ಲಕ್ಷ್ಮಣರೇಖೆಯ ಒಳಗಿದ್ದಾಗ ಹೆಣ್ಣು ಸುರಕ್ಷಿತಳು ಎನ್ನುವ ನಂಬಿಕೆ ರಾಮಾಯಣ ಕಾಲದಿಂದಲೂ ಇದೆ. ಆದರೆ, ಸುರಕ್ಷಿತ ರೇಖೆಯಿಂದ ಹೊರಬರದೆ ಹಾಗೂ ಸ್ವಅರಿವು ಪಡೆಯದೆ ಹೆಣ್ಣಿಗೆ ಸ್ವಾತಂತ್ರ್ಯ ದೊರೆಯುವುದಿಲ್ಲ. ದೇಹದ ಮೇಲಿನ ಧ್ಯಾನಕ್ಕಿಂತಲೂ ಬೌದ್ಧಿಕ ಚಿಂತನೆ ಮಹಿಳೆಯನ್ನು ಸಬಲಗೊಳಿಸಬಲ್ಲದು.
ಸ್ವಾತಂತ್ರ್ಯ ಎಲ್ಲಿ ಸಿಗುತ್ತದೆ? ಅದು ಮನೆಯ ಒಳಗಿದೆಯೋ ಅಥವಾ ಹೊರಗಿದೆಯೋ? ಸ್ವತಂತ್ರ ಭಾರತದಲ್ಲಿ ಸ್ವಅರಿವು ಕಂಡುಕೊಳ್ಳುತ್ತಿರುವ ಭಾರತೀಯ ಮಹಿಳೆಯ ಎದುರಿಗಿರುವ ಪ್ರಶ್ನೆಗಳಿವು.
ವರ್ತಮಾನ ಭಾರತದ ಮಹಿಳೆಯರ ಸ್ಥಿತಿಗತಿಯನ್ನು ಕೂಲಂಕಷವಾಗಿ ಗಮನಿಸಿದಾಗ, ಗಾಂಧಿ ಮತ್ತು ಇತರ ದೇಶಭಕ್ತರು ಸ್ವಾತಂತ್ರ್ಯ ಪಡೆಯಲಿಕ್ಕಾಗಿ ದೇಶದಲ್ಲಿ ಬೃಹತ್ ಜನಾಂದೋಲನ ರೂಪಿಸಿದಂತೆ, ಮಹಿಳಾ ಶೋಷಕರ ಮೈಚಳಿ ಬಿಡಿಸಿ, ಅವರನ್ನು ಮಹಿಳಾ ಸಮಾನತೆಯ ಮೇಲ್ದರ್ಜೆಗೆ ಏರಿಸುವಂತಹ, ಮಹಿಳಾ ಸ್ವಅರಿವಿನ ದೇಶವ್ಯಾಪಿ ಜಾಗೃತಿ ಅಭಿಯಾನದ ಅಗತ್ಯ ರೂಪುಗೊಳ್ಳಬೇಕಿದೆ. ಗಾಂಧಿ ಮತ್ತು ಅಂಬೇಡ್ಕರ್, ಮಹಿಳೆಯರಿಗೆ ಸಮಾನ ಅವಕಾಶಗಳ ಮೂಲಕ ಅವರ ಸಬಲೀಕರಣದಲ್ಲಿ ಬಲವಾದ ನಂಬಿಕೆಯಿಟ್ಟಿದ್ದರು. ಆದರೆ, ಅವರ ಆಶಯಗಳು ನೆರವೇರಲು ಸಾಧ್ಯವಾಗದಂತೆ ನಮ್ಮ ವ್ಯವಸ್ಥೆ ತುಕ್ಕು ಹಿಡಿದಿದೆ. ಹಾಗಾಗಿ, ಜನಾಂದೋಲನದ ಮೂಲಕ ನಮ್ಮ ನಾಗರಿಕ ಪ್ರಜ್ಞೆಯನ್ನು ಸದೃಢಗೊಳಿಸುವ ಅಗತ್ಯವಿದೆ.
