‘ಈಗ ನೀವು ಮುಕ್ತವಾಗಿ ಮಾತನಾಡಬಹುದು’ ಎಂದು ಸುದ್ದಿವಾಹಿನಿಯೊಂದರ ನಿರೂಪಕರು ನನ್ನನ್ನು ಪ್ರಚೋದಿಸಿದರು. ಎಎಪಿ ಇನ್ನೇನು ಅಧಿಕಾರಕ್ಕೆ ಬಂತು ಎಂದಾಗ ಆ ಪಕ್ಷ ತೊರೆದ ನಾಯಕರ ಸಾಲಿಗೆ ನನ್ನನ್ನೂ ಸೇರಿಸಲು ಯತ್ನಿಸಿದರು. ಎಎಪಿಯ ಸೋಲನ್ನು ಸಂಭ್ರಮಿಸುವ ರೀತಿಯಲ್ಲಿ ಕುಮಾರ್ ವಿಶ್ವಾಸ್ ಅಥವಾ ಸ್ವಾತಿ ಮಲಿವಾಲ್ ಅವರು ನೀಡಿರುವ ಸಂದೇಶಗಳು ಎಎಪಿ ತೊರೆದವರ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿವೆ. ಇದರ ಕುರಿತು ಮರುಕಪಡಬೇಕು ಅಷ್ಟೇ. ಇಂತಹುದರ ಭಾಗವಾಗುವ ಮನಃಸ್ಥಿತಿಯಲ್ಲಿ ನಾನಿಲ್ಲ. ಇನ್ನೊಂದು ಸುದ್ದಿವಾಹಿನಿಯ ನಿರೂಪಕರಂತೂ ‘ನಾನು ಎಎಪಿಗೆ ಮರಳುವ ಅವಕಾಶವನ್ನು ಮುಕ್ತವಾಗಿ ಇರಿಸಿಕೊಂಡಿದ್ದೇನೆಯೇ’ ಎಂದು ಕೇಳಿದ್ದರು. ನಾನದಕ್ಕೆ ಸ್ವಲ್ಪ ಕಿರಿಕಿರಿಯಿಂದಲೇ ‘ಖಂಡಿತಾ ಇಲ್ಲ’ ಎಂದಿದ್ದೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಸೋಲನ್ನು ನಾನು ಸಂಭ್ರಮಿಸಲಾರೆ. ಒಂದು ದಶಕದ ಹಿಂದೆ, ಎಎಪಿಯವರು ನಮ್ಮ ಕುರಿತು ಆಡಿದ್ದ ಮಾತುಗಳು ಮತ್ತು ಮಾಡಿದ್ದ ಅವಮಾನವನ್ನು ಮರೆತಿದ್ದೇನೆ ಎಂದಲ್ಲ. ದೆಹಲಿಯಲ್ಲಿ ಬಿಜೆಪಿಯ ಗೆಲುವು ಮತ್ತು ಎಎಪಿಯ ಸೋಲಿನಲ್ಲಿ ಇರುವ ಹೆಚ್ಚು ಗಂಭೀರ ವಿಚಾರಗಳನ್ನು ನನ್ನ ವೈಯಕ್ತಿಕ ಅನುಭವವು ಮರೆಮಾಚುವಂತೆ ಆಗಬಾರದು. ಇದು ನನ್ನ ಕುರಿತು ಅಥವಾ ಆಮ್ ಆದ್ಮಿ ಪಕ್ಷದ ಕುರಿತು ಅಥವಾ ಅದರ ನಾಯಕರ ಕುರಿತು ಅಲ್ಲ. ಇಲ್ಲಿ ಮುಖ್ಯವಾಗುವುದು ‘ಆಮ್ ಆದ್ಮಿ’ (ಸಾಮಾನ್ಯ ಜನ).
