ADVERTISEMENT

ವಿಶ್ಲೇಷಣೆ | ಬಿಹಾರ: ಫಲಿತಾಂಶ ಪ್ರಾತಿನಿಧಿಕವಲ್ಲ...

ಯೋಗೇಂದ್ರ ಯಾದವ್
Published 20 ನವೆಂಬರ್ 2025, 23:43 IST
Last Updated 20 ನವೆಂಬರ್ 2025, 23:43 IST
   

ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶವನ್ನು ನೀವು ಹೇಗೆ ಗ್ರಹಿಸಬೇಕು ಎಂದು ಮಾಧ್ಯಮ ಬಯಸುತ್ತದೆ ಎಂಬುದು ಇಲ್ಲಿದೆ. ಜೊತೆಗೆ, ಮುಂದಿನ ದಿನಗಳಲ್ಲಿ ಸಂಗತಿಗಳು ಹೇಗೆ ಬಿಚ್ಚಿಕೊಳ್ಳಲಿವೆ ಎಂಬುದರ ಸೂಚನೆಯೂ ಇದೆ. ಈ ಪ್ರಚಂಡ ಗೆಲುವು ರಾಜ್ಯವೊಂದರ ಚುನಾವಣೆಯ ಫಲಿತಾಂಶವಷ್ಟೇ ಅಲ್ಲ, ಬಿಜೆಪಿಯ ದೇಶವ್ಯಾಪಿ ಚುನಾವಣಾ ಜೈತ್ರಯಾತ್ರೆಯ ಪುನರಾರಂಭವೂ ಹೌದು. ಈ ಸಂಕಥನಕ್ಕೆ ಇನ್ನೊಂದು ಆಯಾಮವೂ ಇದೆ– ಚುನಾವಣೆ ನಡೆಸುವುದರಲ್ಲಿ ಯಾವ ಅರ್ಥವೂ ಇಲ್ಲ; ವಂಚನೆಯಿಂದ ಕೂಡಿದ ಚುನಾವಣೆಯಲ್ಲಿ ಭಾಗವಹಿಸಿ ಅದನ್ನು ನ್ಯಾಯಸಮ್ಮತಗೊಳಿಸಿದರೂ ಈ ನಿರಂಕುಶಧಿಕಾರದ ವ್ಯವಸ್ಥೆಯನ್ನು ಎದುರು ಹಾಕಿಕೊಳ್ಳುವುದು ಸಾಧ್ಯವಿಲ್ಲ ಎಂಬುದನ್ನು ಬಿಹಾರ ಸಾಬೀತುಪಡಿಸಿದೆ. 

ಈ ಎರಡೂ ಪ್ರತಿಪಾದನೆಗಳಲ್ಲಿ ಸತ್ಯಾಂಶ ಇದೆ. ದೊಡ್ಡ ಪ್ರಮಾಣದಲ್ಲಿ ಮಿಥ್ಯೆಯೂ ಇದೆ. ಈ ಎರಡೂ ಪ್ರತಿಪಾದನೆಗಳು ಈ ಚುನಾವಣೆಯ ರಾಜಕೀಯ ವಾಸ್ತವದ ದೂರದ ಗ್ರಹಿಕೆಯ ಆಧಾರದಲ್ಲಿವೆ; ಇದು ರಾಜಕೀಯ ಸಾಧ್ಯತೆಗಳು ಮತ್ತು ಜನರ ಕುರಿತ ಸೀಮಿತ ಗ್ರಹಿಕೆಯನ್ನು ಅವಲಂಬಿಸಿದೆ. 2024ರ ನಂತರದ ರಾಜಕಾರಣಕ್ಕೆ ಬಿಹಾರದ ಫಲಿತಾಂಶವು ಒಂದು ತಿರುವನ್ನು ಕೊಟ್ಟಿದೆ ಎಂಬ ಯೋಚನೆಯು ಮೂರು ಕಲ್ಪನೆಗಳ ಆಧಾರದಲ್ಲಿದೆ: ಇದು ಅನಿರೀಕ್ಷಿತ, ಇದು ಈಗಾಗಲೇ ಇದ್ದ ಪ್ರವೃತ್ತಿಯನ್ನು ಮುರಿದು ಹಾಕಿದೆ ಮತ್ತು ಇದು ಪ್ರಾತಿನಿಧಿಕ. ಆದರೆ, ಈ ಎಲ್ಲವೂ ಪ್ರಶ್ನಾರ್ಹವೇ ಆಗಿವೆ. 

