ADVERTISEMENT

ಶಿಕ್ಷಣ, ಆರೋಗ್ಯ: ಅನುದಾನ ಹೆಚ್ಚಿದೆ, ಉಳಿದಂತೆ ಮಾಮೂಲು

ನಾರಾಯಣ ಎ.
Published 1 ಫೆಬ್ರುವರಿ 2019, 20:14 IST
Last Updated 1 ಫೆಬ್ರುವರಿ 2019, 20:14 IST
   

ಸರ್ಕಾರದ ವೆಚ್ಚ ನೀತಿಯಲ್ಲಿ ಶಿಕ್ಷಣ ಮತ್ತು ಆರೋಗ್ಯ ರಂಗಗಳನ್ನು ಮೂಲಭೂತ ಸಾಮಾಜಿಕ ಅಗತ್ಯಗಳೆಂದೂ, ಬಡತನ ನಿರ್ಮೂಲನಾ ಯೋಜನೆಗಳನ್ನು ಸಾಮಾಜಿಕ ಭದ್ರತೆಯನ್ನು ಒದಗಿಸುವ ಪರಿಕರಗಳೆಂದೂ ಪರಿಗಣಿಸಲಾಗುತ್ತದೆ. ಭಾರತದ ಅಭಿವೃದ್ಧಿ ಚರಿತ್ರೆಯುದ್ದಕ್ಕೂ ಸರ್ಕಾರಗಳು ಪಕ್ಷಾತೀತವಾಗಿ ಸಾಮಾಜಿಕ ಭದ್ರತೆಗೆ ನೀಡಿದ ಆದ್ಯತೆಯನ್ನು ಸಾಮಾಜಿಕ ಮೂಲಭೂತ ಅಗತ್ಯಗಳಾದ ಶಿಕ್ಷಣ ಮತ್ತು ಆರೋಗ್ಯ ರಂಗಗಳಿಗೆ ನೀಡಿಲ್ಲ ಎನ್ನುವುದು ವಾಸ್ತವ. ಈ ವರ್ಷದ ಬಜೆಟ್‌ನಲ್ಲೂ ಈ ಪರಂಪರೆ ಮುಂದುವರಿದದ್ದನ್ನು ಕಾಣಬಹುದು.

ಸಾಮಾಜಿಕ ಮೂಲಭೂತ ಅಗತ್ಯಗಳನ್ನು ಸಮರ್ಪಕವಾಗಿ ಒದಗಿಸದೆ ಇದ್ದಷ್ಟೂ ಕಾಲ ಸಾಮಾಜಿಕ ಭದ್ರತೆಯ ಹೆಸರಿನಲ್ಲಿ ಅದೆಷ್ಟೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಬಡತನವನ್ನು ನಿವಾರಿಸಲು ಸಾಧ್ಯವಾಗದು ಎನ್ನುವುದು ಕಲ್ಯಾಣ ಅರ್ಥಶಾಸ್ತ್ರದ ತತ್ವ ಮತ್ತು ಅಭಿವೃದ್ಧಿ ಸಾಧಿಸಿದ ದೇಶಗಳ ಪ್ರಾಯೋಗಿಕ ಅನುಭವ ಕಲಿಸುವ ಪಾಠ. ಭಾರತದ ನೀತಿನಿರೂಪಕರು ಈ ಪಾಠವನ್ನು ಎಂದೂ ಗಂಭೀರವಾಗಿ ಪರಿಗಣಿಸಿದ್ದಿಲ್ಲ. ಅದಕ್ಕೆ ಕಾರಣವಿದೆ.