ರಾಮಾಯಣದಲ್ಲಿ, ಕುಟುಂಬದ ಗಂಡಸರ ಅನುಪಸ್ಥಿತಿಯಲ್ಲಿ ಸಾಧುವಿಗೆ ಆತಿಥ್ಯ ನೀಡಬೇಕಾದಾಗ ಕರ್ತವ್ಯ ಪ್ರಜ್ಞೆ ಮತ್ತು ಮುಗ್ಧತೆಯಿಂದಾಗಿ, ಲಕ್ಷ್ಮಣರೇಖೆಯಿಂದ ಹೊರಗೆ ಕಾಲಿಡುವ ನಿರ್ಧಾರವು ಸ್ವತಃ ಸೀತೆಯದ್ದೇ. ಅದಕ್ಕಾಗಿ, ಅವಳು ಭಾರೀ ಬೆಲೆತೆತ್ತು, ರಾಮ–ರಾವಣರ ಯುದ್ಧಕ್ಕೆ ಕಾರಣಳಾದಳು. ಹೆಣ್ಣು ಯಾವತ್ತೂ ಲಕ್ಷ್ಮಣರೇಖೆಯನ್ನು ಮೀರದೇ ತೆಪ್ಪಗೆ ಮನೆಯೊಳಗೆ ಇರಬೇಕೆನ್ನುವ ಲೋಕರೂಢಿಯನ್ನು ರಾಮಾಯಣದ ಕಥೆ ಹೇಳುತ್ತದೆ.
ಹೊಸ್ತಿಲಿನಿಂದ ಹೊರಗೆ ಕಾಲಿಟ್ಟ ಹೆಣ್ಣುಮಕ್ಕಳ ಚಾರಿತ್ರ್ಯದ ವಧೆ ಮಾಡುತ್ತಾ, ಅವರ ಸ್ವಾತಂತ್ರ್ಯ ಕಿತ್ತುಕೊಳ್ಳಲಾಗಿದೆ ಎಂದು ಇತಿಹಾಸ ಹೇಳುತ್ತದೆ. ಪರಪುರುಷ ಸಾಧುವಿನಂತೆ ಕಂಡರೂ, ಅವನೊಳಗೆ ಒಬ್ಬ ರಾವಣ ಅಡಗಿರುತ್ತಾನೆ; ಹಾಗಾಗಿ, ಸದಾ ಎಚ್ಚರಿಕೆಯಿಂದ ಇರಬೇಕೆನ್ನುವ ಕಿವಿಮಾತನ್ನು ಹೆಣ್ಣುಮಕ್ಕಳಿಗೆ ಹೇಳುತ್ತಾ ಬೆಳೆಸುತ್ತೇವೆ. ಆದರೆ, ಈ ಪರಪುರುಷರು ಕೂಡ, ತಂತಮ್ಮ ಮನೆಗಳಲ್ಲಿ ಸಭ್ಯ ಗೃಹಸ್ಥರಂತೆ ಪೋಸು ಕೊಡುತ್ತಾರೆ. ಅವರನ್ನು ಅವರ ಮನೆಯ ಹೆಂಗಸರು ಹದ್ದುಬಸ್ತಿನಲ್ಲಿಟ್ಟರೆ, ಮಹಿಳಾ ಶೋಷಣೆ ಒಂದು ಸಾಮಾಜಿಕ ಪೀಡೆಯಾಗಿ ಬೆಳೆಯುತ್ತಿರಲಿಲ್ಲ ಎನ್ನುವ ಸಾಮಾನ್ಯ ಪ್ರಜ್ಞೆ ಕುರಿತು ನಾವು ಹೆಚ್ಚು ಮಾತನಾಡುವುದಿಲ್ಲ. ಏಕೆಂದರೆ, ಒಂದೇ ಹೆಣ್ಣಿಗೆ ಬದ್ಧನಾಗದೇ, ಬಾಹ್ಯ ಅವಕಾಶಗಳಿಗೆ ಸದಾ ಮುಕ್ತನಾಗಿರುವುದು, ಬಹುತೇಕ ಗಂಡಸರು ಕಂಡುಕೊಂಡಂತಹ ಸ್ವಯಂ ಸ್ವಾತಂತ್ರ್ಯ.