ಮೊದಲನೆಯದಾಗಿ, ಬಿಹಾರದ ರಾಜಕೀಯ ಪಥವು ಇಡೀ ಭಾರತವನ್ನು ಬಿಡಿ, ಹಿಂದಿ ಭಾಷಿಕ ಪ್ರದೇಶವನ್ನು ಕೂಡ ಪ್ರತಿನಿಧಿಸುವುದಿಲ್ಲ. ಉತ್ತರ ಭಾರತದಲ್ಲಿ ಬಿಜೆಪಿ ಸಮಾನ ಪಾಲುದಾರ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳಲೇಬೇಕಾದ ಒಂದೇ ರಾಜ್ಯ ಬಿಹಾರ; ದೂರದ ಪಶ್ಚಿಮ ಬಂಗಾಳ ಬಿಡಿ, ನೆರೆಯ ಜಾರ್ಖಂಡ್‌ನಲ್ಲಿ ಕೂಡ ಬಿಹಾರ ರಾಜಕಾರಣದ ಪ್ರವೃತ್ತಿ ಮತ್ತು ಒಲವುಗಳು ಪ್ರತಿಧ್ವನಿಸುವುದಿಲ್ಲ. ಎರಡನೆಯದಾಗಿ, ಕಳೆದ ವರ್ಷ ನಡೆದ ಲೋಕಸಭೆ ಚುನಾವಣೆ ಫಲಿತಾಂಶವನ್ನು ಬಿಹಾರ ಫಲಿತಾಂಶವು ತಿರುವುಮುರುವಾಗಿಸಿದೆ ಎಂಬ ಭಾವನೆ ಇದೆ. 174 ಕ್ಷೇತ್ರಗಳಲ್ಲಿ ಮುನ್ನಡೆ ಪಡೆಯುವ ಮೂಲಕ ಬಿಹಾರದಲ್ಲಿ ಎನ್‌ಡಿಎ ತನ್ನ ಪ್ರಾಬಲ್ಯವನ್ನು ಮುಂದುವರಿಸಿತ್ತು ಮತ್ತು ಮಹಾಮೈತ್ರಿಕೂಟಕ್ಕಿಂತ ಶೇ 8ರಷ್ಟು ಹೆಚ್ಚು ಮತಗಳನ್ನು ಪಡೆದಿತ್ತು. ಈಗ 202 ಕ್ಷೇತ್ರಗಳಲ್ಲಿ ಗೆಲುವು ಸಿಕ್ಕಿದೆ ಎಂಬುದನ್ನು ನಂಬಲಾಗುತ್ತಿಲ್ಲ ಎಂಬುದು ನಿಜ. ಆದರೆ, ಮಹಾಮೈತ್ರಿಕೂಟಕ್ಕಿಂತ ಶೇ 1.2ರಷ್ಟು ಹೆಚ್ಚು ಮತಗಳನ್ನು ಪಡೆದ ಕಾರಣ ಇಷ್ಟೊಂದು ಕ್ಷೇತ್ರಗಳಲ್ಲಿ ಗೆಲುವು ಸಾಧ್ಯವಾಗಿದೆ. ಲೋಕಸಭಾ ಚುನಾವಣೆಯ ಬಳಿಕ ಪ್ರಮುಖ ಏರಿಳಿತಗಳನ್ನು ಕಂಡ ಹರಿಯಾಣ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳ ಸಾಲಿನಲ್ಲಿಯೂ ಬಿಹಾರವನ್ನು ಸೇರಿಸಲು ಆಗದು. 

