‘ಸರಳತೆಯಿಂದ ಕ್ಲಿಷ್ಟತೆಯೆಡೆಗೆ’ ಎನ್ನುವುದು ಶಿಕ್ಷಣಶಾಸ್ತ್ರದ ಮೂಲ ತತ್ವ. ಇದನ್ನು ಆಧರಿಸಿದ ಗಾಂಧೀಜಿಯ ಮೂಲ ಶಿಕ್ಷಣದ ಪರಿಕಲ್ಪನೆಯು ‘ಓದು-ಬರಹ-ಲೆಕ್ಕ’ ಇವುಗಳನ್ನು ಶಿಕ್ಷಣದ ಮೂಲಭೂತ ಅವಶ್ಯಕತೆಯಾಗಿ ಪರಿಗಣಿಸುತ್ತದೆ. ಆನಂತರ ವೃತ್ತಿಶಿಕ್ಷಣಕ್ಕೆ, ಭೂಗೋಳ, ಸಮಾಜ ವಿಜ್ಞಾನ, ಮೂಲ ವಿಜ್ಞಾನಗಳ ಪ್ರಾಥಮಿಕ ಪಾಠಗಳಿಗೆ ಆದ್ಯತೆಯನ್ನು ಕೊಡುತ್ತದೆ.
ವರ್ತಮಾನದ ಶೈಕ್ಷಣಿಕ ಚರ್ಚೆಗಳು ಏನನ್ನು ಕಲಿಸಬೇಕು ಎಂಬುದರ ಕುರಿತಾಗಿ ಇವೆಯೇ ವಿನಾ ಕಲಿಕಾ ಪ್ರಕ್ರಿಯೆ ಹೇಗೆ ನಡೆಯಬೇಕು ಎಂಬುದರ ಕುರಿತಾಗಿ ಇಲ್ಲ. ಏನನ್ನು ಕಲಿಸಬೇಕು ಎನ್ನುವ ಚರ್ಚೆಯು ವಿವಿಧ ಹಿತಾಸಕ್ತಿಯ ತಂಡಗಳ ಆಶಯವನ್ನು ಪಠ್ಯದಲ್ಲಿ ಸೇರ್ಪಡೆಗೊಳಿಸಲು ಒತ್ತಾಯಿಸುತ್ತದೆ. ಆದರೆ ಮಗುವಿನ ದೈಹಿಕ ವಯಸ್ಸು, ಮಾನಸಿಕ ವಯಸ್ಸು, ಬೌದ್ಧಿಕ ಮತ್ತು ಭಾವನಾತ್ಮಕ ಸ್ಥಿತಿ ಹಾಗೂ ಆ ಸ್ಥಿತಿಯಲ್ಲಿ ಯಾವ ವಿದ್ಯಾರ್ಥಿಗಳನ್ನು ಯಾವ ವಿಧಾನದಲ್ಲಿ ಕಲಿಕೆಗೆ ಒಳಗು ಮಾಡಿಕೊಳ್ಳಬೇಕು ಎಂಬ ಯಾವ ಅಂಶವನ್ನೂ ವರ್ತಮಾನದ ಚರ್ಚೆಗಳು ಪರಿಗಣಿಸುತ್ತಿಲ್ಲ.
