ADVERTISEMENT

ವಿಶ್ಲೇಷಣೆ: ಭಾರತದ ಪ್ರಜಾಪ್ರಭುತ್ವದ ಸ್ಥಿರತೆಗೆ ಕಾರಣಗಳು ಭಾಗ–2

ಕೆ.ಎನ್‌.ಹರಿಕುಮಾರ್‌
Published 19 ಜನವರಿ 2026, 23:30 IST
Last Updated 19 ಜನವರಿ 2026, 23:30 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   
ಮೋದಿ ಅವರು ಪ್ರಧಾನಿ ಹುದ್ದೆಗೇರಿದ ಆರಂಭದ ದಿನಗಳಲ್ಲಿ, ಇನ್ನೊಂದು ತುರ್ತುಸ್ಥಿತಿ ಬರುವುದೇ ಇಲ್ಲ ಎಂದು ತಾವು ಭಾವಿಸುವುದಿಲ್ಲ, ಏಕೆಂದರೆ, ಅಧಿಕಾರದಲ್ಲಿ ಇರುವವರಿಗೆ (ಅಂದರೆ, ಮೋದಿ) ಪ್ರಜಾಪ್ರಭುತ್ವದ ಮೇಲೆ ಬದ್ಧತೆಯ ಕೊರತೆ ಇದೆ ಎಂದು ಬಿಜೆಪಿಯ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರಾದ ಎಲ್‌.ಕೆ. ಅಡ್ವಾಣಿ ಹೇಳಿದ್ದರು. ಆದರೆ ಆ ರೀತಿಯಲ್ಲಿ ಏನೂ ಆಗಿಲ್ಲ. ಇದು ಈಗ ಎಂತಹ ಅದ್ಭುತ ಬದಲಾವಣೆ. ಆದರೆ, ಪ್ರಶ್ನೆ ಇರುವುದು ಇದಕ್ಕೆ ಕಾರಣಗಳು ಏನು?

ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಭಾರತ ದೇಶವು ಪ್ರಜಾಪ್ರಭುತ್ವವಾಗಿ ರೂಪುಗೊಂಡ ಮೂಲಗಳನ್ನು– ಅದರ ಅಸ್ಮಿತೆ, ಅದರ ಒಗ್ಗಟ್ಟು, ಅದರ ಕಾರ್ಯಸೂಚಿ– ಬ್ರಿಟಿಷ್‌ ಸಾಮ್ರಾಜ್ಯಶಾಹಿಯ ವಿರುದ್ಧದ ಸ್ವಾತಂತ್ರ್ಯ ಹೋರಾಟದ ಸಂಕಷ್ಟಗಳನ್ನು ಪರಿಶೀಲನೆಗೆ ಒಳಪಡಿಸಬೇಕಿದೆ. ಭಾರತದ ಬಡತನ, ಭಾರತದ ಸಂಪತ್ತು ಬ್ರಿಟನ್‌ಗೆ ಹರಿದಿರುವುದು, ಬ್ರಿಟಿಷ್‌ ಕೈಗಾರಿಕೆಗಳ ಒಳಿತಿಗಾಗಿ ಭಾರತದ ಕೈಗಾರಿಕೀಕರಣಕ್ಕೆ ತಡೆ ಮತ್ತು ಒಟ್ಟಾರೆ ಆರ್ಥಿಕ ಹಿಂದುಳಿದಿರುವಿಕೆಗೆ ಆಗಿನ ಆಡಳಿತವೇ ಕಾರಣ ಎಂದು 19ನೇ ಶತಮಾನ ಮತ್ತು 20ನೇ ಶತಮಾನದ ಆರಂಭಿಕ ವರ್ಷಗಳಲ್ಲಿ ರಾಷ್ಟ್ರೀಯವಾದಿಗಳು ಹೇಳುತ್ತಿದ್ದರು. ಆರಂಭದಲ್ಲಿ ಬ್ರಿಟಿಷ್‌ ಆಳ್ವಿಕೆಯ ಚೌಕಟ್ಟಿನ ಒಳಗೆಯೇ ಪ್ರಜಾಸತ್ತಾತ್ಮಕ ಪ್ರಾತಿನಿಧ್ಯ ಸಂಸ್ಥೆಗಳ ಮೂಲಕ ತಮಗೆ ಪ್ರಾತಿನಿಧ್ಯ ಒದಗಿಸಬೇಕು ಎಂದು ಅವರು ಚರ್ಚಿಸಿದರು, ಮನವಿ ಸಲ್ಲಿಸಿದರು ಮತ್ತು ಚಳವಳಿಯನ್ನೂ ಮಾಡಿದರು. 1920ರ ದಶಕದ ನಂತರದಲ್ಲಿ ಈ ಚಳವಳಿಗೆ ಸಾಮೂಹಿಕ ಬೆಂಬಲ ಲಭ್ಯವಾಯಿತು ಮತ್ತು ಸಂಪೂರ್ಣ ಸ್ವಾತಂತ್ರ್ಯದ ಕ್ರಾಂತಿಕಾರಿ ಕಾರ್ಯಸೂಚಿಯೂ ಸಿಕ್ಕಿತು. ಹೋರಾಟದ ಯಶಸ್ಸಿಗೆ ರಾಷ್ಟ್ರೀಯ ಒಗ್ಗಟ್ಟು ಅಗತ್ಯ ಎಂದು ಕಂಡುಬಂದ ಕಾರಣ ಜಾತಿಗಳು, ವರ್ಗಗಳು, ಧರ್ಮಗಳು, ಬುಡಕಟ್ಟುಗಳು ಮುಂತಾದ ಎಲ್ಲ ಸಾಮಾಜಿಕ ಗುಂಪುಗಳನ್ನು ಸೇರಿಸಿಕೊಳ್ಳಲು ಚಳವಳಿ ಮುಂದಾಯಿತು. ಸ್ವಾತಂತ್ರ್ಯ ಬಂದ ಬಳಿಕ ರಾಷ್ಟ್ರೀಯ ನಾಯಕರು, ಅವರ ಸಿದ್ಧಾಂತ, ಪದ್ಧತಿಗಳು ಮತ್ತು ಕಾರ್ಯಸೂಚಿಯೇ ಸಮಾಜದಲ್ಲಿ ಪ್ರಾಬಲ್ಯ ಪಡೆಯಿತು. ಅವರೇ ಮುಖ್ಯವಾಹಿನಿಯಾದರು ಮತ್ತು ಸಮಾಜದ ವಿವೇಕವಾದರು. ಅವರಿಗೆ ಅಪಾರವಾದ ಜನಬೆಂಬಲ ಇತ್ತು ಮತ್ತು ಜನರು ಅವರ ಮೇಲೆ ಅಷ್ಟೇ ವಿಶ್ವಾಸವನ್ನೂ ಇರಿಸಿದ್ದರು. ಸಂವಿಧಾನದಲ್ಲಿರುವ ಉದಾರವಾದಿ ಸಾಮಾಜಿಕ–ಪ್ರಜಾಸತ್ತಾತ್ಮಕ ಮುನ್ನೋಟ, ಅದರ ಸಂಸ್ಥೆಗಳು ಮತ್ತು ಪ್ರಕ್ರಿಯೆಗಳು ಮತ್ತು ಸರ್ಕಾರದ ನೀತಿಗಳು ಮತ್ತು ಕ್ರಿಯೆಗಳೆಲ್ಲವೂ ಜಾರಿಗೆ ಬಂದವು. ಸಾರ್ವಜನಿಕ ಅಭಿಮತ ಮತ್ತು ನಾಗರಿಕ ಸಮಾಜಕ್ಕೆ ಅವರ ಸಿದ್ಧಾಂತವೇ ನೆಲಗಟ್ಟಾಯಿತು.

ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯ ಮುನ್ನೋಟವನ್ನು ಮುಖ್ಯ ಭೂಮಿಕೆಯಾಗಿ ಇರಿಸಿಕೊಂಡದ್ದು ಮತ್ತು ಚುನಾವಣಾ ಪ್ರಚಾರದ ಘೋಷವಾಕ್ಯವಾಗಿ ವಿಕಾಸ ಅಥವಾ ಅಭಿವೃದ್ಧಿ, ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ್‌, ಅಚ್ಛೇದಿನ್‌ ಅಥವಾ ಸಮೃದ್ಧಿಯನ್ನು ಇರಿಸಿಕೊಂಡದ್ದೇ 2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಅದ್ಭುತ ಗೆಲುವಿನ ಮುಖ್ಯ ಕಾರಣವಾಗಿತ್ತು. ಅಂದರೆ, ಸಾಮ್ರಾಜ್ಯಶಾಹಿ ವಿರೋಧಿ ಹೋರಾಟದ ರಾಷ್ಟ್ರೀಯ ನಾಯಕರ ವೇಷವನ್ನು ಮೋದಿ ಅವರು ಧರಿಸಿದರು. ಹೊಸ ಕಾರ್ಯಸೂಚಿಯನ್ನು ಬಿಜೆಪಿ ಅಳವಡಿಸಿ ಕೊಳ್ಳುವಂತೆ ಮಾಡುವುದಕ್ಕಾಗಿ ಮೋದಿ ಅವರು ಆವರೆಗೆ ಬಿಜೆಪಿಯ ಕಾರ್ಯಸೂಚಿಯ ಮೂರು ಮುಖ್ಯ ಸ್ತಂಭಗಳಾಗಿದ್ದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಜಮ್ಮು–ಕಾಶ್ಮೀರಕ್ಕೆ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನ ರದ್ದತಿ ಮತ್ತು ಏಕರೂಪ ನಾಗರಿಕ ಸಂಹಿತೆಯನ್ನು ಹಿಂದಕ್ಕೆ ಸರಿಸುವುದಕ್ಕಾಗಿ ಹಿರಿಯ ನಾಯಕರ ಜೊತೆ ಹೋರಾಡಬೇಕಿತ್ತು. ಈವರೆಗೂ ಕೇಂದ್ರ ಮತ್ತು ರಾಜ್ಯಗಳ ಬಿಜೆಪಿ ಸರ್ಕಾರಗಳು ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ಒಟ್ಟಾರೆ ಭರವಸೆ ನೀಡಿ, ತಮ್ಮ ಹಿಂದಿನ ಹಿಂದುತ್ವವಾದಿ ಕಾರ್ಯಸೂಚಿಯನ್ನು ಜಾರಿಗೊಳಿಸಿವೆ. ಬಿಹಾರ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರು ಈ ಘೋಷಣೆಗಳ ಅಡಿಯಲ್ಲಿಯೇ ಎನ್‌ಡಿಎ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು ಎಂದು ವರದಿಯಾಗಿದೆ.