ADVERTISEMENT

ಕೊನೆಯದಾಗಿ, ಬಿಹಾರ ರಾಜಕಾರಣದ ಬೇರುಗಳನ್ನು ಅರ್ಥ ಮಾಡಿಕೊಂಡವರಿಗೆ ಫಲಿತಾಂಶದಲ್ಲಿ ಅನಿರೀಕ್ಷಿತವಾದದ್ದು ಏನೂ ಇಲ್ಲ. 2005ರ ಬಳಿಕ ನಡೆದ ಎಲ್ಲ ಚುನಾವಣೆಗಳಲ್ಲಿಯೂ ಆರ್‌ಜೆಡಿ, ಜೆಡಿಯು ಮತ್ತು ಬಿಜೆಪಿ ಪೈಕಿ ಎರಡು ಪಕ್ಷಗಳ ಮೈತ್ರಿಕೂಟ ನಿರಾಯಾಸ ಗೆಲುವು ಪಡೆದಿದೆ– 2020ರ ವಿಚಿತ್ರ ಚುನಾವಣೆ ಮಾತ್ರ ಇದಕ್ಕೆ ಅಪವಾದ. ಮಹಾಮೈತ್ರಿಕೂಟಕ್ಕೆ ಹೋಲಿಸಿದರೆ ಎನ್‌ಡಿಎ ಮೈತ್ರಿಕೂಟವು ಗಣನೀಯವಾಗಿ ದೊಡ್ಡದು. ಜೊತೆಗೆ, ಎನ್‌ಡಿಎಯ ಸಾಮಾಜಿಕ ಸಮೀಕರಣವು ಮಹಾಮೈತ್ರಿಕೂಟಕ್ಕೆ ಹೋಲಿಸಿದರೆ ಹೆಚ್ಚು ವಿಸ್ತಾರವಾದುದು. ಮಹಾಮೈತ್ರಿಕೂಟದ ಮೂಲ ಮತಬ್ಯಾಂಕ್‌ (ಮುಸ್ಲಿಂ+ಯಾದವ) ಶೇ 32ರಷ್ಟಿದ್ದರೆ, ಎನ್‌ಡಿಎಯ ಮೂಲ ಮತಬ್ಯಾಂಕ್‌ (ಕುರ್ಮಿ+ಕುಶ್ವಾಹ+ಬನಿಯಾ/ತೇಲಿ+ಪಾಸ್ವಾನ್‌) ಶೇ 28ರಷ್ಟಿದೆ. ಆದರೆ, ಮಹಾಮೈತ್ರಿಕೂಟದ ಪೂರಕ ಬೆಂಬಲ ನೆಲೆಯು (ಮಲ್ಲ+ರವಿದಾಸಿ+ತಂತಿ/ಪಾನ್‌) ಶೇ 10ರಷ್ಟಿದೆ ಮತ್ತು ಪೂರ್ಣ ಬದ್ಧತೆಯನ್ನು ನಿರೀಕ್ಷಿಸುವಂತಿಲ್ಲ. ಆದರೆ, ಆರ್ಥಿಕವಾಗಿ ಹಿಂದುಳಿದ ಹಿಂದೂ ಜಾತಿಗಳು ಎನ್‌ಡಿಎ ಬೆಂಬಲಕ್ಕಿವೆ, ಶೇ 20ರಷ್ಟಿರುವ ಇವು ಹೆಚ್ಚು ಖಚಿತ. 