ಪಠ್ಯ, ಕಲಿಕೆಗೆ ಸಂಬಂಧಿಸಿದಂತೆ ಈಗ ಚರ್ಚೆಗೆ ಒಳಗಾಗುತ್ತಿರುವಎಲ್ಲ ವಿಷಯಗಳೂ ಮಗುವಿಗೆ ಬೇಕಾದವುಗಳೇ. ಆದರೆ ಚರ್ಚೆಗಳಲ್ಲಿ ‘ಸರಳತೆಯಿಂದ ಕ್ಲಿಷ್ಟತೆಯೆಡೆಗೆ’ ಪರಿಕಲ್ಪನೆಯ ಸುಳಿವೇ ಇಲ್ಲ. ಸರಳತೆಯ ಪ್ರಶ್ನೆಯೇ ಇಲ್ಲ. ಕ್ಲಿಷ್ಟ ಪರಿಕಲ್ಪನೆಗಳೇ ತುಂಬಿವೆ. ಯಾವ ಹಂತದಲ್ಲಿ ಯಾವ ಬೌದ್ಧಿಕ ಮಟ್ಟದ ವಿದ್ಯಾರ್ಥಿಗಳು ಅದನ್ನು ಕಲಿಯಬಲ್ಲರು ಎಂಬ ಬಗ್ಗೆ ಚರ್ಚೆಯ ಅಗತ್ಯವಿದೆ. ಪ್ರತಿಯೊಂದು ಮಗುವೂ ‘ಅನನ್ಯ’ವಾಗಿರುತ್ತದೆ ಎಂಬ ನೆಲೆಯಲ್ಲಿ ಇದನ್ನು ಅರ್ಥ ಮಾಡಿಕೊಳ್ಳಬೇಕು.
ಇಂತಹ ನೆಲೆಯಲ್ಲಿ ಎಲ್ಲ ಮಕ್ಕಳಿಗೂ ಸಾಮಾನ್ಯವಾಗಿರುವ ಮೂಲಭೂತ ಕೌಶಲಗಳು ಓದು-ಬರಹ– ಸರಳ ಲೆಕ್ಕ. ಈ ಮೂರು ಅಂಶಗಳಲ್ಲಿ ಮಕ್ಕಳು ಪರಿಣತರಾದರೆ ಉಳಿದ ವಿಷಯಗಳ ಕಲಿಕೆಯಲ್ಲಿ ಕೊಂಚ ಏರುಪೇರಾದರೂ ಮಕ್ಕಳೇ ಬೇಕಾದಾಗ ಓದಿಕೊಳ್ಳಬಲ್ಲರು, ಬರೆದುಕೊಳ್ಳಬಲ್ಲರು, ತಾರ್ಕಿಕವಾಗಿ ಚಿಂತಿಸಿ ತೀರ್ಮಾನ ತೆಗೆದುಕೊಳ್ಳಬಲ್ಲರು. ಏಕೆಂದರೆ ಲೆಕ್ಕವು ಬರೀ ಲೆಕ್ಕಾಚಾರವನ್ನಷ್ಟೇ ಅಲ್ಲ, ತಾರ್ಕಿಕ ಚಿಂತನೆಯನ್ನೂ ಅಭಿವೃದ್ಧಿಪಡಿಸುತ್ತದೆ. ಈ ಮೂರಕ್ಕೂ ಮೂಲಭೂತ ಅವಶ್ಯಕತೆ ಭಾಷೆಯಾಗಿದೆ. ಭಾಷೆ; ಅದು ಕನ್ನಡವಾದರೂ ಇರಲಿ, ಇಂಗ್ಲಿಷಾದರೂ ಇರಲಿ. ಭಾಷಾ ಕಲಿಕೆಯಲ್ಲಿ ವಿದ್ಯಾರ್ಥಿಗಳ ಗುಣಮಟ್ಟ ಹೇಗಿದೆ? ಭಾಷಾ ಬಳಕೆ ಸರಿ ಇಲ್ಲದಿದ್ದರೂ ಪೂರ್ಣ ಅಂಕಗಳನ್ನು ಪಡೆಯಬಹುದಾದ ಸ್ಥಿತಿ ಮತ್ತು ಗಣಿತ, ವಿಜ್ಞಾನ, ಸಮಾಜ ವಿಜ್ಞಾನಗಳೇ ಚರ್ಚೆಯ ಪ್ರಧಾನ ಸಂಗತಿಗಳೂ ಭವಿಷ್ಯದ ಅಡಿಗಲ್ಲೂ ಆಗಿವೆಯೆಂಬ ಸಾಮಾನ್ಯ ಧೋರಣೆಯ ಸಂದರ್ಭದಲ್ಲಿ, ಒಬ್ಬ ಅಧ್ಯಾಪಕನಾಗಿ, ಭಾಷಾ ಕಲಿಕೆಯ ಸ್ಥಿತಿ
ಆಶಾದಾಯಕವಾಗಿಲ್ಲ ಎಂಬುದು ಅನುಭವದಿಂದ ನಾನು ಗ್ರಹಿಸಿರುವ ಸಂಗತಿಯಾಗಿದೆ.