ಲಕ್ಷ್ಮಣರೇಖೆಯನ್ನು ದಾಟಿ ಸಾರ್ವಜನಿಕ ಬದುಕಿನಲ್ಲಿ ಗುರುತಿಸಿಕೊಂಡ ಬಹುತೇಕ ಹೆಣ್ಣುಮಕ್ಕಳು ಸಂಪ್ರದಾಯಸ್ಥ ಕುಟುಂಬದವರಲ್ಲ, ಉತ್ತಮ ಆರ್ಥಿಕ ಹಿನ್ನೆಲೆಯವರಲ್ಲ, ಮೇಲ್ಜಾತಿಯವರಲ್ಲ, ಎನ್ನುವ ಇತಿಹಾಸದಲ್ಲಿನ ಅಂಶ ಗಮನಾರ್ಹ. ತಮ್ಮ ಸಂಸಾರವನ್ನು ಆರ್ಥಿಕವಾಗಿ ಸಂಭಾಳಿಸಬೇಕಾದ ಅನಿವಾರ್ಯತೆಯಲ್ಲಿ, ವೈಯಕ್ತಿಕ ಹಿತದೊಂದಿಗೆ ರಾಜಿ ಮಾಡಿಕೊಂಡ ಹೆಣ್ಣುಮಕ್ಕಳನ್ನೇ ನಾವು ಹೆಚ್ಚಾಗಿ ಕಾಣುತ್ತೇವೆ. ಅವರೆಲ್ಲರೂ ಧ್ವನಿ ಸತ್ತ ಮಹಿಳೆಯರಾಗಿಯೇ ಉಳಿದು ಅಳಿದದ್ದು ವಿಷಾದನೀಯ. ಇಂದಿಗೂ ನಮ್ಮ ಹೆಣ್ಣುಮಕ್ಕಳು ಪ್ರತಿದಿನವೂ, ದೈನಂದಿನ ಬದುಕಿನಲ್ಲಿ ಎದುರಾಗುವ ಕೆಲವು ಗಂಡಸರಿಂದ ಒಂದಲ್ಲಾ ಒಂದು ರೀತಿಯ ದೈಹಿಕ, ಮಾನಸಿಕ, ಭಾಷಿಕ ದೌರ್ಜನ್ಯವನ್ನು ಅನುಭವಿಸಿಯೂ ಅದನ್ನು ದಾಖಲಿಸುವುದಿಲ್ಲ. ಪ್ರಶ್ನಿಸುವ ಹೆಣ್ಣುಮಕ್ಕಳನ್ನೇ ಸಂಶಯದಿಂದ ನೋಡುವಷ್ಟು ನಾವು ನಿರ್ಲಿಪ್ತರು.
ನಮ್ಮ ಅಮ್ಮಂದಿರು, ಅಜ್ಜಿಯಂದಿರು ಅನುಭವಿಸಿದ ಸಂಕಟಗಳಿಗೆ ಹೋಲಿಸಿದರೆ, ಇಂದು ಪರಿಸ್ಥಿತಿ ಸುಧಾರಿಸಿದೆ ಎನ್ನಬಹುದು. ಪ್ರಸಕ್ತ, ಹೆಣ್ಣುಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿವೆ; ಆ ಮಟ್ಟಿಗಿನ ಧೈರ್ಯವನ್ನು ಹೆಣ್ಣು ತೋರುತ್ತಿದ್ದಾಳೆ. ಈ ಬದಲಾವಣೆಗೆ, ಧೀಮಂತ ಮಹಿಳೆಯರು ಹಾಗೂ ಸ್ವಸ್ಥ ಮನಸ್ಸಿನ ಪುರುಷರೂ ಕಾರಣವೆನ್ನಬಹುದು.
ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರ ಸ್ವವಿಕಸನಕ್ಕೆ ಅವಕಾಶಗಳು ಮುಕ್ತವಾಗಿವೆ. ಆದರೆ, ಅದನ್ನು ಪಡೆಯಲು ಅಡ್ಡವಾಗಿರುವುದು ಅವಳ ದೇಹ. ಇಂದು, ಹೆಣ್ಣು ತನ್ನ ಎಲ್ಲಾ ಸಾಧನೆಯ ನಡುವೆಯೂ ಒಂದು ‘ದೈಹಿಕ’ ವಸ್ತುವಾಗಿಯೇ ಉಳಿದಿದ್ದಾಳೆ. ಅವಳು ಸುಂದರವಾಗಿ, ಪ್ರಚೋದನಕಾರಿಯಾಗಿ ಕಾಣಿಸುವುದು ಬಹಳ ಮುಖ್ಯವಾಗಿಯೇ ಉಳಿದಿದೆ. ಅದಕ್ಕಾಗಿಯೇ, ಅವಳೆಲ್ಲಾ ಶ್ರಮ, ಸಮಯ ವ್ಯರ್ಥವಾಗುತ್ತದೆ. ಲಿಯೊ ಟಾಲ್‌ಸ್ಟಾಯ್ ಬಹಳ ಸರಿಯಾಗಿ ಗುರುತಿಸಿರುವಂತೆ, ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ವಸ್ತುಗಳು ಹೆಣ್ಣಿನ ಸೌಂದರ್ಯವರ್ಧನೆಗಾಗಿಯೇ ಇವೆ. ಅವುಗಳು ಅವಳನ್ನು ನಿರಂತರ ಗ್ರಾಹಕಳನ್ನಾಗಿಯೇ ಉಳಿಸುತ್ತವೆ ಮತ್ತು ಬೌದ್ಧಿಕ ಪ್ರಪಂಚಕ್ಕೆ ತೆರೆದುಕೊಳ್ಳದಂತೆ ತಡೆಯುತ್ತವೆ. ಸಾಮಾನ್ಯವಾಗಿ ನಮ್ಮ ಹೆಣ್ಣುಮಕ್ಕಳು ಒಟ್ಟುಗೂಡಿದಾಗ ವಸ್ತುಗಳ ಬಗ್ಗೆಯೇ ಮಾತಿನಲ್ಲಿ ಕಳೆದು ಹೋಗುತ್ತಾರೆಯೇ ಹೊರತು ಬೌದ್ಧಿಕ ಚರ್ಚೆಯಾಗುವುದು ವಿರಳ. ವಸ್ತುಗಳ ಪ್ರಪಂಚದಲ್ಲಿಯೇ ಉಳಿದು, ತಾನೂ ಒಂದು ಖರೀದಿಯ ವಸ್ತುವಾಗಿ, ಹೆಣ್ಣು ತನ್ನ ಸ್ವಾತಂತ್ರ್ಯ ಕಳೆದುಕೊಂಡಿದ್ದಾಳೆ.
ಹೆಣ್ಣು ತನ್ನ ದೇಹದ ಸೌಂದರ್ಯಕ್ಕಾಗಿ ಕಳೆಯುವ ಸಮಯ, ಮಾಡುವ ಖರ್ಚು ಮತ್ತು ಪಡುವ ಶ್ರಮದ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳುವ ಅಗತ್ಯವಿದೆ. ತನ್ನ ದೇಹದ ಕುರಿತಂತೆ ಸದಾ ಧ್ಯಾನಸ್ಥಳಾಗುವ ಹೆಣ್ಣು, ಬೌದ್ಧಿಕ ವಿಕಸನದತ್ತ ಗಮನಹರಿಸಿದರೆ, ಅದು ಅವಳನ್ನು ನಿಜವಾದ ಸ್ವಾತಂತ್ರ್ಯದತ್ತ ಕೊಂಡೊಯ್ಯುತ್ತದೆ. ಅಲಂಕಾರ ತನಗಾಗಿಯೋ ಅಥವಾ ಎಲ್ಲರ ಕಣ್ಮನ ತಣಿಸಲೋ ಎನ್ನುವ ಸ್ಪಷ್ಟತೆ ಬಹಳ ಮುಖ್ಯ.
ಹೆಣ್ಣಿನ ಉಡುಗೆ ತೊಡುಗೆ ಅವಳ ಆತ್ಮವಿಶ್ವಾಸ, ಆತ್ಮತೃಪ್ತಿ, ಮತ್ತು ತನ್ನನ್ನು ತಾನು ಸಂಭಾಳಿಸಿಕೊಳ್ಳುವ ಧೈರ್ಯವನ್ನು ಅಭಿವ್ಯಕ್ತಗೊಳಿಸಬೇಕೇ ಹೊರತು, ಉಳಿದವರಿಗೆ ಪುಕ್ಕಟೆ ಮನೋರಂಜನೆಗಾಗಿ ಅಲ್ಲ ಎನ್ನುವ ಸೂಕ್ಷ್ಮವು ಹಿಂದೆಂದಿಗಿಂತಲೂ ಇಂದು ಹೆಚ್ಚು ಅಗತ್ಯವಾಗಿದೆ. ಸಿನಿಮಾಗಳು, ಧಾರಾವಾಹಿಗಳು, ಹೆಣ್ಣಿನ ಅಂಗಪ್ರದರ್ಶನದ ಆಧಾರದ ಮೇಲೆ ಹಣಗಳಿಸಲು ಪ್ರಯತ್ನಿಸುತ್ತಿವೆ. ಈ ಮೂಲಕ, ಹೆಣ್ಣಿನ ದೇಹ ನಿರ್ಮಾಪಕನ ಬಂಡವಾಳವಾಗುತ್ತದೆ. ಹಾಗಿದ್ದಲ್ಲಿ, ಇದು ನಿಜವಾಗಿಯೂ ಯಾರ ಸ್ವಾತಂತ್ರ್ಯ– ನೋಡುವವನದ್ದೋ? ವಸ್ತು ಆಗುವವಳದ್ದೋ?
