ಆ ಹುಡುಗಿ ಒಂದೇ ಸಮ ಕಣ್ಣೀರಿಡುತ್ತಿದ್ದಳು. ‘ಅವಳು ಅಳುತ್ತಲೇ ಇದ್ದಾಳೆ. ಸಮಾಧಾನ ಮಾಡಿ ಮಾಡಿ ಸಾಕಾಯ್ತು’ ಅಂತ ಅವಳ ಗೆಳತಿಯರು ಹೇಳಿದರು. ಮಾತಾಡಿಸಿದಾಗ, ಕಾರಣ ಕೇಳಿ ವಿಚಿತ್ರ ಸಂಕಟವೆನ್ನಿಸಿತು. ಅವಳದು ಪ್ರೀತಿ– ಪ್ರೇಮದ ಕತೆಯಲ್ಲ. ಅವಳು ಹಿಂದುಳಿದ ವರ್ಗಕ್ಕೆ ಸೇರಿದ ಒಂದು ಜಾತಿಗೆ ಸೇರಿದ ಹುಡುಗಿಯಾಗಿದ್ದು, ಅವಳ ಮನೆ ಮಂದಿ ಈಗಲೂ ವಿಪರೀತ ಅಸ್ಪೃಶ್ಯತೆ ಆಚರಿಸುತ್ತಿದ್ದಾರಂತೆ. ಆಕೆ ಕಾಲೇಜಲ್ಲಾಗಲೀ ಎಲ್ಲೇ ಆಗಲಿ ಪರಿಶಿಷ್ಟ ಜಾತಿಗಳ ಸ್ನೇಹಿತೆಯರ ಜೊತೆಗೆ ಸಲುಗೆಯಿಂದ ಇರುವಂತಿಲ್ಲ. ಹಾಗೆ ಯಾರಾದರೂ ಸಲುಗೆ ತೋರಿದರೆ, ಈ ಹಿಂದುಳಿದ ಜಾತಿಯ ಪೂಜಾರಿಗಳೆನಿಸಿಕೊಂಡವರು ತಮ್ಮ ಜಾತಿಯವರಿಗೆ ಚಾಟಿಯೇಟು ನೀಡುತ್ತಾರಂತೆ. ಇದನ್ನು ಒಪ್ಪದ ಆಕೆ, ಇದನ್ನು ಹೇಗೆ ತಡೆಯುವುದು, ಮನವರಿಕೆ ಮಾಡುವುದು ಎಂಬ ಅಸಹಾಯಕತೆಯಲ್ಲಿ ಅಳುತ್ತಿದ್ದಳು.
ಮಾತೆತ್ತಿದರೆ ಈಗ ಜಾತಿಭೇದ ಇಲ್ಲವೇ ಇಲ್ಲ ಎಂದು ವಾದ ಮಾಡುವವರ ದಂಡೇ ನಮ್ಮಲ್ಲಿ ಇದೆ. ಇನ್ನೊಂದೆಡೆ, ಇದ್ಯಾವುದರೆಡೆಗೆ ನಂಬಿಕೆಯಾಗಲೀ ಹಂಗಾಗಲೀ ಇಲ್ಲದೆ ಬದುಕುವವರು ಸಣ್ಣ ಸಂಖ್ಯೆಯಲ್ಲಾದರೂ ಇದ್ದೇವೆ. ಶಿಕ್ಷಣ ಸಿಕ್ಕಿದ ನಂತರ ಎಲ್ಲ ಬದಲಾಗುತ್ತದೆ ಎಂಬ ನಂಬಿಕೆ ಹುಸಿಯಾಗುವಂತೆ ‘ಶಿಕ್ಷಿತ’ ತಲೆಮಾರಿನವರು ಹಿಂದಿನವರಿಗಿಂತ ಅಸಹ್ಯವಾಗಿ ಜಾತಿಗೀತಿಯ ಕೆಸರಲ್ಲಿ ಸಂಭ್ರಮದಿಂದ ಈಜಾಡುತ್ತಿದ್ದಾರೆ. ತಂತ್ರಜ್ಞಾನದ ಮೂಲಕ, ಜಗತ್ತಿನಾದ್ಯಂತ ಇರುವ ‘ತಮ್ಮವರ’ ಗುಂಪು ರಚಿಸಿಕೊಂಡು ನವ ಮನೋವ್ಯಾಧಿಗೆ ತುತ್ತಾಗುತ್ತಿದ್ದಾರೆ.
