
ಸಾಂದರ್ಭಿಕ ಚಿತ್ರ
ಕೃಪೆ: ಎಐ
ಚೀನಾ ಮತ್ತು ಜಪಾನ್‌ಗಳು ಸಣ್ಣ ದ್ವೀಪಗಳಿಗಾಗಿ ಚಕಮಕಿಗೆ ಇಳಿದಿದ್ದು, ಅಮೆರಿಕವನ್ನೂ ಒಳಗೆಳೆಯಬಲ್ಲ ದೊಡ್ಡ ಸೆಣಸಾಟವನ್ನು ಆರಂಭಿಸುವ, ವ್ಯಾಪಾರಕ್ಕೆ ತೊಂದರೆ ನೀಡುವ, ಮತ್ತು ಏಷ್ಯಾದ ಸ್ಥಿರತೆಯನ್ನು ಹಾಳುಗೆಡವುವ ಅಪಾಯಗಳು ಎದುರಾಗಿವೆ. ಉದ್ವಿಗ್ನತೆಗಳು ಕ್ಷಿಪ್ರವಾಗಿ ಹೆಚ್ಚುತ್ತಿದ್ದು, ಸಣ್ಣ ತಪ್ಪುಗಳು ಅಪಾಯಕಾರಿಯಾಗಬಲ್ಲವು.
ಚೀನಾ ಮತ್ತು ಜಪಾನ್ ನಡುವಿನ ಉದ್ವಿಗ್ನತೆ ಒಂದು ಗಂಭೀರ ಹಂತವನ್ನು ತಲುಪಿದೆ. ಪ್ರಾಮಾಣಿಕವಾಗಿ ಹೇಳುವುದಾದರೆ, ಬಹಳಷ್ಟು ಜನರು ಅಂದುಕೊಳ್ಳುವುದಕ್ಕಿಂತಲೂ ಆತಂಕಕಾರಿಯಾದ ಘಟ್ಟವನ್ನು ಈ ಬೆಳವಣಿಗೆ ತಲುಪಿದೆ. ನವೆಂಬರ್ 16ರಂದು, ಚೀನಾದ ತಟ ರಕ್ಷಣಾ ಹಡಗುಗಳು ಜಪಾನ್ ನಿಯಂತ್ರಣದಲ್ಲಿರುವ, ಆದರೆ ಚೀನಾ ತನ್ನದು ಎಂದು ಹೇಳಿಕೊಳ್ಳುವ ದ್ವೀಪಗಳ ಬಳಿಗೆ ಸಾಗಿದವು. ಆದರೆ, ಜಪಾನ್ ಈ ಚೀನೀ ಹಡಗುಗಳನ್ನು ಅಲ್ಲಿಂದ ಓಡಿಸಿತು. ಆದರೆ, ಅಲ್ಲಿಗೇ ಈ ವಿಚಾರ ಮುಕ್ತಾಯ ಕಾಣಲಿಲ್ಲಿ, ಅದು ಹಾಗೆ ಮುಕ್ತಾಯಗೊಳ್ಳಲು ಸಾಧ್ಯವೂ ಇಲ್ಲ. ಈ ಸಣ್ಣ ದ್ವೀಪಗಳನ್ನು ಜಪಾನ್ ಸೆಂಕಾಕು ದ್ವೀಪಗಳೆಂದು ಕರೆದರೆ, ಚೀನಾ ಡಿವೋಯು ಎಂದು ಕರೆಯುತ್ತದೆ. ಇವು ಕೇವಲ 7 ಚದರ ಕಿಲೋಮೀಟರ್ ವಿಸ್ತಾರ ಹೊಂದಿರುವ ಸಣ್ಣ ದ್ವೀಪಗಳಾಗಿವೆ. ಗಾತ್ರದಲ್ಲಿ ಸಣ್ಣವಾದರೂ, ಈ ದ್ವೀಪಗಳು ಒಂದು ಕದನಕ್ಕೆ ಕಾರಣವಾಗಿ, ಅದರೊಳಗೆ ಅಮೆರಿಕವನ್ನೂ ಎಳೆತಂದು, ಜಾಗತಿಕ ವ್ಯಾಪಾರಕ್ಕೆ ಅಡ್ಡಿ ಉಂಟುಮಾಡಿ, ಏಷ್ಯಾದಲ್ಲಿ ಅಧಿಕಾರದ ಸಮತೋಲನವನ್ನು ಎಂದೆಂದಿಗೂ ಬದಲಿಸಬಲ್ಲವು.
