
ಮೌಂಟ್ ಎವರೆಸ್ಟ್ ಶಿಖರದ ಮೇಲೆ ಲ್ಯಾಂಡ್ ಆಗಬಲ್ಲ, ದಟ್ಟ ಕಾಡುಗಳಲ್ಲಿ ತಲೆದೋರುವ ಕಾಡ್ಗಿಚ್ಚನ್ನು ಸೆಣಸಿ ಆರಿಸಬಲ್ಲ, ಸೆಕೆಂಡುಗಳಲ್ಲಿ ರೋಗಿಗಳನ್ನು ಆಸ್ಪತ್ರೆಗಳಿಗೆ ಒಯ್ಯಬಲ್ಲ, ಮತ್ತು ನಮ್ಮ ಪರ್ವತಗಳಲ್ಲಿ ಯೋಧರಿಗೆ ಗಡಿ ರಕ್ಷಣೆಗೆ ನೆರವಾಗಬಲ್ಲ ಒಂದು ಹೆಲಿಕಾಪ್ಟರ್ ಅನ್ನು ಊಹಿಸಿಕೊಳ್ಳಿ. ಇದು ಯಾವುದೋ ವೈಜ್ಞಾನಿಕ ಕಥೆಯಾಧಾರಿತ ಸಿನೆಮಾದ ದೃಶ್ಯಗಳಲ್ಲ! ಈ ಹೆಲಿಕಾಪ್ಟರ್ ವಾಸ್ತವವಾಗಿದ್ದು, ಈಗ ಬೆಂಗಳೂರಿನ ಸನಿಹದಲ್ಲಿರುವ ವೇಮಗಲ್ ಎನ್ನುವ ಹಳ್ಳಿಯಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಇದು ಭವಿಷ್ಯದಲ್ಲಿ ಭಾರತ ಕಾರ್ಯಾಚರಿಸುವ ರೀತಿಯನ್ನೇ ಬದಲಾಯಿಸಲಿದೆ.
ಫೆಬ್ರವರಿ 17, 2026ರಂದು, ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಫ್ರಾನ್ಸ್ ರಕ್ಷಣಾ ಸಚಿವರಾದ ಕ್ಯಾಥರೀನ್ ವಾಟ್ರಿನ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಲಿದ್ದಾರೆ. ಆದರೆ, ಇಲ್ಲೊಂದು ಆಸಕ್ತಿಕರ ವಿಚಾರವಿದೆ. ಉಭಯ ದೇಶಗಳ ರಕ್ಷಣಾ ಸಚಿವರು ಜೊತೆಯಾಗಿ ಒಂದು ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ಅದುವೇ, ಭಾರತದ ಮೊದಲ ಖಾಸಗಿ ಹೆಲಿಕಾಪ್ಟರ್ ಕಾರ್ಖಾನೆಯ ಉದ್ಘಾಟನೆ! ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಇಮಾನುವಲ್ ಮಾಕ್ರೋನ್ ಜಂಟಿಯಾಗಿ ಆನ್‌ಲೈನ್ ಮೂಲಕ ಈ ಕಾರ್ಖಾನೆಯನ್ನು ಉದ್ಘಾಟಿಸಲಿದ್ದಾರೆ. ಸಾಮಾನ್ಯವಾಗಿ ಭಾರತ ಎಲ್ಲ ಆಯುಧ ವ್ಯವಸ್ಥೆಗಳನ್ನು ವಿದೇಶಗಳಿಂದ ಖರೀದಿಸುವ ರಾಷ್ಟ್ರವೆಂದು ಪ್ರಸಿದ್ಧವಾಗಿದ್ದು, ಈಗ ತಾನೇ ಸ್ವತಃ ಭಾರತದಲ್ಲೇ ಅತ್ಯಾಧುನಿಕ ಹೆಲಿಕಾಪ್ಟರ್‌ಗಳನ್ನು ನಿರ್ಮಿಸುತ್ತಿರುವುದು ನಿಜಕ್ಕೂ ಬಹಳ ದೊಡ್ಡ ವಿಚಾರವೇ ಆಗಿದೆ.