1925ರ ನಂತರ ಜಗತ್ತಿನಾದ್ಯಂತ ಹಲವು ವಿಪ್ಲವಗಳು, ಬದಲಾವಣೆಗಳು ಸಂಭವಿಸಿದವು. ಭಾರತದಲ್ಲಿ ಸ್ವಾತಂತ್ರ್ಯ ಹೋರಾಟ ನಿರ್ಣಾಯಕ ಹಂತಕ್ಕೆ ತಲುಪಿತು. ಹೊರಗಿನ ಶತ್ರುವನ್ನು ಮಣಿಸಲು ಗಾಂಧೀಜಿ ದೇಶದೆಲ್ಲೆಡೆ ಸಂಚರಿಸಿ ಸಂಘಟನೆ ಮಾಡುತ್ತಲೇ ಸಾಮಾಜಿಕ ಭೇದಗಳನ್ನು ಮನಃಪರಿವರ್ತನೆಯಿಂದ ಮಾಯಿಸಬಹುದು ಅಂದುಕೊಂಡರು. ಅಂಬೇಡ್ಕರ್, ಅಷ್ಟೇ ಸಾಲದು, ಒಳಗಿನ ಶತ್ರುವನ್ನು ಮೊದಲು ಮಣಿಸಬೇಕು ಎಂದು ಪದೇ ಪದೇ ಹೇಳಿದರು. ಅಸ್ಪೃಶ್ಯರಿಗೆ ಪ್ರತಿಭಟನೆಯ ಅಹಿಂಸಾತ್ಮಕ ದಾರಿಯನ್ನು ಅರುಹಿದರು. ಹೆಣ್ಣುಮಕ್ಕಳನ್ನೂ ಸೇರಿಸಿಕೊಂಡು ಸಂಘಟಿಸಿದರು. ಹೊರಗಿನ ಶತ್ರುವನ್ನೇನೋ ಭೌತಿಕವಾಗಿ ಹೊರಗಟ್ಟಿದ್ದಾಯಿತು. ಆದರೆ ಒಳಗಿನ ಶತ್ರುವನ್ನು ಮಣಿಸಲು ಸಾಧ್ಯವಾಯಿತೇ? ಒಳಗಿನ ಶತ್ರುವಿನ ದ್ವೇಷದ ಅಟ್ಟಹಾಸಕ್ಕೆ ಗಾಂಧಿ ಬಲಿಯಾದರು. ಈಗ 2025ರ ಹೊತ್ತಿಗೆ ಹಲವು ದೇಶಗಳು, ಹಲವು ಮನಸ್ಸುಗಳು ‘ಒಳಗಿನ ಶತ್ರು’ವನ್ನು ಬಲಿಸಿಕೊಂಡು ಹೊಟ್ಟೆಯುಬ್ಬರದಿಂದ ಒದ್ದಾಡುತ್ತಿವೆ. ಈ ಹೊಟ್ಟೆಯುಬ್ಬರ ಬಲಿಯುವುದಕ್ಕೆ ಈ ಶತಮಾನದಲ್ಲಿ ಒದಗಿಬಂದಿರುವುದು ತಂತ್ರಜ್ಞಾನ ಎಂಬ ಹೊಸ ಆಯುಧ. ಈ ತಂತ್ರಜ್ಞಾನದ ಮೇಲೆ ಮಾಲೀಕತ್ವವನ್ನು ಹೊಂದುವವರು ತಮ್ಮನ್ನು ತಾವೇ ನವ ನಿರ್ಮಾಪಕರು ಎಂದು ಬಿಂಬಿಸಿಕೊಳ್ಳತೊಡಗಿದ್ದಾರೆ.
