ದೇಶದಲ್ಲಿ ಮಹಿಳೆಯರು ಭಿನ್ನ ವಲಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಕುಟುಂಬಗಳ ಮಟ್ಟದಲ್ಲಿ ಯಾವ ವೇತನವೂ ಇಲ್ಲದೆ ಹಲವು ಹೊಣೆಗಾರಿಕೆಗಳನ್ನು ನಿಭಾಯಿಸುತ್ತಿದ್ದಾರೆ. ಸಮಾಜದ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಅವರ ಪಾಲು ಗಣನೀಯ. ಆದರೆ ಮಹಿಳೆಯರನ್ನು ಗುರಿಯಾಗಿಸಿಕೊಂಡು ನಡೆಯುವ ದೌರ್ಜನ್ಯ, ಹಿಂಸೆಯು ಅವರ ಬೆಳವಣಿಗೆಗೆ ಗಂಭೀರ ಅಡ್ಡಿ.
ಮಹಿಳೆಯರು ವ್ಯವಸ್ಥಿತವಾದ ತಾರತಮ್ಯವನ್ನು ಬದುಕಿನ ಪ್ರತಿ ಹಂತದಲ್ಲಿಯೂ ಎದುರಿಸುತ್ತಿದ್ದಾರೆ. ಭೌತಿಕವಾದ ಯಾವ ಗಡಿಗಳ ಹಂಗೂ ಇಲ್ಲದ ಈ ಜಾಗತಿಕ ಪಿಡುಗಿಗೆ ಎಲ್ಲ ವಯೋಮಾನದವರು, ಸಾಮಾಜಿಕ-ಆರ್ಥಿಕ ಹಿನ್ನೆಲೆಯವರು, ಧರ್ಮಗಳವರು, ಶೈಕ್ಷಣಿಕ ಹಿನ್ನೆಲೆಯವರು ತುತ್ತಾಗುತ್ತಿದ್ದಾರೆ. ಮಹಿಳೆಯರು ಅನುಭವಿಸುವ ಕಿರುಕುಳಗಳ ಪೈಕಿ ಪ್ರಮುಖವಾದುದು ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ. ಇದರ ಕಾರಣದಿಂದಾಗಿ ಹಲವು ಮಹಿಳೆಯರು ಉದ್ಯೋಗ ಅರಸಲು ಕೂಡ ಮುಂದಾಗುವುದಿಲ್ಲ. ಭಾರತದಲ್ಲಿ ದುಡಿಯುವ ಜನರಲ್ಲಿ ಮಹಿಳೆಯರ ಪಾಲು (ಎಲ್‌ಎಫ್‌ಪಿಆರ್) ಕಡಿಮೆ ಇರುವುದಕ್ಕೆ ಇದೂ ಒಂದು ಕಾರಣವಾಗಿರಬಹುದು. 2022-23ರಲ್ಲಿ ಇದು ಭಾರತದಲ್ಲಿ ಶೇಕಡ 37ರಷ್ಟು ಮಾತ್ರವೇ ಇತ್ತು.
ಕೆಲಸದ ಸ್ಥಳಗಳಲ್ಲಿನ ಕಿರುಕುಳವು ಹಲವು ರೂಪಗಳಲ್ಲಿ ಇರಬಹುದು. ಮಾತಿನ ಮೂಲಕ, ಲೈಂಗಿಕವಾಗಿ ಅಥವಾ ಸಂಜ್ಞೆಗಳ ಮೂಲಕ ಅದು ನಡೆಯಬಹುದು. ಲೈಂಗಿಕ ಕಿರುಕುಳ ಮಾತ್ರವೇ ಅಲ್ಲದೆ, ನಿಂದಿಸುವಿಕೆ, ಕೆಲಸದ ಅವಧಿಯನ್ನು ಇದ್ದಕ್ಕಿದ್ದಂತೆ ಯಾವುದೇ ಸಮಾಲೋಚನೆ ಇಲ್ಲದೆ ಹೆಚ್ಚಿಸುವುದು, ಮಾನಸಿಕವಾಗಿ ದೌರ್ಜನ್ಯಕ್ಕೆ ಗುರಿಪಡಿಸುವುದು ಕೂಡ ಕೆಲಸದ ಸ್ಥಳಗಳಲ್ಲಿ ನಡೆಯಬಹುದು. ಮಹಿಳಾ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಅಸಭ್ಯವಾದ ಸಂದೇಶ ರವಾನಿಸುವುದು, ಅಸಭ್ಯ ಚಿತ್ರಗಳನ್ನು ಕಳುಹಿಸುವುದು ಕೂಡ ನಡೆಯುತ್ತವೆ. ಇಂತಹ ಕಿರುಕುಳಗಳು ಮಹಿಳಾ ಉದ್ಯೋಗಿಗಳನ್ನು ಖಿನ್ನತೆಗೆ ನೂಕುತ್ತವೆ, ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಅತಿಯಾದ ಅವಮಾನಕ್ಕೆ ಗುರಿಯಾದ ಕೆಲವರು ಆತ್ಮಹತ್ಯೆಗೂ ಮುಂದಾಗಬಹುದು.
ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯು ಕಣ್ಣಿಗೆ ರಾಚುವಂತೆ ಇರುತ್ತದೆ. ಇದು ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯೂ ಹೌದು. ಈ ಕೃತ್ಯಗಳು ಸಮಾನತೆ, ಜೀವಿಸುವ ಸ್ವಾತಂತ್ರ್ಯದ ಉಲ್ಲಂಘನೆ. ವಿಶಾಖಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ‘ಲಿಂಗ ಸಮಾನತೆಯು ಘನತೆಯಿಂದ ಕೆಲಸ ಮಾಡುವುದು, ಲೈಂಗಿಕ ಕಿರುಕುಳದಿಂದ ರಕ್ಷಣೆ ಪಡೆಯುವುದನ್ನು ಒಳಗೊಂಡಿದೆ. ಇದು ಎಲ್ಲೆಡೆ ಗುರುತಿಸಲಾಗಿರುವ ಮೂಲಭೂತವಾದ ಮಾನವ ಹಕ್ಕು’ ಎಂದು ಹೇಳಿದೆ. ಅದೇ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಮಾರ್ಗಸೂಚಿಗಳು ‘ವಿಶಾಖಾ ಮಾರ್ಗಸೂಚಿಗಳು’ ಎಂದೇ ಜನಪ್ರಿಯವಾಗಿವೆ. ಮಹಿಳಾ ಉದ್ಯೋಗಿಗಳ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಲು ಎಲ್ಲ ಉದ್ಯೋಗದಾತರು ಈ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯ. ಈ ಮಾರ್ಗಸೂಚಿಗಳೇ ಮುಂದೆ ‘ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ’ ರೂಪುಗೊಳ್ಳಲು ಅಡಿಪಾಯವಾಗಿ ಒದಗಿಬಂದವು.
ಈ ಕಾಯ್ದೆಯು ಮಹಿಳೆಯರಿಗೆ ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳದಿಂದ ರಕ್ಷಣೆ ನೀಡುವ ಉದ್ದೇಶ ಹೊಂದಿದೆ. ಈ ಕಾಯ್ದೆಯ ಪ್ರಕಾರ ನೌಕರದಾತರು, ಕೆಲಸದ ಸ್ಥಳವು ಮಹಿಳೆಯರ ಪಾಲಿಗೆ ಸುರಕ್ಷಿತ ಆಗಿರುವುದನ್ನು ಖಾತರಿಪಡಿಸಬೇಕು. ಲೈಂಗಿಕ ಕಿರುಕುಳದ ದೂರುಗಳ ಬಗ್ಗೆ ಪರಿಶೀಲನೆ ನಡೆಸಲು ಆಂತರಿಕ ದೂರು ಸಮಿತಿಯನ್ನು ರಚಿಸಬೇಕು. ಲೈಂಗಿಕ ಕಿರುಕುಳದ ಪ್ರಕರಣಗಳನ್ನು ತಡೆಯಲು ಕೆಲಸದ ಸ್ಥಳದಲ್ಲಿ ಲಭ್ಯವಿರುವ ವ್ಯವಸ್ಥೆಯ ಬಗ್ಗೆ ಕೆಲಸಗಾರರಿಗೆ ಮಾಹಿತಿ ನೀಡಲು ಅವರು ಕಾರ್ಯಾಗಾರ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಬೇಕು. ಭಾರತೀಯ ನ್ಯಾಯ ಸಂಹಿತೆ ಅಥವಾ ಜಾರಿಯಲ್ಲಿರುವ ಬೇರೆ ಯಾವುದೇ ಕಾನೂನಿನ ಅಡಿಯಲ್ಲಿ ಮಹಿಳೆಯು ದೂರು ನೀಡಲು ಮುಂದಾದರೆ ಅದಕ್ಕೆ ಅಗತ್ಯ ನೆರವು ಒದಗಿಸಬೇಕು.
ಕಿರುಕುಳ ನೀಡಿದ ವ್ಯಕ್ತಿಯು ನೌಕರ ಅಲ್ಲದಿದ್ದರೆ, ಆತ ಯಾವ ಕೆಲಸದ ಸ್ಥಳದಲ್ಲಿ ಕಿರುಕುಳ ನೀಡಿದ್ದನೋ ಅಲ್ಲಿ ಆತನ ವಿರುದ್ಧ ಕ್ರಮ ಜರುಗಿಸುವುದಕ್ಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಲೈಂಗಿಕ ಕಿರುಕುಳ ನೀಡುವುದನ್ನು ತನ್ನ ಸೇವಾ ನಿಯಮಗಳ ಪ್ರಕಾರ ದುರ್ನಡತೆ ಎಂದು ಪರಿಗಣಿಸಬೇಕು, ಇಂತಹ ದುರ್ನಡತೆ ತೋರಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕಾಯ್ದೆಯಲ್ಲಿ ಹೇಳಲಾಗಿದೆ.
ಈ ಕಾಯ್ದೆಯು ಕೆಲಸದ ಸ್ಥಳಗಳಲ್ಲಿ ಮಹಿಳೆಯರು ಲೈಂಗಿಕ ಹಾಗೂ ಇತರ ಬಗೆಯ ಕಿರುಕುಳಗಳಿಗೆ ಗುರಿಯಾಗುವುದನ್ನು ತಡೆಯುವ ವ್ಯವಸ್ಥೆಯನ್ನು ರೂಪಿಸಿದ್ದರೂ, ಹಲವು ಸಂದರ್ಭಗಳಲ್ಲಿ ಮಹಿಳೆಯರು ತಮಗಾದ ಕಿರುಕುಳವನ್ನು ದೂರಿನ ರೂಪದಲ್ಲಿ ಹೇಳಲು ಮುಂದೆ ಬರುವುದೇ ಇಲ್ಲ. ನೌಕರಿ ನೀಡಿದವರು ಅಥವಾ ಸಹೋದ್ಯೋಗಿಗಳು ತಮ್ಮನ್ನು ಗುರಿಯಾಗಿಸಿಕೊಂಡು ಪ್ರತೀಕಾರಕ್ಕೆ ಮುಂದಾಗಬಹುದು ಎಂಬ ಭೀತಿಯಿಂದಾಗಿ ಮಹಿಳೆಯರಲ್ಲಿ ಹಲವರು ದೂರು ನೀಡಲು ಮುಂದಾಗುವುದಿಲ್ಲ. ನಾಚಿಕೆಯಂತಹ ಕೆಲವು ಮನಃಶಾಸ್ತ್ರೀಯ ಅಂಶಗಳು ಕೂಡ ದೂರು ನೀಡುವುದಕ್ಕೆ ಅಡ್ಡಿಯಾಗಿ ನಿಲ್ಲುತ್ತವೆ.
ಮಹಿಳಾ ನೌಕರರಲ್ಲಿ ಸುರಕ್ಷತೆಯ ಭಾವನೆಯನ್ನು ಮೂಡಿಸಲು ನೌಕರದಾತರು ಹಾಗೂ ಎಲ್ಲ ನೌಕರರಲ್ಲಿ ಅರಿವು ಮೂಡಿಸುವ ಅಗತ್ಯ ಇದೆ. ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸುರಕ್ಷತೆಯನ್ನು ಖಾತರಿಪಡಿಸುವುದರಿಂದ ಆಗುವ ಆರ್ಥಿಕ ಪ್ರಯೋಜನಗಳು ಕೂಡ ಹಲವು ಇವೆ. ಮಹಿಳಾ ನೌಕರರ ಕೆಲಸದ ಗುಣಮಟ್ಟವು ಇದರಿಂದಾಗಿ ಹೆಚ್ಚುತ್ತದೆ, ಅವರು ಕೆಲಸ ತೊರೆಯುವ ಪ್ರಮಾಣವು ಹಾಗೂ ರಜೆ ಪಡೆದುಕೊಳ್ಳುವ ಪ್ರಮಾಣವು ಕಡಿಮೆ ಆಗುತ್ತದೆ, ಮಹಿಳಾ ನೌಕರರು ಸೇರಿದಂತೆ ಎಲ್ಲ ವರ್ಗಗಳ ನೌಕರರಲ್ಲಿ ಆತ್ಮವಿಶ್ವಾಸವು ಹೆಚ್ಚಾಗುತ್ತದೆ. ಈ ಉದ್ದೇಶಗಳು ಈಡೇರಬೇಕು ಎಂದಾದರೆ ಈ ಕೆಳಗಿನ ಕೆಲವು ಕ್ರಮಗಳನ್ನು ಕೈಗೊಳ್ಳಬೇಕು.