ಪ್ರಸ್ತುತ, ಹೆಣ್ಣುಮಕ್ಕಳ ಸಬಲೀಕರಣಕ್ಕೆ ಹೆತ್ತವರು ಆದ್ಯತೆ ನೀಡುತ್ತಿರುವುದು ಆಶಾದಾಯಕ ಬೆಳವಣಿಗೆ. ಆದರೂ, ಹೆಣ್ಣುಮಕ್ಕಳು ಸ್ವಶ್ರಮದಿಂದ ಬದುಕು ರೂಪಿಸಿಕೊಂಡರೂ, ಹೆತ್ತವರನ್ನು ಎಷ್ಟೇ ಚೆನ್ನಾಗಿ ನೋಡಿಕೊಂಡರೂ, ಅದು ತಮಗೆ ಅವಮಾನವೆಂದು ಭಾವಿಸುವ ಮತ್ತು ಇಲ್ಲದ ಗಂಡುಮಕ್ಕಳಿಗಾಗಿ ಪರಿತಪಿಸುವ ಪೋಷಕರು ಇನ್ನೂ ಇದ್ದಾರೆ ಎನ್ನುವುದು ವಾಸ್ತವದ ಸತ್ಯದರ್ಶನ.
ಹತಾಶೆಗಳ ನಡುವೆಯೂ, ಹೆಣ್ಣಿನ ದೇಹದ ಸ್ವಾತಂತ್ರ್ಯ ಎನ್ನುವುದು ಲಕ್ಷ್ಮಣರೇಖೆಯ ಒಳಗಿದೆಯೇ ಅಥವಾ ಹೊರಗಿದೆಯೇ ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರವೆಂದರೆ, ಎರಡೂ ಕಡೆ ಇಲ್ಲ ಎನ್ನುವುದು. ಆ ಸ್ವಾತಂತ್ರ್ಯವನ್ನು ಅವಳೇ ಸ್ವಅರಿವಿನ ಮೂಲಕ ಕಂಡುಕೊಳ್ಳಬೇಕಾಗಿದೆ. ಮನೆಯೊಳಗೆ ನಡೆಯುವ ಅತ್ಯಾಚಾರ, ಅನಾಚಾರಗಳು ಹೆಚ್ಚಾಗಿ ಹೊರಜಗತ್ತಿಗೆ ಬಯಲಾಗದಂತೆ ನಮ್ಮ ಸಂಪ್ರದಾಯಗಳು, ವಿಶೇಷವಾಗಿ ಹೆಣ್ಣುಮಕ್ಕಳ ಆರ್ಥಿಕ ಅವಲಂಬನೆಗಳು ಅವರನ್ನು ಬಾಯಿ ಕಟ್ಟಿಸುತ್ತವೆ. ಲಕ್ಷ್ಮಣರೇಖೆಯ ಹೊರಗಂತೂ, ಶಾಲಾ–ಕಾಲೇಜುಗಳು, ಕಚೇರಿಗಳು, ಬಹುತೇಕ ಸಾರ್ವಜನಿಕ ಸ್ಥಳಗಳು ಇನ್ನೂ ಸುರಕ್ಷಿತವಾಗಿಲ್ಲ. ಅಲ್ಲೆಲ್ಲಾ ಹೆಣ್ಣು ಏನು ಸಾಧಿಸಿದ್ದಾಳೆ, ಏನನ್ನೂ ಸಾಧಿಸಲಿದ್ದಾಳೆ ಎನ್ನುವುದು ಮುಖ್ಯವಾಗದೆ, ಅವಳ ದೇಹ ಹೇಗೆ ಕಾಣಿಸುತ್ತದೆ, ಪುರುಷನ ಅತೃಪ್ತ ಕಾಮನೆಗಳಿಗೆ ಅವಳು ಎಷ್ಟು ಲಭ್ಯವಾಗುತ್ತಾಳೆ (ಅವನ ಸಾಂಸಾರಿಕ ಜೀವನದ ನೆಮ್ಮದಿಗೆ ಅಡ್ಡಿಯಾಗದಂತೆ) ಎನ್ನುವುದಷ್ಟೇ ಮುಖ್ಯವೆನ್ನಿಸುತ್ತದೆ ಎನ್ನುವುದು ಬಹುತೇಕ ಹೆಣ್ಣುಮಕ್ಕಳು ಕಂಡುಕೊಂಡ ಸತ್ಯ. ಇದನ್ನು ಇನ್ನೊಂದು ಆಯಾಮದಿಂದ ಸ್ಪಷ್ಟಪಡಿಸುವುದಾದರೆ, ಹೆಚ್ಚಿನ ಗಂಡಸರು ಅವರ ಹೆಂಡತಿಯರಿಗೆ ಹೆದರಿಕೊಂಡೇ ಜೀವಿಸುತ್ತಾರೆ. ಬದುಕು ಪಾರದರ್ಶಕವಾಗಿದ್ದಲ್ಲಿ, ಹೆದರಿಕೆಯ ಅಗತ್ಯವಿದೆಯೇ? ‘ಸಭ್ಯ’ ಗಂಡಸರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.
