ADVERTISEMENT

ವಿಶ್ಲೇಷಣೆ: ಭಾರತದ ಪ್ರಜಾಪ್ರಭುತ್ವದ ಸ್ಥಿರತೆಗೆ ಕಾರಣಗಳು ಭಾಗ-3

ಕೆ.ಎನ್‌.ಹರಿಕುಮಾರ್‌
Published 21 ಜನವರಿ 2026, 0:30 IST
Last Updated 21 ಜನವರಿ 2026, 0:30 IST
.
.   
ರಾಜಕೀಯ ಆಡಳಿತದಲ್ಲಿ ಅಧಿಕಾರಶಾಹಿಗೆ ಇರುವ ಸುದೀರ್ಘ ಅನುಭವ, ಸಾರ್ವಜನಿಕ ವ್ಯವಹಾರಗಳಲ್ಲಿ ಇರುವ ಜ್ಞಾನ ಮತ್ತು ಪರಿಣತಿ, ಮುರಿಯದಂತೆ ಬಾಗಿಸುವ ಚಾತುರ್ಯವು ದೇಶೀ ಮತ್ತು ಅಂತರರಾಷ್ಟ್ರೀಯ ನೀತಿಗಳಲ್ಲಿ ನಿರಂತರತೆ, ಸ್ಥಿರತೆ ಹಾಗೂ ರಾಷ್ಟ್ರದ ಕಾರ್ಯಸೂಚಿಯನ್ನು ರೂಪಿಸಿ ಅನುಷ್ಠಾನಗೊಳಿಸಲು ನೆರವಾಗುತ್ತವೆ. ಆಡಳಿತದಲ್ಲಿ ರಾಜಕಾರಣಿಗಳ ವೈಫಲ್ಯ ಕೂಡ ಅಧಿಕಾರಶಾಹಿಗೆ ವ್ಯಾಪಕ ಮತ್ತು ವಿಸ್ತೃತವಾದ ಅಧಿಕಾರಗಳನ್ನು ಕೊಟ್ಟಿದೆ.

ಆರಂಭದಲ್ಲಿ, ಅಂದರೆ ಸ್ವಾತಂತ್ರ್ಯ ಬಂದ ಮೊದಲಿನ ವರ್ಷಗಳಲ್ಲಿ ರಾಷ್ಟ್ರೀಯತೆಯ ಯೋಜನೆಯ ಜೊತೆಗೆ ನ್ಯಾಯಾಂಗವು ಸಂಪೂರ್ಣವಾಗಿ ಇರಲಿಲ್ಲ. ಸರಣಿ ತೀರ್ಪುಗಳ ಮೂಲಕ ಭೂ ಸುಧಾರಣೆಗೆ ಸಂಬಂಧಿಸಿದ ಪ್ರಮುಖ ಕಾಯ್ದೆಯೊಂದನ್ನು ರದ್ದುಪಡಿಸಿ ನ್ಯಾಯಾಂಗವು ಸಾಮಾಜಿಕ ನ್ಯಾಯ ಕಾರ್ಯಸೂಚಿಗೆ ಸಂಬಂಧಿಸಿ ತನ್ನನ್ನು ವಿರುದ್ಧ ಭಾಗದಲ್ಲಿ ಸ್ಥಾಪಿಸಿಕೊಂಡಿತ್ತು; ಇದರಿಂದಾಗಿ ಈ ವಿಚಾರವನ್ನು ನ್ಯಾಯಾಂಗದ ಪರಾಮರ್ಶೆಯಿಂದ ಹೊರಗೆ ಇರಿಸಲು ಸಂವಿಧಾನಕ್ಕೆ ಸರ್ಕಾರವು ತಿದ್ದುಪಡಿ ತರಬೇಕಾಯಿತು. ಆದರೆ, ನಂತರದ ಹಂತದಲ್ಲಿ ಸಂವಿಧಾನದ ಮೂಲ ಸ್ವರೂಪವನ್ನು ಬದಲಾಯಿಸಲು ಅವಕಾಶ ಇಲ್ಲ ಎಂದು ತೀರ್ಪು ನೀಡುವ ಮೂಲಕ ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಸಂವಿಧಾನ ರಕ್ಷಕನಾಗಿ ತನ್ನ ಪಾತ್ರವನ್ನು ನ್ಯಾಯಾಂಗವು ದೃಢಪಡಿಸಿಕೊಂಡಿತು. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಶರಣಾದರೂ ಬಳಿಕ ಸಾಮಾಜಿಕ ಹೋರಾಟಗಾರ ಪಾತ್ರವನ್ನು ವಹಿಸಿಕೊಂಡಿತು. ಸಾರ್ವಜನಿಕ ಹಿತಾಸಕ್ತಿಯ (ಪಿಐಎಲ್‌) ಹಲವಾರು ಪ್ರಕರಣಗಳನ್ನು ವಿಚಾರಣೆಗೆ ಎತ್ತಿಕೊಳ್ಳುವ ಮೂಲಕ ಸಾಮಾನ್ಯ ಮನುಷ್ಯ, ನಾಗರಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯ, ಒಟ್ಟಾರೆಯಾಗಿ ಆಡಳಿತ ಮತ್ತು ಸಂವಿಧಾನದ ಕೊನೆಯ ರಕ್ಷಕನಾಗಿ ತನ್ನನ್ನು ರೂಪಿಸಿಕೊಂಡಿತು. ಕೆಲವೊಂದು ಬಾರಿ ಸ್ವಯಂಪ್ರೇರಿತವಾಗಿ ಸಾರ್ವಜನಿಕ ವಿಚಾರಗಳಲ್ಲಿಯೂ ಮಧ್ಯಪ್ರವೇಶಿಸಿತು. ಇದು ಸಾರ್ವಜನಿಕರಲ್ಲಿ ನ್ಯಾಯಾಂಗದ ವಿಶ್ವಾಸಾರ್ಹತೆ ಮತ್ತು ಗೌರವವನ್ನು ಹೆಚ್ಚಿಸಿತು. ಭ್ರಷ್ಟ ಮತ್ತು ಅಪರಾಧ ಹಿನ್ನೆಲೆಯ ರಾಜಕಾರಣಿಗಳು ತನ್ನ ಆಡಳಿತದ ಕರ್ತವ್ಯಗಳಲ್ಲಿ ಹೆಚ್ಚು ಹೆಚ್ಚು ವಿಫಲವಾದಂತೆಲ್ಲ ಅವರ ವಿಶ್ವಾಸಾರ್ಹತೆ ಮತ್ತು ನ್ಯಾಯಸಮ್ಮತತೆ ಸಾರ್ವಜನಿಕರಲ್ಲಿ ಕುಸಿಯಿತು; ನಿಸ್ಸಹಾಯಕ ಸಾಮಾನ್ಯ ಮನುಷ್ಯನ ರಕ್ಷಣೆಗೆ ನ್ಯಾಯಾಲಯವು ಹೆಚ್ಚು ಹೆಚ್ಚು ಧಾವಿಸಿದಂತೆಲ್ಲ ಅದರ ಪ್ರತಿಷ್ಠೆ ಮತ್ತು ಅಧಿಕಾರ ದೊಡ್ಡ ಮಟ್ಟದಲ್ಲಿ ಹೆಚ್ಚಳವಾಯಿತು. ಯಾವುದೋ ಕಾರಣಕ್ಕಾಗಿ ರಾಜಕಾರಣಿಗಳಿಂದ ಕೆಲಸ ಮಾಡಿಸಿಕೊಳ್ಳುವುದು ಅಸಾಧ್ಯವಾದಾಗಲೆಲ್ಲ ಈ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲು ನ್ಯಾಯಾಲಯಗಳು ಸಿದ್ಧ ವಾಗಿದ್ದವು. ಸಾಮಾಜಿಕ ಕಾರ್ಯಕರ್ತರಿಗೆ ಸಮಸ್ಯೆ ಅಥವಾ ಬಿಕ್ಕಟ್ಟು ಎದುರಾದಾಗಲೆಲ್ಲ, ಸ್ವತಂತ್ರ, ನಿಷ್ಪಕ್ಷಪಾತಿ ಮತ್ತು ನ್ಯಾಯಯುತ ಎಂದು ಬಿಂಬಿತವಾಗಿದ್ದ ನ್ಯಾಯಾಲಯಕ್ಕೆ ಅವರು ಮನವಿ ಸಲ್ಲಿಸತೊಡಗಿದರು.