ಪ್ರಸ್ತುತ ಭಾಷಾ ಕಲಿಕೆಯಲ್ಲಿ ಇಂಗ್ಲಿಷ್‌ಗೆ ಮಹತ್ವವಿದೆ. ಹಾಗಿರುವಾಗ ಒಂದು ಭಾಷೆಯನ್ನು ಕಲಿಸುವ ವಿಧಾನ ಹೇಗಿರಬೇಕು ಎನ್ನುವುದು ಮುಖ್ಯವಾಗಿದೆ. ಸಮರ್ಪಕ ಭಾಷಾ ಕಲಿಕೆಯು ಐದು ಹಂತಗಳಲ್ಲಿ ನಡೆಯಬೇಕು. ಮೊದಲು ತಾನು ಕಲಿಯುವ ಭಾಷೆಯ ಪದಗಳು ಮಗುವಿನ ಕಿವಿಗೆ ಕೇಳಿಸುತ್ತಾ ಇರಬೇಕು. ಈ ಹಂತದಲ್ಲಿ, ಮಗುವಿನಲ್ಲಿ ಆಲಿಸುವ ಸಾಮರ್ಥ್ಯ ಇದೆಯೇ ಎಂದು ಪರಿಶೀಲಿಸಿ, ಆಲಿಸುವ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಆಗಮಾತ್ರ ಕೇಳಿಸಿದ ಪದಗಳು ಕಲಿಕೆಯ ಪರಿಣಾಮವನ್ನು ಉಂಟು ಮಾಡುತ್ತವೆ.
ಎರಡನೆಯ ಹಂತದಲ್ಲಿ, ಮಗು ತಾನು ಆಲಿಸಿದ ಪದಗಳನ್ನು ಪುನರುಚ್ಚರಿಸಬೇಕು. ಆಗ ಉಚ್ಚಾರ ದೋಷಗಳು ಕಂಡುಬಂದರೆ, ತಿದ್ದಿ ಸರಿಪಡಿಸಬೇಕು. ಉಚ್ಚಾರ ದೋಷ ಸರಿಹೋಗದೇ ಇದ್ದರೆ ಭಾಷೆಯನ್ನು ಮಾತನಾಡಲು ಆತ್ಮ
ವಿಶ್ವಾಸದ ಕೊರತೆ ಉಂಟಾಗಿ ಮಗು ಸಂವಹನದಲ್ಲಿ ಹಿಂದುಳಿಯುತ್ತದೆ. ಮೂರನೆಯ ಹಂತದಲ್ಲಿ, ಪುನರುಚ್ಚರಿಸಿದ ಪದಗಳ ಅರ್ಥವನ್ನು ಮಗು ಗ್ರಹಿಸಬೇಕು. ಅನುಕರಣೆಯಿಂದ ಪದಗಳನ್ನು ಉಚ್ಚರಿಸುವುದನ್ನು ಕಲಿತ ಮೇಲೆ ಪದಗಳನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತದೆ. ಎಳವೆಯಲ್ಲಿ ಮಕ್ಕಳು ‘ಅಮ್ಮ’ ‘ಅಪ್ಪ’ ಎನ್ನುತ್ತಾರೆ. ಆದರೆ ‘ಅಮ್ಮ’ ‘ಅಪ್ಪ’ ಎನ್ನುವ ಪರಿಕಲ್ಪನೆ ಅರ್ಥವಾಗುವುದು ಹಲವು ವರ್ಷಗಳ ನಂತರವಾಗಿರುತ್ತದೆ. ಅದೇ ರೀತಿ, ‘ಸಂಕಷ್ಟ’ ಎಂಬ ಪದವನ್ನು ಉಚ್ಚರಿಸಿದ ತಕ್ಷಣ ಆ ಪದದ ಅರ್ಥ ಆಗುವುದಿಲ್ಲ. ಹಲವಾರು ಉದಾಹರಣೆಗಳ ಮೂಲಕ ಆ ಪದದ ಅರ್ಥವನ್ನು ಮಗುವಿನಲ್ಲಿ ಮೂಡಿಸಬೇಕಾಗುತ್ತದೆ.
