ಭಾರತವು ದುಬೈ ಮತ್ತು ಸಿಂಗಪುರದ ದಾರಿಯಲ್ಲಿ ನಡೆಯುತ್ತಿರುವುದನ್ನು ನೋಡಿ ಸಂಕಟವಾಗುತ್ತಿದೆ– ಎಂದು ಒಮ್ಮೆ ಉದ್ಗರಿಸಿದ್ದರು ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತೀಯ ಮೂಲದ ಸಾಹಿತಿ ವಿ.ಎಸ್. ನೈಪಾಲ್. ಒಂದು ದೊಡ್ಡ ದೇಶ ಎಂದರೆ ಫಳಫಳ ಹೊಳೆಯುವ ಮಾಲ್‌ಗಳು, ಗಾಜಿನ ದೊಡ್ಡ ದೊಡ್ಡ ಫಲಕಗಳಿಂದ ಸಿಂಗಾರಗೊಂಡ ಗಗನಚುಂಬಿ ಕಟ್ಟಡಗಳು ಮತ್ತು ಶಾವಿಗೆಯಂತೆ ನಗರವನ್ನು ಸುತ್ತುವರೆದಿರುವ ಫ್ಲೈಓವರ್‌ಗಳು ಇವಿಷ್ಟೆ ಅಲ್ಲ.
ಹಳೆಯ ಉದ್ಯಾನಗಳಾದ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್‌ಗಳು; ಕಣ್ಮನಗಳನ್ನು ಸೆಳೆಯುವ ಐತಿಹಾಸಿಕ ಕಟ್ಟಡಗಳಾದ ಹೈಕೋರ್ಟ್, ವಿಧಾನಸೌಧ, ರಾಜಭವನ, ಬಾಲಬ್ರೂಯಿ ಅತಿಥಿಗೃಹ, ಬೆಂಗಳೂರು ಅರಮನೆ, ಟಿಪ್ಪೂ ಸುಲ್ತಾನನ ಬೇಸಿಗೆ ಅರಮನೆ, ಮೆಯೊ ಹಾಲ್, ಸೇಂಟ್ ಮಾರ್ಕ್ಸ್ ಚರ್ಚ್, ಬಸವನಗುಡಿ; ಕಲಾಸಂಸ್ಕೃತಿಯನ್ನು ಎತ್ತಿಹಿಡಿಯುತ್ತಿರುವ ಚಿಕ್ರಕಲಾ ಪರಿಷತ್, ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (ಎನ್.ಜಿ.ಎಂ.ಎ.); ಸಂಗೀತ ಮತ್ತು ರಂಗಭೂಮಿಯ ಪ್ರದರ್ಶನ ಕೇಂದ್ರಗಳೆನಿಸಿರುವ ರವೀಂದ್ರ ಕಲಾಕ್ಷೇತ್ರ, ಟೌನ್ ಹಾಲ್; ದಿವಾನ್ ಶೇಷಾದ್ರಿ ಅಯ್ಯರ್ ಸಾರ್ವಜನಿಕ ಗ್ರಂಥಾಲಯದ ಕಟ್ಟಡ; ಇವುಗಳ ಜೊತೆಗೆ ಸಾರ್ವಜನಿಕವೂ ಪಾರಂಪರಿಕ ಹೆಗ್ಗುರುತುಗಳೂ ಎನಿಸಿರುವ ಕೆ.ಆರ್.