ಕಾಲಕ್ರಮೇಣ, ಆಡಳಿತದಲ್ಲಿ ರಾಜಕಾರಣಿಗಳ ವೈಫಲ್ಯವು ಎದ್ದು ಕಾಣತೊಡಗಿದ ಬಳಿಕ ದಿನನಿತ್ಯದ ಆಡಳಿತದಲ್ಲಿಯೂ ನ್ಯಾಯಾಂಗವು ನೇರ ಪಾತ್ರ ವಹಿಸಲು ಆರಂಭಿಸಿತು. ಶಾಸಕಾಂಗ ಗಳು ಅಂಗೀಕರಿಸಿದ ಕಾನೂನುಗಳ ಅಧ್ಯಾದೇಶ, ಕಾನೂನಿನ ಪೂರ್ವನಿದರ್ಶನ, ಸಾಂವಿಧಾನಿಕ ಅವಕಾಶಗಳು ಅಥವಾ ನೀತಿ ನಿರೂಪಣೆಯ ವಿಚಾರಗಳು ಹಾಗೂ ಆಡಳಿತಾತ್ಮಕ ಅನುಷ್ಠಾನ ದಿಂದ ದೂರ ಇರುವುದೆಲ್ಲ ಮೀರಿ ಹೋಯಿತು; ಸ್ವರೂಪ ಮತ್ತು ಪ್ರಕ್ರಿಯೆಗಳನ್ನು ಮಾತ್ರ ಪಾಲಿಸಲಾರಂಭಿಸಿತು. ಪೌರರು ಮತ್ತು ಪರಿಣತರ ಪರ ವಕೀಲರ ವಾದವನ್ನು ಆಲಿಸಿದ ಬಳಿಕ, ಸಾರ್ವಜನಿಕ ನೀತಿ ಮತ್ತು ಆಡಳಿತಾತ್ಮಕ ವಿಚಾರಗಳಲ್ಲಿ ಸಾಧ್ಯವಾದಷ್ಟು ವಿಶಾಲವಾಗಿ ಆಡಳಿತಾತ್ಮಕ ನಿರ್ದೇಶನಗಳು ಮತ್ತು ತೀರ್ಮಾನಗಳನ್ನು ಕೊಡಲಾರಂಭಿಸಿತು. ತಾನು ಅಗತ್ಯ ಎಂದು ಭಾವಿಸಿದ ವಿಚಾರ ಗಳಲ್ಲಿ ನಿರ್ದಿಷ್ಟ ಶಾಸನಗಳನ್ನು ರೂಪಿಸುವಂತೆ ಸರ್ಕಾರಗಳು ಮತ್ತು ಶಾಸಕಾಂಗಗಳಿಗೆ ನಿರ್ದೇಶನ ನೀಡಿತು. ಪ್ರಣಾಳಿಕೆಗಳಲ್ಲಿ ಏನನ್ನು ಸೇರಿಸಬೇಕು ಎಂಬುದರ ಕುರಿತು ಕೂಡ ರಾಜಕೀಯ ಪಕ್ಷಗಳ ಮೇಲೆ ನಿರ್ಬಂಧಗಳನ್ನು ಹೇರುವ ಪ್ರಯತ್ನವನ್ನೂ ಮಾಡಿತು. ಉದಾಹರಣೆಗೆ ‘ಉಚಿತ ಕೊಡುಗೆ’ ಕುರಿತ ವಿಚಾರಣೆ. ಹೊಸ ಹಕ್ಕುಗಳು ಮತ್ತು ಅಧಿಕಾರಗಳನ್ನು ಸೇರಿಸಿಕೊಳ್ಳುವುದಕ್ಕಾಗಿ ಸಂವಿಧಾನದ ವ್ಯಾಖ್ಯಾನವನ್ನು ವಿಸ್ತರಿಸಿಕೊಂಡಿತು. ಅದರ ತೀರ್ಪುಗಳು ಬಹುತೇಕ ಪರಮಾಧಿಕಾರಯುಕ್ತವಾಗಿದ್ದವು. ಹೆಚ್ಚುತ್ತಲೇ ಇದ್ದ ತನ್ನ ಗೌರವ ಮತ್ತು ನ್ಯಾಯಾಂಗ ನಿಂದನೆಯ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವನ್ನು ಬಳಸಿಕೊಂಡು ಅದು ಗುಡುಗಿತು, ಬೆದರಿಸಿತು, ಲೇವಡಿ ಮಾಡಿತು ಮತ್ತು ತನ್ನ ಆದೇಶಗಳನ್ನು ಜಾರಿಗೊಳಿಸಿತು. ಇಂದಿಗೂ ಎಲ್ಲ ವಿಚಾರಗಳಲ್ಲಿ ಅಲ್ಲದಿದ್ದರೂ ಒಂದಷ್ಟು ವಿಚಾರಗಳಲ್ಲಿ ಕೇಂದ್ರ ಮತ್ತು ರಾಜ್ಯಗಳ ಬಿಜೆಪಿ–ಎನ್‌ಡಿಎ ಸರ್ಕಾರಗಳ ಮೇಲೆ ಪ್ರಭಾವ ಬೀರಿ ನಿಯಂತ್ರಣ ಹೇರಿತು. ಕೆಲವೊಮ್ಮೆ ಮುಸ್ಲಿಮರಿಗೆ ಸೇರಿದ ಕಟ್ಟಡಗಳನ್ನು ಕೆಡುವು ವಂತಹ ದಂಡನಾತ್ಮಕ ಕ್ರಮಗಳಿಗೆ ಸಂಬಂಧಿಸಿ ಸರ್ಕಾರಗಳು ನ್ಯಾಯಾಲಯದ ನಿರ್ದೇಶನಗಳನ್ನು ನಿರ್ಲಕ್ಷಿಸಿದ್ದೂ ಇದೆ.