ವಾಸ್ತವವಾಗಿ ಹೇಳಬೇಕೆಂದರೆ, ಈ ಬೆಳವಣಿಗೆ ಕೇವಲ ದ್ವೀಪಗಳಿಗೆ ಸಂಬಂಧಿಸಿದ್ದಲ್ಲ. ಇದು ಅಹಂಕಾರ, ಇತಿಹಾಸ, ಮಿಲಿಟರಿ ಪ್ರಾಬಲ್ಯ, ಮತ್ತು ಜಗತ್ತಿನ ಅತ್ಯಂತ ಪ್ರಮುಖ ವ್ಯಾಪಾರ ಮಾರ್ಗಗಳಲ್ಲಿ ಒಂದನ್ನು ನಿಯಂತ್ರಿಸುವ ಬಯಕೆಗೆ ಸಂಬಂಧಿಸಿದೆ. ಜಪಾನಿನಿಂದ ತೈವಾನ್ ಕೇವಲ ಕೇವಲ 110 ಕಿಲೋಮೀಟರ್ ದೂರದಲ್ಲಿದೆ. ತೈವಾನ್‌ಗೆ ಸಂಬಂಧಿಸಿದಂತೆ ಯಾವುದೇ ಚಕಮಕಿ ನಡೆದರೂ, ಅದು ತಕ್ಷಣವೇ ಜಪಾನಿನ ಸಮುದ್ರವನ್ನು ತಲುಪಲಿದೆ. ಆದ್ದರಿಂದಲೇ ಜಪಾನ್ ಇಷ್ಟೊಂದು ಆತಂಕಕ್ಕೆ ಒಳಗಾಗಿರುವುದು. ಚೀನಾದ ಮಿಲಿಟರಿ ಕ್ಷಿಪ್ರವಾಗಿ ಬೆಳವಣಿಗೆ ಹೊಂದುತ್ತಿದೆ. ಇನ್ನು 2025ರಲ್ಲಿ ಜಪಾನಿನ ರಕ್ಷಣಾ ವರದಿ 1,000ಕ್ಕೂ ಹೆಚ್ಚು ಬಾರಿ ಚೀನಾದ ಹೆಸರನ್ನು ಪ್ರಸ್ತಾಪಿಸಿದೆ. ಇದು ಜಪಾನ್ ಏನನ್ನು ತನ್ನ ಅತಿದೊಡ್ಡ ಅಪಾಯ ಎಂದು ಭಾವಿಸಿದೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ.
ಈ ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸುವ ಅಂಶವೆಂದರೆ, ಎರಡರ ಪೈಕಿ ಯಾವ ದೇಶವೂ ಮೃದುವಾಗಲು ಸಿದ್ಧವಿಲ್ಲ. ಜಪಾನಿನಲ್ಲಿನ ಅಮೆರಿಕದ ರಾಯಭಾರಿ ಈ ದ್ವೀಪಗಳ ಮೇಲೆ ಏನಾದರೂ ದಾಳಿಯಾದರೆ ಅವುಗಳನ್ನು ಅಮೆರಿಕ ರಕ್ಷಿಸಲಿದೆ ಎಂದಿದ್ದಾರೆ. ಆದರೆ ಅಮೆರಿಕ ಈ ದ್ವೀಪಗಳನ್ನು ಅಧಿಕೃತವಾಗಿ ಜಪಾನಿನ ಪ್ರದೇಶಗಳೆಂದು ಒಪ್ಪಿಲ್ಲ. ಚೀನಾ ಈ ಬೆಳವಣಿಗೆಯನ್ನು 'ರಹಸ್ಯ ಉದ್ದೇಶಗಳನ್ನು ಹೊಂದಿರುವ ರಾಜಕೀಯ ನಾಟಕ' ಎಂದು ಕರೆದಿದೆ. ಇದೇ ವೇಳೆ, ಚೀನಾ ತನ್ನ ಪ್ರಧಾನಿಗೆ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಜಪಾನಿನ ಪ್ರಧಾನಿಯನ್ನು ಭೇಟಿಯಾಗಲು ಅನುಮತಿಸಿಲ್ಲ. ಎರಡು ಮಹಾನ್ ಶಕ್ತಿಗಳು ಪರಸ್ಪರರೊಡನೆ ಮಾತನಾಡುವುದನ್ನು ನಿಲ್ಲಿಸಿದಾಗ ಪರಿಸ್ಥಿತಿ ಬಹಳ ಬೇಗನೆ ಕೈತಪ್ಪಿ ಹೋಗುವ ಸಾಧ್ಯತೆಗಳಿರುತ್ತವೆ.