ಎಸ್. ಸಿಟಿ ಮಾರ್ಕೆಟ್ ಮತ್ತು ರಸೆಲ್ ಮಾರುಕಟ್ಟೆ; ಬೆಂಗಳೂರು ಕ್ಲಬ್, ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ, ರೇಸ್ ಕೋರ್ಸ್, ಬೆಂಗಳೂರು ಗಾಲ್ಫ್ ಕ್ಲಬ್, ಜಕ್ಕೂರು ಫ್ಲೇಯಿಂಗ್ ಸ್ಕೂಲ್– ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆಯೆನ್ನಿ. ಈ ತಾಣಗಳ ಇತಿಹಾಸ ತುಂಬ ರೋಚಕವೂ ಬೋಧಪ್ರದವೂ ಆದುದು. ನಗರವನ್ನು ನಿರ್ಮಿಸುವಲ್ಲಿ ಸಾಂಪ್ರದಾಯಿಕತೆಯನ್ನೂ ವೈಶ್ವಿಕತೆಯನ್ನೂ ಬೆಸುಗೆ ಮಾಡಿದ ನಮ್ಮ ಪೂರ್ವಜರ ದೂರದೃಷ್ಟಿಗೆ ಇವು ಸಾಕ್ಷ್ಯಗಳಾಗಿವೆ. ಮಾತ್ರವಲ್ಲ, ಇದು ಪರಂಪರೆಯನ್ನು ಉಳಿಸಿಕೊಂಡೇ ಆಧುನಿಕತೆಗೂ ತೆರೆದುಕೊಂಡ ಲಂಡನ್, ಪ್ಯಾರೀಸ್ ಮತ್ತು ರೋಮ್‌ಗಳಂಥ ನಗರಗಳ ಪಂಕ್ತಿಯಲ್ಲಿ ನಮ್ಮ ನಗರವೂ ನಿಲ್ಲುವಂತೆ ಮಾಡಿದೆ.
ಇನ್ನೊಂದು ಉದಾಹರಣೆ. 1876ರ ಜೂನ್ 24ರಂದು ‘ಬಿಜಿಸ್’ ಸ್ಥಾಪನೆಯಾಯಿತು. ಬ್ರಿಟಿಷ್ ಸೈನಿಕರ ಗುಂಪೊಂದು ಆರಂಭಿಸಿದ ಈ ಕ್ಲಬ್, ಬ್ರಿಟಿಷ್ ನೆಲದಿಂದ ಹೊರಗಡೆ ಸ್ಥಾಪನೆಗೊಂಡು, ಈಗಲೂ ಕ್ರಿಯಾಶೀಲವಾಗಿರುವ ಅತ್ಯಂತ ಹಳೆಯ ಕ್ಲಬ್ ಎನಿಸಿದೆ. ದಿವಾನ್ ಶೇಷಾದ್ರಿ ಅಯ್ಯರ್ ಅವರ ಆದೇಶದಂತೆ 1885ರಲ್ಲಿ ಈ ಜಮೀನನ್ನು ಗಾಲ್ಫ್‌ನ ಉದ್ದೇಶಕ್ಕೆಂದು ಉಚಿತವಾಗಿ ನೀಡಲಾಯಿತು; ಅಲ್ಲಿ ಇತರ ಯಾವುದೇ ವಿಧದ ನಿರ್ಮಾಣಕ್ಕೂ ಚಟುವಟಿಕೆಗೂ ನಿಷೇಧವನ್ನೂ ಹೇರಲಾಯಿತು. ಹಸುರಿನಿಂದ ಆವೃತವಾಗಿರುವ 60 ಎಕರೆಗಳ ಈ ಮನಮೋಹಕ ಸ್ಥಳದಲ್ಲಿ ಆರಂಭದಲ್ಲಿ 12 ‘ಹೋಲ್’(ಕುಳಿ)ಗಳಿದ್ದವು; ಅನಂತರದಲ್ಲಿ 18 ಹೋಲ್‌ಗಳಿಗೆ ಪುನರ್ ವಿನ್ಯಾಸ ಮಾಡಲಾಯಿತು. ಈ ತಾಣ ದಿಟವಾಗಿಯೂ ನಗರದ ಹೃದಯಭಾಗದಲ್ಲಿರುವ ಪಚ್ಚೆಯ ರತ್ನವೇ ಹೌದು.