ಈ ಚುನಾವಣೆಯ ಫಲಿತಾಂಶವು ಎಎಪಿಯ ಒಂದು ದಶಕದ ಆಳ್ವಿಕೆಯ ಕುರಿತ ಜನಮತಗಣನೆ. ಜನರು ಸ್ಪಷ್ಟವಾಗಿ ಎಎಪಿಯನ್ನು ತಿರಸ್ಕರಿಸುವ ತೀರ್ಪು ನೀಡಿದ್ದಾರೆ. ಈ ತೀರ್ಪಿನ ಪ್ರಯೋಜನ ಬಿಜೆಪಿಗೆ ದೊರೆಯಿತು ಅಷ್ಟೇ. ಎಎಪಿ ಗಳಿಸಿದ ಮತ ಪ್ರಮಾಣವು ಬಿಜೆಪಿಗಿಂತ ಶೇ 3.5ರಷ್ಟು ಕಡಿಮೆ ಮಾತ್ರ. ಆದರೆ, ಪಡೆದ ಸ್ಥಾನಗಳ ಸಂಖ್ಯೆಯು ದೊಡ್ಡ ಪ್ರಮಾಣದಲ್ಲಿ ಮತ ಗಳಿಕೆ ಇಳಿಕೆ ಆಗಿದೆ ಎಂಬಂತೆ ತೋರುತ್ತದೆ. ಯಾವ ಕ್ರಮಗಳನ್ನು ಕೈಗೊಂಡಿದ್ದರೆ ಈಗಿನ ಪರಿಸ್ಥಿತಿಯನ್ನು ತಿರುವು ಮುರುವು ಮಾಡಬಹುದಿತ್ತು ಎಂದು ಈಗ ಊಹಿಸುವುದು ಕಷ್ಟ. ಬಿಜೆಪಿ ನಾಯಕತ್ವದ ಕುರಿತು ಭ್ರಷ್ಟಾಚಾರ ಆರೋಪಗಳು ಕೇಳಿಬಂದರೆ ಸಮೂಹ ಮಾಧ್ಯಮಗಳು ಅವುಗಳಿಗೆ ಪ್ರಚಾರ ನೀಡದೆ ಮುಚ್ಚಿ ಹಾಕಲು ಯತ್ನಿಸುತ್ತವೆ. ಎಎಪಿ ನಾಯಕತ್ವದ ಕುರಿತು ಕೇಳಿ ಬಂದಿದ್ದ ಭ್ರಷ್ಟಾಚಾರ ಆರೋಪಗಳನ್ನು ಹೀಗೆಯೇ ಮಾಡಿದ್ದರೆ ಅದರಿಂದ ಎಎಪಿಗೆ ಅನುಕೂಲ ಆಗಬಹುದಿತ್ತು. ಕೇಂದ್ರದ ಬಜೆಟ್ ಮಂಡನೆಗಿಂತ ಮೊದಲೇ ಮತದಾನ ನಡೆಯುವಂತೆ ಚುನಾವಣಾ ಆಯೋಗವು ನೋಡಿಕೊಂಡಿದ್ದರೆ ಅಥವಾ ತಾನು ಭರವಸೆ ನೀಡಿದಂತೆ, ಬಜೆಟ್‌ನ ಘೋಷಣೆಗಳು ಮತದಾರರ ಮೇಲೆ ಪ್ರಭಾವ ಬೀರದಂತೆ ನೋಡಿಕೊಂಡಿದ್ದರೆ ಪರಿಸ್ಥಿತಿ ಬದಲಾಗುತ್ತಿತ್ತು. ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ಮಾಡಿದಂತೆ ಮಹಿಳೆಯರಿಗೆ ನಗದು ವರ್ಗಾವಣೆ ಯೋಜನೆಯನ್ನು ಜಾರಿ ಮಾಡಲು ಎಎಪಿ ಸರ್ಕಾರಕ್ಕೆ ಲೆಫ್ಟಿನೆಂಟ್ ಗವರ್ನರ್ ಅನುವು ಮಾಡಿಕೊಟ್ಟಿದ್ದರೆ ಫಲಿತಾಂಶ ಬದಲಾಗಬಹುದಿತ್ತು. ಎಎಪಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳದೇ ಇದ್ದರೂ ಚುನಾವಣಾ ಹೊಂದಾಣಿಕೆಯನ್ನು ಮಾಡಿಕೊಂಡಿದ್ದರೂ ಆಗುತ್ತಿತ್ತು. ಇದರಲ್ಲಿ ಯಾವುದೇ ಒಂದು ಸಾಕಾರಗೊಂಡಿದ್ದರೂ ಶೇ 2ರಷ್ಟು ಮತಗಳು ಎಎಪಿಗೆ ಬೀಳುತ್ತಿದ್ದವು. ಅದಾಗಿದ್ದರೆ ಫಲಿತಾಂಶ ಬೇರೆಯೇ ಆಗುತ್ತಿತ್ತು.