ಕರ್ತವ್ಯದಲ್ಲಿದ್ದಾಗ ವಹಿಸಿದ ಪಾತ್ರದ ಜೊತೆಗೆ, ನಿವೃತ್ತರಾದ ಅಧಿಕಾರಿಗಳು ಮತ್ತು ನ್ಯಾಯಮೂರ್ತಿಗಳನ್ನು ಸಾಂವಿಧಾನಿಕ, ನೀತಿ ನಿರೂಪಣೆ, ನಿಯಂತ್ರಣ ಸಂಸ್ಥೆಗಳು– ಚುನಾವಣಾ ಆಯೋಗ, ನೀತಿ ಆಯೋಗ, ರಿಸರ್ವ್‌ ಬ್ಯಾಂಕ್‌, ರಾಷ್ಟ್ರೀಯ ಭದ್ರತೆಯ ಹುದ್ದೆಗಳು ಮತ್ತು ಸಮಿತಿಗಳು, ಆರ್‌ಟಿಐ, ಸಿಎಜಿ, ವಿಚಾರಣಾ ಆಯೋಗ, ಹಿರಿಯ ಉನ್ನತ ರಾಜತಾಂತ್ರಿಕ ಹುದ್ದೆಗಳು ಇತ್ಯಾದಿ– ಪ್ರಮುಖ ಹುದ್ದೆಗಳಿಗೆ ನೇಮಕ ಮಾಡಲಾಗಿದೆ. ಇದರೊಂದಿಗೆ, ಅಧಿಕಾರಶಾಹಿ–ನ್ಯಾಯಾಂಗದ ಜೋಡಿಯು ಆಡಳಿತ ವ್ಯವಸ್ಥೆಯ ಎಲ್ಲ ನಿಯಂತ್ರಣ ಸ್ಥಾನಗಳಲ್ಲಿ ವಿರಾಜಮಾನವಾಗಿದೆ. ಅವರು ರಾಷ್ಟ್ರೀಯವಾದಿ ಕಾರ್ಯಸೂಚಿ ಮತ್ತು ಸಿದ್ಧಾಂತದ ರಕ್ಷಕರು ಮತ್ತು ಅನುಷ್ಠಾನಕರಾಗಿ, ಅಟಾಟರ್ಕ್‌ ನಂತರದ ಟರ್ಕಿಯಲ್ಲಿ ತೀರಾ ಇತ್ತೀಚಿನವರೆಗೆ ಸೇನೆ ವಹಿಸಿದ ಪಾತ್ರದ ರೀತಿಯ ಪಾತ್ರವನ್ನು ಈ ಸ್ಥಾನದಲ್ಲಿ ಅವರು ವಹಿಸಿದ್ದಾರೆ.

ADVERTISEMENT

ಈ ಏರ್ಪಾಡಿಗೆ ಅದರದ್ದೇ ಆದ ಸಕಾರಾತ್ಮಕ ಮತ್ತು ನಕಾರಾತ್ಮಕ ಭಾಗಗಳಿವೆ. ಅತ್ಯಂತ ಮುಖ್ಯವಾಗಿ, ಸಾಮಾನ್ಯ ಜನರಿಗೆ ಇದು ಬಹುಪಾಲು ಬೇರೆಲ್ಲವೂ ವಿಫಲವಾದಾಗ ಸ್ವಲ್ಪವಾದರೂ ಉತ್ತಮ ಆಡಳಿತವನ್ನು ಕೊಟ್ಟಿದೆ. ಸಕಾರಾತ್ಮಕ ಭಾಗದಲ್ಲಿ ನಿಯಮ ಆಧಾರಿತ ಆಡಳಿತದೆಡೆಗಿನ ನಡಿಗೆಯನ್ನು ಇದು ಪ್ರತಿನಿಧಿಸುತ್ತದೆ ಎಂದು ಹೇಳಬಹುದು; ಶ್ರೇಷ್ಠ ಸಮಾಜಶಾಸ್ತ್ರಜ್ಞರಲ್ಲಿ ಒಬ್ಬರಾದ ಮ್ಯಾಕ್ಸ್‌ ವೆಬರ್‌ ಹೇಳಿದ ತಾರ್ಕಿಕ–ನ್ಯಾಯಿಕ ಪ್ರಾಧಿಕಾರ ಇದು. ವಿಶಾಲ ಅರ್ಥದಲ್ಲಿ ಅಧಿಕಾರಶಾಹಿಯು ಇದನ್ನು ನಿರ್ವಹಿಸಿಕೊಂಡು ಬಂದಿದೆ. ವೆಬರ್‌ ದೃಷ್ಟಿಯಲ್ಲಿ ಇದು, ಆಡಳಿತದ ಅತ್ಯಂತ ದಕ್ಷ ಮತ್ತು ಅತ್ಯುನ್ನತ ಮಾದರಿಯಾಗಿದೆ. ನಕಾರಾತ್ಮಕ ಭಾಗದಲ್ಲಿ, ಅಮೆರಿಕದಲ್ಲಿ ಕೆಲವರು ಹೇಳಿದಂತೆ, ‘ಡೀಪ್‌ ಸ್ಟೇಟ್‌’ (ಅಧಿಕಾರಿಗಳು ಅಥವಾ ಸೇನೆಯ ಒಂದು ಗುಂಪಿನ ಪ್ರಭಾವದಲ್ಲಿ ನಡೆಯುವ ಆಡಳಿತ) ಆಗಿ ಪರಿವರ್ತನೆ ಆಗಬಹುದು. ಅಂದರೆ, ಅದು ಚುನಾಯಿತರಲ್ಲದ ನ್ಯಾಯಮೂರ್ತಿಗಳು, ಅಧಿಕಾರಿಗಳು ಮತ್ತು ಇತರರು ಮುಚ್ಚಿದ ಕೊಠಡಿಗಳಲ್ಲಿ, ಪಾರದರ್ಶಕವಲ್ಲದ ಪ್ರಕ್ರಿಯೆಗಳಲ್ಲಿ ನಿರ್ಧಾರ ಕೈಗೊಳ್ಳುವಿಕೆಯಾಗಿದೆ. ಇದು ಸಾರ್ವಜನಿಕ ಪರಾಮರ್ಶೆ ಮತ್ತು ಹೊಣೆಗಾರಿಕೆಯಿಂದ ಮುಕ್ತವಾಗಿದೆ ಹಾಗೂ ತಮ್ಮನ್ನು ತಾವು ಆಳಿಕೊಳ್ಳುವುದು ಸೇರಿ ಪೌರರ ಹಕ್ಕುಗಳನ್ನು ಕಿತ್ತುಕೊಳ್ಳುವುದಾಗಿದೆ.