ನಾಲ್ಕನೆಯ ಹಂತದಲ್ಲಿ, ಪದವನ್ನು ಗುರುತಿಸಿ ಓದಲು ಕಲಿಯಬೇಕು. ಐದನೆಯದಾದ ಕೊನೆಯ ಹಂತದಲ್ಲಿ, ಬರೆಯಲು ಕಲಿಯಬೇಕು.
ನಮ್ಮಲ್ಲಿ ಸಾಮಾನ್ಯವಾಗಿ ಕನ್ನಡವನ್ನು ಕಲಿಸಿದ ವಿಧಾನದಲ್ಲಿಯೇ ಇಂಗ್ಲಿಷನ್ನು ಕಲಿಸಲಾಗುತ್ತದೆ. ‘ಕನ್ನಡ’ವಾದಾಗ ಪರಿಸರದ ಭಾಷೆ. ಕನ್ನಡದ ಬಹಳಷ್ಟು ಪದಗಳ ಮೊದಲ ನಾಲ್ಕು ಹಂತಗಳು ಶಾಲೆಗೆ ಬರುವ ಮೊದಲೇ ಆಗಿರುತ್ತವೆ ಎಂಬ ನಂಬಿಕೆಯಲ್ಲಿ, ಬರವಣಿಗೆ
ಯಿಂದಲೇ ಕನ್ನಡ ಕಲಿಕೆಯನ್ನು ಆರಂಭಿಸಲಾಗುತ್ತದೆ.
ಅದೇ ಪದ್ಧತಿಯನ್ನು ಇಂಗ್ಲಿಷ್‌ಗೆ ಅನುಸರಿಸಿದಾಗ ಮೊದಲ ನಾಲ್ಕು ಹಂತಗಳು ಪೂರೈಸಲ್ಪಟ್ಟಿರದೆ ಮಗು ಕಲಿಕಾ ಸಂಕಷ್ಟವನ್ನು ಎದುರಿಸುತ್ತದೆ. ಒಂದು ಸಣ್ಣ ಉದಾಹರಣೆ ಕೊಡುವುದಾದರೆ, ‘CUT’ ಅನ್ನು ‘ಕಟ್’ ಎಂದು ಕಲಿಸುತ್ತೇವೆ. ಆಗ PUT ಏನಾಗಬೇಕು? ‘ಪಟ್’ ಆಗಬೇಕು. ಅದನ್ನು ‘ಪುಟ್’ ಎಂದು ಕಲಿಸುತ್ತೇವೆ. PUT ಪುಟ್ ಆದರೆ CUT ಏನಾಗಬೇಕು? ‘ಕುಟ್’ ಆಗಬೇಕು.
ಕನ್ನಡ ಕಲಿಕಾ ವಿಧಾನವನ್ನು ಇಂಗ್ಲಿಷ್ ಕಲಿಕೆಗೆ ವರ್ಗಾಯಿಸಿಕೊಂಡಾಗ ಎಳೆಯ ಮಗುವಿನಲ್ಲಿ ಈ ಬಗೆಯ ಗೊಂದಲಗಳು ಹುಟ್ಟಿಕೊಳ್ಳುತ್ತವೆ. ಶೈಕ್ಷಣಿಕ ಮನೋವಿಜ್ಞಾನವು ಇದನ್ನು ‘ಋಣಾತ್ಮಕ ಕಲಿಕಾ ವರ್ಗಾವಣೆ’ ಎಂದು ಗುರುತಿಸುತ್ತದೆ. ಕನ್ನಡ ಭಾಷಾ ಕಲಿಕೆಯ ಸ್ವಭಾವವೂ ಇಂಗ್ಲಿಷ್‌ನ ಭಾಷಾ ಸ್ವಭಾವವೂ ಬೇರೆ ಬೇರೆ ಎಂಬ ಅರಿವು ಮಗುವಿನಲ್ಲಿ ಹುಟ್ಟಿ ಕಲಿತಾಗ ಮಾತ್ರ ಈ ಸಮಸ್ಯೆ ಬಗೆಹರಿಯುತ್ತದೆ.