ಈಗಾಗಲೇ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೂ ಉದ್ಯಮಿಗಳನ್ನು ನೇಮಿಸಬಹುದೆಂಬ ಯುಜಿಸಿ ಕರಡು ನಿಯಮ ಇವರಿಗೆಲ್ಲಾ ಇನ್ನಷ್ಟು ಹುಮ್ಮಸ್ಸು ನೀಡಿರಬಹುದು. ಆ ಮೂಲಕ ಜ್ಞಾನ, ಪಾಂಡಿತ್ಯಕ್ಕಿಂತ ಹಣ ಮಾಡುವ ಕೌಶಲವನ್ನಷ್ಟೇ ಅರ್ಹತೆಯನ್ನಾಗಿಸಿ, ಮಿದುಳಿಲ್ಲದ ನವ ಜೀತಗಾರರನ್ನು ಸೃಷ್ಟಿಸುವುದು ಹೆಚ್ಚು ಸುಲಭ ಅಂದುಕೊಂಡಿರಬಹುದು. ಹೆಚ್ಚು ಮಕ್ಕಳನ್ನು ಹೆತ್ತು ಕೂಲಿಕಾರರನ್ನು ಹೆಚ್ಚಿಸುವ ಟಾಸ್ಕ್ ನೀಡಿ ಅದಕ್ಕೆ ಧರ್ಮದ ಲೇಪವನ್ನೂ ಹಚ್ಚಬಹುದು. ಇಷ್ಟಾಗಿ ಇವರೆಲ್ಲಾ ಹೀಗೆ ಹೇಳಿದ ಕೂಡಲೇ ಜನರೆಲ್ಲಾ ಶಿರಸಾ ಪಾಲಿಸುತ್ತಾರೆಂಬ ಭ್ರಮೆಯೇನೂ ಬೇಡ. ಆದರೆ ಇವರ ಈ ‘ಹೆಬ್ಬುಬ್ಬೆ’ ಮಾತುಗಳೂ ದೊಡ್ಡ ಸುದ್ದಿಯಾಗುವ ದುರ್ದೈವದ ಬಗೆಗೆ ‘ನಗೆಯು ಬರುತಿದೆ’ ಅಷ್ಟೇ.
ಮನುಷ್ಯನ ದ್ವೇಷ, ಕ್ರೌರ್ಯಕ್ಕೆ ಸಾವಿರ ಮುಖಗಳು ಎಂಬುದು ದಿನವೂ ಅನಾವರಣಗೊಳ್ಳುತ್ತಲೇ ಇರುತ್ತದೆ. ಆದರೆ ಇದಕ್ಕೆ ಪರಿಹಾರವನ್ನು ಹುಡುಕುವವರು ಪ್ರೀತಿಯ ದಾರಿಯನ್ನೇ ಆರಿಸಿಕೊಳ್ಳುವುದು ಒಂದು ಅಚ್ಚರಿಯ ನಡೆಯೇ ಆಗಿರುತ್ತದೆ. ಬಿಸಿರಕ್ತದ ಯುವಜನರೂ ಈ ಹಾದಿಯನ್ನೇ ಆರಿಸಿಕೊಂಡು ಹೋಗುವುದು ಪ್ರೀತಿಯ ಶಕ್ತಿಯನ್ನು ಹೇಳುತ್ತದೆ. ‘ಇಡೀ ಬೆಂಗಳೂರಿನ ಮ್ಯಾಪೇ ನಿನ್ನ ಮೈಯಲ್ಲಿದೆ’ ಎಂಬ ಮಾತೊಂದು ಕ್ವಿಯರ್/ಟ್ರಾನ್ಸ್‌ಜೆಂಡರ್ ಸಮುದಾಯದವರು ಪ್ರಸ್ತುತಪಡಿಸಿದ ‘ತಲ್ಕಿ’ ನಾಟಕದಲ್ಲಿ ಬರುತ್ತದೆ. ಆಕೆಯ ಮೈಮೇಲೆ ಬೇರೆ ಬೇರೆ ಏರಿಯಾಗಳಲ್ಲಿ ಆದ ಹಲ್ಲೆಗಳ ಗುರುತುಗಳು ಅವು. ಇದು, ಆ ಹಲ್ಲೆಗಳ ದಾಖಲೆಯನ್ನು ಮಾತ್ರ ಹೇಳುತ್ತಿರುವುದಿಲ್ಲ. ಜೊತೆಗೇ ಈ ಸಮಾಜವು ದುರ್ಬಲರನ್ನು ನಡೆಸಿಕೊಳ್ಳುವ ರೀತಿಯನ್ನೂ ಅಮಾನುಷತೆಯನ್ನೂ ಆ ಅಮಾನುಷತೆಯು ಒಪ್ಪಿತ ಸಂಗತಿಯಾಗಿರುವುದನ್ನೂ ದಾಖಲಿಸುತ್ತಿರುತ್ತದೆ.