ಹೀಗಿದ್ದರೂ ಆಡಳಿತವಿರೋಧಿ ಅಲೆ ಬಲವಾಗಿಯೇ ಇತ್ತು ಎಂಬುದನ್ನು ಅಲ್ಲಗಳೆಯಲು ಆಗದು. ಮತಗಳಿಕೆ ಪ್ರಮಾಣವು ಈ ವಿಚಾರವನ್ನು ಸರಿಯಾಗಿ ಹೇಳುತ್ತಿಲ್ಲ. ಜನರಿಗೆ ಬಹಳ ಮುಖ್ಯವಾದ– ಅಭಿವೃದ್ಧಿ, ರಸ್ತೆಗಳು, ಸ್ವಚ್ಛತೆ, ಒಳಚರಂಡಿ ಮತ್ತು ಕುಡಿಯುವ ನೀರು– ವಿಚಾರಗಳಲ್ಲಿ ಜನರು ಭ್ರಮನಿರಸನಗೊಂಡಿದ್ದರು ಎಂದು ಸಿಎಸ್‌ಡಿಎಸ್–ಲೋಕನೀತಿ ಸಮೀಕ್ಷೆಯು ಹೇಳಿದೆ. ರಾಜ್ಯ ಸರ್ಕಾರದ ಕುರಿತ ಸಂತೃಪ್ತಿಯು ಕೇಂದ್ರ ಸರ್ಕಾರದ ಕುರಿತ ಸಂತೃಪ್ತಿಗಿಂತ ಕಡಿಮೆ ಇತ್ತು. ಹಾಗೆಯೇ ಕೇಜ್ರಿವಾಲ್ ಅವರ ಜನಪ್ರಿಯತೆಯು ಎಎಪಿಯ ಮತ ಪ್ರಮಾಣಕ್ಕಿಂತ ಕಡಿಮೆ ಇದೆ. ಆಘಾತಕಾರಿ ವಿಚಾರವೆಂದರೆ, ಭ್ರಷ್ಟಾಚಾರವನ್ನು ವಿರೋಧಿಸುತ್ತಲೇ ಮುಂಚೂಣಿಗೆ ಬಂದ ಎಎಪಿ ನೇತೃತ್ವದ ಸರ್ಕಾರವು ‘ಪೂರ್ಣವಾಗಿ’ ಅಥವಾ ‘ಒಂದು ಮಟ್ಟಿಗೆ’ ಭ್ರಷ್ಟವಾಗಿದೆ ಎಂದು ದೆಹಲಿಯ ಮೂರನೇ ಎರಡಷ್ಟು ಜನರು ಭಾವಿಸಿದ್ದಾರೆ. ಎಎಪಿಗೆ ಮತ ಹಾಕಿರುವ ಹೆಚ್ಚಿನವರಿಗೆ ಆ ಪಕ್ಷದ ಕುರಿತು ಮೆಚ್ಚುಗೆಯೇನೂ ಇಲ್ಲ. ಜನರಿಗೆ ಬೇರೊಂದು ಆಯ್ಕೆ ಇದ್ದಿದ್ದರೆ, ಬಿಜೆಪಿ ವಿಶ್ವಾಸಾರ್ಹ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿದ್ದರೆ, ಅಥವಾ ಕಾಂಗ್ರೆಸ್ ಪಕ್ಷವು ಇನ್ನಷ್ಟು ಬಲವಾಗಿ ಇದ್ದಿದ್ದರೆ ಎಎಪಿಯ ವಿರುದ್ಧ ಇನ್ನೂ ಸ್ಪಷ್ಟವಾದ ಫಲಿತಾಂಶವೇ ಬರುತ್ತಿತ್ತು.