‘ಉಚ್ಚಾರ ದೋಷ ಪರವಾಗಿಲ್ಲ’ ಎನ್ನುವುದು ಒಂದು ವಾದವೇ ವಿನಾ ವ್ಯವಸ್ಥೆ ಅಲ್ಲ. ಉಚ್ಚಾರವನ್ನು ಸರಿಯಾಗಿ ಕಲಿತ ನಂತರ ಉಚ್ಚಾರ ದೋಷವು ಸಮಸ್ಯೆ ಅಲ್ಲ ಎಂದು ವಾದಿಸುವುದಕ್ಕೆ ಅರ್ಥವಿದೆ. ಸರಿಯಾದ ಉಚ್ಚಾರವೇ ಗೊತ್ತಿಲ್ಲದೆ ಹಾಗೆ ಹೇಳುವುದು ಮಕ್ಕಳನ್ನು ಪ್ರಯೋಗಕ್ಕೆ ಒಳಪಡಿಸಿದಂತೆ. ಉಚ್ಚಾರ ದೋಷವು ಸಮಸ್ಯೆ ಅಲ್ಲ ಎನ್ನುವುದು ಅರ್ಥಪಲ್ಲಟ ಆಗದೇ ಇರುವಾಗ ಮಾತ್ರ ಸರಿಯಾಗುತ್ತದೆ. ಉದಾಹರಣೆಗೆ, ‘ಹದಗೊಳಿಸು’ ಎನ್ನುವುದನ್ನು ‘ಅದಗೊಳಿಸು’ ಎಂದರೆ ದೊಡ್ಡ ಸಮಸ್ಯೆಯಾಗುವುದಿಲ್ಲ. ಏಕೆಂದರೆ ಅಲ್ಲಿ ಅರ್ಥಪಲ್ಲಟ ಆಗುವುದಿಲ್ಲ. ಆದರೆ, ‘ಆದರ’ ಎನ್ನುವ ಪದವನ್ನು ‘ಹಾ’ ಅಕ್ಷರದಿಂದ ಪ್ರಾರಂಭಿಸಿದರೆ ಅರ್ಥಪಲ್ಲಟವಾಗುತ್ತದೆ. ಆಗ ಉಚ್ಚಾರ ದೋಷವು ಸಮಸ್ಯೆಯೇ ಆಗುತ್ತದೆ.
ಇನ್ನು ಕೆಲವು ಪದಗಳು ಭಿನ್ನ ಭಾಷಾ ಸನ್ನಿವೇಶದಲ್ಲಿ ಅರ್ಥಪಲ್ಲಟವನ್ನು ಕಾಣುತ್ತವೆ. ಉದಾಹರಣೆಗೆ, ‘ಬೇಳೆ’ಯನ್ನು ‘ಬೇಲೆ’ ಎಂದರೆ ಕನ್ನಡ ಭಾಷಾ ಸನ್ನಿವೇಶದಲ್ಲಿ ಸಮಸ್ಯೆ ಅಲ್ಲ. ಆದರೆ ತುಳು ಭಾಷಾ ಸನ್ನಿವೇಶಕ್ಕೆ ಬಂದಾಗ ‘ಬೇಲೆ’ ಎನ್ನುವುದು, ‘ಕೆಲಸ’ ಎಂಬ ಅರ್ಥವನ್ನು ತಳೆದು ಅರ್ಥಪಲ್ಲಟವಾಗುತ್ತದೆ.
