ADVERTISEMENT

ಕಷ್ಟದ ಸಮಯದಲ್ಲಿ ಚೀನಾದ ಹಿಂಜರಿತ

ಸಮಸ್ಯೆಗಳಿಂದ ಪಾರಾಗಿ ಬರುವ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸುವುದೇ?

ಕೀತ್ ಬ್ರಾಡ್ಶರ್
Published 24 ಫೆಬ್ರುವರಿ 2019, 20:15 IST
Last Updated 24 ಫೆಬ್ರುವರಿ 2019, 20:15 IST
   

ಪಶ್ಚಿಮ ಚೀನಾದ ಚಾಂಕಿಂಗ್‌ನಲ್ಲಿ ಫೋರ್ಡ್‌ ಮೋಟರ್‌ ಕಂಪನಿಗೆ ಸೇರಿದ ಮೂರು ಘಟಕಗಳಲ್ಲಿನ ಚಟುವಟಿಕೆಗಳು ಮೊದಲಿಗಿಂತ ಕಡಿಮೆ ಆಗಿವೆ. ಪೂರ್ವ ಭಾಗದ ಜಿಯಾಂಗ್ಸು ಪ್ರದೇಶದಲ್ಲಿ ನೂರಾರು ರಾಸಾಯನಿಕ ಕಾರ್ಖಾನೆಗಳು ಬಾಗಿಲು ಮುಚ್ಚಿವೆ.

ವಿಶ್ವದ ಆರ್ಥಿಕ ಬೆಳವಣಿಗೆಯಲ್ಲಿ ದೊಡ್ಡ ಪಾಲು ಹೊಂದಿರುವ ಚೀನಾದ ಬೃಹತ್ ಅರ್ಥ ವ್ಯವಸ್ಥೆ ಬೆಳಗುವ ಅಗತ್ಯ ಈಗ ಇದೆ. ಈ ಸಂದರ್ಭದಲ್ಲೇ ಅಲ್ಲಿನ ಅರ್ಥ ವ್ಯವಸ್ಥೆಯ ಬೆಳವಣಿಗೆ ಮಂದವಾಗುತ್ತಿದೆ. ವಿಶ್ವ ಆರ್ಥಿಕ ಹಿಂಜರಿತದ ನಂತರ ಚೀನಾದ ಅರ್ಥ ವ್ಯವಸ್ಥೆಯಲ್ಲಿ ಅತ್ಯಂತ ಕಡಿಮೆ ಬೆಳವಣಿಗೆ ದರ ದಾಖಲಾಗಿರುವುದು 2018ರ ಕೊನೆಯ ಮೂರು ತಿಂಗಳುಗಳಲ್ಲಿ ಎಂದು ಚೀನಾ ಅಧಿಕಾರಿಗಳು ಹೇಳಿದ್ದಾರೆ.

ವಿಶ್ವವು ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲೇ ಹೀಗಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಕಡಿಮೆ ನಿರುದ್ಯೋಗ ಹಾಗೂ ದೃಢವಾದ ಬೆಳವಣಿಗೆ ದಾಖಲಿಸಿದ್ದ ಅಮೆರಿಕದ ಅರ್ಥ ವ್ಯವಸ್ಥೆ ಮಂದವಾಗುವ ಸೂಚನೆ ನೀಡುತ್ತಿದೆ. ಜರ್ಮನಿಯ ಕೈಗಾರಿಕಾ ವಲಯ ದುರ್ಬಲಗೊಳ್ಳುತ್ತಿದೆ.