ಅಧಿಕಾರಶಾಹಿ–ನ್ಯಾಯಾಂಗದ ಆಳ್ವಿಕೆಯ ಎಲ್ಲ ಅನುಕೂಲಗಳ ಜೊತೆಗೆ, ವಿಶೇಷವಾಗಿ ಭಾರತದ ಸಂದರ್ಭದಲ್ಲಿ ಹಲವು ಅನನುಕೂಲಗಳೂ ಇವೆ. ಪೌರರು ರಾಜಕೀಯ ನಿರ್ಧಾರ ಕೈಗೊಳ್ಳುವಿಕೆಯಲ್ಲಿ ಸಕ್ರಿಯ ಭಾಗೀದಾರರು ಎಂಬ ಭರವಸೆಯನ್ನು ಪ್ರಜಾಪ್ರಭುತ್ವವು ಕೊಡುತ್ತದೆ; ಆದರೆ ಈ ವ್ಯವಸ್ಥೆಯು ಪೌರರು ಮತ್ತು ನಾಗರಿಕ ಸಮಾಜವನ್ನು ಕೇವಲ ದೂರುದಾರರನ್ನಾಗಿ ಮಾತ್ರ ನೋಡುವಂತೆ ಮಾಡುತ್ತದೆ. ನ್ಯಾಯಾಲಯದ ಸಂರಚನೆಯನ್ನು ಗಮನಿಸಿದರೆ, ಅದರ ವಿರುದ್ಧ ವ್ಯಕ್ತಿಗಳು ಮತ್ತು ಸಂಘಟನೆಗಳು ಸಾರ್ವಜನಿಕವಾಗಿ ಏನನ್ನಾದರೂ ಹೇಳುವುದು ಮತ್ತು ನೀತಿಯ ವಿಚಾರದಲ್ಲಿ ಅವರ ನಿರ್ಧಾರಗಳನ್ನು ಬದಲಾಯಿಸುವುದು ಬಹುತೇಕ ಅಸಾಧ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಿಜವಾಗಿಯೂ ಸಾರ್ವಜನಿಕರು ಪ್ರತಿಭಟಿಸಬಹುದಾದ ಭೌತಿಕ ಅವಕಾಶಗಳನ್ನು ನ್ಯಾಯಾಲಯಗಳು ಸೀಮಿತಗೊಳಿಸಿವೆ ಮತ್ತು ಯಾವುದರ ವಿರುದ್ಧ ಪ್ರತಿಭಟಿಸುವಂತಿಲ್ಲ ಮತ್ತು ಯಾವ ವಿಚಾರಗಳಲ್ಲಿ ಪ್ರತಿಭಟಿಸಬೇಕು ಎಂಬುದನ್ನೂ ಹೇಳುತ್ತಿವೆ. ಇದಲ್ಲದೆ, ನ್ಯಾಯಾಲಯದ ಆಳ್ವಿಕೆ ಎನ್ನುವುದು ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ವ್ಯತ್ಯಾಸವನ್ನು ಅಳಿಸಿಹಾಕುತ್ತದೆ; ನ್ಯಾಯಾಲಯದ ಆದೇಶಗಳ ಮೇಲಿನ ಮೇಲ್ಮನವಿಯನ್ನು ಮತ್ತೆ ನ್ಯಾಯಾಲಯಕ್ಕೇ ಸಲ್ಲಿಸಬೇಕಾಗುತ್ತದೆ! ಇದು ಬಹಳ ದೂರದ ಮಾತು ಅನಿಸಬಹುದು; ಆದರೆ, ಆಡಳಿತಶಾಹಿ–ನ್ಯಾಯಾಂಗದ ಆಳ್ವಿಕೆಯು ಬಹಳ ಸುಲಭವಾಗಿ ನಾಗರಿಕ ನಿರಂಕುಶಾಧಿಪತ್ಯವಾಗಿ ಬದಲಾಗಬಹುದು ಎಂಬುದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಅಂದರೆ, ಕೆಲವು ನಿರ್ದಿಷ್ಟ ಸನ್ನಿವೇಶಗಳಲ್ಲಿ ಇದು ಇನ್ನೊಂದು ವೇಷದಲ್ಲಿರುವ ತುರ್ತು ಪರಿಸ್ಥಿತಿಗೆ ದಾರಿ ಮಾಡಿಕೊಡಬಹುದು. ಇದಕ್ಕೆ ಸಂಬಂಧಿಸಿದ ಇನ್ನೊಂದು ಅಪಾಯವೂ ಇದೆ; ನಿರ್ದಿಷ್ಟ ಸನ್ನಿವೇಶಗಳಲ್ಲಿ ತನ್ನ ನಿರಂಕುಶಾಧಿಕಾರವನ್ನು ಹೇರುವುದಕ್ಕೆ ಆಡಳಿತಾರೂಢ ಪಕ್ಷವು ಆಡಳಿತಶಾಹಿ ಮತ್ತು ನ್ಯಾಯಾಂಗವನ್ನು ಬಳಸಿಕೊಳ್ಳಬಹುದು. ಅದಲ್ಲದೆ, ತಮ್ಮ ಹಿನ್ನೆಲೆ, ತರಬೇತಿ, ನೆಲಗಟ್ಟು ಮತ್ತು ಸಾಂಸ್ಥಿಕ ಮತ್ತು ಸಾಮಾಜಿಕ ಸ್ಥಾನಗಳಿಂದಾಗಿ ಅಧಿಕಾರಿಗಳು ಮತ್ತು ನ್ಯಾಯಮೂರ್ತಿಗಳು ತಮ್ಮ ಆಡಳಿತಕ್ಕೆ ಜನರ ಸಹಮತ ಕ್ರೋಡೀಕರಿಸಲು ಸೂಕ್ತವಾದವರಲ್ಲ. ಹಾಗಾಗಿ, ಈ ಆಡಳಿತದ ನ್ಯಾಯಸಮ್ಮತತೆಯ ಮೇಲೆ ಇದು ಪ್ರತಿಕೂಲ ಪರಿಣಾಮ ಬೀರಬಹುದು.