ಸಾಮಾಜಿಕ ಭದ್ರತೆಗಾಗಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಒಂದು ಜನಪ್ರಿಯ ಆಯಾಮ ಇರುವುದರಿಂದ ಅವು ಚುನಾವಣೆಯಲ್ಲಿ ನೆರವಾಗುತ್ತವೆ. ಶಿಕ್ಷಣ ಮತ್ತು ಆರೋಗ್ಯದ ಮೇಲೆ ಮಾಡಲಾಗುವ ವೆಚ್ಚ ದೀರ್ಘಕಾಲೀನ ಪರಿಣಾಮ ಬೀರುವಂತಹವುಗಳು. ರಾಜಕೀಯದ ದೃಷ್ಟಿಯಿಂದ ಅವು ಆಕರ್ಷಕವಲ್ಲ.

ADVERTISEMENT

ಸಹಜ ಪರಿಸ್ಥಿತಿಯಲ್ಲಿ ಮಂಡಿಸಲಾಗುವ ಬಜೆಟ್‌ನಲ್ಲಿಯೇ ಕಾಣಸಿಗದ ಆದ್ಯತೆಯೊಂದನ್ನು ಚುನಾವಣಾ ವರ್ಷದ ಬಜೆಟ್‌ನಲ್ಲಿ, ಅದರಲ್ಲೂ ಮಧ್ಯಂತರ ಬಜೆಟ್‌ನಲ್ಲಿ ನಿರೀಕ್ಷಿಸಲಾಗದು. ಆದುದರಿಂದ ದೇಶದ ಒಟ್ಟು ಆದಾಯದ ಶೇಕಡ ಎರಡರಷ್ಟಾದರೂ ಆರೋಗ್ಯ ರಂಗದ ಮೇಲೆ ವೆಚ್ಚ ಮಾಡಬೇಕು ಎನ್ನುವ ದೀರ್ಘ ಕಾಲೀನ ಬೇಡಿಕೆಯನ್ನಾಗಲೀ, ವಿತ್ತೀಯ ನೀತಿಗಳ ಮೂಲಕ ಆರೋಗ್ಯ ಕ್ಷೇತ್ರಕ್ಕೆ ನೆರವಾಗಬೇಕು ಎಂಬ ಬೇಡಿಕೆಯನ್ನಾಗಲೀ (ಉದಾಹರಣೆಗೆ ಆರೋಗ್ಯ ಸೇವೆಗಳ ಮೇಲೆ ಮಾಡುವ ವೆಚ್ಚಗಳಿಗೆ ಅನುಗುಣವಾಗಿ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡುವುದು) ಸಾಕಾರಗೊಳಿಸುವ ನಿಟ್ಟಿನಲ್ಲಿ ಬಜೆಟ್ ವಿಶೇಷವಾಗಿ ಯಾವುದೇ ಸೂಚನೆಗಳನ್ನು ನೀಡಿಲ್ಲ ಎನ್ನುವುದರಲ್ಲಿ ವಿಶೇಷವೇನೂ ಇಲ್ಲ.

ಕೊನೆಗೂ ಬಜೆಟ್‌ನ ಸ್ವರೂಪವನ್ನು ನಿರ್ಣಯಿಸಿದ್ದು ಸಾಮಾಜಿಕ ಭದ್ರತೆಗಾಗಿ ಹಾಕಿಕೊಂಡ ಅಸಂಘಟಿತ ಕಾರ್ಮಿಕರ ಪಿಂಚಣಿ ಯೋಜನೆ, ಸಣ್ಣ ಮತ್ತು ಅತಿಸಣ್ಣ ಕೃಷಿಕರಿಗಾಗಿ ಘೋಷಿಸಲಾದ ವಾರ್ಷಿಕ ವರಮಾನ ಯೋಜನೆ, ಆದಾಯ ತೆರಿಗೆಯ ಕನಿಷ್ಠ ಮಿತಿಯ ಹೆಚ್ಚಳ ಇತ್ಯಾದಿಗಳು.