ಎಎಪಿಗೆ ಇಂತಹುದೊಂದು ಸೋಲು ಬೇಕಾಗಿತ್ತು. ಹಾಗಿದ್ದರೂ ಇಲ್ಲಿ ಸಂಭ್ರಮಿಸುವಂತಹುದು ಏನೂ ಇಲ್ಲ. ಆದರೆ, ಸಾಂವಿಧಾನಿಕ ಪ್ರಜಾಸತ್ತೆಯ ಪರವಾಗಿ ಇರುವವರಿಗೆ ಚಿಂತಿಸಲು ಮತ್ತು ಆತ್ಮಾವಲೋಕನಕ್ಕೆ ಕಾರಣ ಇದೆ.
ಎಎಪಿಯ ಸೋಲಿನಲ್ಲಿ ಚಿಂತೆ ಮಾಡಬೇಕಾದ ಅಂಶಗಳೂ ಇವೆ. ಆದರೆ, ಅದರ ಅರ್ಥ ಎಎಪಿ ಮತ್ತು ಅದರ ನಾಯಕತ್ವದ ಕುರಿತು ನನಗೆ ಮೆಚ್ಚುಗೆ ಇದೆ ಎಂದಲ್ಲ. ನಿಜ ಹೇಳಬೇಕು ಎಂದರೆ, ರಾಜಕಾರಣವನ್ನು ಬದಲಿಸುವ ಉದ್ದೇಶದಿಂದ ಬಂದ ಪಕ್ಷವು ಸ್ಥಾಪನೆಯಾಗಿ ಕೆಲವೇ ವರ್ಷಗಳಲ್ಲಿಯೇ ರಾಜಕೀಯ ಆಟದ ನಿಯಮಗಳನ್ನು ಒಪ್ಪಿಕೊಂಡಿತ್ತು. ಸರ್ವೋಚ್ಚ ನಾಯಕನ ವ್ಯಕ್ತಿ ಆರಾಧನೆ, ಒಬ್ಬ ವ್ಯಕ್ತಿಯ ಕೈಯಲ್ಲಿ ಎಲ್ಲ ಅಧಿಕಾರ ಕೇಂದ್ರೀಕರಣ, ನಾಯಕರ ಸುತ್ತಲಿನ ಕೂಟದಿಂದ ನಿಗೂಢ ಕಾರ್ಯಾಚರಣೆಗಳು, ಸಿನಿಕತನದ ದ್ವಿಮುಖ ನೀತಿ, ಸಾಮಾನ್ಯ ಕಾರ್ಯಕರ್ತನ ಕುರಿತು ಅಸಡ್ಡೆ... ಹೀಗೆ ಎಎಪಿ ಇತರ ಪಕ್ಷಗಳಿಗಿಂತ ಭಿನ್ನವೇನೂ ಅಲ್ಲ ಎಂಬುದನ್ನು ಸಾಬೀತುಪಡಿಸಲಾಗಿದೆ. ಮುಖ್ಯಮಂತ್ರಿಯವರ ‘ಶೀಷ್ ಮಹಲ್’ ಹಗರಣವನ್ನು ಪ್ರತಿಕೂಲ ಮಾಧ್ಯಮವು ಉತ್ಪ್ರೇಕ್ಷೆ ಮಾಡಿತು. ಆದರೆ, ಗಾಂಧಿ ಮಾರ್ಗವನ್ನು ಅನುಸರಿಸುವುದಾಗಿ ಎಎಪಿ ನಾಯಕತ್ವವು ಹೇಳಿಕೊಳ್ಳುತ್ತಿದ್ದರೂ ನಡವಳಿಕೆ ಅದಕ್ಕೆ ವ್ಯತಿರಿಕ್ತವಾಗಿರುವುದು ಮಾಧ್ಯಮದ ಉತ್ಪ್ರೇಕ್ಷೆಗೆ ಕಾರಣವಾಗಿರಬಹುದು.