ADVERTISEMENT

ಹಿಂದೆಲ್ಲ ವಿಶ್ವದ ಅರ್ಥ ವ್ಯವಸ್ಥೆಯಲ್ಲಿ ಅಪಾಯಗಳು ಕಂಡಾಗ ಚೀನಾ ನೆರವಿಗೆ ಬಂದಿದೆ. ಆದರೆ, ಈ ಬಾರಿ ಮಾತ್ರ ಚೀನಾದ ಅರ್ಥ ವ್ಯವಸ್ಥೆಯೇ ಎದ್ದುಕಾಣುವ ದೌರ್ಬಲ್ಯ ತೋರಿಸುತ್ತಿದೆ. ಕಳೆದ ಬೇಸಿಗೆಯ ನಂತರ ಚೀನಾದಲ್ಲಿ ಕಾರುಗಳ ಮಾರಾಟ ಕುಸಿದಿದೆ. ಸ್ಮಾರ್ಟ್‌ಫೋನ್‌ಗಳ ಮಾರಾಟ ಕಡಿಮೆ ಆಗುತ್ತಿದೆ. ರಿಯಲ್‌ ಎಸ್ಟೇಟ್‌ ಮಾರುಕಟ್ಟೆ ಬೆಳೆಯುತ್ತಿಲ್ಲ. ಸಾಲದ ದೊಡ್ಡ ಹೊರೆ ಹೊತ್ತಿರುವ ಡೆವಲಪರ್‌ಗಳು ದೊಡ್ಡ ಪ್ರಮಾಣದ ಬಡ್ಡಿ ಪಾವತಿಸುವ ಅನಿವಾರ್ಯಕ್ಕೆ ಸಿಲುಕಿದ್ದಾರೆ. ವ್ಯಾಪಾರ– ವಹಿವಾಟಿಗೆ ಸಂಬಂಧಿಸಿದಂತೆ ಪಶ್ಚಿಮದ ಜಗತ್ತಿನೊಂದಿಗಿನ ತಿಕ್ಕಾಟ ಹಾಗೂ ವಿದೇಶಿ ಹೂಡಿಕೆದಾರರ ವಿಚಾರವಾಗಿ ಬೀಜಿಂಗ್ ತಳೆದಿರುವ ಗಟ್ಟಿ ನಿಲುವು, ಚೀನಾ ಮತ್ತು ವಿದೇಶಿ ಕಂಪನಿಗಳು ಇನ್ನಷ್ಟು ಹೂಡಿಕೆ ಮಾಡುವ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇರಿಸುವಂತೆ ಮಾಡಿವೆ.

‘ಚೀನಾದಲ್ಲಿ ಯುರೋಪಿನ ಕಡೆಯಿಂದ ಆಗುವ ಹೂಡಿಕೆ ಪ್ರಮಾಣ ಕಡಿಮೆ ಆಗುತ್ತಿದೆ’ ಎಂದು ಐರೋಪ್ಯ ಒಕ್ಕೂಟದ ವಾಣಿಜ್ಯ ಆಯುಕ್ತೆ ಸಿಸೀಲಿಯಾ ಮ್ಯಾಮ್‌ಸ್ಟ್ರಾಮ್‌ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ‘ತಂತ್ರಜ್ಞಾನ ವರ್ಗಾವಣೆಗೆ ಬಲವಂತ, ಪಾರದರ್ಶಕತೆ ಇಲ್ಲದಿರುವುದು, ಹೊರಗಿನ ಕಂಪನಿಗಳಿಗೆ ತಾರತಮ್ಯ ಎಸಗುವುದು, ಸರ್ಕಾರಿ ಮಾಲೀಕತ್ವದ ಕಂಪನಿಗಳಿಗೆ ಬೃಹತ್ ಪ್ರಮಾಣದಲ್ಲಿ ಸಬ್ಸಿಡಿ ನೀಡುತ್ತಿರುವುದು... ಈ ಎಲ್ಲ ಕಾರಣಗಳಿಂದಾಗಿ ಚೀನಾದಲ್ಲಿ ವಾಣಿಜ್ಯ ವಹಿವಾಟು ನಡೆಸುವುದು ಕಷ್ಟವಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

2015, 2016ರಲ್ಲಿ ಸೇರಿದಂತೆ ಚೀನಾದಲ್ಲಿ ಹಿಂದೆ ಕಂಡುಬಂದ ಆರ್ಥಿಕ ಹಿಂಜರಿತಗಳು ಹೂಡಿಕೆದಾರರು ಹಾಗೂ ಜಾಗತಿಕ ವಾಣಿಜ್ಯೋದ್ಯಮಿಗಳನ್ನು ಭೀತಿಗೆ ನೂಕಿದ್ದವು. ಬಹುರಾಷ್ಟ್ರೀಯ ಕಂಪನಿಗಳ ಚೀನಾ ಘಟಕಗಳಲ್ಲಿ ಲಾಭಾಂಶ ಇಲ್ಲವಾಗಬಹುದು, ಚೀನಾದ ಕಂಪನಿಗಳು ತಮ್ಮಲ್ಲಿ ಹೆಚ್ಚುವರಿಯಾಗಿ ಉಳಿದ ಉತ್ಪನ್ನಗಳನ್ನು ವಿಶ್ವ ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಮಾರಾಟಕ್ಕೆ ಇರಿಸಬಹುದು ಎಂಬ ಚಿಂತೆ ಮೂಡಿತ್ತು. ಚೀನಾದಲ್ಲಿ ಐಫೋನ್‌ಗಳಿಗೆ ಬೇಡಿಕೆ ನಿರೀಕ್ಷೆಗಿಂತ ಕಡಿಮೆ ಆಗಬಹುದು ಎನ್ನುವ ಮೂಲಕ ಆ್ಯಪಲ್‌ ಕಂಪನಿ ಮಾರುಕಟ್ಟೆಯಲ್ಲಿ ಅಚ್ಚರಿ ಸೃಷ್ಟಿಸಿತ್ತು. ಚಾಂಕಿಂಗ್‌ ಘಟಕದಲ್ಲಿನ ಉತ್ಪಾದನೆಯನ್ನು ಶೇಕಡ 70ರಷ್ಟು ಕಡಿಮೆ ಮಾಡಿದ ಫೋರ್ಡ್‌ ಮೋಟರ್‌ ಕಂಪನಿ, ಮಾರಾಟವಾಗದೆ ಉಳಿದಿರುವ ಕಾರುಗಳ ಸಂಖ್ಯೆ ಕಡಿಮೆ ಮಾಡುವ ಉದ್ದೇಶ ತನ್ನದು ಎಂದು ಹೇಳಿತ್ತು.

ಚೀನಾ ಅರ್ಥ ವ್ಯವಸ್ಥೆ ಮಂದಗತಿಯಲ್ಲಿರುವ ಈ ಹೊತ್ತಿನಲ್ಲಿ ಹೂಡಿಕೆದಾರರು ಎಷ್ಟರವರೆಗೆ ಹೂಡಿಕೆಯನ್ನು ಮುಂದೂಡುತ್ತಾರೆ, ಎಷ್ಟು ಜನ ಹೂಡಿಕೆದಾರರು ತಮ್ಮಲ್ಲಿನ ಷೇರುಗಳನ್ನು ಮಾರಾಟ ಮಾಡುತ್ತಾರೆ ಎಂಬ ಪ್ರಶ್ನೆ ಎದುರಾಗಿದೆ. ‘ಜಾಗತಿಕ ಅರ್ಥ ವ್ಯವಸ್ಥೆ ಹಾಗೂ ಮಾರುಕಟ್ಟೆಗಳು ಚೀನಾದ ಬೆಳವಣಿಗೆ ದರ ವಿಚಾರದಲ್ಲಿ ಬಹಳ ಸೂಕ್ಷ್ಮವಾಗಿವೆ’ ಎಂಬುದು ವಾಷಿಂಗ್ಟನ್‌ನಲ್ಲಿ ಇರುವ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞ ರಾಬಿನ್ ಬ್ರೂಕ್ಸ್‌ ಅಭಿಪ್ರಾಯ. ಹಾಗೆ ನೋಡಿದರೆ, ಜಾಗತಿಕ ಅರ್ಥ ವ್ಯವಸ್ಥೆಗೆ ಅಪಾಯ ಎದುರಾಗಿರುವುದು ಚೀನಾದಿಂದಷ್ಟೇ ಅಲ್ಲ. ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರನಡೆಯುವುದು, ಸಾಲದ ಹೊರೆ ಹೊತ್ತಿರುವ ಇಟಲಿಯ ಹಣಕಾಸು ಬಿಕ್ಕಟ್ಟು ಕೂಡ ಸಮಸ್ಯೆ ತಂದೊಡ್ಡಬಹುದು.