ADVERTISEMENT

ಅಧಿಕಾರದಲ್ಲಿರುವ ಮೋದಿ ಅವರು ದೇಶೀಯ ಮತ್ತು ಅಂತರರಾಷ್ಟ್ರೀಯ ಎರಡರಲ್ಲೂ ಈ ಹಿಂದಿನ ಸರ್ಕಾರಗಳ ಕಾರ್ಯಸೂಚಿಯನ್ನು ಮುಂದಕ್ಕೆ ಒಯ್ಯುವುದನ್ನು ಮುಂದುವರಿಸಿದ್ದಾರೆ. ಆರ್ಥಿಕ ಕ್ಷೇತ್ರದಲ್ಲಿ, 1991ರ ಸುಧಾರಣೆಗಳ ಮೂಲಕ ಪರಿಷ್ಕೃತಗೊಂಡ ರಾಷ್ಟ್ರೀಯವಾದಿ ಕಾರ್ಯಸೂಚಿಯ ನೆಹರೂ ವ್ಯಾಖ್ಯಾನವು ಬಹುಪಾಲು ಈಗಲೂ ಮುಂದುವರಿದಿದೆ. ಈ ಸುಧಾರಣೆ ಖಾಸಗಿ ವಲಯದತ್ತ ಹೆಚ್ಚು ವಾಲಿಕೊಂಡಿದೆ, ಸ್ವಾವಲಂಬನೆಯ ಮೇಲಿನ ಒತ್ತನ್ನು ಕಡಿಮೆ ಮಾಡಿದೆ, ವಿದೇಶಿ ಬಂಡವಾಳ ಮತ್ತು ವ್ಯಾಪಾರದ ಮೇಲಿನ ಅವಲಂಬನೆ ಹೆಚ್ಚಿಸಿದೆ, ಶ್ರೀಮಂತರ ಆದಾಯ ಮತ್ತು ಆಸ್ತಿಯನ್ನು ಕಡಿಮೆಗೊಳಿಸಿ ಆರ್ಥಿಕ ಅಸಮಾನತೆಯನ್ನು ಕಡಿಮೆಗೊಳಿಸುವ ನೀತಿಗಳನ್ನು ಕೈಬಿಟ್ಟಿದೆ. ಪ್ರಧಾನಿಗಳ ಪೈಕಿ ಮೋದಿ ಅವರೇ ಹೆಚ್ಚು ವ್ಯಾಪಾರಸ್ನೇಹಿ ಎಂದು ಆರಂಭದಲ್ಲಿ ಪರಿಗಣಿಸಲಾಗಿತ್ತಾದರೂ ಕ್ರಮೇಣ ಅವರು ನೆಹರೂ ನೀತಿಗಳ ಕಡೆಗೆ ಸಾಗಿದ್ದಾರೆ. ಸರ್ಕಾರದ ಹಸ್ತಕ್ಷೇಪ ಹೆಚ್ಚಳ, ಸಾರ್ವಜನಿಕ ರಂಗ ಬಲಪಡಿಸುವಿಕೆ, ಮೂಲಸೌಕರ್ಯಕ್ಕೆ ಭಾರಿ ಹೂಡಿಕೆ, ಸ್ವಾವಲಂಬನೆಗೆ ಒತ್ತು ಮತ್ತು ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ವೆಚ್ಚ ಇವೇ ನೆಹರೂ ನೀತಿಯಾಗಿದ್ದವು. ವಾಜಪೇಯಿ ಸರ್ಕಾರದ ಅವಧಿಯಲ್ಲಿ ಪ್ರತಿಷ್ಠಿತ ಅರುಣ್‌ ಶೌರಿ ಸಚಿವರಾಗಿದ್ದ ‘ಹೂಡಿಕೆ ಹಿಂದೆಗೆತ’ ಎಂಬ ಪ್ರತ್ಯೇಕ ಸಚಿವಾಲಯದ ಹೆಸರೇ ಈಗ ಕೇಳಿ ಬರುತ್ತಿಲ್ಲ. ಈ ಹಿಂದಿನಂತೆಯೇ ಆದ್ಯತೆಗಳ ಪ‌ಟ್ಟಿಯಲ್ಲಿ ಕೃಷಿ ಕೆಳಭಾಗದಲ್ಲಿಯೇ ಇದೆ. ಆದರೆ, ರಾಜಕೀಯ ಕ್ಷೇತ್ರದಲ್ಲಿ ರೈತರ ಶಕ್ತಿಯಿಂದಾಗಿ ಭೂಸ್ವಾಧೀನ ಕಾನೂನಿಗೆ ಮಾಡಿದ ತಿದ್ದುಪಡಿಗಳು ಮತ್ತು ಕೃಷಿ ಸುಧಾರಣಾ ಕಾಯ್ದೆಗಳನ್ನು ಕೈಬಿಡಬೇಕಾಯಿತು. ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡುತ್ತದೆ ಎಂದು ವ್ಯಾಖ್ಯಾನಿಸಲಾಗುವ ಸಮಾಜವಾದವು 1991ರ ಸುಧಾಣೆಗಳ ನಂತರ ಕಾರ್ಯಸೂಚಿಯಿಂದ ಕಣ್ಮರೆಯಾಗಿದೆ.

ಸಾಮಾಜಿಕ ಅಭಿವೃದ್ಧಿಗೆ ಸಂಬಂಧಿಸಿ, ಜನರಿಗೆ ನೇರವಾಗಿ ಸೇವೆಗಳು/ಸೌಲಭ್ಯಗಳನ್ನು ನೀಡುವುದನ್ನು ಮೋದಿ ಅವರು ‘ರೇವ್ಡಿ’ ಎಂದು ಲೇವಡಿ ಮಾಡಿದ್ದರು; ಆದರೆ, ಚುನಾವಣಾ ಪೈಪೋಟಿಯ ಮುಂದೆ ಮೋದಿ ಅವರು ಮಣಿಯಬೇಕಾಯಿತು. ಕೇಂದ್ರ ಮತ್ತು ರಾಜ್ಯಗಳ ಎನ್‌ಡಿಎ ಮತ್ತು ಬಿಜೆಪಿ ಸರ್ಕಾರಗಳು ಈ ಉಚಿತ ಕೊಡುಗೆಗಳನ್ನು ನೀಡುವುದರಲ್ಲಿ ತಮ್ಮ ಪ್ರತಿಸ್ಪರ್ಧಿ ಪಕ್ಷಗಳನ್ನು ಮೀರಿಸಿವೆ. ಆರ್ಥಿಕ ಪ್ರಗತಿ ಮತ್ತು ಅದರಿಂದಾದ ಆದಾಯ ಹೆಚ್ಚಳದಿಂದ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚು ಅನುದಾನ ನೀಡಲು ಸಾಧ್ಯವಾದುದರ ಪರಿಣಾಮವಾಗಿ ಬಿಜೆಪಿ ಸರ್ಕಾರಗಳು ಮತ್ತು ಅದರ ಪ್ರತಿಸ್ಪರ್ಧಿ ಪಕ್ಷಗಳ ಸರ್ಕಾರಗಳು ಆಡಳಿತ ಪರ ಅಲೆಯ ಪ್ರಯೋಜನವನ್ನು ಇತ್ತೀಚಿನ ದಶಕಗಳಲ್ಲಿ ಪಡೆದಿವೆ. ಜಾತಿ ಆಧಾರಿತ ಮೀಸಲಾತಿಗೆ ಬಿಜೆಪಿ–ಆರ್‌ಎಸ್‌ಎಸ್‌ ಬೆಂಬಲ ನೀಡಲು ಚುನಾವಣಾ ಪರಿಗಣನೆಗಳೂ ಕಾರಣ. ಜಾತಿ ಸಮೀಕ್ಷೆ ಮತ್ತು ಜನಗಣತಿಯಲ್ಲಿ ಜಾತಿ ಉಲ್ಲೇಖದ ವಿಚಾರದಲ್ಲಿಯೂ ಮೋದಿ ಅವರು ಇತ್ತೀಚೆಗೆ ತಮ್ಮ ನಿಲುವನ್ನು ತದ್ವಿರುದ್ಧವಾಗಿ ಬದಲಾಯಿಸಿಕೊಂಡರು. ಕೆಲವು ವಿಚಾರಗಳಲ್ಲಿ ಮೋದಿ ಅವರು ಬಿಜೆಪಿ–ಆರ್‌ಎಸ್‌ಎಸ್‌ ಕಾರ್ಯಸೂಚಿಯನ್ನು ಮುನ್ನೆಲೆಗೆ ತಂದು ಜಾತಿ ಆಧಾರಿತ ಮಾನದಂಡವನ್ನು ನಿರ್ಲಕ್ಷಿಸಿದ್ದಾರೆ. ಉದಾಹರಣೆಗೆ, ಪ್ರಬಲ ಜಾತಿಗಳಿಗೆ ಸೇರಿದ ಬಡವರಿಗೆ ಮೀಸಲಾತಿ ನೀಡಿಕೆಯಲ್ಲಿ ಆರ್ಥಿಕ ಸ್ಥಿತಿಯ ಮಾನದಂಡದ ಬಳಕೆಯಾಗಿದೆ ಮತ್ತು ದೀರ್ಘಾವಧಿಯಲ್ಲಿ ಜಾತಿಯ ಮಾನದಂಡವನ್ನು ಇದು ಅಳಿಸಿ ಹಾಕಲೂಬಹುದು. ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿಯನ್ನು ಮೋದಿ ಬೆಂಬಲಿಸಿದ್ದಾರೆ. ಮೀಸಲಾತಿಯ ವ್ಯಾಪ್ತಿಯಲ್ಲಿ ಬರುವ ಸಮುದಾಯಗಳ ಒಗ್ಗಟ್ಟನ್ನು ಇದು ಒಡೆಯಬಹುದು ಮತ್ತು ಮೀಸಲಾತಿಯನ್ನೇ ದುರ್ಬಲಗೊಳಿಸಬಹುದು ಎಂಬುದು ಇದಕ್ಕೆ ಕಾರಣವಾಗಿರಬಹುದು. ಚುನಾವಣಾ ಫಲಿತಾಂಶ ನಿರ್ಧರಿಸುವಲ್ಲಿ ಮಹಿಳೆಯು ವಿಶಿಷ್ಟ ಮತ್ತು ಪ್ರಭಾವಿ ಘಟಕವಾಗಿ ಹೊರಹೊಮ್ಮಿರುವುದರಿಂದ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವುದಕ್ಕಾಗಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮುನ್ನೆಲೆಗೆ ತಂದು ಮೋದಿ ಅವರು ಅದನ್ನು ಅಂಗೀಕರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಅನುಷ್ಠಾನವನ್ನು ಹಲವು ವರ್ಷಗಳಿಗೆ ಯಾವುದೇ ಕಾರಣ ಕೊಡದೆ ಮುಂದೂಡಲಾಗಿದ್ದರೂ ಸುದೀರ್ಘ ವಿಳಂಬದ ಬಳಿಕ ಅದು ಕಾಯ್ದೆಯಾಗಿ ಅಂಗೀಕಾರಗೊಂಡಿದೆ.