ಕೆಲಸಕ್ಕೆ ಸೇರಿಸಿಕೊಳ್ಳುವ ಸಂದರ್ಭದಲ್ಲಿಯೇ ಎಲ್ಲ ಮಹಿಳಾ ನೌಕರರಿಗೆ ತಮ್ಮ ಹಕ್ಕುಗಳ ಬಗ್ಗೆ, ದೊರೆಯುವ ಸೌಲಭ್ಯಗಳ ಬಗ್ಗೆ ಹಾಗೂ ಲೈಂಗಿಕ ಕಿರುಕುಳದ ವಿರುದ್ಧ ತಾವು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಮಾಹಿತಿ ಒದಗಿಸಬೇಕು. ಕೆಲಸದ ಸ್ಥಳದಲ್ಲಿ ನೌಕರರು ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು, ಅದರಲ್ಲೂ ಮುಖ್ಯವಾಗಿ ಮಹಿಳೆಯರೊಂದಿಗೆ ನಡತೆ ಹೇಗಿರಬೇಕು ಎಂಬುದನ್ನು ಸ್ಪಷ್ಟವಾಗಿ ವಿವರಿಸುವ ನೀತಿ ಸಂಹಿತೆಯೊಂದನ್ನು ರೂಪಿಸಬೇಕು. ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳಾ ನೌಕರರು ದೂರು ನೀಡಿದಲ್ಲಿ, ಅದನ್ನು ತ್ವರಿತವಾಗಿ ಇತ್ಯರ್ಥಪಡಿಸಲಾಗುತ್ತದೆ, ದೂರನ್ನು ಗೋಪ್ಯವಾಗಿ ಇರಿಸಲಾಗುತ್ತದೆ ಹಾಗೂ ಪ್ರತೀಕಾರದ ಕ್ರಮ ಕೈಗೊಳ್ಳುವುದಿಲ್ಲ ಎಂಬ ಭರವಸೆ ಒದಗಿಸಬೇಕು.
ಲೈಂಗಿಕ ಕಿರುಕುಳದ ಪ್ರಕರಣಗಳಲ್ಲಿ, ಲಿಂಗ ತಾರತಮ್ಯದ ಪ್ರಕರಣಗಳಲ್ಲಿ ಕಂಪನಿಯು ಯಾವ ನೀತಿಯನ್ನು ಅನುಸರಿಸುತ್ತದೆ, ದೂರು ನೀಡುವ ಪ್ರಕ್ರಿಯೆ ಹೇಗಿರುತ್ತದೆ ಎಂಬ ಬಗ್ಗೆ ಮಾಹಿತಿ ಒದಗಿಸಬೇಕು. ಲೈಂಗಿಕ ಕಿರುಕುಳ ಅಥವಾ ಲಿಂಗ ತಾರತಮ್ಯದ ಕುರಿತು ದೂರು ಬಂದಾಗ ಅದನ್ನು ನಿರ್ವಹಿಸುವುದು ಹೇಗೆ ಎಂಬ ಬಗ್ಗೆ ಮೇಲ್ವಿಚಾರಕರಿಗೆ ಮತ್ತು ಇತರ ಸಿಬ್ಬಂದಿಗೆ ತರಬೇತಿ ನೀಡಬೇಕು. ಹಿಂಸೆ ಹಾಗೂ ದೌರ್ಜನ್ಯದಿಂದ ಪಾರಾಗಲು ಮಹಿಳಾ ನೌಕರರಿಗೆ ಆತ್ಮರಕ್ಷಣೆಯ ಕಲೆಗಳನ್ನು ಕಲಿಸಬಹುದು. ಮಹಿಳೆಯರಿಗೆ ಅವರು ಕೆಲಸ ಮಾಡುವ ಸ್ಥಳಕ್ಕೆ ಹತ್ತಿರದಲ್ಲಿ ಪ್ರತ್ಯೇಕವಾದ ಶೌಚಾಲಯದ ವ್ಯವಸ್ಥೆ ಇರಬೇಕು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಕಂಪನಿಯ ಕಡೆಯಿಂದ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು.