ಅಬಕಾರಿ ಹಗರಣದಲ್ಲಿ ಎಎಪಿ ನಾಯಕರು ದೋಷಿಗಳು ಎಂದು ನ್ಯಾಯಾಲಯವು ಹೇಳದೇ ಇರಬಹುದು; ಪುರಾವೆ ಎಂದಿಗೂ ಸಿಗದೇ ಹೋಗಬಹುದು. ಈ ಹಗರಣವು ಬರೇ ಕಲ್ಪನೆಯಂತೂ ಅಲ್ಲ ಹಾಗೂ ಇದರಿಂದಾಗಿ ಎಎಪಿಗೆ ಇದ್ದ ನೈತಿಕ ಮೇಲುಗೈ ಕಳೆದುಹೋಯಿತು. ಈ ಎಲ್ಲಕ್ಕಿಂತಲೂ ಕೆಟ್ಟದಾಗಿ ನಡೆದ ಕೆಲವು ಬೆಳವಣಿಗೆಗಳೂ ಇವೆ– ದೆಹಲಿ ಗಲಭೆ ಸಂದರ್ಭದಲ್ಲಿ ಎಎಪಿ ನೇತೃತ್ವದ ಸರ್ಕಾರ ಏನನ್ನೂ ಮಾತನಾಡಲಿಲ್ಲ; ಬುಲ್ಡೋಜರ್ ಕಾರ್ಯಾಚರಣೆಯಲ್ಲಿ ಎಎಪಿ ಸಹಭಾಗಿಯಾಯಿತು; ರೋಹಿಂಗ್ಯ ಸಮುದಾಯದ ಅಸಹಾಯಕ ಮುಸ್ಲಿಮರ ಬೆನ್ನಟ್ಟುವಿಕೆ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿಯೇ ಭಾಗಿಯಾಯಿತು. ಈ ಎಲ್ಲ ನಡೆಗಳೂ ಬಿಜೆಪಿಯ ಹಿಂದೂ ಬಹುಸಂಖ್ಯಾತವಾದವನ್ನು ಹಿಂದಿಕ್ಕಿ ತಾನು ಮುಂದೆ ಹೋಗಲು ಕೈಗೊಂಡ ಪ್ರಜ್ಞಾಪೂರ್ವಕ ರಾಜಕೀಯ ತಂತ್ರಗಳಾಗಿದ್ದವು.
ಎಎಪಿ ಹೇಳಿಕೊಳ್ಳುತ್ತಿರುವ ‘ದೆಹಲಿ ಮಾದರಿ’ ಯಶಸ್ವಿಯಾಗಿದೆ ಎಂಬುದು ನನಗೇನೂ ಮನದಟ್ಟಾಗಿಲ್ಲ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಎಎಪಿ ಸರ್ಕಾರವು ರಾಜಕೀಯ ಮುನ್ನೆಲೆಗೆ ತಂದು ನಿಲ್ಲಿಸಿದೆ. ಸರ್ಕಾರಿ ಶಾಲೆಗಳ ಮೂಲಸೌಕರ್ಯವನ್ನು ಉತ್ತಮಪಡಿಸಿದೆ. ಆದರೆ, ಗುಣಮಟ್ಟಕ್ಕೆ ಸಂಬಂಧಿಸಿ ಭಾರಿ ಸಾಧನೆಯಾಗಿದೆ ಎಂಬುದು ಚರ್ಚಾರ್ಹ. ಮೊಹಲ್ಲಾ ಕ್ಲಿನಿಕ್ ಸ್ಥಾಪನೆ ಒಳ್ಳೆಯ ಚಿಂತನೆ. ಆದರೆ, ಅನುಷ್ಠಾನವು ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಗಳು ಬಡವರ ಕಲ್ಯಾಣಕ್ಕೆ ಆದ್ಯತೆ ಕೊಟ್ಟವು. ಆದರೆ, ಇಷ್ಟೇ ಮೊತ್ತವನ್ನು ಖರ್ಚು ಮಾಡಿ ಬಡವರ ಜೀವನಮಟ್ಟ ಸುಧಾರಣೆಯ ದೀರ್ಘಾವಧಿ ಕಾರ್ಯಕ್ರಮಗಳನ್ನು ಜಾರಿ ಮಾಡಬಹುದಿತ್ತು. ಇದನ್ನು ಬಿಟ್ಟರೆ, ನಗರ ಮೂಲಸೌಕರ್ಯ, ದೆಹಲಿ ಹೊರವಲಯದ ಪರಿಸ್ಥಿತಿ, ತ್ಯಾಜ್ಯ ನಿರ್ವಹಣೆ, ಕುಡಿಯುವ ನೀರಿನ ಸಮಸ್ಯೆ ಮತ್ತು ವಾಯು ಮಾಲಿನ್ಯ ಪರಿಸ್ಥಿತಿಯ ಸುಧಾರಣೆಗೆ ದೆಹಲಿ ಮಾದರಿ ಮಾಡಿದ್ದು ಬಹಳವೇನೂ ಇಲ್ಲ. ಕೆಲವು ವಿಚಾರಗಳಲ್ಲಿ ಅಲ್ಪಸ್ವಲ್ಪ ಸುಧಾರಣೆ ಆಗಿದ್ದರೂ ಅದು ಯಾವ ಲೆಕ್ಕದಲ್ಲಿ ನೋಡಿದರೂ ಮಾದರಿ ಅಂತೂ ಅಲ್ಲ.