ವಿದೇಶಾಂಗ ನೀತಿಗೆ ಸಂಬಂಧಿಸಿ, ಯಾವುದೇ ಮೈತ್ರಿಕೂಟ ಅಥವಾ ಗುಂಪು ಸೇರದೇ ಇರುವುದರ ಮೂಲ ಇರುವುದು ಜವಾಹರಲಾಲ್‌ ನೆಹರೂ ಅವರಲ್ಲಿ ಮತ್ತು ಆಗಿನಿಂದಲೂ ಈ ನೀತಿಯು ದೃಢವಾಗಿ ನಿಂತಿದೆ. 1991ರ ನಂತರದಲ್ಲಿ, ಆರ್ಥಿಕ ಸುಧಾರಣೆಗಳಿಗೆ ಪೂರಕವಾಗಿ, ‍ಪಶ್ಚಿಮದ ಶ್ರೀಮಂತ ದೇಶಗಳ ಜೊತೆಗೆ ಗುರತಿಸುವಿಕೆಯತ್ತ ಪಲ್ಲಟ ಕಂಡು ಬಂದಿತಾದರೂ ‘ರಕ್ಷಣಾ ಸ್ವಾಯತ್ತೆ’ಯನ್ನು ಕಾಯ್ದುಕೊಳ್ಳಲಾಯಿತು. ಹಾಗಿದ್ದರೂ ದಕ್ಷಿಣ ಜಗತ್ತಿನ ಬಡ ಮತ್ತು ಅಭಿವೃದ್ಧಿ ಹೊಂದಿಲ್ಲದ ದೇಶಗಳ ಜೊತೆಗಿನ ಒಗ್ಗಟ್ಟು ಮತ್ತು ಅಲಿಪ್ತ ಚಳವಳಿ, ಜಿ–7 ಮತ್ತು ನ್ಯೂ ಇಂಟರ್‌ನ್ಯಾಷನಲ್‌ ಎಕನಾಮಿಕ್‌ ಆರ್ಡರ್‌ನಂತಹ ಸಂಘಟನೆಗಳಲ್ಲಿ ವ್ಯಕ್ತಪಡಿಸಿದಂತಹ ನ್ಯಾಯಯುತ ಅಂತರರಾಷ್ಟ್ರೀಯ ವ್ಯವಸ್ಥೆಗಾಗಿರುವ ಶೋಧವನ್ನು ಕೈಬಿಡಲಾಯಿತು. ದೇಶೀಯವಾಗಿ ಆರ್ಥಿಕ ಅಸಮಾನತೆಯನ್ನು ಕಡಿಮೆಗೊಳಿಸುವ ನೀತಿ ಮತ್ತು ಸಮಾಜವಾದವನ್ನು ಕೈಬಿಟ್ಟಿರುವುದಕ್ಕೆ ಅನುಗುಣವಾಗಿ ಇದು ಇದೆ. ಆದರೆ, ಉಕ್ರೇನ್‌ ಮೇಲೆ ದಾಳಿ ನಡೆಸಿದ ಬಳಿಕ ರಷ್ಯಾದ ಸೊತ್ತುಗಳನ್ನು ಪಶ್ಚಿಮದ ದೇಶಗಳು ಜಪ್ತಿ ಮಾಡಿ, ಟ್ರಂಪ್‌ ಅವರು ಸುಂಕ ಹೇರಿಕೆಯನ್ನು ಜಾರಿಗೊಳಿಸಿದ ನಂತರದಲ್ಲಿ ಹೆಚ್ಚು ದೃಢವಾಗಿ ದಕ್ಷಿಣ ಜಗತ್ತಿನ ಜೊತೆಗಿನ ಒಗ್ಗಟ್ಟಿನ ನೆಹರೂ ಕಾರ್ಯಸೂಚಿಗೆ ಮರಳಲಾಗಿದೆ. ಜೊತೆಗೆ, ಸ್ವಾವಲಂಬನೆಯೂ ಕಾರ್ಯಸೂಚಿಯಲ್ಲಿ ಸ್ಥಾನ ಪಡೆದಿದೆ. ಭಾರತ–ಅಮೆರಿಕ ವ್ಯಾಪಾರ ಒಪ್ಪಂದವು ಕೊನೆಯಿಲ್ಲದ ವಿಳಂಬಕ್ಕೆ ಒಳಗಾದ ಬಳಿಕ ವೆನೆಜುವೆಲಾ ಮೇಲಿನ ದಾಳಿ ಈಗ ಮುಖ್ಯ ಕಾರಣವಾದಾಗ ಇನ್ನೂ ಹೆಚ್ಚು ತುರ್ತಾಗಿ ಒತ್ತು ನೀಡಲಾಗಿದೆ. ಹಾಗಿದ್ದರೂ ಬದಲಾಗದೇ ಇರುವ ಒಂದು ವಿಚಾರ ಇದೆ; ಪಾಕಿಸ್ತಾನದ ವಿರುದ್ಧ ಪ್ರತೀಕಾರದ ವಾಗ್ದಾಳಿ ಮುಂದುವರಿದಿದೆ ಮತ್ತು ಇದು ದೇಶೀಯವಾಗಿ ಮುಸ್ಲಿಮರ ಕುರಿತು ಇರುವ ವರ್ತನೆಗೆ ಅನುಗುಣವಾಗಿಯೇ ಇದೆ. ಆರ್‌ಎಸ್‌ಎಸ್‌ ಕಾರ್ಯಸೂಚಿಯಾದ ಅಖಂಡ ಭಾರತದ ಬಗ್ಗೆ ಏನೂ ಕೇಳಿಬಂದಿಲ್ಲ. ಸಿಂಧ್‌ ಒಂದು ದಿನ ಭಾರತದ ಭಾಗವಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಇತ್ತೀಚೆಗೆ ಹೇಳಿದ್ದು ಮಾತ್ರ ಒಂದು ಅಪವಾದ.