ಭಾರತದಲ್ಲಿ ಇನ್ನು ನಿರ್ಮಾಣಗೊಳ್ಳಲಿರುವ ಹೆಲಿಕಾಪ್ಟರ್ ಏರ್‌ಬಸ್ ಎಚ್125 ಆಗಿದೆ. ಇದನ್ನು ಭಾರತದ ಅವಿಶ್ರಾಂತವಾಗಿ ಹಾರಾಡುವ ಕೆಲಸಗಾರ ಎಂದುಕೊಳ್ಳಿ. ಇದು ಯಾವುದೋ ಯುದ್ಧ ವಿಮಾನ ಅಥವಾ ಮಿಲಿಟರಿ ದಾಳಿ ಹೆಲಿಕಾಪ್ಟರ್ ಅಲ್ಲ. ಆದರೆ, ಇದು ಹೆಚ್ಚು ಪ್ರಾಯೋಗಿಕವಾಗಿದ್ದು, ಪ್ರತಿದಿನದ ತುರ್ತು ಪರಿಸ್ಥಿತಿಗಳಿಗೆ ಮತ್ತು ಪ್ರಮುಖ ಕಾರ್ಯಾಚರಣೆಗಳಿಗೆ ಉಪಯುಕ್ತವಾಗಿದೆ. ಈ ಒಂಟಿ ಇಂಜಿನ್ನಿನ ಹೆಲಿಕಾಪ್ಟರ್ 662 ಕಿಲೋಮೀಟರ್ ಸಾಗಬಲ್ಲದಾಗಿದ್ದು, ಪ್ರತಿ ಗಂಟೆಗೆ 250 ಕಿಲೋಮೀಟರ್ ವೇಗದಲ್ಲಿ ಸಾಗಬಲ್ಲದು. ಇದು ಓರ್ವ ಪೈಲಟ್ ಮತ್ತು ಆರು ಜನ ಪ್ರಯಾಣಿಕರನ್ನು ಆರಾಮವಾಗಿ ಸಾಗಿಸಬಲ್ಲದು. ಇದು ಸಣ್ಣದಾದ, ಕ್ಷಿಪ್ರವಾದ, ಮತ್ತು ಅತ್ಯಂತ ಗಟ್ಟಿಮುಟ್ಟಾದ ಹೆಲಿಕಾಪ್ಟರ್ ಆಗಿದೆ. ಇದು ಬಿಸಿಯಾದ ಮರುಭೂಮಿಗಳಲ್ಲಿ, ತಣ್ಣನೆಯ ಪರ್ವತಗಳಲ್ಲಿ, ಮತ್ತು ದೈನಂದಿನ ಹೆಲಿಕಾಪ್ಟರ್‌ಗಳು ಕಷ್ಟಪಡುವ ಪ್ರದೇಶಗಳಲ್ಲೂ ಕಾರ್ಯಾಚರಿಸಬಲ್ಲದು. ಹಾಗೆ ನೋಡಿದರೆ, ಎಚ್125 ಹೆಲಿಕಾಪ್ಟರ್ ಒಂದು ಪ್ರಸಿದ್ಧ ದಾಖಲೆಯನ್ನು ಹೊಂದಿದ್ದು, ಇದು ಜಗತ್ತಿನ ಅತ್ಯಂತ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟ್ ಮೇಲೆ ಯಶಸ್ವಿಯಾಗಿ ಲ್ಯಾಂಡಿಂಗ್ ನಡೆಸಿರುಬ ಹೆಲಿಕಾಪ್ಟರ್ ಆಗಿದೆ.
ಎಚ್125 ಏಕೆ ಭಾರತದ ಪಾಲಿಗೆ ಗೇಮ್ ಚೇಂಜರ್ ಆಗಿದೆ?
