
ಫಿನ್ಲೆಂಡ್ ದೇಶದ ಶಿಕ್ಷಣ ವ್ಯವಸ್ಥೆ ಸಮಾನತೆಯ ತಾತ್ತ್ವಿಕತೆಯನ್ನು ಒಳಗೊಂಡಿದೆ. ಸಮಾನತೆ–ಸೌಹಾರ್ದದ ಬಗ್ಗೆ ಭಾವುಕವಾಗಿ ಮಾತನಾಡುವ ನಮ್ಮ ಶಿಕ್ಷಣ ವ್ಯವಸ್ಥೆಯ ಪ್ರಾಥಮಿಕ ಸ್ವರೂಪವೇ ಅಸಮಾನತೆಯ ನೆಲಗಟ್ಟಿನದು. ಸುಧಾರಣೆಗಳು ಭಿನ್ನವಾದಾಗಷ್ಟೇ ಶಿಕ್ಷಣ ವ್ಯವಸ್ಥೆ ಮಾನವೀಯವಾಗುತ್ತದೆ, ಮಕ್ಕಳ ಮನೋವಿಕಾಸ ಸಾಧ್ಯವಾಗುತ್ತದೆ.
ಶಿಕ್ಷಣ ಸುಧಾರಣೆ ಕುರಿತಂತೆ ಭಾರತದಲ್ಲಿ ಆರಂಭದಿಂದಲೂ ಇರುವ ಮೂಲಭೂತ ಪ್ರಶ್ನೆ: ಶಿಕ್ಷಣದಲ್ಲಿನ ಅಸಮಾನತೆ, ತಾರತಮ್ಯ ಹಾಗೂ ಸೃಜನಶೀಲತೆಯಿಲ್ಲದ ಕಂಠಪಾಠ ವಿಧಾನವನ್ನು ಕಿತ್ತೆಸೆದು, ಎಲ್ಲ ಮಕ್ಕಳಿಗೆ ಸಮಾನತೆಯ ನೆಲೆಯಲ್ಲಿ ಗುಣಾತ್ಮಕ ಶಿಕ್ಷಣ ಒದಗಿಸುವುದು ಹೇಗೆ?
ಜಗತ್ತಿನ ಹಲವು ದೇಶಗಳು, ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಅತ್ಯುತ್ತಮವಾಗಿ ರೂಪಿಸಿಕೊಂಡಿವೆ. ಅಂತಹ ದೇಶಗಳ ಮೊದಲ ಸಾಲಿನಲ್ಲಿರುವುದು ಉತ್ತರ ಯೂರೋಪಿನ ಪುಟ್ಟ ದೇಶ ಫಿನ್ಲೆಂಡ್.
ಫಿನ್ಲೆಂಡ್‌ನ ಶಿಕ್ಷಣ ವ್ಯವಸ್ಥೆ ಏಕೆ ಯಶಸ್ವಿಯಾಗಿದೆ ಮತ್ತು ಫಿನ್ನಿಷ್ ಶಾಲೆಗಳನ್ನು ಒಳಗೊಳ್ಳುವಿಕೆ ಹಾಗೂ ಗುಣಮಟ್ಟದ ಉತ್ಕೃಷ್ಟತೆಗೆ ಬಹುತೇಕ ರಾಷ್ಟ್ರಗಳು ಜಾಗತಿಕ ಮಾನದಂಡವನ್ನಾಗಿ ನೋಡುವುದರ ಹಿಂದಿನ ಸತ್ಯವೇನೆಂಬುದನ್ನು ಭಾರತದ ಸಂದರ್ಭದಲ್ಲಿ ಒರೆಹಚ್ಚಿ ನೋಡಬೇಕಾಗಿದೆ.
ಫಿನ್ಲೆಂಡ್‌ನಲ್ಲಿ ಶಿಕ್ಷಣವು ಬರೀ ಸೇವೆಯಲ್ಲ, ಅದು ಮೂಲಭೂತ ಹಕ್ಕು ಹಾಗೂ ರಾಷ್ಟ್ರೀಯ ಅನನ್ಯತೆ. ಈ ನಂಬಿಕೆ ಎಷ್ಟು ಆಳವಾಗಿದೆ ಎಂದರೆ, ಸರ್ಕಾರದ ಉನ್ನತಮಟ್ಟದಿಂದ ಸಣ್ಣ ಹಳ್ಳಿಯವರೆಗೆ, ಈ ಬದ್ಧತೆಯನ್ನು ಗೌರವಿಸುವ ಹಾಗೂ ಪ್ರಾಮಾಣಿಕವಾಗಿ ಜಾರಿಗೊಳಿಸುವ ತಿಳಿವಳಿಕೆ ಆಳವಾಗಿ ಹಬ್ಬಿದೆ ಹಾಗೂ ಸಾಂಸ್ಥೀಕರಣಗೊಂಡಿದೆ. ಈ ನಂಬಿಕೆ ಖಾಲಿ ಘೋಷಣೆಯಲ್ಲ. ಬದಲಿಗೆ, ಪ್ರತೀ ಹಂತದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅದಕ್ಕಾಗಿ ರಾಷ್ಟ್ರೀಯ ನಿವ್ವಳ ಉತ್ಪನ್ನದಲ್ಲಿ ಸುಮಾರು ಶೇ 6ರಷ್ಟು ಹಣ ಹೂಡಲಾಗಿದೆ. ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಬೇಕೆಂಬ ರಾಜಕೀಯ ಇಚ್ಛಾಶಕ್ತಿ ವಾಸ್ತವಿಕ ಸತ್ಯದಲ್ಲಿ, ಸ್ವರೂಪ ಮತ್ತು ಫಲಿತಾಂಶಗಳಲ್ಲಿ ಪ್ರತಿಫಲಿಸುತ್ತದೆ. ಕುಟುಂಬದ ಆದಾಯ ಅಥವಾ ಸಾಮಾಜಿಕ ಸ್ಥಾನಮಾನವನ್ನು ಲೆಕ್ಕಿಸದೆ ಉಚಿತ ಗುಣಾತ್ಮಕ ಶಿಕ್ಷಣ ಒದಗಿಸುವ ಸಾರ್ವಜನಿಕ ಶಾಲೆಗಳು ಎಲ್ಲಾ ವರ್ಗಕ್ಕೂ ಮುಕ್ತವಾಗಿವೆ. ಎಲೈಟ್ ಮತ್ತು ಸಾಮಾನ್ಯ ಶಾಲೆಗಳ ನಡುವೆ ವ್ಯತ್ಯಾಸ, ತಾರತಮ್ಯವಿಲ್ಲ.