ದೇಶೀ ರಾಜಕೀಯ ಮತ್ತು ಸಂವಿಧಾನಕ್ಕೆ ಸಂಬಂಧಿಸಿ, 370ನೇ ವಿಧಿ ಅಡಿಯಲ್ಲಿ ಜಮ್ಮು–ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ ರದ್ದತಿಯು ಅತ್ಯಂತ ವಿವಾದಾತ್ಮಕ ವಿಚಾರ. ಆದರೆ, ಎ.ಜಿ. ನೂರಾನಿಯವರಂತಹ ವಿದ್ವಾಂಸರ ಪ್ರಕಾರ, ಜವಾಹರಲಾಲ್‌ ನೆಹರೂ ಅವರ ಕಾಲದಿಂದಲೇ ಈ ಕಾಯ್ದೆಯನ್ನು ನಿರಂತರವಾಗಿ ನಿಸ್ಸತ್ವಗೊಳಿಸುತ್ತಾ ಬರಲಾಗಿದೆ. ಖಾಲಿ ಚಿಪ್ಪನ್ನಷ್ಟೇ ಮೋದಿ ಸರ್ಕಾರ ರದ್ದುಪಡಿಸಿದೆ. ಕೇಂದ್ರ–ರಾಜ್ಯ ಸಂಬಂಧಗಳ ಕುರಿತು, ಕೇಂದ್ರೀಕರಣದ ಕಡೆಗೆ ತಳ್ಳುವಿಕೆಯು ಸಂವಿಧಾನದಲ್ಲಿಯೇ ಇದ್ದು, ಹಿಂದಿನ ಸರ್ಕಾರಗಳೂ ಅದನ್ನು ಮಾಡಿವೆ ಮತ್ತು ಅದು ಈಗ ತೀವ್ರಗೊಂಡಿದೆ. ಎನ್‌ಡಿಎಯೇತರ ಪಕ್ಷಗಳ ಸರ್ಕಾರಗಳಿರುವ ರಾಜ್ಯಗಳ ರಾಜ್ಯಪಾಲರು ಸರ್ಕಾರದ ಮೇಲೆ ತಮ್ಮ ಅಧಿಕಾರ ಚಲಾಯಿಸಲು ಹೋದಾಗ ಆಗಾಗ ಅದು ಸಂಘರ್ಷಕ್ಕೆ ಕಾರಣವಾಗಿದೆ. ಇದಲ್ಲದೆ, ಎನ್‌ಡಿಎ ಸರ್ಕಾರ ಇರುವ ರಾಜ್ಯಗಳಿಗೆ ಕೇಂದ್ರದ ಹೆಚ್ಚಿನ ಹೂಡಿಕೆ ಮತ್ತು ಯೋಜನೆಗಳು, ಭಾರತ ಹಾಗೂ ವಿದೇಶಿ ನಂಟಿನ ಖಾಸಗಿ ಕ್ಷೇತ್ರದ ಯೋಜನೆಗಳನ್ನು ನೀಡುವ ಮೂಲಕ ಪಕ್ಷಪಾತ ಮಾಡಲಾಗಿದೆ. ಅಷ್ಟಲ್ಲದೆ, ಕೇಂದ್ರದ ಕಾಯ್ದೆ, ನ್ಯಾಯಾಲಯದ ಆದೇಶಗಳು, ರಾಜ್ಯಪಾಲರ ಪಕ್ಷಪಾತಿ ನಡೆಗಳು ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ತನಿಖೆಗಳ ಮೂಲಕ ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ ಮತ್ತು ಉಲ್ಲಂಘಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿನ ಎಎಪಿ ಸರ್ಕಾರದ ಪ್ರಕರಣವನ್ನು ಇಲ್ಲಿ ಗಮನಿಸಬಹುದು; ಮೋದಿ ಅವರು ಪ್ರಧಾನಿಯಾದ ಆರಂಭಿಕ ದಿನಗಳಲ್ಲಿ ಬಿಜೆಪಿಯ ಅತ್ಯಂತ ಹೀನಾಯವಾದ ಸೋಲಿಗೆ ಕಾರಣವಾದ, ರಾಜಕೀಯಕ್ಕೆ ಹೊಸಬರಾಗಿದ್ದವರು ಕಟ್ಟಿದ್ದ ಪಕ್ಷವನ್ನು ಅಧಿಕಾರದಿಂದ ಇಳಿಸುವುದಕ್ಕಾಗಿ ವಿರೋಧ ಪಕ್ಷ ಬಿಜೆಪಿಯೂ ಸೇರಿ ಹಲವು ಸಂಸ್ಥೆಗಳನ್ನು ಭಾಗಿಯಾಗಿಸಿ ಸಂಕೀರ್ಣವಾದ, ಹಲವು ಆಯಾಮಗಳ, ಅತ್ಯಂತ ಸಂಯೋಜಿತ ಬಹುವಾರ್ಷಿಕ ಯೋಜನೆಯನ್ನು ರೂಪಿಸಲಾಯಿತು. ಈ ಎಲ್ಲದರಿಂದಾಗಿ 356ನೇ ವಿಧಿಯನ್ನು ಬಳಸಿ ರಾಜ್ಯ ಸರ್ಕಾರವನ್ನು ಉರುಳಿಸುವ ಅಗತ್ಯವೇ ಇಲ್ಲದಂತಾಯಿತು. ಈ ಎಲ್ಲದರಲ್ಲಿಯೂ ಮೋದಿ ಸರ್ಕಾರವು ತನ್ನ ಪೂರ್ವಜರ ಹೆಜ್ಜೆ ಗುರುತುಗಳನ್ನೇ ಅನುಸರಿಸಿದೆ.