ಅಮೆರಿಕದಲ್ಲಿ ಕೂಡ ಸಾಲದ ಪ್ರಮಾಣ ಹೆಚ್ಚುತ್ತಲೇ ಇದೆ. ದೊಡ್ಡ ಪ್ರಮಾಣದಲ್ಲಿ ತೆರಿಗೆ ಕಡಿಮೆ ಮಾಡಿ ಉತ್ತೇಜನ ನೀಡಿರುವ ಕ್ರಮ ಮುಂದಿನ ವರ್ಷದ ವೇಳೆಗೆ ಪ್ರಭಾವ ಕಳೆದುಕೊಳ್ಳಬಹುದು. ಹೀಗಿದ್ದರೂ, ‘ಚೀನಾದಲ್ಲಿ ಆಗುತ್ತಿರುವುದು ಚೀನಾಕ್ಕೇ ಸೀಮಿತವಾಗಿ ಇರುತ್ತದೆಯೇ ಅಥವಾ ಅದು ಜಾಗತಿಕ ಸಮಸ್ಯೆಯಾಗಿ ಪರಿವರ್ತನೆ ಆಗುತ್ತದೆಯೇ’ ಎಂಬ ಪ್ರಶ್ನೆಗಳು ಕೂಡ ಈಗ ಎದುರಾಗಿವೆ. ಚೀನಾದ ಈಗಿನ ಸ್ಥಿತಿಯು ಆ ದೇಶಕ್ಕೆ ಹೆಚ್ಚೆಚ್ಚು ರಫ್ತು ಮಾಡುವ ದೇಶಗಳ ಮೇಲೆ ಪರಿಣಾಮ ಉಂಟುಮಾಡಬಹುದು ಎಂದು ವಿಶ್ವಬ್ಯಾಂಕ್ ಎಚ್ಚರಿಕೆ ನೀಡಿದೆ.

ಚೀನಾ ಸರ್ಕಾರವು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ಯೋಜನೆಗಳ ಮೇಲೆ ಹೆಚ್ಚಿನ ಹಣವನ್ನು ವಿನಿಯೋಗಿಸಿದರೆ ಚೀನಾದ ಸ್ಥಿತಿಯಿಂದ ವಿಶ್ವದ ಇತರ ರಾಷ್ಟ್ರಗಳ ಮೇಲೆ ಆಗುವ ಪರಿಣಾಮವನ್ನು ನಿಯಂತ್ರಿಸಬಹುದು. ಈ ನಿಟ್ಟಿನಲ್ಲಿ ಚೀನಾ ಈಗಾಗಲೇ ಆರು ರಸ್ತೆ ಯೋಜನೆಗಳು ಹಾಗೂ ಮೂರು ರೈಲು ಯೋಜನೆಗಳನ್ನು ಘೋಷಿಸಿದೆ.