ಕಳೆದ ಎರಡು ದಶಕಗಳಲ್ಲಿ ಬೆಂಗಳೂರಿನಲ್ಲಿ ಭೂಮಿಯ ಬೆಲೆ ಗಗನಕ್ಕೇರಿದೆ. ಆಧುನಿಕ ಉತ್ಪಾದನಾ ವ್ಯವಸ್ಥೆಗಳ ಹೆಚ್ಚಳ ಮತ್ತು ಮಾಹಿತಿ ತಂತ್ರಜ್ಞಾನದ ಅಲೆ ಇಲ್ಲಿ ಉದ್ಯೋಗಗಳನ್ನು ಸೃಷ್ಟಿಸಿತು, ದಿಟ. ಜೊತೆಗೆ ವಾಣಿಜ್ಯೋದ್ದೇಶ ಮತ್ತು ಜನವಸತಿಯ ಬಳಕೆಗಾಗಿ ಭೂಪ್ರದೇಶದ ಅವಶ್ಯಕತೆಯನ್ನೂ ಹೆಚ್ಚಿಸಿತು. ಪ್ರವಾಹದಂತೆ ಬರುತ್ತಿರುವ ವಿದೇಶೀ ಕಂಪನಿಗಳಿಂದಲೂ; ಪ್ರತಿದಿನವೂ ಗ್ರಾಮೀಣ ಕರ್ನಾಟಕದಿಂದಲೂ, ದೇಶದ ಹಿಂದುಳಿದ ದೂರದ ಪ್ರದೇಶಗಳಿಂದಲೂ, ಈಶಾನ್ಯದ ಮೂಲೆಗಳಿಂದಲೂ ಉದ್ಯೋಗಗಳನ್ನು ಅರಸುತ್ತ ಬರುತ್ತಿರುವ ವಲಸಿಗರಿಂದಲೂ ನಗರದ ಒತ್ತಡ ಹೆಚ್ಚಿದೆ. ಸಹಜವಾಗಿ ಇದು ನಗರದ ಭೌಗೋಳಿಕ ದೃಶ್ಯವನ್ನೇ ಬದಲಾಯಿಸುವಂತೆ ಮಾಡಿದೆ. ಪ್ರತಿಯೊಬ್ಬರೂ ಬೆಂಗಳೂರಿನ ಭೂಮಿಯನ್ನು ರಿಯಲ್ ಎಸ್ಟೇಟ್ ಏಜೆಂಟರ್‌ಗಳ ಮತ್ತು ಡೆವಲಪರ್‌ಗಳ ದುರಾಸೆಯ ಕಣ್ಣುಗಳಿಂದ ನೋಡುವಂತೆ ಮಾಡಿದೆ. ರಿಯಲ್ ಎಸ್ಟೇಟ್‌ನ ದಂಧೆ ಹೆಚ್ಚಾದಂತೆ ಅವಿವೇಕಜನ್ಯವೂ ದುಷ್ಟತನಪೂರಿತವೂ ಆದ ಯೋಜನೆಗಳು ನಗರದ ಕಲ್ಪನೆಯನ್ನೇ ವಿಕೃತಗೊಳಿಸುತ್ತಿವೆ.
ಬ್ರಿಟಿಷ್ ಅಶ್ವದಳದಿಂದ 1800ರಲ್ಲಿ ಪ್ರಾರಂಭವಾದ ಪ್ರತಿಷ್ಠಿತ ಬೆಂಗಳೂರು ರೇಸ್ ಕೋರ್ಸ್‌ನ ಗುತ್ತಿಗೆಯನ್ನು ರದ್ದುಗೊಳಿಸುವ ಯೋಚನೆಯೊಂದು ಹಿಂದೆ ನಡೆದಿತ್ತು. 1951ರಲ್ಲಿ ಅಂದಿನ ಮುಖ್ಯಮಂತ್ರಿ ಚಂಗಲರಾಯ ರೆಡ್ಡಿ ಅವರ ಸರ್ಕಾರ 85 ಎಕರೆಗಳಷ್ಟು ಜಮೀನನ್ನು ರೇಸ್ ಕೋರ್ಸ್‌ಗೆ ನೀಡಿತ್ತು. ಈ ಜಾಗವನ್ನು ಮಂತ್ರಿಗಳ ವಸತಿ ಸಮುಚ್ಚಯದ ನೆಪದಲ್ಲಿ ಸ್ಥಳಾಂತರಿಸಿ, ರಿಯಲ್ ಎಸ್ಟೇಟ್ ವ್ಯವಹಾರವನ್ನು ನಡೆಸುವುದು ಈ ಯೋಚನೆಯ ಹಿಂದಿನ ಹುನ್ನಾರವಾಗಿತ್ತು. ಸುದೈವದಿಂದ ಈ ಹುನ್ನಾರ ಫಲಿಸಲಿಲ್ಲ. ಇಂದು ಈ ರೇಸ್ ಕೋರ್ಸ್ ಪ್ರಥಮ ದರ್ಜೆಯ ರೇಸಿಂಗ್ ಕ್ಲಬ್‌ಗಳಲ್ಲಿ ಒಂದಾಗಿದೆ. ಹೀಗೆಯೇ, ‘ಬೆಂಗಳೂರು ಗಾಲ್ಫ್ ಕ್ಲಬ್’ ಅನ್ನು ಸ್ಥಳಾಂತರಿಸಿ, ಅಲ್ಲಿ ಇನ್ನೊಂದು ಯಾವುದೋ ಮೂರ್ಖತನದ ಯೋಜನೆಯನ್ನು ಆರಂಭಿಸುವ ದುರುದ್ದೇಶಪೂರಿತ ಪ್ರಯತ್ನಗಳು ನಡೆದವು.