ಹಾಗಾಗಿ, ಪರಿಸ್ಥಿತಿಯು ಎನ್‌ಡಿಎಗೆ ಆರಂಭದಿಂದಲೇ ಅನುಕೂಲಕರವಾಗಿತ್ತು. ಸಾಮಾಜಿಕ ಗುಂಪುಗಳ ನಿಷ್ಠೆಯನ್ನು ಬದಲಿಸುವ ಮೂಲಕ ಅಥವಾ ಜಾತಿಯನ್ನು ಮೀರಿದ ಪರಿಣಾಮಕಾರಿ ಪ್ರಚಾರ ಅಭಿಯಾನದ ಮೂಲಕ ಈ ಸಮೀಕರಣವನ್ನು ಬದಲಾಯಿಸುವ ಹೊಣೆ ಮಹಾಮೈತ್ರಿಕೂಟದ್ದೇ ಆಗಿತ್ತು. ಕೆಲವು ಪ್ರಯತ್ನಗಳನ್ನು ಮಾಡಲಾಗಿದೆ– ಆರ್ಥಿಕವಾಗಿ ಹಿಂದುಳಿದ ಜಾತಿಗಳತ್ತ ಗಮನ ಹರಿಸಲಾಗಿದೆ ಮತ್ತು ಸರ್ಕಾರಿ ಉದ್ಯೋಗಗಳ ಭರವಸೆ ಕೊಡಲಾಗಿದೆ– ಆದರೆ ಇದು ತೀರಾ ವಿಳಂಬವಾಯಿತು ಮತ್ತು ಅತ್ಯಲ್ಪವಾಗಿತ್ತು. ಕೆಲವು ಚುನಾವಣೆಗಳಿಂದ ಎನ್‌ಡಿಎ ಕಷ್ಟಪಟ್ಟು ಬೆಳೆಸಿದ್ದ ಮಹಿಳಾ ಮತದಾರರ ನಿಷ್ಠೆಯು ಕೊನೆಯ ಕ್ಷಣದಲ್ಲಿ ಕೊಟ್ಟ ₹10 ಸಾವಿರದ ಲಂಚದಿಂದಾಗಿ ಇನ್ನಷ್ಟು ಗಟ್ಟಿಗೊಂಡಿತು. ಈ ಮೂಲಭೂತ ಅಂಶಗಳ ಜೊತೆಗೆ, ಸರ್ಕಾರದಿಂದ ಹೆಚ್ಚಿನ ನಿರೀಕ್ಷೆ ಇಲ್ಲದಿದ್ದುದು, ನಿತೀಶ್‌ ಕುಮಾರ್‌ ವಿರುದ್ಧ ಹೇಳಿಕೊಳ್ಳುವಂತಹ ಆಡಳಿತ ವಿರೋಧಿ ಅಲೆ ಇಲ್ಲದಿದ್ದುದು ಬಿಹಾರ ಫಲಿತಾಂಶದ ಸ್ವರೂಪವನ್ನು ವಿವರಿಸುತ್ತದೆ. ಆರ್‌ಜೆಡಿ ಮತ್ತು ಕಾಂಗ್ರೆಸ್‌ ಮಾಡಿದ್ದೆಲ್ಲವೂ ವಿಫಲವಾಯಿತು ಎಂದೋ, ಬಿಜೆಪಿಯ ಎಲ್ಲ ನಡೆಯೂ ಅತ್ಯದ್ಭುತವಾಗಿತ್ತು ಎಂದೋ ನಾವು ಭಾವಿಸುವ ಅಗತ್ಯ ಇಲ್ಲ. ಫಲಿತಾಂಶದ ಬಳಿಕ ಮಾಧ್ಯಮವು ಬಿತ್ತರಿಸಿದ ಆಶ್ಚರ್ಯ ಮತ್ತು ಆಘಾತದ ಭಾವ ಕೂಡ ಕೃತಕ ಸೃಷ್ಟಿಯೇ ಇರಬಹುದು. 

ಹಾಗೆಯೇ, ಈಗಿನ ಆಡಳಿತ ವ್ಯವಸ್ಥೆಯ ಹಲವು ಟೀಕಾಕಾರರು ವ್ಯಕ್ತಪಡಿಸಿದ ಆಘಾತವು ಕೂಡ ಅತಿರೇಕದ್ದೇ ಆಗಿದೆ. ದೂರದಲ್ಲಿ ನಿಂತು ನೋಡಿದವರಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳ ಪ್ರತಿಧ್ವನಿಯನ್ನು ಆಲಿಸಿದವರಲ್ಲಿ ಮಹಾಮೈತ್ರಿಕೂಟವು ಮುನ್ನಡೆಯಲ್ಲಿದೆ ಎಂಬ ತಪ್ಪು ಭಾವನೆ ಮೂಡಿರಬಹುದು. ಅಂತಿಮ ಫಲಿತಾಂಶವು ಕೊಟ್ಟ ಗಾಢ ಆಘಾತವು ಸಂದೇಹದ ಕಿಡಿ ಹಚ್ಚಿತು. ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಕೊರತೆಯು ಫಲಿತಾಂಶವನ್ನು ಆಡಳಿತಾರೂಢರಿಗೆ ಬೇಕಾದ ರೀತಿಯಲ್ಲಿ ರೂಪಿಸಲಾಗಿದೆ ಎಂಬ ಸಂದೇಹದ ಜ್ವಾಲೆ ಏಳುವಂತೆ ಮಾಡಿತು. ಹಾಗಾಗಿಯೇ, ಕೆಲವು ವಲಯಗಳಲ್ಲಿ ಭವಿಷ್ಯದಲ್ಲಿ ಚುನಾವಣೆ ಬಹಿಷ್ಕರಿಸಬೇಕು ಎಂಬ ಕರೆಗೆ ಕಾರಣವಾಯಿತು. 