ಆಗ ಉಚ್ಚಾರ ದೋಷ ಸಮಸ್ಯೆಯೇ ಆಗುತ್ತದೆ. ಮಾತನಾಡುವಾಗ ‘ಅದಗೊಳಿಸು’ ಮತ್ತು ‘ಹದ
ಗೊಳಿಸು’ಗಳ ನಡುವೆ ವ್ಯತ್ಯಾಸ ಗೊತ್ತಾಗುವುದಿಲ್ಲ. ಆದರೆ ಮಾತನಾಡಿದ ಹಾಗೆಯೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ‘ಅದಗೊಳಿಸು’ ಎಂದು ಬರೆದಾಗ ಅದು ಅಭ್ಯರ್ಥಿಯ ಅಸಾಮರ್ಥ್ಯಕ್ಕೆ ಸಾಕ್ಷಿಯಾಗುತ್ತದೆ. ಆದ್ದರಿಂದ ಹಿತಾಸಕ್ತಿಯ ತಂಡಗಳ ಬೇಡಿಕೆ ಏನೇ ಇದ್ದರೂ ಮಕ್ಕಳಿಗೆ ಕಲಿಸುವಾಗ ಗ್ರಾಂಥಿಕ ಕನ್ನಡವನ್ನು ಸಾರ್ವತ್ರಿಕ ಸ್ವೀಕೃತ ಪದ್ಧತಿಯಾಗಿ ಕಲಿಸಬೇಕಾಗುತ್ತದೆ.
ವರ್ತಮಾನದ ಭಾಷಾ ಕಲಿಕೆಯಲ್ಲಿ ‘ಕಾಪಿ’ ಬರೆಯುವುದು ಕೇವಲ ಸಾಂಕೇತಿಕವಾಗಿದೆ. ‘ಕಾಪಿ’ ಸರಿಯಾಗಿ ಬರೆಯದೇ ಇದ್ದರೆ ಅಕ್ಷರಗಳನ್ನುಸುಂದರವಾಗಿ ಬರೆಯುವ ಕೌಶಲ ಬರುವುದಿಲ್ಲ. ಭವಿಷ್ಯದಲ್ಲಿ ಎಲ್ಲವೂ ಟೈಪಿಂಗ್ ಮೂಲಕ ನಡೆಯುವುದರಿಂದ ಅಕ್ಷರ ಬರವಣಿಗೆ ಚೆನ್ನಾಗಿರಬೇಕಾಗಿಲ್ಲ ಎನ್ನುವುದು ಒಂದು ವಾದ. ಹಸ್ತಾಕ್ಷರವನ್ನು ಚೆನ್ನಾಗಿ ಇಡದಿದ್ದರೆ ಒಂದು ಭಾಷಾ ಕೌಶಲವೇ ಹೊರಟುಹೋಗುತ್ತದೆ ಎನ್ನುವುದು ಇನ್ನೊಂದು ವಾದ. ಇದರ ಬಗ್ಗೆ ಚರ್ಚೆ ನಡೆದು ಒಂದು ತೀರ್ಮಾನಕ್ಕೆ ಬರುವ ಅಗತ್ಯವಿದೆ.
ಲೆಕ್ಕದ ಕಲಿಕೆಗೂ ಭಾಷಾ ಕೌಶಲದ ಅಗತ್ಯವಿದೆ. ಲೆಕ್ಕ ಕಲಿಕೆಯ ಪರಿಣಾಮಕಾರಿ ಪದ್ಧತಿಗಳ ಬಗ್ಗೆ ವ್ಯಾಪಕವಾದ ಚರ್ಚೆಗಳ ಅಗತ್ಯವಿದೆ.
ಪರಿಪೂರ್ಣ ಸರಿಗಳು ಎಂದೂ ಇರುವುದಿಲ್ಲ. ಆದರೆ ಪ್ರತಿಯೊಂದನ್ನೂ ವಿವಾದಕ್ಕೆ ಒಳಪಡಿಸಿ ಶಿಕ್ಷಣವನ್ನೇ ಗೊಂದಲದ ಗೂಡಾಗಿಸಿದರೆ ಕಳೆದುಕೊಳ್ಳುವವರು ಭವಿಷ್ಯದ ಪೌರರಾದ ಮಕ್ಕಳಾಗಿರುತ್ತಾರೆ ಎಂಬ ಅರಿವಿರಬೇಕು.
– ಅರವಿಂದ ಚೊಕ್ಕಾಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.