ಈಗ ರಿಯಲ್ ಎಸ್ಟೇಟ್‌ನ ವಕ್ರದೃಷ್ಟಿ ಇನ್ನೊಂದು ಸ್ಥಳದ ಕಡೆಗೆ ತಿರುಗಿದೆ. ಜಕ್ಕೂರಿನಲ್ಲಿರುವ ‘ಸರ್ಕಾರಿ ವೈಮಾನಿಕ ತರಬೇತಿ ಶಾಲೆ’ (ಜಿಎಫ್‌ಟಿಎಸ್) ನಮ್ಮ ದೇಶದ ವಾಯುಯಾನ ತರಬೇತಿ ಕ್ಷೇತ್ರದಲ್ಲಿ ಶ್ರೀಮಂತ ಪರಂಪರೆಯನ್ನು ಹೊಂದಿರುವ ಸಂಸ್ಥೆ. ಸುಮಾರು 200 ಎಕರೆಯಷ್ಟು ಭೂಭಾಗವನ್ನು ಹೊಂದಿರುವ ಈ ಸಂಸ್ಥೆಯ ಮೂಲೋದ್ದೇಶವನ್ನು ಮೂಲೋತ್ಪಾಟನೆ ಮಾಡಿ, ಇದನ್ನು ಕೆಲವರು ‘ಗಣ್ಯ’ರಿಗೆ ಸಂಪತ್ತಿನ ಮೂಲವನ್ನಾಗಿಸುವ ಆಕರ್ಷಕ ಯೋಜನೆಯೊಂದು ಸಿದ್ಧವಾಗುತ್ತಿದೆ. ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ 1948ರಲ್ಲಿ ಈ ಭೂಮಿಯನ್ನು ಸ್ವಾಧೀನಪಡಿಸಿಕೊಂಡು, ಪೈಲಟ್‌ಗಳಿಗೆ ಮತ್ತು ಇತರ ವೈಮಾನಿಕ ಚಟುವಟಿಕೆಗಳಿಗೆ ತರಬೇತಿ ನೀಡುವ ‘ಫ್ಲೈಯಿಂಗ್ ಸ್ಕೂಲ್’ ಅನ್ನು ಪ್ರಾರಂಭಿಸುವುದಕ್ಕಾಗಿ ಈ ಸ್ಥಳವನ್ನು ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರಿಸಿದರು. ಭಾರತೀಯ ವಾಯುಪಡೆಯ ಅನೇಕ ಪೈಲಟ್‌ಗಳು ಮತ್ತು ವಾಣಿಜ್ಯ ಪೈಲಟ್‌ಗಳು ಇಲ್ಲಿಂದಲೇ ಪದವಿಗಳನ್ನು ಪಡೆದಿದ್ದಾರೆ. ಎನ್‌ಸಿಸಿ ಬೆಟಾಲಿಯನ್‌ನ ತರುಣ–ತರುಣಿಯರಿಗೆ ವಿಮಾನ, ಗ್ಲೈಡರ್, ಮತ್ತು ಮೈಕ್ರೋ ಲೈಟ್‌ಗಳ ಹಾರಾಟದಲ್ಲಿ ತರಬೇತಿ ನೀಡುವ ಮೂಲಕ ಇದು ಭಾರತೀಯ ವಾಯುಪಡೆ, ಸೇನೆ ಮತ್ತು ನೌಕಾಪಡೆಗಳಿಗೆ ಸೇರಬೇಕೆಂಬ ಅವರ ಕನಸುಗಳಿಗೆ ರೆಕ್ಕೆಗಳನ್ನು ನೀಡುತ್ತಿದೆ. ಮೊದಲ ಮಹಿಳಾ ಪೈಲಟ್ ಉಷಾ ಸುಂದರಂ ಇದೇ ಪವಿತ್ರ ಮೈದಾನದಿಂದಲೇ ವಾಣಿಜ್ಯ ಹಾರಾಟದ ಪರವಾನಗಿಯನ್ನು ಪಡೆದದ್ದು. ಒಟ್ಟಿನಲ್ಲಿ ಇದು ದೇಶದ ವಾಯುಯಾನ ಕ್ಷೇತ್ರದ ವಿಶಿಷ್ಟ ತಾಣವಾಗಿ ನೆಲೆಗೊಂಡಿದೆ.
ಮಾತ್ರವಲ್ಲ, ಇದು ಭಾರತದ ಮೊದಲ ಖಾಸಗಿ ವಲಯದ ಹೆಲಿಕಾಪ್ಟರ್ ಚಾರ್ಟರ್ ಕಂಪನಿಗಳಿಗೂ ಜನ್ಮ ನೀಡುವ ಮೂಲಕ, ಸರ್ಕಾರದ ಅತಿ ಗಣ್ಯರು, ಕಾರ್ಪೋರೇಟ್‌ಗಳಿಗೂ ಹೂಡಿಕೆದಾರರಿಗೂ ಹೆಲಿಕಾಪ್ಟರ್‌ನ ಬಳಕೆಯನ್ನು ಸಾಧ್ಯವಾಗಿಸಿದೆ. ಈ ಸೇವೆಯು ಹೂಡಿಕೆಯನ್ನು ಮಾಡಲು ಬಯಸುವ ಜಾಗತಿಕ ಉದ್ಯಮಿಗಳನ್ನು ಕರ್ನಾಟಕದತ್ತ ಆಕರ್ಷಿಸುವಲ್ಲೂ ಸಫಲವಾಗಿದೆ. ಇಲ್ಲಿಂದ ಹಾರಾಡುವ ಹೆಲಿಕಾಪ್ಟರ್‌ಗಳು ಹಂಪಿ, ಬೇಲೂರು ಮತ್ತು ಹಳೆಬೀಡು, ಮೈಸೂರು ಮತ್ತು ನಾಗರಹೊಳೆ–ಕಬಿನಿಯಲ್ಲಿರುವ ಕರ್ನಾಟಕ ಸರ್ಕಾರದ ಜಂಗಲ್ ಲಾಡ್ಜ್‌ಗಳಿಗೂ ರೆಸಾರ್ಟ್‌ಗಳಿಗೂ ಪ್ರವಾಸಿಗರನ್ನು ಪ್ರತಿದಿನವೂ ತಲುಪಿಸುತ್ತಿವೆ. ಅಪಘಾತ ಸ್ಥಳಗಳಿಂದ ರೋಗಿಗಳನ್ನು ಸ್ಥಳಾಂತರಿಸಿ, ಅವರ ಜೀವಗಳನ್ನು ಉಳಿಸುವ ಕಾರ್ಯಾಚರಣೆಯಲ್ಲೂ ಇಲ್ಲಿಂದ ಹಾರಾಡುವ ‘ಏರ್ ಆಂಬುಲೆನ್ಸ್’ಗಳು ನೆರವಾಗುತ್ತಿವೆ. ಶಬ್ದಮಾಲಿನ್ಯ ಮತ್ತು ವಾಯುಮಾಲಿನ್ಯವನ್ನು ನಿವಾರಿಸುವ, ಪರಿಸರ ಸಂರಕ್ಷಣೆಗೆ ಪೂರಕವಾಗಿರುವ ‘eVTOL’ (ಎಲೆಕ್ಟ್ರಿಕ್ ವರ್ಟಿಕಲ್ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಏರ್‌ಕ್ರಾಫ್ಟ್ಸ್) ತಂತ್ರಜ್ಞಾನದ ಉದಯವಾಗಿದೆ. ಹೀಗಾಗಿ ನಗರದ ಹೃದಯಭಾಗದಲ್ಲಿರುವ ಜಕ್ಕೂರ್‌ನ ಫ್ಲೈಯಿಂಗ್ ಸ್ಕೂಲ್ ಅನ್ನು ಮುಚ್ಚಬೇಕಿಲ್ಲ; ಜೀವಗಳನ್ನು ಉಳಿಸಲು ದೂರದ ಸ್ಥಳ ಅಥವಾ ಆಸ್ಪತ್ರೆಗಳಿಗೆ ಸಂತ್ರಸ್ತರನ್ನು ತಲಪಿಸಲು ಇದನ್ನು ‘ವರ್ಟಿಪೋರ್ಟ್’ ಆಗಿ ಪರಿವರ್ತಿಸಬಹುದಾಗಿದೆ. ‘eVTOL’ಗಳು ಇಂದು ವೈಜ್ಞಾನಿಕ ಕಥೆಗಳ ಊಹೆಯಾಗಿ ಉಳಿದಿಲ್ಲ; ನ್ಯೂಯಾರ್ಕ್, ಮಿಯಾಮಿ, ದುಬೈ ಮತ್ತು ಚೀನಾದ ಗುವಾಂಗ್‌ಝೌಗಳಲ್ಲಿ ಪ್ರಯಾಣಿಕರನ್ನು ಕಡಿಮೆ ಅಂತರದ ದೂರಗಳಿಗೆ ತಲುಪಿಸಲು ವರ್ಟಿಪೋರ್ಟ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಫ್ಲೈಯಿಂಗ್ ಸ್ಕೂಲ್’ನ ಹಲವು ವಿವರಗಳನ್ನು ಚರ್ಚಿಸಲು ‘ಜಿಎಫ್‌ಟಿಎಸ್’ ಅಧಿಕಾರಿಗಳ ಸಭೆ ಕರೆದಿದ್ದಾರೆ ಎಂದು ವರದಿಯಾಗಿತ್ತು. ರನ್‌ವೇಯ ಪೂರ್ವಕ್ಕೆ ಸೇರಿರುವ, ಅದರ ಪ್ರಮುಖ ಭಾಗವಾದ ‘ಫನಲ್’ಗೆ ಹೊಂದಿಕೊಂಡಂತಿರುವ ಸುಮಾರು 3–4 ಎಕರೆಗಳನ್ನು ಮೆಟ್ರೋ ಫ್ಲೈಓವರ್‌ಗೆ ಬಳಸಿಕೊಳ್ಳುವುದರ ಬಗ್ಗೆ ಸರ್ಕಾರ ಯೋಚಿಸುತ್ತಿದೆ ಎಂದು ಅವರು ಘೋಷಿಸಿದ್ದಾರೆ. ಹೀಗೆ ಮಾಡುವುದರಿಂದ ರನ್‌ವೇಯ ಉದ್ದವನ್ನು ಕಡಿಮೆ ಮಾಡಿದಂತಾಗುತ್ತದೆ. ಇದರಿಂದ ಸ್ವಲ್ಪ ದೊಡ್ಡ ಗಾತ್ರದ ತರಬೇತಿ ಮತ್ತು ಪ್ರಯಾಣಿಕ ವಿಮಾನಗಳ ಟೇಕ್ ಆಫ್ ಮತ್ತು ಲ್ಯಾಂಡಿಂಗ್‌ಗಳು ಸಾಧ್ಯವಾಗದು. ಈ ಸಭೆಯಲ್ಲಿ ಹಿರಿಯ ಅಧಿಕಾರಿಗಳು ಮತ್ತು ಕೆಲವರು ಸಚಿವರು ಭಾಗವಹಿಸಿದ್ದರು. ಜಕ್ಕೂರು ಫ್ಲೈಯಿಂಗ್ ಸ್ಕೂಲ್ ಹಲವು ವರ್ಷಗಳಿಂದ ನಿಷ್ಕ್ರಿಯವಾಗಿದೆ; ಅದರ ಚಟುವಟಿಕೆಗಳು ರೋಗಪೀಡಿತ ಸ್ಥಿತಿಯಲ್ಲಿವೆ. ಮಾತ್ರವಲ್ಲ, ಆ ಜಾಗದ ರಿಯಲ್ ಎಸ್ಟೇಟ್ ಮೌಲ್ಯವಾದ ಇಪ್ಪತ್ತು ಸಾವಿರ ಕೋಟಿ ರೂಪಾಯಿಗಳಿಗೆ ತಕ್ಕುದಾದ ಆದಾಯವನ್ನೂ ಅದು ಗಳಿಸುತ್ತಿಲ್ಲ ಎಂದು ಅವರಲ್ಲಿ ಕೆಲವರು ಹೇಳಿದರು. ಹೀಗಾಗಿ ಇದನ್ನು ಗಾಲ್ಫ್ ಕೋರ್ಸ್‌ನಂತಹ ಹೆಚ್ಚು ಲಾಭದಾಯಕ ಯೋಜನೆಯಾಗಿ ಪರಿವರ್ತಿಸಬೇಕು; ಅಲ್ಲಿ ಅನುಕೂಲಕರವಾದ ಸೌಲಭ್ಯಗಳನ್ನು ಒದಗಿಸಬಲ್ಲ ‘ಕಾಂಪ್ಲೆಕ್ಸ್’ ಮುಂತಾದುವನ್ನು ನಿರ್ಮಿಸಬೇಕು ಎಂದೂ ಪ್ರತಿಪಾದಿಸಲಾಯಿತು. ಇದರ ಹಿಂದಿರುವ ಉದ್ದೇಶಗಳು ಸ್ಪಷ್ಟವಾಗಿವೆ.
ಸಭೆಯಲ್ಲಿ ಭಾಗವಹಿಸಿದ್ದ ಗುಂಪು 1990ರ ದಶಕದ ಆರಂಭದಿಂದ ಕಳೆದ ಮೂರು ದಶಕಗಳಲ್ಲಿನ ‘ಜಿಎಫ್‌ಟಿಎಸ್’ನ ದುರಾಡಳಿತವನ್ನು ಪರಿಶೀಲಿಸುವಂತೆ ಮುಖ್ಯಮಂತ್ರಿಯವರನ್ನು ವಿನಂತಿಸಬೇಕಿತ್ತು. ಆಗ ಹಲವು ವರ್ಷಗಳಿಂದ ಅಲ್ಲಿ ಮುಖ್ಯ ಪೈಲಟ್ ಇಲ್ಲದಿರುವುದು, ತರಬೇತಿ ಪೈಲಟ್‌ಗಳಾಗಿ ಸೇರಲು ಯಾರೂ ಇಚ್ಛಿಸದಿರುವುದು, ಹಿಂದಿನ ಮುಖ್ಯ ಪೈಲಟ್ ಮತ್ತು ಇತರ ಸಿಬ್ಬಂದಿ ಮಧ್ಯೆ ನಡೆದಿರುವ ಕಾನೂನು ಸಮರ, ಆಗೊಮ್ಮೆ ಈಗೊಮ್ಮೆ ಅವ್ಯವಸ್ಥಿತವಾಗಿ ನಡೆಯುವ ಕಾರ್ಯವಿಧಾನಗಳಿಂದ ತೊಂದರೆಗೆ ತುತ್ತಾಗಿರುವ ತರಬೇತಿ, ಮಹತ್ವಾಕಾಂಕ್ಷೆಯ ಪೈಲಟ್‌ಗಳ ನೇಮಕಾತಿಯಲ್ಲಿನ ಕುಸಿತ, ಅದೇ ಸಮಯದಲ್ಲಿ ಇವೆಲ್ಲವುಗಳಿಂದ ಸರ್ಕಾರದ ಬೊಕ್ಕಸಕ್ಕೆ ಉಂಟಾಗಿರುವ ನಷ್ಟ– ಇವುಗಳು ಆಗ ಗಮನಕ್ಕೆ ಬರುತ್ತಿದ್ದವು.