ಅಧಿಕಾರಶಾಹಿ ಮತ್ತು ನ್ಯಾಯಾಂಗದ ಸ್ವರೂಪದಲ್ಲಿ ನಿರ್ದಿಷ್ಟ ಸಿದ್ಧಾಂತ ಅಥವಾ ಕಾರ್ಯಸೂಚಿಯತ್ತ ಸಾಗುವ ಅಂತರ್ಗತ ಅಂಶವೇನೂ ಇಲ್ಲ ಎಂಬುದು ಟ್ರಂಪ್‌ ಸರ್ಕಾರದ ಎರಡನೇ ಅವಧಿಯ ಕಳೆದ ವರ್ಷದಲ್ಲಿ ಅವರ ಪಾತ್ರವನ್ನು ನೋಡಿದಾಗ ನಮಗೆ ಸ್ಪಷ್ಟವಾಗುತ್ತದೆ. ಅಮೆರಿಕದ ಅಧಿಕಾರಶಾಹಿ ವಿಶೇಷವಾಗಿ ಮೇಲುಗಡೆ ಇರುವವರು ರಾಜಕೀಯ ಬದಲಾವಣೆಗಳು ಮತ್ತು ಪಕ್ಷಪಾತಿ ಪರಿಗಣನೆಗಳಿಗೆ ಸದಾ ಒಳಗಾದವರು. ಭಾರತವು ಬಹುಶಃ ಬ್ರಿಟಿಷ್‌ ಸಾಮ್ರಾಜ್ಯಶಾಹಿ ಸರ್ಕಾರದಿಂದ ಪಡೆದುಕೊಂಡಂತಹ ಬಲವಾದ ಮತ್ತು ಏಕೀಕೃತ ವೃಂದ ವ್ಯವಸ್ಥೆಅಮೆರಿಕದಲ್ಲಿ ಇಲ್ಲ. ಹಾಗಿದ್ದರೂ ಟ್ರಂಪ್‌ ಅವರನ್ನು ನಿಯಂತ್ರಿಸುವಂತಹ ಪ್ರಬಲ ಸ್ವತಂತ್ರ ಸುಪ್ರೀಂ ಕೋರ್ಟ್‌ ಹೋರಾಟಗಾರನ ಪಾತ್ರವನ್ನು ವಹಿಸಬಹುದು ಎಂಬ ಭರವಸೆ ಕನಿಷ್ಠ ಪಕ್ಷ ಉದಾರವಾದಿಗಳಲ್ಲಾದರೂ ಇದೆ. ನಿರಂಕುಶ, ಸರ್ವಾಧಿಕಾರಿ ಆಳ್ವಿಕೆಯ ವಿರುದ್ಧ ಉದಾರವಾದಿ ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ರಕ್ಷಿಸುವ ಕೋಟೆಯಂತೆ ನ್ಯಾಯಾಂಗವು ಇದೆ ಎಂಬುದನ್ನು ನಂಬುವುದಕ್ಕೆ ಕಾರಣಗಳಿಲ್ಲ ಎಂಬುದನ್ನು ಕಳೆದ ಒಂದು ವರ್ಷದ ಬೆಳವಣಿಗೆಗಳು ತೋರಿಸಿಕೊಟ್ಟಿವೆ. ಭಾರತದ ವಿಚಾರದಲ್ಲಿಯೂ ಇತ್ತೀಚಿನ ದಶಕಗಳಲ್ಲಿ ಈ ವಿಚಾರ ಇದೇ ರೀತಿಯಲ್ಲಿ ಇದೆ. ಟ್ರಂಪ್‌ ಅವರ ಸ್ವೇಚ್ಛೆ, ನಿರಂಕುಶ, ಕಾನೂನುಬಾಹಿರ, ಭ್ರಷ್ಟ, ಸ್ವಲಾಭ, ದ್ವೇಷಪೂರಿತ, ಯುದ್ಧೋನ್ಮತ್ತತೆ, ಹಂತಕ (ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ಹತ್ಯೆ), ಬಿಳಿಯ, ಕ್ರೈಸ್ತ ಜನಾಂಗೀಯವಾದಿ/ರಾಷ್ಟ್ರೀಯವಾದಿ, ಸ್ಪಷ್ಟವಾಗಿ ಸಾಮ್ರಾಜ್ಯಶಾಹಿ ಮತ್ತು ಸಂಪನ್ಮೂಲ ಕಬಳಿಕೆಯ ಅಸಾಂವಿಧಾನಿಕ ನಡೆಗಳಿಗೆ ಸುಪ್ರೀಂ ಕೋರ್ಟ್‌ ಪೂರಕವಾಗಿಯೇ ವರ್ತಿಸಿದೆ. ಟ್ರಂಪ್‌ ಸರ್ಕಾರದ ನಡೆಗಳು ತುರ್ತು ಸನ್ನಿವೇಶಗಳ ಅನಿವಾರ್ಯಗಳಾಗಿದ್ದವೇ ಎಂಬುದನ್ನು ಪರಿಶೀಲನೆಗೂ ಒಳಪಡಿಸದೆ ಯಾವುದೇ ಕಾರಣವನ್ನೂ ನೀಡದೆ ಸಾಮಾನ್ಯವಾಗಿ ಗುಪ್ತ, ತುರ್ತು ಆದೇಶಗಳ ಮೂಲಕ ಕೆಳ ನ್ಯಾಯಾಲಯಗಳ ನಿಯಂತ್ರಣ ಆದೇಶಗಳಿಗೆ ಬಹುಪಾಲು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ತಡೆ ನೀಡಿದೆ. ಭಾವಿ ನಿರಂಕುಶಾಧಿಕಾರಿಗಳ ಸ್ವೇಚ್ಛೆಯ, ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ನಡೆಗಳ ವಿರುದ್ಧದ ರಕ್ಷಾ ಕವಚವು ದುರ್ಬಲವಾಗಿದೆ ಎಂಬ ಅಮೆರಿಕದ ಕೆಲವು ವಿಶ್ಲೇಷಕರ ವಾದವನ್ನು ಇದು ಸಮರ್ಥಿಸುವಂತಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ, ಭಾರತದ ಅಧಿಕಾರಶಾಹಿ–ನ್ಯಾಯಾಂಗದ ಜೋಡಿಯ ರಾಷ್ಟ್ರೀಯವಾದಿ ಸಿದ್ಧಾಂತ ಮತ್ತು ಕಾರ್ಯಸೂಚಿಯ ನಿರ್ಧಾರಗಳು, ನಡೆಗಳು ಸ್ಪಷ್ಟವಾಗಿ ಭಿನ್ನವಾಗಿ ಕಾಣಿಸುತ್ತವೆ.