ಗಂಡಿನ ಆಮಿಷಗಳಿಗೆ ರಾಜಿಯಾಗುವ ಹೆಣ್ಣು ಮಕ್ಕಳು ತನ್ನತನ ಕಳೆದುಕೊಂಡಾದರೂ, ಪ್ರಾಪಂಚಿಕ ಯಶಸ್ಸು ಗಳಿಸಬಹುದು. ಆಮಿಷಗಳಿಗೆ ಬಲಿಯಾಗದೆ, ತನಗೆ ತಾನೇ ದಾರಿದೀಪವೆಂದು ಬದುಕುವ ಹೆಣ್ಣುಮಕ್ಕಳು ಸ್ವಾತಂತ್ರ್ಯಕ್ಕಾಗಿ ದಿನವೂ ಹೋರಾಡಬೇಕಾಗುತ್ತದೆ. ಸ್ವಾತಂತ್ರ್ಯ ಪಡೆಯುವ ಹೋರಾಟದ ದಾರಿಯಲ್ಲಿ ಕೆಲವೇ ಹೆಣ್ಣುಮಕ್ಕಳು ನಡೆಯುತ್ತಾರೆ. ಇದು, ಸಾಹಸಮಯ ಮತ್ತು ಒಂಟಿತನ ಮಾರ್ಗವಾದರೂ, ಹೆಣ್ಣನ್ನು ಆಂತರಿಕವಾಗಿ ಗಟ್ಟಿಗೊಳಿಸುವ ನಿಜಾರ್ಥದ ಸ್ವತಂತ್ರ ಮಾರ್ಗ.
ಸ್ವಾತಂತ್ರ್ಯ ಕಂಡುಕೊಂಡ ಹೆಣ್ಣುಮಕ್ಕಳು, ತಮ್ಮ ಸುತ್ತಲಿನ ಪ್ರಪಂಚದಲ್ಲಿ ಇನ್ನೂ ಧ್ವನಿಯಿಲ್ಲದೇ ಬದುಕುತ್ತಿರುವ ಹೆಣ್ಣುಮಕ್ಕಳಿಗೆ ಧ್ವನಿಯಾಗಬೇಕಾಗಿದೆ. ಈ ಮಾದರಿಯಲ್ಲಿ, ತನ್ನ ದೇಹವನ್ನು ಅನುಮತಿಯಿಲ್ಲದೆ ಸ್ಪರ್ಶಿಸುವ ಗಂಡನ್ನು ಸಾರ್ವಜನಿಕವಾಗಿ ಛೀಮಾರಿ ಹಾಕುವುದು, ಶಿಕ್ಷೆಗೆ ಗುರಿಪಡಿಸುವ ದಿಟ್ಟತನ ತೋರುವುದು, ದೇಶ ವ್ಯಾಪಿ ಮಹಿಳಾ ಸ್ವಾತಂತ್ರ್ಯ ಚಳವಳಿಯಾಗಿ ರೂಪುಗೊಳ್ಳಬೇಕಾಗಿದೆ. ಮಹಿಳಾ ಸ್ವಾತಂತ್ರ್ಯವೆಂದರೆ, ಪ್ರೇರಣಾತ್ಮಕ ಜೀವನಶೈಲಿ ಬೆಳೆಸಿಕೊಳ್ಳದ ಗಂಡಿನ
ದುರಭ್ಯಾಸಗಳನ್ನು ತಾನೂ ಮೈಗೊಡಿಸಿಕೊಳ್ಳುವುದಲ್ಲ; ತನ್ನ ಶಕ್ತಿಯನ್ನು ಅರಿತುಕೊಂಡು ಧೈರ್ಯವಾಗಿ ಬದುಕು ಕಟ್ಟಿಕೊಳ್ಳುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.