ಬಹಳಷ್ಟು ಜನರು ಅರ್ಥ ಮಾಡಿಕೊಳ್ಳದ ವಿಚಾರಗಳು ಇಲ್ಲಿವೆ. ಚೀನಾ ಮತ್ತು ಜಪಾನ್ ಕೇವಲ ರಾಜಕೀಯ ಎದುರಾಳಿಗಳಲ್ಲ. ಅವುಗಳ ನಡುವೆ ಇನ್ನೂ ಸಂಪೂರ್ಣವಾಗಿ ವಾಸಿಯಾಗದ ರಾಜಕೀಯ ಗಾಯಗಳಿವೆ. 1930ರ ದಶಕದಿಂದ, ಎರಡನೇ ಮಹಾಯುದ್ಧದ ತನಕ ಜಪಾನಿನ ಇಂಪೀರಿಯಲ್ ಸೇನೆ ಚೀನಾದಲ್ಲಿ ಘೋರ ಕೃತ್ಯಗಳನ್ನು ನಡೆಸಿತ್ತು. ಇದರಲ್ಲಿ ಹತ್ತಾರು ಸಾವಿರ ನಾಗರಿಕರನ್ನು ಹತ್ಯೆಗೈದ ನಾನ್ಜಿಂಗ್ ಹತ್ಯಾಕಾಂಡವೂ ಸೇರಿತ್ತು. ಚೀನಾ ಈ ದುರ್ಘಟನೆಯನ್ನು ಇನ್ನೂ ಮರೆತಿಲ್ಲ. ಪ್ರತಿ ಬಾರಿ ಜಪಾನ್ ತನ್ನ ಮಿಲಿಟರಿ ವೆಚ್ಚವನ್ನು ಹೆಚ್ಚಿಸಿದಾಗ, ಅಥವಾ ಕಠಿಣವಾದ ನಿಲುವನ್ನು ತಾಳಿದಾಗ, ಜಪಾನ್ ಮತ್ತೆ ತನ್ನ ಮಿಲಿಟರಿ ಇತಿಹಾಸದತ್ತ ಸಾಗುತ್ತಿದೆ ಎಂದು ಚೀನಾ ಆರೋಪಿಸುತ್ತದೆ. ಇನ್ನೊಂದೆಡೆ, ಜಪಾನ್ ಹೆಚ್ಚುತ್ತಿರುವ ಚೀನಾದ ಮಿಲಿಟರಿ ಸಾಮರ್ಥ್ಯ ಮತ್ತು ಅದರ ಆಕ್ರಮಣಕಾರಿ ನೀತಿಯನ್ನು ತನ್ನ ಸುರಕ್ಷತೆಗೆ ನೇರ ಅಪಾಯ ಎಂದು ಪರಿಗಣಿಸುತ್ತದೆ.
ಈಗ ಅತ್ಯಂತ ಆತಂಕದಾಯವ ವಿಚಾರವೆಂದರೆ, ಇವೆರಡೂ ದೇಶಗಳ ಆರ್ಥಿಕತೆ ಪರಸ್ಪರ ಗಾಢವಾಗಿ ಸಂಬಂಧಿತವಾಗಿದ್ದು, ಅವುಗಳ ನಡುವಿನ ಸಂಬಂಧ ಅತ್ಯಂತ ದುರ್ಬಲವಾಗಿದೆ. ಚೀನಾ ಜಪಾನಿನ ಅತಿದೊಡ್ಡ ವ್ಯಾಪಾರ ಸಹಯೋಗಿ. ಕಡಿಮೆ ಬೆಲೆಯ ಕಾರ್ಮಿಕರು ಮತ್ತು ಬೃಹತ್ ಮಾರುಕಟ್ಟೆ ಲಭ್ಯತೆಯ ಕಾರಣದಿಂದಾಗಿ, ದಶಕಗಳ ಹಿಂದೆಯೇ ಟೊಯೋಟಾ, ಪ್ಯಾನಸೋನಿಕ್, ಮತ್ತು ಯುನಿಕ್ಲೋನಂತಹ ಜಪಾನಿ ಕಂಪನಿಗಳು ಚೀನಾದಲ್ಲಿ ಕಾರ್ಖಾನೆಗಳನ್ನು ನಿರ್ಮಿಸಿವೆ. ಆದರೆ ಈಗ, ಬಿವೈಡಿ ಯಂತಹ ಚೀನೀ ಕಂಪನಿಗಳು ಜಪಾನಿ ಕಾರು ಉತ್ಪಾದಕರೊಡನೆ ಚೀನಾದಲ್ಲಿ ಮಾತ್ರವಲ್ಲದೆ, ಜಗತ್ತಿನಾದ್ಯಂತ ಸ್ಪರ್ಧಿಸುತ್ತಿವೆ. ಶೀನ್‌ನಂತಹ ಚೀನೀ ಬ್ರ್ಯಾಂಡ್‌ಗಳು ಜಪಾನಿನಲ್ಲಿ ವೇಗವಾಗಿ ಬೆಳೆಯುತ್ತಿವೆ. ಈಗ ಸಮತೋಲನದಲ್ಲಿ ಬದಲಾವಣೆ ಉಂಟಾಗಿದ್ದು, ಜಪಾನ್ ತನ್ನ ಮೇಲುಗೈಯನ್ನು ಕಳೆದುಕೊಳ್ಳುತ್ತಿದೆ.
