಯಾಂತ್ರಿಕ ಬುದ್ಧಿಮತ್ತೆಯ ಒಂದು ಜಾಗತಿಕ ಕೇಂದ್ರವಾಗಿ ರೂಪುಗೊಳ್ಳಲು ಸಾಧ್ಯವಾಗಿರುವುದು. ಬೆಂಗಳೂರನ್ನು ಸೃಜಿಸಿದ ಕರ್ನಾಟಕವೇ ಭಾರತದ ಭಾಷಿಕ ವೈವಿಧ್ಯವನ್ನು ಕಾಪಿಟ್ಟು ಕಟ್ಟಲು ಅರ್ಹವೂ ಆಗಿದೆ. ಅದರ ಮೊದಲ ಹೆಜ್ಜೆಯಾಗಿ ತಂತ್ರಜ್ಞಾನದ ಜಡೆಯಲ್ಲಿ ಕನ್ನಡ ನಾಡಿನ ಭಾಷೆ ಮತ್ತು ಭಾವಲೋಕಗಳನ್ನು ಮುಂದಿನ ಕಾಲಕ್ಕೆ ಒಟ್ಟುಕಟ್ಟಬೇಕಾದ್ದು ನಮ್ಮ ಕೆಲಸ. ಅದು ಜನ, ಸಂಸ್ಥೆ ಮತ್ತು ಸರ್ಕಾರಗಳು ಒಗ್ಗೂಡಿ ಮಾಡಬೇಕಾದ ಕ್ರಿಯಾಶೀಲವೂ ಮತ್ತು ಕರ್ತೃತ್ವಶಾಲಿಯೂ ಆದ ಜವಾಬ್ದಾರಿ.
‘ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತ’ನ್ನು ಕೆ.ವಿ. ಸುಬ್ಬಣ್ಣನವರು ಪ್ರಕಟಿಸಿದ್ದು 2001ನೇ ಇಸವಿಯಲ್ಲಿ. ಅದರ ಒಂದು ದಶಕದ ಹಿಂದೆ ಭಾರತ ಜಾಗತೀಕರಣದ ಬಾಗಿಲುಗಳನ್ನು ತೆಗೆಯುವ ಮೊದಲಿನ ನಲವತ್ತು ವರ್ಷಗಳ ಕಾಲ ಅವರ ಮರು ಓದುಗಳಲ್ಲಿ ಪಾಕಗೊಂಡ ಈ ಕೃತಿ ನಮಗೆ ಬಹುಮುಖ್ಯವಾದುದನ್ನು ನಿವೇದಿಸುತ್ತಿದೆ. ಅವರು ‘ಹೇವರಿಕೆ’ಯಿಂದ ನೆನಪಿಸಿಕೊಳ್ಳುವ ಏಕಾಕೃತಿಯ ಅಪಾಯಗಳು ಈಗ ಕಾಲು ಶತಮಾನದ ನಂತರ ಭಯೋತ್ಪಾದಕ ಸವಾಲಾಗಿ ಮುಂದಡಿ ಇಡುತ್ತಿರುವಾಗ ಇದಕ್ಕೆ ಹೇಗೆ ಎಚ್ಚರಿಕೆಯಿಂದ ಮತ್ತು ಎಚ್ಚರವಾಗಿ ಎದುರಾಗಬೇಕೆಂಬ ಸೂಚನೆಗಳನ್ನು ನಾವು ಈ ಪಠ್ಯದಿಂದ ಪಡೆಯಬಹುದು.
– ಲೇಖಕ: ಸಿಇಒ, ವರ್ಡ್ ವೈಸ್ ಲ್ಯಾಂಗ್ವೇಜ್ ಲ್ಯಾಬ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.