ADVERTISEMENT

ವಿಶ್ಲೇಷಣೆ: ‘ಮತಾಂತರ ನಿಷೇಧ’ ರದ್ದಾದೀತೆ?

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 23:30 IST
Last Updated 23 ಫೆಬ್ರುವರಿ 2026, 23:30 IST
   
ಮತಾಂತರವನ್ನು ವಿರೋಧಿಸುವ ಕಾನೂನುಗಳ ಸಿಂಧುತ್ವದ ಪ್ರಶ್ನೆ ಸುಪ್ರೀಂ ಕೋರ್ಟ್‌ ಮೂಲಕ ಮತ್ತೆ ಮುನ್ನೆಲೆಗೆ ಬಂದಿದೆ. ಸಂವಿಧಾನ ಕೊಡ ಮಾಡಿರುವ ಧಾರ್ಮಿಕ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿರುವ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಗೊಳಿಸಬೇಕೆನ್ನುವ ಆಗ್ರಹ ರಾಜ್ಯದಲ್ಲೂ ಬಲಗೊಳ್ಳುತ್ತಿದೆ. ಈ ಕಾಯ್ದೆಯನ್ನು ರಾಜ್ಯ ಸರ್ಕಾರ ರದ್ದು‍ಪಡಿಸೀತೆ?

ಗ್ರೇಟರ್ ಬೆಂಗಳೂರಿನ ಚುನಾವಣೆಗಳು ಮುಂಬರುತ್ತಿವೆ. ಇದೇ ಸನ್ನಿವೇಶದಲ್ಲಿ ‘ಮತಾಂತರ ನಿಷೇಧ ಕಾಯ್ದೆ’ಯನ್ನು ರದ್ದುಗೊಳಿಸ ಬೇಕೆ? ಬೇಡವೆ? ತಿದ್ದುಪಡಿ ಮಾಡಿದರೆ ಸಾಕೆ? ಎಂಬ ಚರ್ಚೆಗಳು ಆರಂಭವಾಗಿವೆ. ಫೆಬ್ರುವರಿ 3ರಂದು ಸುಪ್ರೀಂ ಕೋರ್ಟ್‌, ಮತಾಂತರ ವಿರೋಧಿ ಕಾನೂನುಗಳ ಸಿಂಧುತ್ವ ಪ್ರಶ್ನಿಸಿ ಭಾರತದ ರಾಷ್ಟ್ರೀಯ ಚರ್ಚ್‌ಗಳ ಮಂಡಳಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದೆ. ಕೇಂದ್ರ ಸರ್ಕಾರ ಮತ್ತು 12 ರಾಜ್ಯಗಳಿಗೆ ನೋಟಿಸ್ ನೀಡಿದೆ. ಈ ರಾಜ್ಯಗಳಲ್ಲಿರುವ ಮತಾಂತರ ವಿರೋಧಿ ಕಾನೂನುಗಳನ್ನು ಅನುಷ್ಠಾನ ಗೊಳಿಸುವುದಕ್ಕೆ ರಾಷ್ಟ್ರೀಯ ಚರ್ಚ್‌ಗಳ ಮಂಡಳಿ (ಎನ್‌ಸಿಐಸಿ) ತಡೆ ನೀಡುವಂತೆ ಕೋರಿದೆ. ಎನ್‌ಸಿಐಸಿ ಸಲ್ಲಿಸಿರುವ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಲ್ಯ ಬಾಗ್ಚಿ ಅವರನ್ನು ಒಳಗೊಂಡ ನ್ಯಾಯಪೀಠ ವಿಚಾರಣೆ ನಡೆಸುತ್ತಿದ್ದು, ಮುಂದಿನ ನಾಲ್ಕು ವಾರಗಳಲ್ಲಿ ಕೇಂದ್ರ ಮತ್ತು 12 ರಾಜ್ಯ ಸರ್ಕಾರಗಳು ತಮ್ಮ ಪ್ರತಿಕ್ರಿಯೆ ನೀಡಬೇಕು ಎಂದು ಆದೇಶಿಸಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ, ಅದರಲ್ಲೂ ಪ್ರಮುಖವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ದಿನದಿಂದಲೂ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಗೊಳಿಸುತ್ತೇವೆ ಎಂದು ಸತತವಾಗಿ ಹೇಳುತ್ತಲೇ ಬಂದಿದ್ದಾರೆ. ಸರ್ಕಾರ ರಚನೆಯಾಗಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಯಾಗಿ ಈಗಾಗಲೇ ಸಾವಿರ ದಿನಗಳು ಪೂರೈಸಿದವು. ಅದರ ವಿಜೃಂಭಣೆಯೂ ಮುಗಿಯಿತು. ಆದರೆ,ಮತಾಂತರ ನಿಷೇಧ ಕಾಯ್ದೆ ಮಾತ್ರ ನಿಷೇಧವಾಗ ಲಿಲ್ಲ. ಈ ಕುರಿತು ಕ್ರೈಸ್ತ ಸಮುದಾಯ ಕಳೆದ ಮೂರು ವರ್ಷಗಳಿಂದಲೂ ಸರ್ಕಾರದ ಮೇಲೆ ಒತ್ತಡ ತರುತ್ತಿದೆ. ಸರ್ಕಾರ ಸ್ಪಂದಿಸುತ್ತಿಲ್ಲ ಎಂಬ ಆರೋಪ ವನ್ನು ಸಮುದಾಯ ಮಾಡುತ್ತಿದೆ.