ಇದೇ ಸಂದರ್ಭದಲ್ಲಿ, ಜಪಾನಿ ಕಂಪನಿಗಳು ಚೀನಾದಿಂದ ಹೊರನಡೆಯುತ್ತಿವೆ. ಹೂಡಿಕೆ ಕುಸಿಯುತ್ತಿದೆ. ಚೀನಾದಲ್ಲಿನ ಕಟ್ಟುನಿಟ್ಟಿನ ಕಾನೂನುಗಳು, ಗುಪ್ತಚರ ವಿರೋಧಿ ನಿಯಮಗಳು ಮತ್ತು ಜಪಾನಿ ನಾಗರಿಕರ ಬಂಧನಗಳು ಉದ್ಯಮಗಳನ್ನು ಆತಂಕಕ್ಕೆ ಈಡುಮಾಡಿವೆ. ಅಮೆರಿಕ ಸಹ ಜಪಾನಿನ ಟೋಕ್ಯೋ ಇಲೆಕ್ಟ್ರಾನ್ ಮತ್ತು ನಿಕಾನ್ ಸಂಸ್ಥೆಗಳನ್ನು ಚೀನಾಗೆ ಆಧುನಿಕ ಸೆಮಿಕಂಡಕ್ಟರ್ ಉಪಕರಣಗಳ ಮಾರಾಟ ನಡೆಸದಂತೆ ನಿರ್ಬಂಧಿಸಿದೆ. ಇವೆಲ್ಲ ಬೆಳವಣಿಗೆಗಳು ಸೇರಿ, ಉಭಯ ದೇಶಗಳು ಪರಸ್ಪರ ಅವಲಂಬಿತವಾಗಿದ್ದರೂ, ಅವುಗಳನ್ನು ದೂರ ತಳ್ಳುತ್ತಿವೆ.
ಇನ್ನು ಗಮನಿಸಬೇಕಾದ ಆಯಾಮವೆಂದರೆ ಪ್ರವಾಸೋದ್ಯಮ ಮತ್ತು ಶಿಕ್ಷಣ. ಚೀನಾ ತನ್ನ ನಾಗರಿಕರಿಗೆ ಜಪಾನಿಗೆ ತೆರಳದಂತೆ ಎಚ್ಚರಿಕೆ ನೀಡಿದೆ. ಜಪಾನಿಗೆ ಭೇಟಿ ನೀಡುವ ವಾರ್ಷಿಕ ಪ್ರವಾಸಿಗರ ಪೈಕಿ 25% ಚೀನೀ ಪ್ರವಾಸಿಗರೇ ಆಗಿರುತ್ತಾರೆ. ಅವರು ಕಳೆದ ತ್ರೈಮಾಸಿಕ ಅವಧಿಯಲ್ಲಿ ಜಪಾನಿನಲ್ಲಿ ಅತಿಹೆಚ್ಚು, ಅಂದರೆ ₹1,19,680 ಕೋಟಿ ವೆಚ್ಚ ಮಾಡಿದ್ದರು. ಒಂದು ವೇಳೆ ಚೀನೀ ಪ್ರವಾಸಿಗರು ಬರುವುದು ಸ್ಥಗಿತಗೊಂಡರೆ, ಜಪಾನಿನ ಪ್ರವಾಸೋದ್ಯಮಕ್ಕೆ ಬಹುದೊಡ್ಡ ಹೊಡೆತ ಎದುರಾಗಲಿದೆ. ಜಪಾನಿನಲ್ಲಿ 1,23,485 ಚೀನೀ ವಿದ್ಯಾರ್ಥಿಗಳಿದ್ದು, ಇದು ಅಲ್ಲಿನ ಅತಿದೊಡ್ಡ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಸಮೂಹವಾಗಿದೆ. ಒಂದು ವೇಳೆ ಚೀನಾ ಈ ವಿದ್ಯಾರ್ಥಿಗಳನ್ನು ಹಿಂದಕ್ಕೆ ಕರೆಸಿಕೊಂಡರೆ, ಆಗ ಜಪಾನಿ ವಿಶ್ವವಿದ್ಯಾಲಯಗಳಿಗೂ ಅದರ ಬಿಸಿ ತಟ್ಟಬಹುದು.