ಟ್ರಂಪ್‌ ಅವರ ತೀವ್ರವಾದಿ, ಸರ್ವವ್ಯಾಪಿ ವಿಧ್ವಂಸಕತೆ ಅಥವಾ ಎರ್ಡೋಗನ್‌ ಅವರ ಸ್ವಲ್ಪ ಮೆದು ಇಸ್ಲಾಂ ನಿರಂಕುಶವಾದಕ್ಕೆ ಹೋಲಿಸಿದರೆ, ಮೋದಿ ಅವರು ನಿಶ್ಚಿತವಾಗಿಯೂ ಮಂದಗಾಮಿ, ನಿರಂತರತೆ ಮತ್ತು ಸ್ಥಿರತೆಯನ್ನು ಸಂರಕ್ಷಿಸುವವರಾಗಿ ಕಾಣಿಸುತ್ತಾರೆ. ಮೋದಿ ಅವರು ತಮ್ಮ ಅಸಾಧಾರಣ ವಾಕ್ಪಟುತ್ವ ಮತ್ತು ಪ್ರದರ್ಶನ ಕಲೆಗಳು ಹಾಗೂ ಗಾಢ ರಾಜಕೀಯ ಸೂಕ್ಷ್ಮತೆ, ಮತ್ತು ಬಿಜೆಪಿ–ಆರ್‌ಎಸ್ಎಸ್‌ನ ಸಂಘಟನಾತ್ಮಕ ಮತ್ತು ಪರಂಪರೆಯ ಬಲವನ್ನು ಬಳಸಿಕೊಂಡು ವ್ಯವಸ್ಥೆಯ ಒಳಗೇ ಇದ್ದುಕೊಂಡು ಬಿಜೆಪಿ–ಆರ್‌ಎಸ್‌ಎಸ್‌ನ ಜನಪ್ರಿಯತೆ ಮತ್ತು ಪ್ರಭಾವವನ್ನು ವಿಶಾಲವಾಗಿ ವಿಸ್ತರಿಸಿದ್ದಾರೆ; ಬಿಜೆಪಿ–ಆರ್‌ಎಸ್‌ಎಸ್‌ನ ಮೂಲಭೂತ ಸ್ವರೂಪ ಮತ್ತು ಅಂತಿಮ ಕಾರ್ಯಸೂಚಿಯ ಕುರಿತು ಪೂರ್ಣ ಅರಿವು ಇಲ್ಲದವರು ಮತ್ತು/ಅಥವಾ ಅದನ್ನು ಒಪ್ಪದವರನ್ನೂ ಈ ವಿಸ್ತರಣೆಯು ಒಳಗೊಂಡಿದೆ. ಮಹಾತ್ಮ ಗಾಂಧಿಯ ಹತ್ಯೆಗೆ ಜನರ ಪ್ರತಿಕ್ರಿಯೆಯು ಆರ್‌ಎಸ್‌ಎಸ್‌ ಅನ್ನು ಹೊರಗಿ‌ಟ್ಟಿತ್ತು; ಮೋದಿ ಅವರು ಈಗ ಆರ್‌ಎಸ್‌ಎಸ್‌ ಅನ್ನು ಭಾರತದ ಆಡಳಿತ ವ್ಯವಸ್ಥೆ ಮತ್ತು ಸಮಾಜದ ಮುಖ್ಯವಾಹಿನಿಗೆ ತಂದಿದ್ದಾರೆ. ಈ ಪ್ರಕ್ರಿಯೆಯು ದಶಕಗಳ ಹಿಂದೆಯೇ ಅಂದರೆ 1970ರ ದಶಕದಲ್ಲಿ ಜೆಪಿ ಚಳವಳಿಯಲ್ಲಿಯೇ ಆರಂಭವಾಗಿ, ತುರ್ತುಪರಿಸ್ಥಿತಿ ಮತ್ತು ಜನತಾ ಸರ್ಕಾರದ ಅವಧಿಯಲ್ಲಿ ಮತ್ತಷ್ಟು ಮುಂದಕ್ಕೆ ಹೋಯಿತು. ಸಂಘಟನೆಯ ಹಿರಿಯ ವ್ಯಕ್ತಿಗಳನ್ನು ಅಧಿಕಾರ ಮತ್ತು ಪ್ರಭಾವದ ಅತ್ಯುನ್ನತ ಮಟ್ಟದಿಂದ ಕೆಳಗಿನವರೆಗೆ ಸೇರಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಒಟ್ಟಿನಲ್ಲಿ, ಭಾರತದ ಸಮಾಜದಲ್ಲಿ ಬಿಜೆಪಿ–ಆರ್‌ಎಸ್‌ಎಸ್‌ನ ನ್ಯಾಯಸಮ್ಮತತೆ ಬಹುವಾಗಿ ಹೆಚ್ಚಳಗೊಂಡಿದೆ. ಸಂಘ ಪರಿವಾರದ ಹಿಂದುತ್ವವಾದಿ ಕಾರ್ಯಸೂಚಿಯ ಕೆಲವು ತೀವ್ರವಾದಿ ಕಾರ್ಯಸೂಚಿಗಳನ್ನು ಜಾರಿಗೊಳಿಸುವ ಪ್ರಯತ್ನದಲ್ಲಿ ಅವರು ಸಾಂವಿಧಾನಿಕ ಸಂಸ್ಥೆಗಳು, ಸಾರ್ವಜನಿಕ ಅಭಿಪ್ರಾಯ ಮತ್ತು ವಿರೋಧ ಪಕ್ಷಗಳು ತಮ್ಮ ಮುಂದೆ ಇರಿಸಿರುವ ತೊಡಕುಗಳ ವಿರುದ್ಧ ಹೋರಾಡುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅವರು ಸ್ಥಾಪಿಸಿದ ಸಂಸ್ಥೆಗಳಿಗೆ ಹೋಲಿಸಿದರೆ ಬಿಜೆಪಿ–ಆರ್‌ಎಸ್‌ಎಸ್‌ಗೆ ಈಗಲೂ ಜನಸಮ್ಮತಿಯ ಕೊರತೆ ಇದೆ ಎಂಬುದನ್ನು ಗುರುತಿಸಿರುವ ಮೋದಿ ಅವರು ರಾಷ್ಟ್ರೀಯ ಲಾಂಛನಗಳು, ಪ್ರಜಾಸತ್ತಾತ್ಮಕ ನಿಯಮಗಳು ಮತ್ತು ಸಂಸ್ಥೆಗಳಿಗೆ ಹೆಚ್ಚಿನ ಗೌರವ ಕೊಡುತ್ತಿದ್ದಾರೆ ಎಂದು ವಾದಿಸಬಹುದು. ಹಿಂದುತ್ವವಾದಿ ಕಾರ್ಯಸೂಚಿಯನ್ನು ತಾವು ಬಯಸಿದಷ್ಟು ಶಕ್ತಿಯುತವಾಗಿ ಮುಂದಕ್ಕೆ ಒಯ್ಯುತ್ತಿಲ್ಲ ಮತ್ತು ರಾಷ್ಟ್ರೀಯವಾದಿ ಪ್ರಜಾಸತ್ತಾತ್ಮಕ, ಜಾತ್ಯತೀತ ಸಿದ್ಧಾಂತಕ್ಕೆ ಸವಾಲು ಒಡ್ಡುತ್ತಿಲ್ಲ ಎಂಬುದೇ ಇದನ್ನು ವಿವರಿಸುತ್ತದೆ. ಒಳಗಿನಿಂದಲೇ ಬದಲಾವಣೆ ತರಬಹುದಾದ ತಮ್ಮ ಕಾರ್ಯಸೂಚಿ ಮತ್ತು ಕಾರ್ಯತಂತ್ರವು ವಿಮುಖವಾಗಬಹುದು ಅಥವಾ ಹಳಿ ತಪ್ಪಬಹುದು ಎಂಬ ಕಾರಣಕ್ಕೆ ತಮ್ಮ ಪಕ್ಷದವರು ವಿವಾದಾತ್ಮಕವಾದ ವಿಚಾರಗಳನ್ನು ಎತ್ತುವುದನ್ನು ಅವರು ವೈಯಕ್ತಿಕವಾಗಿ ತಡೆಯುತ್ತಿದ್ದಾರೆ ಮತ್ತು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಮೋದಿ ಅವರು ರಾಷ್ಟ್ರೀಯವಾದಿ ಸಹಮತವನ್ನು ಮೀರಿ ಹೋಗಲು ಪ್ರಯತ್ನಿಸಿ ದಾಗ ವಿರೋಧ ಪಕ್ಷಗಳು, ರೈತರು, ಸಮಾಜ, ಧಾರ್ಮಿಕ ಮತ್ತು ಭಾಷಿಕ ಅಲ್ಪಸಂಖ್ಯಾತರು ಮತ್ತು ಸಾರ್ವಜನಿಕರಿಂದ ಪ್ರತಿರೋಧ ವ್ಯಕ್ತವಾಗಿದೆ. ಅಧಿಕಾರಶಾಹಿ–ನ್ಯಾಯಾಂಗದ ಜೋಡಿಯ ದೃಷ್ಟಿಯಿಂದ ನೋಡಿದರೆ, ತಮ್ಮ ಕಾರ್ಯಸೂಚಿ ಮತ್ತು ನಡೆಗಳಿಗೆ ಸಾಮೂಹಿಕ ಬೆಂಬಲ ಗಳಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಮತ್ತು ಅದಕ್ಕೆ ಪ್ರತಿಫಲವಾಗಿ ತಮ್ಮ ಹಿಂದುತ್ವ ಕಾರ್ಯಸೂಚಿಯ ಉತ್ತೇಜನಕ್ಕೆ ಸ್ವಲ್ಪ ಮಟ್ಟಿನ ಮೌನ ಸಮ್ಮತಿಯನ್ನು ಗಳಿಸಿಕೊಂಡಿದ್ದಾರೆ. ನೀತಿಯ ವಿಚಾರವನ್ನು ಸ್ಥೂಲವಾಗಿ ನೋಡಿದಾಗ, ತಮ್ಮ ಮತ್ತು ಬಿಜೆಪಿ–ಆರ್‌ಎಸ್‌ಎಸ್‌ಗೆ ಸಾಮೂಹಿಕವಾಗಿ ಪ್ರಬಲ ಬೆಂಬಲ ನೀಡುತ್ತಿರುವ ನಗರವಾಸಿಗಳು ಮತ್ತು ಹಿಂದೂ ಬಹುಸಂಖ್ಯಾತರಿಗಿಂತ ನಗರ ಮತ್ತು ಗ್ರಾಮೀಣ ಪ್ರದೇಶದ ಮೇಲ್ವರ್ಗ ಮತ್ತು ಜಾತಿಗಳ ಹಿತಾಸಕ್ತಿಯ ಪರವಾಗಿ ವಾಲಿಕೊಂಡಿದ್ದಾರೆ; ಇತರ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ/ಪಂಗಡಗಳು, ನಗರ ಮತ್ತು ಗ್ರಾಮೀಣ ಪ್ರದೇಶದ ಬಡ ಕಾರ್ಮಿಕರು, ಗ್ರಾಮೀಣ ವಲಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಂದ ದೂರವೇ ಇದ್ದಾರೆ.