ಕರ್ನಾಟಕದಲ್ಲಿ ಕ್ರೈಸ್ತ ಸಮುದಾಯದ ಜನಸಂಖ್ಯೆ 2011ರ ಜನಗಣತಿಯ ಪ್ರಕಾರ 11.43 ಲಕ್ಷ. ಬೆಂಗಳೂರಿನಲ್ಲಿಯೇ 5,04,863 ಕ್ರಿಶ್ಚಿಯನ್ನರು ಇದ್ದಾರೆ. ಸದ್ಯದಲ್ಲೇ ನಡೆಯಲಿರುವ ಗ್ರೇಟರ್ ಬೆಂಗಳೂರು ಚುನಾವಣೆಗೆ ಕ್ರೈಸ್ತರ ಮತಗಳು, ‘ಸೆಕ್ಯುಲರ್’ ಕಾಂಗ್ರೆಸ್ಸಿಗೆ ಅತ್ಯವಶ್ಯಕ. ಆದರೂ ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಲು ಕಾಂಗ್ರೆಸ್‌ ಯಾಕೋ ಹಿಂಜರಿಯುತ್ತಿರುವಂತೆ ಕಾಣಿಸುತ್ತಿದೆ. ಬಿಜೆಪಿಯಂತೂ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಬೇಕೆಂದು ವಾದಿಸುತ್ತಿದೆ. ಕಾಂಗ್ರೆಸ್‌ ಧರ್ಮಸಂಕಟ ಅನುಭವಿಸುತ್ತಿರುವಂತಿದೆ. ಕಾಯ್ದೆ ಯನ್ನು ರದ್ದುಪಡಿಸಿದರೆ ಕ್ರೈಸ್ತ ಸಮುದಾಯದ ಮತಗಳೇನೋ ಕಾಂಗ್ರೆಸ್ಸಿಗೆ ಸಿಗುತ್ತವೆ. ಆದರೆ, ಕಾಯ್ದೆಯನ್ನು ರದ್ದು ಪಡಿಸಿದ್ದನ್ನು ಬಿಜೆಪಿ ರಾಜಕೀಯ ದಾಳವಾಗಿ ಬಳಸಿಕೊಂಡು ಹಿಂದೂ ಮತದಾರರನ್ನು ಓಲೈಸಲು ತಾನೇ ದಾರಿಮಾಡಿಕೊಟ್ಟಂತಾಗುತ್ತದೆ.