ಅಷ್ಟು ಮಾತ್ರವಲ್ಲ, ಈ ಫ್ಲೈಯಿಂಗ್ ಸ್ಕೂಲನ್ನು ಆದಾಯದಾಯಕವಾಗಿ ಹೇಗೆ ಪುನರುಜ್ಜೀವಿತಗೊಳಿಸಬಹುದು ಮತ್ತು ಖಾಸಗಿ ವಲಯಕ್ಕೆ ಇದರ ಯಾವ ಅಂಶಗಳನ್ನು ಹೊರಗುತ್ತಿಗೆಗೆ ನೀಡಬಹುದು ಎಂಬುದರ ಕುರಿತು ಕಾಲಮಿತಿಯ ಅಧ್ಯಯನಕ್ಕಾಗಿಯೂ ಅವರು ಒತ್ತಾಯಿಸಬೇಕಾಗಿತ್ತು. ಜಗತ್ತಿನ ವೈಮಾನಿಕ ವ್ಯಾಕರಣವನ್ನೇ ಬದಲಾಯಿಸುತ್ತಿರುವ ಡ್ರೋನ್‌ಗಳೂ ಸೇರಿದಂತೆ, ವಿಮಾನದ ಬಿಡಿ ಭಾಗಗಳನ್ನು ತಯಾರಿಸಲು ಈ ಸ್ಥಳವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನೂ ಪರಿಶೀಲಿಸಬಹುದು. ಆದರೆ ಈ ಯೋಜನೆಯು ಭೂಮಿಯನ್ನು ನುಂಗುವ ತಿಮಿಂಗಿಲಗಳಿಗೆ ಭೋಜನ ಒದಗಿಸುವ ಕಲಾಪವಾಗಬಾರದು; ಇದು ಸಣ್ಣ ಪ್ರಮಾಣದ ನೂರಾರು ಸ್ಟಾರ್ಟ್‌ಅಪ್‌ಗಳಿಗೆ ಅವಕಾಶವನ್ನು ಕಲ್ಪಿಸುವಂತಾಗಬೇಕು.
ಬೆಂಗಳೂರಿನಲ್ಲಿ ಈಗಾಗಲೇ ಆರೇಳು ಗಾಲ್ಫ್ ಕೋರ್ಸ್‌ಗಳಿವೆ. ಯಾರಾದರೂ ಇನ್ನೂ ಬೇಕೆಂದು ಬಯಸಿದರೆ ಅದಕ್ಕೂ ಸ್ವಾಗತವೇ. ಅದಕ್ಕಾಗಿ ಬೇಕಾದರೆ ನಿಧಿಯನ್ನೂ ಸಂಗ್ರಹಿಸಿ. ಹಾಲಿವುಡ್‌ನಂತೆ ಕಬ್ಬನ್ ಪಾರ್ಕ್ ಅಥವಾ ಲಾಲ್ ಬಾಗ್‌ಗಳನ್ನು ಡಿಸ್ನಿ ಲ್ಯಾಂಡ್ ಅಥವಾ ಯೂನಿವರ್ಸಲ್ ಸ್ಟುಡಿಯೊಗಳಿಗೆ ಮಾರಾಟ ಮಾಡಿದರೆ ನಮಗೆ ರಾಶಿ ರಾಶಿ ದುಡ್ಡು ಖಂಡಿತವಾಗಿಯೂ ಸಿಗುತ್ತದೆ. ಆದರೆ, ಹಾಗೆ ಮಾಡಲು ನಮಗೆ ಯಾವುದೇ ಹಕ್ಕಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.