ಈವರೆಗೆ ಎಲ್ಲವೂ ಸರಿಯಾಗಿಯೇ ಇದೆ. ಭಾರತದ ಪ್ರಜಾಪ್ರಭುತ್ವದ ಶಕ್ತಿಗಳು ಅದರ ಗಂಭೀರ ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುತ್ತವೆ. ಅಮೆರಿಕದಂತೆ ಅಲ್ಲದೆ, ಭಾರತದ ಸಾಂವಿಧಾನಿಕ ಪ್ರಜಾಪ್ರಭುತ್ವದ ರಕ್ಷಾಕವಚಗಳು ವಿಧ್ವಂಸಕಾರಿ ಶಕ್ತಿಗಳನ್ನು ಮಿತಿಯೊಳಗೆ ಇರಿಸಿವೆ ಮತ್ತು ಸ್ವಲ್ಪ ಮಟ್ಟಿಗೆ ಅವುಗಳನ್ನು ಮುಖ್ಯವಾಹಿನಿಗೆ ಒಳಪಡಿಸಿವೆ. ಸ್ವಾತಂತ್ರ್ಯೋತ್ತರದ ಬಹುಪಾಲು ಅವಧಿಯು ಇದಕ್ಕೆ ಸಾಮಾಜಿಕ ಸಹಮತವನ್ನು ವ್ಯಕ್ತಪಡಿಸಿದೆ; ಇದರಲ್ಲಿ ತೀವ್ರವಾದ ಬಿರುಕು ಅಥವಾ ಪಲ್ಲಟಗಳು ಉಂಟಾಗಿಲ್ಲ. ಇದಕ್ಕೆ ಪರಂಪರೆ ಅಷ್ಟೇ ಕಾರಣವಲ್ಲ; ಸಾಮಾಜಿಕ ನ್ಯಾಯವನ್ನು ಒಳಗೊಂಡ ಆರ್ಥಿಕ ಪ್ರಗತಿ, ಭೂಸುಧಾರಣೆ, ಒಬಿಸಿ ಮತ್ತು ಪರಿಶಿಷ್ಟ ಜಾತಿ/ಪಂಗಡಗಳಿಗೆ ಮೀಸಲಾತಿ, ಶಿಕ್ಷಣದ ಮೂಲಕ ಸಶಕ್ತೀಕರಣ, ಸ್ವತಂತ್ರ ವಿದೇಶಾಂಗ ಮತ್ತು ರಕ್ಷಣಾ ನೀತಿ, ಎಲ್ಲ ಪೌರರನ್ನೂ ಒಳಗೊಳ್ಳುವ ಸಾಂವಿಧಾನಿಕ ಪ್ರಜಾಪ್ರಭುತ್ವ, ಸ್ವತಂತ್ರ ನ್ಯಾಯಾಂಗ ಮತ್ತು ಪ್ರಬಲವಾದ ನಾಗರಿಕ ಸೇವೆ, ಜನ ಕಲ್ಯಾಣ ವ್ಯವಸ್ಥೆಯನ್ನು ಒಳಗೊಂಡ ರಾಷ್ಟ್ರೀಯ ಕಾರ್ಯಸೂಚಿಯ ಅನುಷ್ಠಾನವೂ ಇದಕ್ಕೆ ಕಾರಣವಾಗಿದೆ.