ಸಂವಿಧಾನ, ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಬಹಳ ಮುಖ್ಯವಾಗಿ ಮಹಾತ್ಮ ಗಾಂಧಿ, ಒಬಿಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಈ ಹಿಂದಿನ ನಾಯಕರು, ರಾಷ್ಟ್ರಗೀತೆ ಮತ್ತು ಧ್ವಜವು ಪವಿತ್ರ ಎಂದು ಪರಿಗಣಿಸುವಲ್ಲಿ ಬಿಜೆಪಿ– ಆರ್‌ಎಸ್‌ಎಸ್‌ನ ಹಿಂದಿನ ಇತರ ಎಲ್ಲ ನಾಯಕರಿಗಿಂತ ಮೋದಿ ಭಿನ್ನವಾದರು. ಇತ್ತೀಚೆಗೆ, ತಮಗೆ ಅಪಥ್ಯ ಎನಿಸುವ ಜವಾಹರಲಾಲ್‌ ನೆಹರೂ ಅವರ ಜನ್ಮದಿನದಂದು ಸ್ವಾತಂತ್ರ್ಯ ಹೋರಾಟಗಾರರಾಗಿ ಮತ್ತು ಮೊದಲ ಪ್ರಧಾನಿಯಾಗಿ ಅವರ ಕೊಡುಗೆಯನ್ನು ಕೊಂಡಾಡಿದರು. ಅದೂ ಅಲ್ಲದೆ, ಹಿಂದೂ ರಾಷ್ಟ್ರ ಸಂವಿಧಾನ ವಿಚಾರವನ್ನು ಮುನ್ನೆಲೆಗೆ ತರುವುದು ಬಿಡಿ, ವಾಜಪೇಯಿ ಕಾಲದಲ್ಲಿ ರಚಿತವಾಗಿದ್ದ ಸಂವಿಧಾನ ಕಾರ್ಯನಿರ್ವಹಣೆಯ ರಾಷ್ಟ್ರೀಯ ಪರಿಶೀಲನಾ ಆಯೋಗವನ್ನು ಪುನಶ್ಚೇತನಗೊಳಿಸುವ ವಿಚಾರವನ್ನು ಉಲ್ಲೇಖ ಕೂಡ ಮಾಡಿಲ್ಲ. ಸಂವಿಧಾನಕ್ಕೆ ಏನೇನು ತಿದ್ದುಪಡಿ ಮಾಡಬಹುದು ಎಂಬುದರ ಕುರಿತು ಶಿಫಾರಸುಗಳನ್ನು ಮಾಡಲು ಆಯೋಗಕ್ಕೆ ಮುಕ್ತ ಅವಕಾಶ ಕೊಡಲಾಗಿತ್ತು. ಸಂಘ ಪರಿವಾರದ ನಾಯಕರು, ಬಿಜೆಪಿ ಸಚಿವರು, ಶಾಸಕರ ಹೇಳಿಕೆಗಳು ಮತ್ತು ನಡವಳಿಕೆಗಳಿಗೆ ಸಾರ್ವಜನಿಕವಾಗಿ ಟೀಕೆಗಳು ವ್ಯಕ್ತವಾದಾಗ ಅವುಗಳನ್ನು ಹಿಂದಕ್ಕೆ ಪಡೆಯಲಾಗಿದೆ; ಒಳಭಾಗದಲ್ಲಿ ಏನೇ ಇರಲಿ ಅದನ್ನು ಈಗ ಬಹಿರಂಗವಾಗಿ ಹೇಳುವಂತಿಲ್ಲ ಎಂಬುದನ್ನು ಉದ್ದೇಶಪೂರ್ವಕವಾಗಿಯೋ ಅಲ್ಲದೆಯೋ ಸೂಚಿಸಲಾಗುತ್ತಿದೆ. ಇತ್ತೀಚಿನ ಉದಾಹರಣೆಗಳೆಂದರೆ, ಮಧ್ಯ ಪ್ರದೇಶದ ಬಿಜೆಪಿ ಸಚಿವರೊಬ್ಬರು ಸಮಾಜ ಸುಧಾರಕ ರಾಜಾರಾಮ್‌ ಮೋಹನ ರಾಯ್‌ ಅವರು ‘ಬ್ರಿಟಿಷ್‌ ಏಜೆಂಟ್‌’ ಮತ್ತು ಧಾರ್ಮಿಕ ಮತಾಂತರ ನಡೆಸಲು ಮಿಷನರಿಗಳಿಗೆ ನೆರವಾದರು ಎಂದರು. ಬಾಬರಿ ಮಸೀದಿ ಧ್ವಂಸಗೊಳಿಸಲಾದ ಡಿಸೆಂಬರ್‌ 6 ಅನ್ನು ‘ಶೌರ್ಯ ದಿನ’ ಎಂದು ಶಾಲೆಗಳಲ್ಲಿ ಆಚರಿಸುವ ನಿರ್ಧಾರವನ್ನು ರಾಜಸ್ಥಾನ ಸರ್ಕಾರ ಕೈಗೊಂಡಿತು.