ಇದ್ಯಾವುದರ ಪರಿವೆಯಿಲ್ಲದ ಬೃಹತ್ ಸಮಾಜವೊಂದರ ನಡುವೆ ತಾತ್ಸಾರಕ್ಕೊಳಗಾಗಿ ಬದುಕುವ- ಕ್ರಿಮಿನಲ್ ಮೈಂಡ್‍ನ ಸೊಫಿಸ್ಟಿಕೇಟೆಡ್‍ಗಳಿಂದ- ಕ್ರಿಮಿನಲ್‍ಗಳೆಂಬಂತೆ ದೂಷಿಸಿಕೊಳ್ಳಬೇಕಾದ ಇವರ ಬದುಕುಗಳನ್ನು ಇದ್ದಂತೆಯೇ ರಂಗಕ್ಕೆ ತಂದು, ಅವರಿಂದಲೇ ಅಭಿನಯ ಮಾಡಿಸಿದ ಯುವ ನಿರ್ದೇಶಕ ಶ್ರೀಜಿತ್ ಸುಂದರಂ, ಈ ನೋವುಗಳನ್ನು ದಾಟಿಸುವಾಗಲೂ ಹಗೆಯ ಮಾತಿಲ್ಲದೇ ಅಳುವನ್ನು ನಗುವಿನಲ್ಲಿ ಮರೆಸಿ ಹೇಳುತ್ತಾರೆ. ಕೇಳಿಸಿಕೊಳ್ಳಬೇಕಾದ, ನೋಡಬೇಕಾದ ಕಿವಿ, ಕಣ್ಣುಗಳು ಅರಿತುಕೊಳ್ಳಬೇಕಷ್ಟೇ.
‘ದಿನವೆಲ್ಲಾ ಜೀತ ಮಾಡಿದರೂ ಹಿಟ್ಟು ಕಾಣದ’ ಸಾಲೊಂದನ್ನು ಹಾಡಿಕೊಳ್ಳುವ ಪಾತ್ರ ‘ಕೇರಿ ಹಾಡು’ ನಾಟಕದಲ್ಲಿ ಬರುತ್ತದೆ. ವಾರಕ್ಕೆ 70/90 ಗಂಟೆ ದುಡಿಯಿರಿ ಎಂದು ಕರೆ ಕೊಡುವ ‘ನವ ಜಮೀನ್ದಾರರು’ ರೂಪುಗೊಳ್ಳುತ್ತಿರುವ ಕಾಲವಿದು. ಆದರೆ ಅಂದಿನಿಂದ ಹೀಗೆ ದುಡಿದುಡಿದೂ ಅನ್ನ, ನೀರು, ಬಟ್ಟೆ ಕಾಣದೇ ಇದ್ದ ಕಾಲವನ್ನು ಈ ಮಾತು ನೆನಪಿಸುತ್ತದೆ. ಮಾತ್ರವಲ್ಲ, ಅದು ಹೇಗೋ ಸಂವಿಧಾನದ ಬೆಳಕಿನಲ್ಲಿ ನಾಲ್ಕಕ್ಷರ ಕಲಿತು ಕಣ್ಣುಬಿಡುತ್ತಿರುವ ಕೇರಿಯ ಮಕ್ಕಳು ದೇವಸ್ಥಾನ ಪ್ರವೇಶಿಸಿದರೆ ಇಂದಿಗೂ ಬಹಿಷ್ಕಾರ ಹಾಕಲಾಗುತ್ತಿದೆ. ಕೂಲಿ ನಿರಾಕರಿಸಲಾಗುತ್ತಿದೆ. ಈ ಪ್ರಕರಣ ನಡೆದ ಹಾಸನ ಜಿಲ್ಲೆಯ ದಿಂಡಗೂರಿನ ಕತೆಯನ್ನು ಹೇಳುವಾಗಲೂ ಯುವ ನಿರ್ದೇಶಕ ಕೆ.ಚಂದ್ರಶೇಖರ್, ಕೇರಿಯ ಚೈತನ್ಯ, ಕಸುವು, ಗಾಯಗಳನ್ನು ಹೇಳುತ್ತಾರೆಯೇ ವಿನಾ ತಮ್ಮನ್ನು ಹೊರಗಿಟ್ಟಿರುವವರೆಡೆಗೆ ವಿಷಕಾರುವ ಮಾತುಗಳನ್ನಾಡುವುದಿಲ್ಲ.
ಕೇರಿಯವರ ಎಚ್ಚೆತ್ತ ಪ್ರಜ್ಞೆಯು ಒಂದು ವಿಷಯವನ್ನರಿತಿದೆ. ಅದೆಂದರೆ, ನಮ್ಮ ಹಿಂದಿನವರ ಕತೆ ನಮಗೆ ಮತ್ತು ನಮ್ಮ ಕಿರಿಯರಿಗೆ ತಿಳಿದಿಲ್ಲ. ಅದು ತಿಳಿಯಬೇಕು. ಆ ತಿಳಿವನ್ನು ಮರೆಮಾಚಬೇಕಾಗಿಯೂ ಇಲ್ಲ, ತಮ್ಮ ಗುರುತುಗಳನ್ನು ಅಡಗಿಸಿ ಅನಾಮಿಕರಾಗಬೇಕಾಗಿಯೂ ಇಲ್ಲ. ನಮ್ಮದೇ ಗುರುತುಗಳನ್ನು ಹೊತ್ತು ಆತ್ಮವಿಶ್ವಾಸದಿಂದ ತಲೆ ಎತ್ತಿ ನಡೆಯುವ ಸ್ವಾಭಿಮಾನೀ ಪಥವೊಂದನ್ನು ನಾವೇ ಕಂಡುಕೊಂಡು ಮುನ್ನಡೆಯುವುದು. ಸ್ನೇಹದ ತಂಗಾಳಿಯಲ್ಲಿ ಚಿಲುಮೆಯಂತೆ ಚಿಮ್ಮುವುದು. ಈ ನಾಟಕದಲ್ಲೂ ಕೇರಿಯ ಹಿರಿಕಿರಿಯರಾದಿಯಾಗಿ ಅವರೇ ಪಾತ್ರಗಳಾಗಿ ತಮ್ಮದೇ ಕತೆ ಹೇಳಿದ್ದಾರೆ. ಚರಿತ್ರೆಯನ್ನು ಮರೆಯದೇ ಚರಿತ್ರೆಯನ್ನು ಕಟ್ಟುವ ಅಂಬೇಡ್ಕರ್ ಚಿಂತನೆಯ ಬೆಳಕನ್ನು ಹೊತ್ತು ಸಾಗುವವರು ಇವರು.