‘ಹೊಸ ಸಂವಿಧಾನವೊಂದನ್ನು (ಹಿಂದೂ ರಾಷ್ಟ್ರ) ಅಳವಡಿಸಿ ಕೊಳ್ಳುವುದು ಕ್ರಾಂತಿಯಾಗದಿದ್ದರೆ ಸಾಧ್ಯವಿಲ್ಲ’ ಎಂದು ಬಿಜೆಪಿಯ ಹಿರಿಯ ಮುಖಂಡ ಸುಬ್ರಹ್ಮಣ್ಯನ್‌ ಸ್ವಾಮಿ ಅವರು ಹೇಳಿರುವುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕು. (ಫ್ರಂಟ್‌ಲೈನ್‌ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಅವರ ಹೇಳಿಕೆಗಳನ್ನು ಒಳಗೊಂಡ ‘ಹಿಂದುತ್ವ ಮೈಂಡ್‌ ಗೇಮ್ಸ್‌’ ಪೂರ್ಣಿಮಾ ಎಸ್‌. ಅವರ ಲೇಖನವನ್ನು ಗಮನಿಸಬಹುದು 2017ರ ಜುಲೈ 5 https://frontline.thehindu.com/cover-story/ hindutva-mind-games/ article9748344.ece) ಇಂತಹುದೊಂದು ಸಂವಿಧಾನವು ಭಾರತ ದೇಶ ಎಂಬ ಚಿಂತನೆಯನ್ನೇ ಮೂಲಭೂತವಾಗಿ ಮತ್ತು ಕ್ರಾಂತಿಕಾರಕವಾಗಿ ಬದಲಾಯಿಸುತ್ತದೆ. ಆದರೆ, ರಾಜಾರಾಮ್‌ ಮೋಹನ ರಾಯ್‌ ಅವರಿಂದ ರವೀಂದ್ರನಾಥ ಟ್ಯಾಗೋರ್‌, ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್‌ ನೆಹರೂ ವರೆಗಿನವರು ಅಭಿವೃದ್ಧಿಪಡಿಸಿದ ಈ ಭಾರತ ದೇಶ ಎಂಬ ಚಿಂತನೆಯು ಭಾರತದ ಸಾಂವಿಧಾನಿಕ ಪ್ರಜಾಪ್ರಭುತ್ವದ ಮೇಲೆ ಅವಲಂಬಿತವಾಗಿದೆ. ಸಾಮಾಜಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಬಲ್ಲ ಕ್ರಾಂತಿಗಿಂತ ಕಡಿಮೆಯಾದ ಯಾವುದರಿಂದಲೂ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಹಾಗಾಗಿಯೇ, ಬಿಜೆಪಿಗೆ ಸಂಸತ್ತು ಮತ್ತು ಹಲವು ರಾಜ್ಯಗಳಲ್ಲಿ ಇರುವ ಬಹುಮತವು ಭಾರತವನ್ನು ಹಿಂದೂ ರಾಷ್ಟ್ರವಾಗಿ ಪರಿವರ್ತಿಸಲು ಸಾಕಾಗುವುದಿಲ್ಲ. ಸ್ವಾಮಿ ಅವರು ಉಪಸಂಹಾರದಲ್ಲಿ ಹೇಳುವ ‘ಆ ವಿಚಾರವನ್ನು ಈಗ ಕೈಬಿಡಲಾಗಿದೆ’ ಎಂಬ ಮಾತಿನಲ್ಲಿ ಸರಿಯಾದ ಸಮಯ ಬಂದಾಗ ಅದನ್ನು ಮತ್ತೆ ತರಲಾಗುವುದು ಎಂಬ ಧ್ವನಿಯೂ ಇದೆ.

ಸಂಸತ್ತಿಗೆ ನಡೆದ ಸತತ ಮೂರು ಚುನಾವಣೆಗಳು ಹಾಗೂ ಹಲವು ರಾಜ್ಯಗಳಲ್ಲಿ ಸಿಕ್ಕ ಗೆಲುವಿನ ಬಳಿಕವೂ ಮೋದಿ ಮತ್ತು ಬಿಜೆಪಿ–ಆರ್‌ಎಸ್‌ಎಸ್‌ ತಮ್ಮ ಅಂತಿಮ ಗುರಿಯೆಡೆಗೆ ಸಾಧಿಸಿದ ಯಶಸ್ಸು ಬಹಳ ಸೀಮಿತ ಎಂಬುದು ಭರವಸೆಗೆ ಕಾರಣ ಕೊಡುತ್ತದೆ. ಅಧಿಕಾರಕ್ಕೆ ಏರಿ ಅಲ್ಲಿ ದೀರ್ಘ ಕಾಲದಿಂದ ಇರುವ ನೂರು ವರ್ಷ ಹಳೆಯದಾದ ಸಂಘಟನೆ, ಮತ್ತೆ ಮತ್ತೆ ಚುನಾವಣೆ ಗೆಲ್ಲಬಲ್ಲ ಸಾಮರ್ಥ್ಯ ಇರುವ ಜನನಾಯಕ, ವ್ಯಾಪಕವಾಗಿರುವ ಕಾರ್ಯಕರ್ತ ಪಡೆ ಮತ್ತು ಸಾಮೂಹಿಕ ಬೆಂಬಲ, ಹಿಂದೂ ಸಮಾಜದ ಮೂಲೆ ಮೂಲೆಗೂ ವ್ಯಾಪಿಸಿರುವ ಗ್ರಹಿಕೆಯನ್ನು ಸುಮ್ಮನೆ ತಳ್ಳಿ ಹಾಕುವುದು ಮೂರ್ಖತನವಾಗಬಹುದು.

ನಮ್ಮ ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ರಕ್ಷಿಸಿ ವಿಸ್ತರಿಸಲು ಬಯಸುವವರ ಮುಂದೆ ಇರುವುದು ಪರಂಪರೆಯನ್ನು ಕಾಯ್ದು ಕೊಳ್ಳುವ ಹೊಣೆಗಾರಿಕೆಯಷ್ಟೇ ಅಲ್ಲ; ಪ್ರಜಾಪ್ರಭುತ್ವವನ್ನು ಗಾಢಗೊಳಿಸಿ ಅದು ಕೆಲವು ಉನ್ನತರಿಗಷ್ಟೇ ಅಲ್ಲ, ಎಲ್ಲ ಪೌರರಿಗಾಗಿಯೂ ಕೆಲಸ ಮಾಡುತ್ತದೆ ಎಂಬುದನ್ನು ಖಾತರಿಪಡಿಸಿ ಕೊಳ್ಳಬೇಕು. ಸ್ಥಿರ ಪ್ರಜಾಪ್ರಭುತ್ವವನ್ನು ಖಾತರಿಪಡಿಸಿದ ಪರಂಪರೆ ಯನ್ನು ಬಲಪಡಿಸುವುದಕ್ಕೆ ಮಾತ್ರ ಗಮನ ಕೇಂದ್ರೀಕರಿಸಿದರೆ ಸಾಕಾಗುವುದಿಲ್ಲ; ದೌರ್ಬಲ್ಯಗಳನ್ನೂ ಪರಿಹರಿಸಿಕೊಳ್ಳಬೇಕಿದೆ. ಬಹಳ ಮುಖ್ಯವಾಗಿ, ನಿರ್ಧಾರಗಳು ಮತ್ತು ಕಾನೂನುಗಳಲ್ಲಿ ಸಕ್ರಿಯವಾಗಿ ಮತ್ತು ಸ್ವಾಯತ್ತವಾಗಿ ಪಾಲ್ಗೊಳ್ಳಲು ಸಾಧ್ಯವಾಗು ವಂತೆ ಪೌರರ ಪಾತ್ರವು ವಿಸ್ತರಣೆಗೊಳ್ಳಬೇಕು. ಆದರೆ ಅದಕ್ಕಾಗಿ ರಾಜಕಾರಣವನ್ನು ರಾಜಕಾರಣಿಗಳಿಂದ ಮೊದಲು ಹಿಂದಕ್ಕೆ ಪಡೆಯಬೇಕು. ಆದರೆ ಅದು ಬಹುದೊಡ್ಡ ಕೆಲಸ.

(ಮುಗಿಯಿತು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.