ಹಲವು ದಶಕಗಳಲ್ಲಿ ಪ್ರತಿಸ್ಪರ್ಧಿ ಪಕ್ಷಗಳು ಮತ್ತು ಭಿನ್ನ ಸಿದ್ಧಾಂತಗಳ ಮೈತ್ರಿಕೂಟಗಳು ಮತ್ತು ಕಾರ್ಯಕ್ರಮಗಳ ಹಲವು ಸರ್ಕಾರಗಳಿಗೆ ಈ ಮುಂದುವರಿಕೆ ಹೇಗೆ ಸಾಧ್ಯವಾಯಿತು? ದೇಶೀಯವಾಗಿ ಮತ್ತು ಅಂತರರಾಷ್ಟ್ರೀಯವಾಗಿ ತ್ವರಿತವಾಗಿ ರೂಪುಗೊಳ್ಳುವ ಸನ್ನಿವೇಶಗಳಿಗೆ ತಕ್ಕಂತೆ ದೇಶದ ಕಾರ್ಯಸೂಚಿಯ ಬದಲಾವಣೆಯ ನಿರ್ವಹಣೆ ಮಾಡುವವರು ಯಾರು? ರಾಷ್ಟ್ರೀಯ ಸಹಮತಕ್ಕೆ ಸವಾಲೆಸೆದು ಅಡ್ಡಿಪಡಿಸಲು ಹಾಗೂ ಮುಖ್ಯವಾಹಿನಿಯನ್ನು ಮುರಿದು ಬೇರೆಡೆ ಹೋಗಲು ಬಯಸುವವರಿಗೆ ತಡೆಗಳನ್ನು ಒಡ್ಡುವವರು ಯಾರು?

ನ್ಯಾಯಾಂಗದ ಜೊತೆ ಸೇರಿದ ಅಧಿಕಾರಶಾಹಿಯು ಈ ಪಾತ್ರವನ್ನು ನಿರ್ವಹಿಸುತ್ತದೆ ಎಂಬುದು ನನ್ನ ಪ್ರತಿಪಾದನೆ. ಸ್ವಾತಂತ್ರ್ಯ ಸಿಕ್ಕಾಗಿನಿಂದಲೇ ಜವಾಹರಲಾಲ್‌ ನೆಹರೂ ಮತ್ತು ಸರ್ದಾರ್‌ ಪಟೇಲ್‌ ಅವರನ್ನೂ ಒಳಗೊಂಡ ರಾಷ್ಟ್ರೀಯ ನಾಯಕತ್ವವು ಬ್ರಿಟಿಷರು ಬಿಟ್ಟುಹೋದ ಅಧಿಕಾರಶಾಹಿ ಮತ್ತು ನ್ಯಾಯಾಧೀಶರ ಮೇಲೆ ಅವಲಂಬಿತವಾಗಿತ್ತು. ರಾಷ್ಟ್ರೀಯ ಕಾರ್ಯಸೂಚಿ ಮತ್ತು ಹಿತಾಸಕ್ತಿಗಳಿಗೆ ಅನುಗುಣವಾಗಿ ಕೆಲಸ ಮಾಡಲು ಅವರನ್ನು ತರಬೇತುಗೊಳಿಸಲಾಗಿದೆ. ಸಂವಿಧಾನದ ಕರಡು ರಚನೆಯಿಂದ (ಬೆನೆಗಲ್‌ ನರಸಿಂಗ ರಾವ್‌) ದೇಶೀಯ ಸಂಸ್ಥಾನಗಳಲ್ಲಿ ಹರಿದು ಹಂಚಿಹೋಗಿದ್ದ ದೇಶವನ್ನು ಒಗ್ಗೂಡಿಸುವವರೆಗೆ (ವಿ.ಪಿ. ಮೆನನ್), ಅಧಿಕಾರಶಾಹಿಯ ಕೌಶಲಗಳು ಮತ್ತು ಸಾಮರ್ಥ್ಯಗಳು ಅನಿವಾರ್ಯವೇ ಆಗಿವೆ. ಆಡಳಿತ ನಡೆಸಲು, ಕೇಂದ್ರದ ಸಚಿವಾಲಯಗಳಲ್ಲಿದ್ದ ತಮ್ಮ ಪಕ್ಷದ ಸಹೋದ್ಯೋಗಿಗಳು ಮತ್ತು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದ್ದವರಿಗಿಂತ ಪ್ರಧಾನಿಯಾಗಿ ನೆಹರೂ ಅವರು ಅಧಿಕಾರಶಾಹಿಯ ಆಯ್ದ ಕೆಲವರ ಮೇಲೆ ಮಾತ್ರ ಅವಲಂಬಿತರಾಗಿದ್ದರು. ಬಳಿಕ, ಇಂದಿರಾ ಗಾಂಧಿ ಅವರ ಅವಧಿಯಲ್ಲಿ ಪ್ರಧಾನ ಮಂತ್ರಿಯವರ ಕಚೇರಿ (ಪಿಎಂಒ) ನಿರ್ಧಾರ ಕೈಗೊಳ್ಳುವಿಕೆ ಹಾಗೂ ನೀತಿ ಅನುಷ್ಠಾನದ ಅಧಿಕಾರ ಕೇಂದ್ರವಾಗಿ ಹೆಚ್ಚಿನ ಮಹತ್ವ ಪಡೆದುಕೊಂಡಿತು. ತಮ್ಮ ರಾಜಕೀಯ ಕಾರ್ಯತಂತ್ರವನ್ನು ರೂಪಿಸಲು ಮತ್ತು ಜಾರಿಗೊಳಿಸಲು ಅವರು ಬಹು ಮುಖ್ಯವಾಗಿ ಅವಲಂಬಿತವಾಗಿದ್ದದ್ದು ಪಿ.ಎನ್‌. ಹಸ್ಕರ್‌ ಅವರ ಮೇಲೆ. ಹೆಚ್ಚುವರಿಯಾಗಿ, ಹಲವು ನಿವೃತ್ತ ಅಧಿಕಾರಿಗಳು, ಹಿರಿಯ ನ್ಯಾಯಮೂರ್ತಿಗಳು ಮತ್ತು ಸಶಸ್ತ್ರ ಪಡೆಯ ಅಧಿಕಾರಿಗಳನ್ನು ವಿವಿಧ ರಾಜ್ಯಗಳ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿತ್ತು.