ಎಚ್125 ಕೇವಲ ಒಂದು ಸಾಮಾನ್ಯ ಹೆಲಿಕಾಪ್ಟರ್ ಅಲ್ಲ. ಇದು ನಿಜಕ್ಕೂ ಒಂದು ಗೇಮ್ ಚೇಂಜರ್ ಆಗಿದೆ. ಮೊದಲನೆಯದಾಗಿ, ಈ ಹೆಲಿಕಾಪ್ಟರ್ ಮೌಂಟ್ ಎವರೆಸ್ಟ್ ಶಿಖರದ ಮೇಲೂ ಯಶಸ್ವಿಯಾಗಿ ಲ್ಯಾಂಡಿಂಗ್ ನಡೆಸಿರುವುದರಿಂದ, ಭಾರತಕ್ಕೆ ಕೊನೆಗೂ ಜಗತ್ತಿನ ಅತ್ಯಂತ ಎತ್ತರದ ಶಿಖರಗಳಲ್ಲಿ ಸಿಲುಕಿದವರನ್ನು ರಕ್ಷಿಸುವ ಸಾಮರ್ಥ್ಯ ಲಭಿಸಿದೆ. ಇದರಿಂದಾಗಿ ಹಿಮಾಲಯದ ಶಿಖರಗಳಲ್ಲಿ ಸಿಲುಕುವ ಪರ್ವತಾರೋಹಿಗಳು, ಸೈನಿಕರು, ಮತ್ತು ವಿಪತ್ತಿನಲ್ಲಿರುವವರನ್ನು ರಕ್ಷಿಸಲು ಸಾಧ್ಯ. ಭಾರತ ಹೊರತುಪಡಿಸಿದರೆ, ಬೇರೆ ಯಾವ ದೇಶವೂ ಈಗ ನಮಗಿಂತ ಸುಲಭವಾಗಿ ಈ ಸಾಧನೆ ನಡೆಸಲು ಸಾಧ್ಯವಾಗಿಲ್ಲ.
ಎರಡನೆಯದಾಗಿ, ಈ ಯೋಜನೆ 'ಮೇಕ್ ಇನ್ ಇಂಡಿಯಾ' ಪರಿಕ್ರಮದ ಭಾಗವಾಗಿದ್ದು, ಭಾರತದ ಹಣ ವಿದೇಶಗಳಿಗೆ ತೆರಳುವ ಬದಲು, ನಮ್ಮ ದೇಶದಲ್ಲೇ ಉಳಿಯಲಿದೆ. ಭಾರತ ವಿದೇಶೀ ಕಂಪನಿಗಳಿಂದ ಹೆಲಿಕಾಪ್ಟರ್ ಖರೀದಿಸಿದಾಗ, ಮಿಲಿಯಾಂತರ ರೂಪಾಯಿ ನಮ್ಮ ದೇಶದಿಂದ ಹೊರ ಹೋಗುತ್ತದೆ. ಆದರೆ ಈಗ, ನಾವು ಈ ಹೆಲಿಕಾಪ್ಟರ್‌ಗಳನ್ನು ಭಾರತದಲ್ಲೇ ನಿರ್ಮಿಸುವುದರಿಂದ, ಭಾರತದ ಹಣ ಇಲ್ಲಿ ಉದ್ಯೋಗ ಸೃಷ್ಟಿಸಲು, ಕಾರ್ಮಿಕರಿಗೆ ಸಂಬಳ ಪಾವತಿಸಲು, ಸ್ಥಳೀಯ ಉದ್ಯಮಗಳನ್ನು ಬೆಂಬಲಿಸಲು, ಮತ್ತು ನಮ್ಮ ಆರ್ಥಿಕತೆಯನ್ನು ಬಲಪಡಿಸಲು ಬಳಕೆಯಾಗುತ್ತದೆ. ಈ ನೈಜ ಸಂಪತ್ತಿನ ನಿರ್ಮಾಣ ನಮ್ಮ ಕರ್ನಾಟಕದಲ್ಲೇ ನಡೆಯುತ್ತಿದೆ.
ಮೂರನೆಯದಾಗಿ, ಎಚ್125 ಅಸಾಧಾರಣವಾದ ಬಹುಪಾತ್ರಗಳ ಹೆಲಿಕಾಪ್ಟರ್ ಆಗಿದೆ. ಒಂದು ದಿನ ಈ ಹೆಲಿಕಾಪ್ಟರ್ ಅನಾರೋಗ್ಯಕ್ಕೆ ತುತ್ತಾಗಿರುವ ವ್ಯಕ್ತಿಯನ್ನು ಏರ್ ಆಂಬ್ಯುಲೆನ್ಸ್ ರೂಪದಲ್ಲಿ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುತ್ತದೆ. ಮರುದಿನ, ಆಕಾಶದಿಂದ ನೀರು ಎರಚುತ್ತಾ, ಕಾಡ್ಗಿಚ್ಚಿನ ವಿರುದ್ಧ ಸೆಣಸುತ್ತದೆ. ಅದರ ಮರುದಿನ, ಇದೇ ಹೆಲಿಕಾಪ್ಟರ್ ಪೊಲೀಸರಿಗೆ ಅಪರಾಧಿಗಳನ್ನು ಬಂಧಿಸಲು, ಅಥವಾ ಪ್ರವಾಹದ ಸಂದರ್ಭದಲ್ಲಿ ವಿಪತ್ತು ಪರಿಹಾರ ಕಾರ್ಯಾಚರಣೆ ನಡೆಸಲು ನೆರವಾಗುತ್ತದೆ. ಇದು ಒಂದು ರೀತಿಯಲ್ಲಿ ಐವತ್ತು ಕಾರ್ಯಗಳನ್ನು ಸಮರ್ಥವಾಗಿ ನಡೆಸುವ ಒಂದು ವಾಹನವನ್ನು ಖರೀದಿಸಿದಂತಾಗಲಿದೆ. ಇಂತಹ ಎಲ್ಲದಕ್ಕೂ ಹೊಂದಿಕೊಳ್ಳುವ ಗುಣವೇ ಈ ಹೆಲಿಕಾಪ್ಟರ್ ಅನ್ನು ಅತ್ಯಂತ ಮೌಲ್ಯಯುತವಾಗಿಸಿದೆ.
ನಾಲ್ಕನೆಯದಾಗಿ, ಈ ಸಹಯೋಗ ಟಾಟಾ - ಏರ್‌ಬಸ್ ತಂತ್ರಜ್ಞಾನವನ್ನು ನಮ್ಮ ಮನೆಗಳಿಗೆ ನೇರವಾಗಿ ತರುತ್ತಿದೆ. ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಈಗ ಜಗತ್ತಿನ ಅತ್ಯಂತ ಶ್ರೇಷ್ಠವಾದ ಹೆಲಿಕಾಪ್ಟರ್ ನಿರ್ಮಾಣ ಸಂಸ್ಥೆಯಾದ ಏರ್‌ಬಸ್ ಜೊತೆಗೂಡಿ, ಜಾಗತಿಕ ಗುಣಮಟ್ಟದ ವೈಮಾನಿಕ ತಂತ್ರಜ್ಞಾನವನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ. ಈ ಜ್ಞಾನದ ವರ್ಗಾವಣೆ ನಿಜಕ್ಕೂ ಬೆಲೆಕಟ್ಟಲು ಸಾಧ್ಯವಿಲ್ಲದ್ದು. ಭಾರತೀಯ ಇಂಜಿನಿಯರ್‌ಗಳು, ವಿಜ್ಞಾನಿಗಳು, ಮತ್ತು ತಂತ್ರಜ್ಞರು ಅಭಿವೃದ್ಧಿ ಪಡಿಸಲು ದಶಕಗಳೇ ಬೇಕಾಗುವ ಅನುಭವವನ್ನು ಸುಲಭವಾಗಿ ಗಳಿಸಲಿದ್ದಾರೆ. ಇಲ್ಲಿ ಕಾರ್ಯ ನಿರ್ವಹಿಸುವ ಯುವಕರು ಹೆಲಿಕಾಪ್ಟರ್ ವಿನ್ಯಾಸ, ಉತ್ಪಾದನೆ ಮತ್ತು ನಿರ್ವಹಣೆಗಳಲ್ಲಿ ಪ್ರಾವೀಣ್ಯತೆ ಗಳಿಸಲಿದ್ದು, ಈ ಕೌಶಲಗಳು ಭಾರತವನ್ನು ಜಾಗತಿಕ ತಂತ್ರಜ್ಞಾನದ ಶಕ್ತಿ ಕೇಂದ್ರವಾಗಿಸಲಿದೆ.