ADVERTISEMENT

ಕ್ರೈಸ್ತ ಸಮುದಾಯ ಯಾವುದೇ ಸಂದರ್ಭದಲ್ಲಿ ಕಾಂಗ್ರೆಸ್‌ನ ಕೈಬಿಡುವುದಿಲ್ಲ ಎಂಬ ತಲೆಮಾರುಗಳ ನಂಬಿಕೆ ಈಗ ಕಾಂಗ್ರೆಸ್ ವಲಯದಲ್ಲಿ ಕಡಿಮೆಯಾಗುತ್ತಿದೆ. ಕ್ರೈಸ್ತ ಸಮುದಾಯ ನಿಧಾನವಾಗಿ ರಾಜಕೀಯವಾಗಿ ಜಾಗೃತವಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ದಕ್ಷಿಣ ಕನ್ನಡ ಸೇರಿದಂತೆ ಕೆಲವು ಭಾಗಗಳಲ್ಲಿನ ಸ್ಥಳೀಯ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ವಿರುದ್ಧವಾಗಿ ಕ್ರಿಶ್ಚಿಯನ್ ಮತದಾರರು ನಿಂತಿರುವುದನ್ನು ಗಮನಿಸಬಹುದು. ಇದರೊಂದಿಗೆ, ಸದರಿ ಕಾಯ್ದೆಯನ್ನು ರದ್ದು ಪಡಿಸಬೇಕೆಂದು ಕ್ರೈಸ್ತ ಸಮುದಾಯ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಬೃಹತ್ ಪ್ರತಿಭಟನಾ ರ‍್ಯಾಲಿಗೆ ಸಜ್ಜಾಗುತ್ತಿದೆ.

ಬಿಜೆಪಿ, ಆರ್‌ಎಸ್‌ಎಸ್‌, ಬಜರಂಗದಳದಂತಹ ಸಂಘ ಪರಿವಾರದವರ ಪ್ರಕಾರ, ಮತಾಂತರ ನಿಷೇಧದಂತಹ ಕಾನೂನುಗಳಿಂದ ಮತಾಂತರ ಮಾಡುವವರು ಬಲವಂತ, ಆಮಿಷ, ವಂಚನೆ, ಪ್ರಭಾವಗಳನ್ನು ಬಳಸಿ ಧರ್ಮಾಂತರ ಮಾಡುವ ಪ್ರಕ್ರಿಯೆಗೆ ತಡೆಯುಂಟಾಗುತ್ತದೆ. ಕಾನೂನನ್ನು ರದ್ದುಗೊಳಿಸಿದರೆ ಮತಾಂತರ ಮಾಡುವವರಿಗೆ ಯಾವುದೇ ತಡೆಯಿಲ್ಲದೆ ಮತಾಂತರ ನಡೆಸಲು ಅನುಕೂಲವಾಗುತ್ತದೆ. ಕಾಯ್ದೆಯ ರದ್ದತಿ ಬಲವಂತದ ಮತಾಂತರಗಳನ್ನು ಸುಗಮಗೊಳಿಸುತ್ತದೆ.