ಬೃಹತ್ ಪ್ರಮಾಣದ ಹೊಸ ನಿರ್ಮಾಣ ಯೋಜನೆಗಳ ಪೈಕಿ ಹೆಚ್ಚಿನವು ಚೀನಾದ ಪಶ್ಚಿಮ ಭಾಗದಲ್ಲಿ ಇವೆ ಎನ್ನುತ್ತಾರೆ ಸರ್ಕಾರಿ ಸ್ವಾಮ್ಯದ ನಿರ್ಮಾಣ ಯಂತ್ರೋಪಕರಣಗಳ ತಯಾರಿಕಾ ಕಂಪನಿಯ ಅಧ್ಯಕ್ಷ ವಾಂಗ್ ಮಿನ್. ಈ ಯೋಜನೆಗಳು ಈ ಕಂಪನಿಯ ಪಾಲಿಗೆ ಒಳ್ಳೆಯದನ್ನೇ ಮಾಡಿವೆ. ಆದರೆ, ಕಡಿಮೆ ಜನಸಂಖ್ಯೆ ಇರುವ, ಪರ್ವತ ಪ್ರದೇಶಗಳಲ್ಲಿನ ಪಟ್ಟಣಗಳು ಹಾಗೂ ಮರುಭೂಮಿ ಪ್ರದೇಶಗಳಲ್ಲಿನ ಪಟ್ಟಣಗಳ ಜೋಡಣೆ ಕೆಲಸ ದುಬಾರಿಯಾಗಿ ಪರಿಣಮಿಸಿದೆ. ಇಂಥವುಗಳಿಂದ ಈಗಾಗಲೇ ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿರುವ ಚೀನಾದ ಸಾಲದ ಪ್ರಮಾಣ ಇನ್ನಷ್ಟು ಹೆಚ್ಚುತ್ತದೆ.

ಚೀನಾದ ಸಾಲ ಹೆಚ್ಚಳ ಪ್ರಮಾಣಕ್ಕೆ ತಡೆಯೊಡ್ಡುವುದಾಗಿ ಅಲ್ಲಿನ ಉಪಾಧ್ಯಕ್ಷರು ಕಳೆದ ವರ್ಷ ಹೇಳಿದ್ದರು. ಅಮೆರಿಕದ ಜೊತೆಗಿನ ವಾಣಿಜ್ಯ ಸಮರವನ್ನು ಎದುರಿಸುವ ವಿಶ್ವಾಸ ಅಲ್ಲಿನ ಅಧಿಕಾರಿಗಳಲ್ಲಿ ಇತ್ತು. ಅವರು ದೇಶದ ಸಣ್ಣ–ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ನೆರವು ನೀಡುತ್ತಿದ್ದ ಪರ್ಯಾಯ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲು ಆರಂಭಿಸಿದರು. ಆದರೆ, ಅರ್ಥ ವ್ಯವಸ್ಥೆ ನಿಧಾನಗತಿಗೆ ತಿರುಗಲು ಆರಂಭಿಸಿದ ನಂತರ ‘ಮೂರು ವರ್ಷ ಸಾಕಾಗುವುದಿಲ್ಲ’ ಎಂದು ಅಧಿಕಾರಿಗಳು ಹೇಳಲಾರಂಭಿಸಿದರು.

ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕ ಚಟುವಟಿಕೆಗಳು ದುರ್ಬಲವಾಗಿಯೇ ಇರಲಿವೆ ಎಂದು ಹಲವು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ಎರಡನೆಯ ತ್ರೈಮಾಸಿಕ ಕೂಡ ಅದೇ ರೀತಿಯಲ್ಲೇ ಮುಂದುವರಿಯಲಿದೆ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಆದರೆ ಸಮಸ್ಯೆಗಳಿಂದ ಪಾರಾಗಿ ಬರುವ ಚೀನಾದ ಸಾಮರ್ಥ್ಯದಲ್ಲಿ ತಮಗೆ ನಂಬಿಕೆ ಇದೆ ಎಂಬ ಮಾತೂ ಕೆಲವರಿಂದ ಕೇಳಿಬಂದಿದೆ.

ದಿ ನ್ಯೂಯಾರ್ಕ್‌ ಟೈಮ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.