ವೇಮಗಲ್‌ನಲ್ಲಿ ಸ್ಥಾಪನೆಯಾಗಿರುವ ಕಾರ್ಖಾನೆ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಮತ್ತು ಏರ್‌ಬಸ್ ನಡುವಿನ ಜಂಟಿ ಯೋಜನೆಯಾಗಿದೆ. ಇವೆರಡೂ ಸಂಸ್ಥೆಗಳು ಜೊತೆಯಾಗಿ, ಫೈನಲ್ ಅಸೆಂಬ್ಲಿ ಲೈನ್ ಅನ್ನು ನಿರ್ಮಿಸಲಿವೆ. ಅಂದರೆ, ಇವು ಹೆಲಿಕಾಪ್ಟರ್ ಬಿಡಿಭಾಗಗಳನ್ನು ಕರ್ನಾಟಕದಲ್ಲೇ ಜೋಡಿಸಿ, ಇಲ್ಲೇ ಹೆಲಿಕಾಪ್ಟರ್‌ಗಳನ್ನು ಪರೀಕ್ಷಿಸಲಿವೆ. ಈ ಘಟಕದಿಂದ ಮೊದಲ ಹೆಲಿಕಾಪ್ಟರ್ 2027ರಲ್ಲಿ ಹೊರಬರುವ ನಿರೀಕ್ಷೆಗಳಿವೆ. ಆರಂಭದಲ್ಲಿ ಈ ಘಟಕ ವರ್ಷಕ್ಕೆ ಹತ್ತು ಹೆಲಿಕಾಪ್ಟರ್‌ಗಳನ್ನು ನಿರ್ಮಿಸುವ ಗುರಿ ಹೊಂದಿದ್ದರೂ, ಇದರ ಕನಸುಗಳು ಬಹಳ ದೊಡ್ಡದಾಗಿವೆ. ಮುಂದಿನ ಇಪ್ಪತ್ತು ವರ್ಷಗಳ ಅವಧಿಯಲ್ಲಿ, ಒಟ್ಟು ಐನೂರು ಹೆಲಿಕಾಪ್ಟರ್‌ಗಳನ್ನು ನಿರ್ಮಿಸುವ ಗುರಿ ಹಾಕಿಕೊಳ್ಳಲಾಗಿದೆ. ಈ ಹೆಲಿಕಾಪ್ಟರ್‌ನ ನಾಗರಿಕ ಆವೃತ್ತಿ ವೈದ್ಯರು ಅಪಘಾತಗಳಲ್ಲಿ ಪೆಟ್ಟಾದ ರೋಗಿಗಳನ್ನು ರಕ್ಷಿಸಲು, ಅಗ್ನಿಶಾಮಕ ದಳದವರು ಕಾಡ್ಗಿಚ್ಚು ಆರಿಸಲು, ಪೊಲೀಸರು ನಗರಗಳಲ್ಲಿ ಗಸ್ತು ನಡೆಸಲು, ಮತ್ತು ಪ್ರವಾಸೋದ್ಯಮ ಕಂಪನಿಗಳ ಬಳಕೆಗೆ ಲಭ್ಯವಾಗಲಿದೆ. ಇದರ ಮಿಲಿಟರಿ ಆವೃತ್ತಿ ಎಚ್125ಎಂ ಎಂದು ಹೆಸರಾಗಿದ್ದು, ಇದನ್ನು ಹಿಮಾಲಯದಲ್ಲಿನ ಎತ್ತರ ಪ್ರದೇಶದ ಕಾರ್ಯಾಚರಣೆ ಮತ್ತು ಗಡಿ ಭದ್ರತೆಗೆ ಬಳಸಲಾಗುತ್ತದೆ.