ಮಹಿಳಾ ನೌಕರರ ಸುರಕ್ಷತೆಯನ್ನು ಹೆಚ್ಚಿಸಲು ಕೆಲವು ಕಂಪನಿಗಳು ಉತ್ತಮ ವ್ಯವಸ್ಥೆ ರೂಪಿಸಿವೆ. ಯೂನಿಸೆಫ್ ಜೊತೆಗೂಡಿ ಕರ್ನಾಟಕದ ಪೊಲೀಸರು ರೂಪಿಸಿರುವ ‘ಲಿಂಗತ್ವ ಸೂಕ್ಷ್ಮತೆ ಹಾಗೂ ಜನಸ್ನೇಹಿ ಪೊಲೀಸ್’ ಯೋಜನೆಯು ನೆರವಿನ ಅಗತ್ಯದಲ್ಲಿ ಇರುವ ಮಹಿಳೆಯರಿಗೆ ಸ್ಪಂದಿಸುವ, ಅವರ ವಿಚಾರದಲ್ಲಿ ಸೂಕ್ಷ್ಮವಾಗಿ ವರ್ತಿಸುವ ಪೊಲೀಸ್ ಪಡೆಯನ್ನು ಕಟ್ಟುವ ಉದ್ದೇಶ ಹೊಂದಿದೆ. ಅದೇ ರೀತಿಯಲ್ಲಿ, ಔದ್ಯಮಿಕ ಸಂಘಟನೆಗಳಾದ ‘ಫಿಕ್ಕಿ’ ಮತ್ತು ‘ನಾಸ್ಕಾಂ’ ಉದ್ಯೋಗದಾತರಿಗೆ ಮಾರ್ಗದರ್ಶಿ ಕೈಪಿಡಿ ರೂಪಿಸಿವೆ. ಕಾನೂನು ಜಾರಿ ಸಂಸ್ಥೆಗಳು ಹಾಗೂ ಸಂಘಟನೆಗಳು ಮಾತ್ರವಲ್ಲದೆ, ಈ ವಿಷಯದಲ್ಲಿ ಸರ್ಕಾರೇತರ ಸಂಘಟನೆಗಳು ಕೂಡ ಮಹತ್ವದ ಪಾತ್ರವನ್ನು ವಹಿಸಲು ಅವಕಾಶ ಇದೆ. ಕೆಲಸದ ಸ್ಥಳಗಳಲ್ಲಿ ಲಿಂಗ ಸಮಾನತೆಯನ್ನು ತರಲು ಕಾನೂನಿಗೆ ಅನುಗುಣವಾಗಿ ಕೆಲವು ಸುರಕ್ಷತಾ ಕ್ರಮಗಳನ್ನು ರೂಪಿಸಲು ಎನ್‌ಜಿಒಗಳು ಕಂಪನಿಗಳಿಗೆ ತರಬೇತಿ ಒದಗಿಸಬಹುದು.
ಆರ್ಥಿಕ ಬೆಳವಣಿಗೆ ಹಾಗೂ ಜಾಗತಿಕ ನಾಯಕತ್ವವನ್ನು ಭಾರತವು ಬಯಸುತ್ತಿರುವ ಈ ಹೊತ್ತಿನಲ್ಲಿ, ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯನ್ನು ಆದ್ಯತೆಯ ವಿಷಯವನ್ನಾಗಿ ಎತ್ತಿಕೊಳ್ಳುವುದು ನೈತಿಕ ಅನಿವಾರ್ಯ ಮಾತ್ರವೇ ಅಲ್ಲ; ಅದು ಮಹತ್ವಪೂರ್ಣವಾದ ಒಂದು ಅಗತ್ಯ ಕ್ರಮವೂ ಹೌದು. ಮಹಿಳೆಯರಿಗೆ ಕೆಲಸದ ಸ್ಥಳವು ಸುರಕ್ಷಿತ ಅನ್ನಿಸಿದರೆ ಉತ್ಪಾದಕತೆ ಹೆಚ್ಚಾಗುತ್ತದೆ, ಹೊಸತನಕ್ಕೆ ಇಂಬು ಸಿಗುತ್ತದೆ, ಸಾಮಾಜಿಕ ಪ್ರಗತಿ ಸಾಧ್ಯವಾಗುತ್ತದೆ. ಇದರಿಂದ ಇಡೀ ದೇಶಕ್ಕೆ ಒಳಿತಾಗುತ್ತದೆ.
ಲೇಖಕ: ಪೊಲೀಸ್ ಮಹಾನಿರ್ದೇಶಕ, ಸಿ.ಐ.ಡಿ. ಮತ್ತು ಆರ್ಥಿಕ ಅಪರಾಧಗಳು, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.