ಭಾರತದಲ್ಲಿ ಧಾರ್ಮಿಕ ಮತಾಂತರವನ್ನು ನಿಯಂತ್ರಿಸುವ ಕಲ್ಪನೆಯು ಬಹಳ ಹಿಂದಿನದು. 1930 ಮತ್ತು 1940ರ ದಶಕಗಳಲ್ಲಿ, ಹಲವಾರು ರಾಜಪ್ರಭುತ್ವಗಳು, ಮಿಷನರಿಗಳಿಂದಾಗುವ ದುರುಪಯೋಗಗಳನ್ನು ತಡೆಯಲು, ಧಾರ್ಮಿಕ ಮತಾಂತರವನ್ನು ನಿರ್ಬಂಧಿಸುವ ಕಾನೂನುಗಳನ್ನು ಜಾರಿಗೆ ತಂದವು. ವಸಾಹತುಶಾಹಿ ಯುಗದ ಆ ಕಾನೂನುಗಳು ಸ್ಥಳೀಯವಾಗಿದ್ದವು; ವ್ಯಾಪ್ತಿ ಮತ್ತು ಜಾರಿಯಲ್ಲಿ ಅವು ಕಟ್ಟುನಿಟ್ಟಿನವಾಗಿದ್ದವು, ಸ್ವಾತಂತ್ರ್ಯಾನಂತರದಲ್ಲಿ ಭಾರತೀಯ ಸಂವಿಧಾನವು ವಿಧಿ 25ರ ಅಡಿಯಲ್ಲಿ ಧರ್ಮವನ್ನು ಮುಕ್ತವಾಗಿ ಪ್ರತಿಪಾದಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ಪ್ರತಿಪಾದಿಸಿತು. ಇದರ ಹೊರತಾಗಿಯೂ, ವಸಾಹತುಶಾಹಿ ನಂತರದ ಭಾರತದಲ್ಲಿ ಹಲವಾರು ರಾಜ್ಯ ಸರ್ಕಾರಗಳು ಧಾರ್ಮಿಕ ಮತಾಂತರಗಳನ್ನು ನಿಯಂತ್ರಿಸಲು ಕಾನೂನುಗಳನ್ನು ಜಾರಿಗೆ ತರಲು ಮುಂದಾದವು. ಆ ಸಂದರ್ಭದಲ್ಲಿ, ಮತಾಂತರದ ಕುರಿತ ಉದ್ವಿಗ್ನತೆಗಳು ರಾಜಕೀಯ ವಾಗಿ ಮತ್ತು ಸಾಮಾಜಿಕವಾಗಿ ಪ್ರಮುಖವಾಗಿದ್ದವು.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಯಿತು. ಅಂದಿನಿಂದ ಕ್ರೈಸ್ತ ಸಮುದಾಯದ ಮೇಲೆ ಮತಾಂತರದ ಕಾರಣ ನೀಡಿ ಅನೇಕ ದೌರ್ಜನ್ಯಗಳು ನಡೆದಿವೆ. ಅಮಾಯಕ ಕ್ರೈಸ್ತರು ಬಲಿಪಶುಗಳಾಗಿದ್ದಾರೆ. ಏಕೆಂದರೆ, ಈಗ ಜಾರಿಯಲ್ಲಿ ರುವ ಕಾಯ್ದೆಯಲ್ಲಿ ಪುರಾವೆಯ ಹೊರೆಯನ್ನು ಹೊರಬೇಕಾದುದು ಆಪಾದಿತನೇ ಹೊರತು ದೂರುದಾರನಲ್ಲ. ದೂರುದಾರ ದೂರು ಕೊಟ್ಟು ಹೋದರೆ ಸಾಕು, ಆಪಾದಿತ ತಾನು ತಪ್ಪು ಮಾಡಿಲ್ಲವೆಂದು ಸಾಬೀತು ಮಾಡಬೇಕು! ಸದ್ಯಕ್ಕೆ ಲಭ್ಯ ಮಾಹಿತಿಯ ಪ್ರಕಾರ, ಈ ಕಾಯ್ದೆ ಜಾರಿಗೆ ಬಂದ ನಂತರ ಮತಾಂತರದ ಆಪಾದನೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 13 ಪ್ರಕರಣಗಳು ದಾಖಲಾಗಿವೆ. ಪ್ರಾರ್ಥನಾ ಸ್ಥಳಗಳ ಮೇಲೆ ದಾಳಿಯಾಗಿರುವ 11 ಪ್ರಕರಣಗಳು, ಮಹಿಳೆಯರ ಮೇಲೆ ದೌರ್ಜನ್ಯದ ವಿಷಯದಲ್ಲಿ 9 ಪ್ರಕರಣಗಳು ದಾಖಲಾಗಿವೆ. ಸದರಿ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಯಲ್ಲಿರುವ ಉತ್ತರ ಪ್ರದೇಶದಲ್ಲಿ ಕ್ರೈಸ್ತ ಸಮುದಾಯ ಅನುಭವಿಸುತ್ತಿರುವ ಯಾತನೆ ಮತ್ತಷ್ಟು ದೊಡ್ಡದು.