ಹಾಗಾದರೆ ಮುಂದೇನಾಗಬಹುದು? ಎರಡೂ ದೇಶಗಳು ಈಗ ಒಂದು ಅತ್ಯಂತ ಅಪಾಯಕಾರಿ ಆಟದಲ್ಲಿ ತೊಡಗಿವೆ. ಪೂರ್ಣ ಪ್ರಮಾಣದ ಯುದ್ಧ ನಡೆದರೆ ಎರಡೂ ಆರ್ಥಿಕತೆಗಳು ನಾಶಗೊಂಡು, ಅಮೆರಿಕವೂ ಮಧ್ಯ ಪ್ರವೇಶ ಮಾಡುವ ಸಾಧ್ಯತೆಗಳು ಇರುವುದರಿಂದ, ಆ ಸಾಧ್ಯತೆ ಕಡಿಮೆ. ಆದರೆ, ಸಣ್ಣಪುಟ್ಟ ಚಕಮಕಿಗಳು, ಅಂದರೆ, ಪರಸ್ಪರರ ನೌಕೆಗಳ ಮೇಲೆ ದಾಳಿ, ಯುದ್ಧ ವಿಮಾನಗಳ ಮೇಲೆ ದಾಳಿ, ಮತ್ತು ಕ್ಷಿಪಣಿ ದಾಳಿಗಳು ನಡೆಯಬಹುದು. ಆದರೆ, ಇವುಗಳಲ್ಲಿ ಯಾವ ಘಟನೆಯಾದರೂ ಆಕಸ್ಮಿಕವಾಗಿಯೇ ದೊಡ್ಡ ಪ್ರಮಾಣದ ಯುದ್ಧಕ್ಕೆ ತಿರುಗಬಲ್ಲದು.
ಚೀನಾ ಆರ್ಥಿಕ ಒತ್ತಡವನ್ನೂ ಆಯುಧವಾಗಿ ಬಳಸಿಕೊಳ್ಳುತ್ತಿದೆ. ಇದೇ ರೀತಿ 2012ರಲ್ಲಿ ಚೀನಾ ಒಂದು ವಿವಾದದ ನಂತರ ಜಪಾನಿ ಉತ್ಪನ್ನಗಳನ್ನು ಬಹಿಷ್ಕರಿಸಿತ್ತು. ಜಪಾನ್ ತನ್ನ ಮಿಲಿಟರಿಯನ್ನು ಬಲಪಡಿಸುತ್ತಿದ್ದು, ಅಮೆರಿಕದ ಜೊತೆಗಿನ ತನ್ನ ಮೈತ್ರಿಯನ್ನೂ ಗಟ್ಟಿಗೊಳಿಸುತ್ತಿದೆ. ಈಗ ಚೀನಾ ಮತ್ತು ಜಪಾನ್ ಎರಡೂ ರಾಜಿಗೆ ಸಿದ್ಧವಿಲ್ಲ. ನೈಜ ದುರಂತವೆಂದರೆ, ಪರಸ್ಪರ ಆಳವಾದ ಸಾಂಸ್ಕೃತಿಕ ನಂಟು ಹೊಂದಿರುವ ಇವೆರಡು ದೇಶಗಳು ಮತ್ತು ಅವುಗಳ ವೈಷಮ್ಯ ಸಂಪೂರ್ಣ ಭೂ ಪ್ರದೇಶವನ್ನೇ ಅಸ್ಥಿರತೆಯತ್ತ ತಳ್ಳುತ್ತಿವೆ. ಉಭಯ ದೇಶಗಳ ನಾಯಕರಿಗೂ ಯುದ್ಧಗಳನ್ನು ಆರಂಭಿಸುವುದು ಸುಲಭ, ಆದರೆ, ಅವುಗಳನ್ನು ನಿಯಂತ್ರಿಸುವುದು ಬಹುತೇಕ ಅಸಾಧ್ಯ ಎಂಬ ಅರಿವು ಮೂಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.