ನ್ಯಾಯಯುತವಲ್ಲದ ಮತ್ತು ವಂಚನೆಯಿಂದ ಕೂಡಿದ ಚುನಾವಣೆಯ ನಡುವೆ ವ್ಯತ್ಯಾಸವಿದೆ ಎಂಬುದನ್ನು ಗುರುತಿಸುವುದು ಬಹಳ ಮುಖ್ಯ. ಭಾರತದ ಚುನಾವಣೆಗಳು ಈಗ ನ್ಯಾಯಯುತವಲ್ಲ ಎಂಬುದರಲ್ಲಿ ಅನುಮಾನವೇನೂ ಇಲ್ಲ. ಚುನಾವಣಾ ಪೈಪೋಟಿಯಲ್ಲಿ ಸ್ಪರ್ಧೆಗೆ ಸಮಾನ ನೆಲೆ ಎಂಬುದು ಇಲ್ಲವೇ ಇಲ್ಲ. ವ್ಯವಸ್ಥೆಯ ಈ ಪೂರ್ವಗ್ರಹಕ್ಕೆ ಬಿಹಾರ ಚುನಾವಣೆಯಲ್ಲಿ ಬೇಕಾದಷ್ಟು ಪುರಾವೆಗಳು ಸಿಕ್ಕಿವೆ. ಅನುಮಾನಾಸ್ಪದವಾದ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆಯಲ್ಲಿ 68 ಲಕ್ಷ ಮತದಾರರ ಹೆಸರು ಅಳಿಸಿ ಹಾಕಿ, 24 ಲಕ್ಷ ಹೊಸ ಮತದಾರರ ಹೆಸರು ಸೇರ್ಪಡೆ ಮಾಡಿರುವುದು ಇದಕ್ಕೆ ಒಂದು ಉದಾಹರಣೆ. ಕೋಮು ಧ್ರುವೀಕರಣದ ಪ್ರಚಾರ, ಅಕ್ರಮ ವಲಸಿಗರ ಕುರಿತು ವಿವಾದಾತ್ಮಕ ಆರೋಪಗಳು, ಚುನಾವಣಾ ಪ್ರಚಾರ ಅವಧಿಯಲ್ಲಿಯೂ ₹10 ಸಾವಿರ ಲಂಚ ವಿತರಣೆ, ಇತರ ರಾಜ್ಯಗಳಿಂದ ಬಿಜೆಪಿ ಮತದಾರರನ್ನು ಕರೆತರಲು ವಿಶೇಷ ರೈಲುಗಳು ಮುಂತಾದವು ನಡೆದಾಗ ಆಯೋಗದ ಮೌನಸಮ್ಮತಿಯು ಮೇಲಿನ ವಿಚಾರದಲ್ಲಿ ಯಾವ ಅನುಮಾನವೂ ಇಲ್ಲದಂತೆ ಮಾಡುತ್ತದೆ. ಆಡಳಿತ ಪಕ್ಷವು ಸಮೂಹ ಮಾಧ್ಯಮದ ಮೇಲೆ ಹೊಂದಿರುವ ನಿಯಂತ್ರಣ ಮತ್ತು ಚುನಾವಣೆ ಸಂದರ್ಭದಲ್ಲಿ ಆ ಪಕ್ಷಕ್ಕೆ ಸಿಗುವ ಅಪರಿಮಿತ ಹಣ, ಮುಕ್ತ ಮತ್ತು ನ್ಯಾಯಯುತ ಚುನಾವಣೆ ಇನ್ನು ಸಾಧ್ಯವೇ ಇಲ್ಲವೇನೋ ಎಂಬ ಭಾವ ಮೂಡಿಸುತ್ತದೆ. ವಿರೋಧ ಪಕ್ಷಗಳು ಗೆಲ್ಲುವ ಸಾಧ್ಯತೆ ಇನ್ನೂ ಶೂನ್ಯಕ್ಕೆ ಇಳಿದಿಲ್ಲ. ಆದರೆ, ವಿರೋಧ ಪಕ್ಷಗಳ ಮುಂದೆ ಇರುವ ಸವಾಲು ಬೃಹತ್ತಾದುದೇ ಆಗಿದೆ. 