ಎಎಪಿಯ ಸೋಲಿನಿಂದಾಗಿ, ರಾಜಧಾನಿಯ ತಳಮಟ್ಟದ ಜನರಿಗೆ ಆದ್ಯತೆ ಇದ್ದ ನೀತಿ ಮತ್ತು ರಾಜಕಾರಣವು ಕೊನೆಗೊಳ್ಳಬಹುದು ಎಂಬ ಕಾರಣಕ್ಕೆ ನನಗೆ ಚಿಂತೆ ಇದೆ. ದೆಹಲಿಯಲ್ಲಿ ಅನಧಿಕೃತವಾಗಿಯೇ ಬದುಕುವ ಬಲವಂತಕ್ಕೆ ಒಳಗಾಗಿದ್ದ ಬಹುಪಾಲು ಜನರಿಗೆ ತನ್ನೆಲ್ಲ ಮಿತಿಗಳ ನಡುವೆಯೂ ಎಎಪಿ ರಕ್ಷಣೆ ಒದಗಿಸಿತ್ತು. ಬಡವರು, ಇತ್ತೀಚಿನ ವಲಸಿಗರು ಮತ್ತು ದಲಿತರ ಸಂಖ್ಯೆಗೆ ಅನುಗುಣವಾಗಿ ಅವರ ಆಗ್ರಹಗಳನ್ನು ಕೇಳಲಾಗುವುದು ಎಂಬ ಭರವಸೆಯನ್ನು ಎಎಪಿ ನೀಡಿತ್ತು.
ವಿಶ್ವ ದರ್ಜೆಯ ನಗರ ಮತ್ತು ಇತರ ಕಾರ್ಯಸೂಚಿಯೊಂದಿಗೆ ಬಂದಿರುವ ಬಿಜೆಪಿ, ದೆಹಲಿಯ ನಿಜವಾದ ಬಹುಸಂಖ್ಯಾರನ್ನು ಅಗೋಚರಗೊಳಿಸುತ್ತದೆ. ಕಪಿಲ್ ಮಿಶ್ರಾ ಮತ್ತು ರವೀಂದರ್ ನೇಗಿ ಅವರಂತಹವರ ಗೆಲುವು ಮತಾಂಧತೆಗೆ ಮನ್ನಣೆ ನೀಡುತ್ತದೆ ಮತ್ತು ಮುಸ್ಲಿಮರ ಸ್ಥಿತಿಯನ್ನು ಇನ್ನಷ್ಟು ಶೋಚನೀಯಗೊಳಿಸುತ್ತದೆ.