ಕೇರಿಯಾಚೆಯೂ ಕಟ್ಟಿಕೊಳ್ಳುವ ಆಧುನಿಕ ಬದುಕಿನಲ್ಲಿ ಹಿರಿ– ಕಿರಿದು ಎಂಬ ಭೇದವಿಲ್ಲದೆ, ಹಣದ ಥೈಲಿಯ ಹಪಹಪಿಯಿಲ್ಲದೆ, ನಾಟಕ, ಓದು, ಹಾಡು, ಚಿಂತನ ಮಂಥನಗಳ ಕ್ರಿಯಾಶೀಲತೆಯ ಸಂಗಡ ಅರಳಿಕೊಳ್ಳುವ ಬದುಕೊಂದು ಸಾಧ್ಯವಿಲ್ಲವೇ? ಪುಟ್ಟ ಪುಟ್ಟ ನೇಯ್ಗೆಯ ಘಟಕಗಳಲ್ಲಿ ಕಾರ್ಮಿಕರೇ ಮಾಲೀಕರಾಗಿ, ಮಾಲೀಕರು ಕಾರ್ಮಿಕರಾಗಿ ಸಮಸಮವಾಗಿ ದುಡಿಯುತ್ತಾ, ಬದುಕುತ್ತಾ, ಆ ಕಾರಣಕ್ಕಾಗಿಯೇ ವಾರಕ್ಕೆ ಕನಿಷ್ಠ 20 ಗಂಟೆಗಳ ದುಡಿಮೆ ಮತ್ತು ತಿಂಗಳಿಗೆ ಗರಿಷ್ಠ 150 ಮೀಟರ್‌ಗಳಷ್ಟು ಮಾತ್ರ ನೇಯ್ಗೆ ಎಂದು ವಿಧಿಸಿಕೊಳ್ಳುತ್ತಾ, ಪರಸ್ಪರರಿಗೆ ಆಪತ್ಕಾಲದಲ್ಲಿ ನೆರವಾಗುವ ಹಣಕಾಸು ವ್ಯವಸ್ಥೆ ಮಾಡಿಕೊಂಡು, ವಿಶ್ವಾಸದಲ್ಲಿ ಪ್ರಕೃತಿಗೆ ಹತ್ತಿರವಾಗಿ ಜೀವಿಸುವ ಪ್ರಯೋಗವೊಂದನ್ನು ಮೇಲುಕೋಟೆಯ ಜನಪದ ಟ್ರಸ್ಟ್‌ನಲ್ಲಿ ಪ್ರಯೋಗಿಸುತ್ತಿರುವ ಅನುಭವ ಕಥನವನ್ನು ಸುಮನಸ್ ಕೌಲಗಿ ಹೇಳುತ್ತಿದ್ದರು. ಅಲ್ಲಿ ಎಲ್ಲಾ ಜಾತಿಯ ಜನರಿದ್ದಾರೆ. ಗಾಂಧಿ, ಜೆ.ಸಿ.ಕುಮಾರಪ್ಪ ಅವರ ಚಿಂತನೆಗಳ ಅಡಿಪಾಯದಲ್ಲಿ ಸರಳ ನಡೆ ನಡೆಯುತ್ತಿದ್ದಾರೆ.
ಈ ಮೂರು ಸಂದರ್ಭದಲ್ಲೂ ಕತೆ ಹೇಳುತ್ತಿರುವ ಯುವಕರ ಜೊತೆಗೆ ಹಿರಿಯರೂ ಹೆಂಗಸರೂ ಮಕ್ಕಳೂ ಕೈಜೋಡಿಸಿದ್ದಾರೆ. ಇವರೆಲ್ಲರೂ ಎಲ್ಲರೊಡನೊಂದಾಗಿ ಬದುಕುವ ಕನಸು ಕಾಣುತ್ತಿದ್ದಾರೆಂಬುದು ಎದ್ದು ಕಾಣುತ್ತಿದೆ.
ಎಡೆಬಿಡದೆ ಅಳುತ್ತಿರುವ ಹುಡುಗಿಯೇ ಕೇಳು- ಶೋಷಕಳಾಗಬಾರದೆಂಬ ನಿನ್ನ ಮೇರು ಪ್ರಜ್ಞೆಯ ಕನಸೂ ನನಸಾಗಬಲ್ಲ ದಾರಿಗಳಿವೆ. ನಗು ಧರಿಸಿ ನಡೆಯೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.