ಕ್ರೈಸ್ತ ಸಮುದಾಯದ ನಾಯಕರಷ್ಟೇ ಅಲ್ಲ, ಮಾನವಹಕ್ಕುಗಳ ಅನೇಕ ಪ್ರತಿಪಾದಕರು, ಸಾಮಾಜಿಕ ಕಳಕಳಿಯ ಕಾನೂನು ತಜ್ಞರು, ಸಾಮಾಜಿಕ ನ್ಯಾಯದ ಹೋರಾಟಗಾರರು ಪ್ರತಿಪಾದಿಸುವಂತೆ, ಮತಾಂತರ ನಿಷೇಧದ ಕಾನೂನುಗಳು ಧಾರ್ಮಿಕ ಸ್ವಾತಂತ್ರ್ಯಕ್ಕೆ ಸ್ಪಷ್ಟವಾಗಿ ವಿರುದ್ಧವಾಗಿವೆ. ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸಲು ಇಂತಹ ಕಾಯ್ದೆಗಳ ದುರುಪ ಯೋಗ ಮಾಡಿಕೊಳ್ಳಲಾಗುತ್ತಿದೆ. ರಾಜ್ಯಗಳು ಈ ಕಾನೂನುಗಳನ್ನು ಬಲವಂತದ, ಮೋಸದ ಅಥವಾ ಪ್ರೋತ್ಸಾಹ ಆಧಾರಿತ ಮತಾಂತರಗಳನ್ನು ತಡೆಯುವ ಕ್ರಮಗಳ ನೆಪಗಳಾಗಿ ಸಮರ್ಥಿಸುತ್ತವೆ. ಆದರೆ, ಸದರಿ ಕಾನೂನುಗಳು ಅಲ್ಪಸಂಖ್ಯಾತರನ್ನು ಕಾನೂನಿನ ನೆಪದಲ್ಲಿ ಸದೆಬಡೆಯುವ ಕಾರಣಗಳಿ ಗಾಗಿ ಅಪಾಯಕಾರಿ ಎಂದು ಇವುಗಳನ್ನು ವಿರೋಧಿಸು ವವರು ಆಧಾರಗಳ ಸಮೇತ ವಾದಿಸುತ್ತಾರೆ.

ಸಾಂವಿಧಾನಿಕವಾಗಿ ದತ್ತವಾದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಮತಾಂತರ ನಿಷೇಧ ಕಾಯ್ದೆಯಿಂದ ಧಕ್ಕೆ ಉಂಟಾಗುತ್ತದೆ. ಭಾರತೀಯ ಸಂವಿಧಾನವು ಧರ್ಮವನ್ನು ಮುಕ್ತವಾಗಿ ಆಚರಿಸುವ, ಪ್ರತಿಪಾದಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ಖಾತರಿಪಡಿಸುತ್ತದೆ (ಅನುಚ್ಛೇದ 25, 21 ಮತ್ತು 14). ಮತಾಂತರ ನಿರ್ಬಂಧಿಸುವ ಕಾನೂನುಗಳು, ವಿಶೇಷವಾಗಿ ಪೂರ್ವಾನುಮತಿಯಂತಹ ಅವಶ್ಯಕತೆಗಳನ್ನು ವಿಧಿಸಿದಾಗ, ಈ ಹಕ್ಕನ್ನು ಉಲ್ಲಂಘಿಸ ಬಹುದು ಮತ್ತು ಸ್ವಯಂಪ್ರೇರಿತ ಸಂವಾದಗಳನ್ನು ತಡೆಯಬಹುದು ಎಂದು ಕಾನೂನು ತಜ್ಞರು ಅಭಿಪ್ರಾಯಪಡುತ್ತಾರೆ. ಒಂದು ವಾದದ ಪ್ರಕಾರ, ಈ ಕಾಯ್ದೆ ಹಿಂತೆಗೆದುಕೊಳ್ಳುವಿಕೆ ಮಾತ್ರವೇ ಸಾಂವಿಧಾನಿಕವಾಗಿ ಪ್ರಾಮಾಣಿಕ ಆಯ್ಕೆಯಾಗಿದೆ.

ಕರ್ನಾಟಕ ಮತಾಂತರ ವಿರೋಧಿ ಕಾನೂನು ತಟಸ್ಥ ನಿಯಂತ್ರಕ ಕಾನೂನು ಅಲ್ಲ. ಅದು, ಅಲ್ಪಸಂಖ್ಯಾತ ಸಮುದಾಯಗಳನ್ನು ತಪ್ಪಿತಸ್ಥರೆಂದು ಪರಿಗಣಿಸುತ್ತದೆ. ಈ ಕಾನೂನನ್ನು ದುರುಪಯೋಗ ಪಡಿಸಿಕೊಳ್ಳಲೂಬಹುದು, ಬೆದರಿಕೆ ಒಡ್ಡಲೂ ಬಳಸಬಹುದು ಎಂಬುದು ಗಮನಾರ್ಹ.

ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಪಡಿಸುವುದಕ್ಕಿಂತಲೂ ಅದನ್ನು ತಿದ್ದುಪಡಿ ಮಾಡಬಹುದು ಎನ್ನುವುದು ಕಾಂಗ್ರೆಸ್‌ನ ವಾದ. ಆದರೆ, ಅಂತಹ ಕಾಯ್ದೆಯನ್ನು ತಿದ್ದುಪಡಿ ಮಾಡು ವುದು ಅದರ ದೋಷಪೂರಿತ ಪ್ರಮೇಯವನ್ನು ಕಾನೂನುಬದ್ಧಗೊಳಿಸುತ್ತದೆ ಅಷ್ಟೇ. ಕಾನೂನನ್ನು ಹಿಂತೆಗೆದುಕೊಳ್ಳುವಿಕೆಯು ಅಲ್ಪಸಂಖ್ಯಾತರ ಸಾಂವಿಧಾನಿಕ ಸ್ವಾತಂತ್ರ್ಯವನ್ನು ಕಾಪಾಡಲು ಕರ್ನಾಟಕದ ಬದ್ಧತೆಯನ್ನು ಎತ್ತಿಹಿಡಿಯುತ್ತದೆ. ಅಂತೆಯೇ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ನ್ಯಾಯ ವಿತರಣೆಯ ವಿಶ್ವಾಸವನ್ನು ಪುನರ್‌ ಸ್ಥಾಪಿಸುತ್ತದೆ. ಪೊಲೀಸ್ ದುರುಪಯೋಗವನ್ನು ಕಡಿಮೆ ಗೊಳಿಸುತ್ತದೆ. ಈ ಕಾರಣಗಳಿಗಾಗಿ, ಕರ್ನಾಟಕ ಸರ್ಕಾರವು ಕಾಯ್ದೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕು, ತಿದ್ದುಪಡಿ ಮಾಡಬಾರದು.

ಧರ್ಮವನ್ನು ಆಯ್ಕೆ ಮಾಡಿಕೊಳ್ಳುವುದು ಮಾನವನ ಮೂಲಭೂತ ಮಾನವ ಹಕ್ಕು ಮತ್ತು ವೈಯಕ್ತಿಕ ನಂಬಿಕೆಯ ವಿಷಯ ಎಂದು ಬಾಬಾಸಾಹೇಬ್‌ ಬಿ.ಆರ್. ಅಂಬೇಡ್ಕರ್ ನಂಬಿದ್ದರು. ಓರ್ವ ವ್ಯಕ್ತಿಯು ತನ್ನ ‘ಪೂರ್ವಜರ ಧರ್ಮ’ವು ಘನತೆ, ಸಮಾನತೆ ಮತ್ತು ನ್ಯಾಯ ಒದಗಿಸಲು ವಿಫಲವಾದರೂ ಅದಕ್ಕೆ ಬದ್ಧನಾಗಿರುತ್ತಾನೆ ಎಂಬ ಪರಿಕಲ್ಪನೆಯನ್ನು ಅಂಬೇಡ್ಕರ್‌ ತಿರಸ್ಕರಿಸಿದ್ದರು. ಅಂಬೇಡ್ಕರ್‌ ಚಿಂತನೆಗಳ ಹಿನ್ನೆಲೆಯಲ್ಲಿ, ಧಾರ್ಮಿಕ ಸ್ವಾತಂತ್ರ್ಯದ ಕಾರಣದಿಂದಾಗಿಯೂ ಮತಾಂತರ ನಿಷೇಧ ಕಾನೂನು ಸಂವಿಧಾನ ಬದ್ಧವಲ್ಲ.

ಸಿ.ಎಸ್‌.ದ್ವಾರಕಾನಾಥ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.