ಬಜೆಟ್ ಆರೋಗ್ಯಕ್ಕೆ ಸಂಬಂಧಿಸಿ ಹೊಸ ಯೋಜನೆಗಳನ್ನಾಗಲೀ, ನೀತಿಗಳನ್ನಾಗಲೀ ಪ್ರಸ್ತಾಪಿಸದೆ ಹೋದರೂ ಈ ರಂಗಕ್ಕೆ ನೀಡಲಾದ ಅನುದಾನ (₹61,398 ಕೋಟಿ) ಹೋದ ವರ್ಷಕ್ಕೆ ಹೋಲಿಸಿದರೆ ಶೇಕಡ 16ರಷ್ಟು ಹೆಚ್ಚಳ ಕಂಡಿದೆ. ಎರಡು ವರ್ಷಗಳಲ್ಲಿ ಇದು ಮಹತ್ತರ ಹೆಚ್ಚಳ. ಭವಿಷ್ಯದಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ ಹತ್ತು ಅಂಶಗಳಲ್ಲಿ ಒಂಬತ್ತನೆಯದ್ದು ಆರೋಗ್ಯದ ಕುರಿತಾಗಿದೆ. ಅದು ಬಹಳ ಸ್ಥೂಲವಾದ ಒಂದು ಭರವಸೆ: ‘2030ರ ವೇಳೆಗೆ ಸಮಗ್ರ ಆರೋಗ್ಯ ಸೇವೆಗಳನ್ನು ಜನರು ಎಲ್ಲಾ ಸಂಕಷ್ಟಗಳಿಂದ ಮುಕ್ತವಾಗಿ ಪಡೆದುಕೊಳ್ಳಲು ಸಾಧ್ಯವಾಗುವಂತೆ ಮಾಡಲು ಸರಕಾರ ಶ್ರಮಿಸಲಿದೆ.’ ಈ ಗುರಿ ಸೇರುವ ಹಾದಿಯ ಬಗ್ಗೆ ವಿಶೇಷ ಪ್ರಸ್ತಾಪವೇನೂ ಇಲ್ಲ.

ಶಿಕ್ಷಣ ಕ್ಷೇತ್ರಕ್ಕೆ ನೀಡಲಾದ ಅನುದಾನ (₹93,847.64 ಕೋಟಿ) ಸುಮಾರು ಶೇಕಡ 10ರಷ್ಟು ಹೆಚ್ಚಳ ಕಂಡಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಶಿಕ್ಷಣ ಕ್ಷೇತ್ರದ ಮೂಲಭೂತ ಸೌಕರ್ಯಗಳನ್ನು ಮತ್ತು ವ್ಯವಸ್ಥೆಯನ್ನು ಸಮಗ್ರವಾಗಿ ಪುನಶ್ಚೇತನಗೊಳಿಸುವ ಯೋಜನೆಯೊಂದನ್ನು ಪ್ರಕಟಿಸಲಾಗಿದೆ. ಶಿಕ್ಷಣ ವ್ಯವಸ್ಥೆಯ ಪುನಶ್ಚೇತನ ಸರ್ಕಾರದ ಅತೀ ಪ್ರಮುಖ ಆದ್ಯತೆಯಾಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಯೋಜನೆ ಇಂತಹ ಒಂದು ಆದ್ಯತೆಯನ್ನು ಗುರುತಿಸುವ ಹಾದಿಯಲ್ಲಿದ್ದರೂ ಯೋಜನೆಯ ರೂಪುರೇಷೆಗಳು ಸ್ಪಷ್ಟವಾಗುವವರೆಗೆ ಅದರ ಬಗ್ಗೆ ಯಾವುದೇ ಭರವಸೆ ಇಟ್ಟುಕೊಳ್ಳಲು ಸಾಧ್ಯವಿಲ್ಲ.

ಉಳಿದಂತೆ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳು ಎಂದಿನಂತೆ ಉತ್ಕೃಷ್ಟತೆಯ ದ್ವೀಪಗಳನ್ನು ಸೃಷ್ಟಿಸುವ ಮತ್ತು ತಂತ್ರಜ್ಞಾನದಲ್ಲೇ ಶಿಕ್ಷಣ ರಂಗದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲೇ ಇರುವಂತಿದೆ.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.