ಚುನಾವಣಾ ವಂಚನೆಯು ಇವೆಲ್ಲಕ್ಕಿಂತ ಭಿನ್ನವಾದುದು. ಮತದಾನ ಮತ್ತು ಮತ ಎಣಿಕೆ ಪ್ರಕ್ರಿಯೆಯನ್ನು ತಿರುಚುವುದು ಚುನಾವಣಾ ವಂಚನೆ. ಹಾಗಾದಾಗ, ಫಲಿತಾಂಶವು ಮತದಾರರ ಆಯ್ಕೆಯನ್ನು ಪ್ರತಿಫಲಿಸುವುದಿಲ್ಲ. ಈ ವಿಚಾರದಲ್ಲಿ ಬಿಹಾರದ ಮತದಾನದ ಕುರಿತು ಹಲವು ಅನುಮಾನಗಳು (ಮತದಾನದ ಪ್ರಮಾಣ ಪ್ರಕಟಣೆಯಲ್ಲಿ ವಿಳಂಬ, ಅಂಚೆ ಮತ ಮತ್ತು ಇವಿಎಂ ಮತಗಳ ನಡುವೆ ಭಾರಿ ವ್ಯತ್ಯಾಸ, ದೊಡ್ಡ ಸಂಖ್ಯೆಯಲ್ಲಿ ಮತದಾರರ ಹೆಸರು ತೆಗೆದು ಹಾಕಿರುವುದು, ‘ಇತರರಿಗೆ’ ಮತಗಳಲ್ಲಿ ಭಾರಿ ಇಳಿಕೆ) ವ್ಯಕ್ತವಾಗಿವೆ. ಇಂತಹ ಗಂಭೀರ ಆರೋಪ ಮಾಡಲು ಬೇಕಿರುವ ಉನ್ನತ ಗುಣಮಟ್ಟದ ದೃಢವಾದ ಯಾವುದೇ ಸಾಕ್ಷ್ಯ ನಮ್ಮಲ್ಲಿ ಇಲ್ಲ. ಮೇಲೆ ವಿವರಿಸಿದ ಅಂಶಗಳನ್ನು ನೋಡಿದರೆ, ಚುನಾವಣಾ ವಂಚನೆ ನಡೆದಿರುವುದಕ್ಕೆ ಸಾಕ್ಷ್ಯ ಹುಡುಕಲು ಬಿಹಾರ ಸರಿಯಾದ ಸ್ಥಳ ಅಲ್ಲವೇ ಅಲ್ಲ. 

ನಮ್ಮ ಪ್ರಜಾಪ್ರಭುತ್ವವನ್ನು ಮರಳಿ ಪಡೆಯಲು ಶ್ರಮಿಸುತ್ತಿರುವವರಿಗೆ ವಿರೋಧ ಪಕ್ಷಗಳ ಕುಸಿತವು ದೊಡ್ಡ ಹಿನ್ನಡೆ. ಹಾಗಿದ್ದರೂ ಇದು ಹಾದಿಯ ಕೊನೆ ಅಲ್ಲ. ಮುಂದಿನ ಸುತ್ತಿನ ಚುನಾವಣೆಗಳು, ಅದರಲ್ಲೂ ವಿಶೇಷವಾಗಿ, ಪಶ್ಚಿಮ ಬಂಗಾಳದ ಚುನಾವಣೆಗಳು ಚುನಾವಣಾ ಸಮಗ್ರತೆಯ ಪರೀಕ್ಷೆಗೆ ಉತ್ತಮ. ಮುಂದಿನ ವಿದ್ಯಮಾನಗಳು ಯಾವ ಸ್ವರೂಪ ಪಡೆದುಕೊಳ್ಳಲಿವೆ ಎಂಬುದರ ನಿಜವಾದ ಸುಳಿವು ಉತ್ತರ ಪ್ರದೇಶ ಚುನಾವಣೆಯಲ್ಲಿ ದೊರೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.