ಈ ಹೆಲಿಕಾಪ್ಟರ್ ಹೆಚ್ಚು ಆಸಕ್ತಿಕರವಾಗುವುದು ಇಲ್ಲಿ. ಎಚ್125 ಹೆಲಿಕಾಪ್ಟರ್ ಎರಡು ಆವೃತ್ತಿಗಳಲ್ಲಿ ಲಭ್ಯವಾಗಲಿದೆ. ಒಂದು ಆವೃತ್ತಿ ಜನ ಸಾಮಾನ್ಯರಿಗೆ ಮತ್ತು ಕೆಲಸಗಳಿಗೆ ಬಳಕೆಯಾದರೆ, ಇನ್ನೊಂದು ಆವೃತ್ತಿ ಮಿಲಿಟರಿ ಬಳಕೆಗೆ ಲಭ್ಯವಾಗಲಿದೆ. ಎಚ್125ಎಂ ಎನ್ನುವ ಮಿಲಿಟರಿ ಆವೃತ್ತಿಯನ್ನು ನಮ್ಮ ದೇಶವನ್ನು ರಕ್ಷಿಸುತ್ತಿರುವ ಯೋಧರ ರಕ್ಷಣೆಗಾಗಿಯೇ ನಿರ್ಮಿಸಲಾಗುತ್ತದೆ. ಇದು ಆಯುಧಗಳನ್ನು ಒಯ್ಯಬಲ್ಲದಾಗಿದ್ದು, ಉತ್ತಮ ಶಸ್ತ್ರಾಸ್ತ್ರಗಳು, ಶತ್ರು ರೇಡಾರ್‌ಗಳಿಂದ ಬಚ್ಚಿಟ್ಟುಕೊಳ್ಳಲು ನೆರವಾಗುವ ವಿಶೇಷ ತಂತ್ರಜ್ಞಾನವನ್ನು ಹೊಂದಿದೆ. ಇವೆರಡೂ ಆವೃತ್ತಿಗಳು ಸಮಾನ ಮೂಲ ವಿನ್ಯಾಸವನ್ನು ಹೊಂದಿದ್ದರೂ, ಮಿಲಿಟರಿ ಆವೃತ್ತಿ ಹೆಚ್ಚು ಗಟ್ಟಿಮುಟ್ಟಾಗಿದ್ದು, ಯುದ್ಧ ಸನ್ನದ್ಧವಾಗಿದೆ.
ಕರ್ನಾಟಕದ ವೇಮಗಲ್ ಯಾಕೆ ಇಷ್ಟು ಮಹತ್ವ ಪಡೆದಿದೆ? ಈ ಕಾರ್ಖಾನೆ ಕೇವಲ ಹೆಲಿಕಾಪ್ಟರ್‌ಗಳ ನಿರ್ಮಾಣಕ್ಕೆ ಸೀಮಿತವಾಗಿಲ್ಲ. ಇದು ಉದ್ಯೋಗಗಳನ್ನೂ ನಿರ್ಮಿಸಿ, ಸಂಪೂರ್ಣ ಪ್ರದೇಶದ ಅಭಿವೃದ್ಧಿಗೆ ನೆರವಾಗಲಿದೆ. ಇಲ್ಲಿ ನೂರಾರು ಜನ ಉದ್ಯೋಗ ನಡೆಸಲಿದ್ದು, ಅವರಿಗೆ ಉತ್ತಮ ಹಣ ಸಂಪಾದಿಸಲು, ಕೌಶಲ್ಯಾಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ. ಈ ಕಾರ್ಖಾನೆಯ ಆಸುಪಾಸಿನಲ್ಲಿ, ಇತರ ಉದ್ಯಮಗಳೂ ಬೆಳೆಯಬಹುದಾಗಿದ್ದು, ಸಂಪೂರ್ಣ ಪ್ರದೇಶವೇ ಪ್ರಗತಿ ಸಾಧಿಸಲಿದೆ.
ಈ ಕಾರ್ಖಾನೆ ಭಾರತದ ಭವಿಷ್ಯವನ್ನು ಪ್ರತಿನಿಧಿಸಲಿದ್ದು, ನಾವು ಅತ್ಯಾಧುನಿಕ ತಂತ್ರಜ್ಞಾನವನ್ನು ಉತ್ಪಾದಿಸಬಲ್ಲೆವು, ಉದ್ಯೋಗ ಸೃಷ್ಟಿಸಬಲ್ಲೆವು, ರಕ್ಷಣಾ ಸಾಮರ್ಥ್ಯಗಳನ್ನು ಬಲಪಡಿಸಬಲ್ಲೆವು, ಮತ್ತು ಉತ್ತಮ ನಾಳೆಗಳನ್ನು ನಿರ್ಮಿಸಬಲ್ಲೆವು ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.