ಮೋದಿ ಅವರ ಆಳ್ವಿಕೆಯಲ್ಲಿ ಪಿಎಂಒ ಗಾತ್ರ ಮತ್ತು ಮಹತ್ವವು ಬಹುವಾಗಿ ಹಿಗ್ಗಿದ್ದಲ್ಲದೆ ಅಧಿಕಾರಶಾಹಿಯ ಅಧಿಕಾರವು ಹೊಸ ಎತ್ತರಕ್ಕೆ ಏರಿತು. ಕಳೆದ ವರ್ಷಗಳಲ್ಲಿ ನಿವೃತ್ತ ಅಧಿಕಾರಿಗಳನ್ನು ತಮ್ಮ ಅವರ ಸರ್ಕಾರದ ಸಚಿವ ಸಂಪುಟದ ಪ್ರಮುಖ ಹುದ್ದೆಗಳಿಗೆ ಅಭೂತಪೂರ್ವ ಸಂಖ್ಯೆಯಲ್ಲಿ ನೇಮಿಸಲಾಗಿದೆ. ತಮ್ಮ ಸರ್ಕಾರದ ಉತ್ತಮ ಆಡಳಿತ, ಅಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಬಲಯುತವಾಗಿ ಜಾರಿಗೊಳಿಸಿದ್ದು ಮೋದಿ ಅವರ ಮಹತ್ವದ ಕೊಡುಗೆಯಾಗಿದ್ದು, ಅಧಿಕಾರಶಾಹಿ ಕೂಡ ಇದನ್ನೇ ಬಯಸಿರಬಹುದು. ಬಹುಶಃ ಸ್ವಲ್ಪ ಮಟ್ಟಿಗೆ, ಎಡಪಕ್ಷಗಳನ್ನು ಹೊರತುಪಡಿಸಿದರೆ ರಾಜ್ಯ ಸರ್ಕಾರಗಳಿಗೂ ಅಧಿಕಾರಶಾಹಿಯ ಮಹತ್ವದ ಪಾತ್ರ ವಿಸ್ತರಣೆಯಾಗಿದೆ. ಹೆಚ್ಚು ಸಾಮಾನ್ಯವಾಗಿರುವ ಈ ಪ್ರವೃತ್ತಿಯ ಪ್ರಮುಖ ಉದಾಹರಣೆಯೆಂದರೆ, ಒಡಿಶಾ ಮುಖ್ಯಮಂತ್ರಿಯಾಗಿದ್ದ ನವೀನ್‌ ಪಟ್ನಾಯಕ್‌ ಅವಧಿಯಲ್ಲಿ ವಿ.ಕೆ.ಪಾಂಡ್ಯನ್‌ ಅವರ ಪಾತ್ರ.

ಅಧಿಕಾರದಲ್ಲಿರುವ ರಾಜಕಾರಣಿಗಳಿಗೆ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಾ ಸದಾ ಅವರ ಹಿತಾಸಕ್ತಿ
ಗಳನ್ನು ಕಾಯ್ದುಕೊಂಡು, ಅವರಿಗೆ ರಾಜಕೀಯವಾಗಿ ಎಂದೂ ಬೆದರಿಕೆಯಾಗದೆ ನೇಪಥ್ಯದಲ್ಲಿಯೇ ಉಳಿಯುವುದು ಆಡಳಿತದಲ್ಲಿ ಅಧಿಕಾರಶಾಹಿಯ ಮಹತ್ವದ ಪಾತ್ರವು ಅಪಾರ ಯಶಸ್ಸು ಪಡೆಯಲು ಕಾರಣ. ರಾಜಕೀಯ ಆಡಳಿತದಲ್ಲಿ ಅವರಿಗೆ ಇರುವ ಸುದೀರ್ಘ ಅನುಭವ, ವೃಂದವಾಗಿ ಇರುವ ಸುಸಂಬದ್ಧತೆ, ಸಾರ್ವಜನಿಕ ವ್ಯವಹಾರಗಳಲ್ಲಿ ಇರುವ ಜ್ಞಾನ ಮತ್ತು ಪರಿಣತಿ, ಮುರಿಯದಂತೆ ಬಾಗಿಸುವ ಚಾತುರ್ಯವು ದೇಶೀ ಮತ್ತು ಅಂತರರಾಷ್ಟ್ರೀಯ ನೀತಿಗಳಲ್ಲಿ ನಿರಂತರತೆ ಮತ್ತು ಒಟ್ಟಾರೆ ಸ್ಥಿರತೆ ಹಾಗೂ ರಾಷ್ಟ್ರದ ಕಾರ್ಯಸೂಚಿಯನ್ನು ರೂಪಿಸಿ ಅನುಷ್ಠಾನಗೊಳಿಸಲು ನೆರವಾಗುತ್ತವೆ. ಇದು ಒಂದು ರೀತಿ ‘ಯೆಸ್‌ ಮಿನಿಸ್ಟರ್‌ ಅಂಡ್‌ ಯೆಸ್‌ ಪ್ರೈಮ್‌ ಮಿನಿಸ್ಟರ್‌‌’ ಎಂಬ ಬ್ರಿಟಿಷ್‌ ವಿಡಂಬನಾ ಧಾರಾವಾಹಿ ಮಾಲಿಕೆಯಲ್ಲಿ ಕಂಡುಬರುವಂತಹದ್ದು. ಆದರೆ, ಆಡಳಿತದಲ್ಲಿ ರಾಜಕಾರಣಿಗಳ ವೈಫಲ್ಯವು ಅಧಿಕಾರಶಾಹಿಗೆ ವ್ಯಾಪಕ ಮತ್ತು ವಿಸ್ತೃತವಾದ ಅಧಿಕಾರಗಳನ್ನು ಕೊಟ್ಟಿದೆ.

(ಮುಂದುವರಿಯುವುದು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.