ದೆಹಲಿಯಲ್ಲಿ ಗೆಲುವು ರಾಜಕೀಯವಾಗಿ ಸಂಪೂರ್ಣ ಪಾರಮ್ಯ ಬೇಕು ಎಂಬ ಬಿಜೆಪಿಯ ಪ್ರಯತ್ನವನ್ನು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಒಯ್ಯುತ್ತದೆ ಎಂಬುದು ಕೂಡ ನನ್ನ ಚಿಂತೆಗೆ ಕಾರಣವಾಗಿದೆ. ತನಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಪಕ್ಷವೊಂದನ್ನು ವಿಧೇಯ ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಂಡು ಮುಗಿಸುವ ಬಿಜೆಪಿಯ ಪ್ರಯತ್ನದ ಆರಂಭ ಇದು. ದೆಹಲಿ ಸರ್ಕಾರದ ಮೇಲೆ ಕೇಂದ್ರವು ನೇಮಿಸಿದ್ದ ಲೆಫ್ಟಿನೆಂಟ್ ಗವರ್ನರ್ ಒಂದು ದಶಕ ನಡೆಸಿದ ನ್ಯಾಯಸಮ್ಮತವಲ್ಲದ ಹಸ್ತಕ್ಷೇಪಕ್ಕೆ ಬಿಜೆಪಿಯ ಗೆಲುವು ಮಾನ್ಯತೆ ನೀಡುತ್ತದೆ. ಚುನಾವಣಾ ಆಯೋಗದ ಪಕ್ಷಪಾತಿ ಧೋರಣೆ ಮತ್ತು ಚುನಾವಣೆ ಸಂದರ್ಭದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳ ಸನ್ನಿವೇಶ ದೊರೆಯುತ್ತಿಲ್ಲ ಎಂಬುದನ್ನೆಲ್ಲ ಬದಿಗೆ ಸರಿಸುತ್ತದೆ.
ಎಎಪಿ ಎಂಬ ಪ್ರಯೋಗದ ಸೋಲು ಮುಂದಿನ ದಿನಗಳಲ್ಲಿ ಪರ್ಯಾಯ ರಾಜಕೀಯ ಕಟ್ಟುವ ಪ್ರಯತ್ನಗಳನ್ನು ನಿರುತ್ಸಾಹಗೊಳಿಸುತ್ತದೆ ಎಂಬುದು ಚಿಂತೆಯ ಇನ್ನೊಂದು ವಿಚಾರವಾಗಿದೆ. ದೆಹಲಿಯಲ್ಲಿ ಮತ್ತು ದೇಶದಲ್ಲಿ ನಿಜವಾಗಿಯೂ ಜನಪರವಾದ ಹಾಗೂ ಧರ್ಮನಿರಪೇಕ್ಷ ರಾಜಕಾರಣವು ಸೃಷ್ಟಿಯಾಗಲು ಎಎಪಿಗೊಂದು ಪಾಠ ಕಲಿಸಬೇಕಾಗಿದ್ದ ಅಗತ್ಯ ಇತ್ತು ಎಂಬುದು ನಿಜ. ಎಎಪಿ ತನ್ನ ಸ್ಥಾನವನ್ನು ಬಿಟ್ಟುಕೊಟ್ಟರೆ, ದೆಹಲಿಯಲ್ಲಿರುವ ದೊಡ್ಡ ಪ್ರಮಾಣದ ಶೋಷಿತ ವರ್ಗವು ತನ್ನ ರಾಜಕೀಯ ಧ್ವನಿಗಾಗಿ ಪರ್ಯಾಯವನ್ನು ಹುಡುಕಾಡಬೇಕಾಗುತ್ತದೆ. ವಾಸ್ತವದಲ್ಲಿ, ಅರ್ಥಪೂರ್ಣವಾದ ಪರ್ಯಾಯವೊಂದು ಹುಟ್ಟಿಕೊಳ್ಳುತ್ತದೆ ಎಂಬುದಕ್ಕೆ ಯಾವುದೇ ಖಾತರಿ ಇಲ್ಲ. ಅಲ್ಲಿಯವರೆಗೆ, ಪ್ರಾಮಾಣಿಕ ರಾಜಕೀಯ ಮಾಡುತ್ತೇವೆ ಎಂದು ಯಾರಾದರೂ ಹೇಳಿದರೆ ಜನರು ನಗುತ್ತಾರೆ. ಈ ಕಾರಣಕ್ಕಾಗಿಯೇ ನನಗೆ ಬೇಸರವಾಗಿದೆ ಮತ್ತು ನೀವು ಕೂಡ ಬೇಸರ ಮಾಡಿಕೊಳ್ಳಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.