ಫಿನ್ನಿಷ್ ವಿದ್ಯಾರ್ಥಿಗಳಲ್ಲಿ ಬಹುಪಾಲು ಮಕ್ಕಳು ಸಾರ್ವಜನಿಕ ಶಾಲೆಗಳಿಗೆ ಹೋಗುತ್ತಾರೆ. ಮಗು ಎಲ್ಲಿಂದ ಬಂದರೂ ಕಲಿಯಲು, ಬೆಳೆಯಲು ಮತ್ತು ಯಶಸ್ವಿಯಾಗಲು ಒಂದೇ ಬಗೆಯ ಅವಕಾಶಕ್ಕೆ ಅರ್ಹವಾಗಿದೆ.
ಭಾರತದಲ್ಲಿ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಒಂದು ಕಾಲಮಿತಿ ಕಾರ್ಯಕ್ರಮವಾಗಿತ್ತೇ ಹೊರತು, ಮೂಲಭೂತ ಹಕ್ಕಾಗಿರಲಿಲ್ಲ. 2002ರಲ್ಲಿ 86ನೇ ಸಂವಿಧಾನ ತಿದ್ದುಪಡಿಯ ಮೂಲಕ ಶಿಕ್ಷಣವನ್ನು ಸಂವಿಧಾನದಲ್ಲಿ ಮೂಲಭೂತ ಹಕ್ಕನ್ನಾಗಿ ಸೇರಿಸುವಾಗ, ಹುಟ್ಟಿನಿಂದ 14 ವರ್ಷದವರೆಗಿದ್ದ ವ್ಯಾಪ್ತಿಯನ್ನು 6ರಿಂದ 14 ವರ್ಷಕ್ಕೆ ಸೀಮಿತಗೊಳಿಸುವ ಮೂಲಕ, ಸಂವಿಧಾನದ ಮೂಲ ಆಶಯವನ್ನೇ ತಿಳಿಗೊಳಿಸಲಾಯಿತು. ನಂತರ, ಈ ಮೂಲಭೂತ ಹಕ್ಕನ್ನು ಜಾರಿಗೊಳಿಸಲು 2009ರ ಆಗಸ್ಟ್‌ನಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆಯನ್ನು (ಶಿಕ್ಷಣ ಹಕ್ಕು ಕಾಯ್ದೆ) ರೂಪಿಸಿ, 2010ರ ಏಪ್ರಿಲ್‌ನಲ್ಲಿ ಜಾರಿ ಮಾಡಲಾಯಿತು. ಆದರೆ, ಅದು ದೇಶದ ಆದ್ಯತೆಯಾಗಲೇ ಇಲ್ಲ.
ಅಂದಿನಿಂದ ಇಂದಿನವರೆಗೆ ಶಾಸಕಾಂಗ ಮತ್ತು ಕಾರ್ಯಾಂಗವು ಸಂವಿಧಾನದ ಈ ಮೂಲಭೂತ ಹಕ್ಕನ್ನು ಬದ್ಧತೆಯಿಂದ ಜಾರಿಗೊಳಿಸುವ ಪ್ರಾಮಾಣಿಕತೆ ತೋರಿಸಿಲ್ಲ. ಫಿನ್ಲೆಂಡ್‌ನಂತಹ ದೇಶಕ್ಕೆ ಅದು ರಾಷ್ಟ್ರೀಯ ಆದ್ಯತೆಯಾದರೆ, ಭಾರತಕ್ಕೆ ಅದು ಬೇಡವಾದ ಖರ್ಚಿನ ಹೊರೆ. ಕಾಯ್ದೆ ರೂಪುಗೊಂಡು 16 ವರ್ಷಗಳಾದರೂ, ನಮ್ಮ ಜನಪ್ರತಿನಿಧಿಗಳಿಗಾಗಲಿ, ಕಾರ್ಯಾಂಗದಲ್ಲಿನ ಅಧಿಕಾರಿ ವರ್ಗವಾಗಲಿ ಅಥವಾ ಗಾಂಧೀಜಿಯ ಸರ್ವೋದಯ ಕಲ್ಪನೆಯ ಮೂಲಕ ಗ್ರಾಮ ಸ್ವರಾಜ್ಯವನ್ನು ಸ್ಥಾಪಿಸಿಬೇಕಾದ ನಮ್ಮ ಸ್ಥಳೀಯ ಸರ್ಕಾರಗಳೆಂದೇ ಗುರುತಿಸಲಾಗುವ ಪಂಚಾಯಿತಿ ವ್ಯವಸ್ಥೆಗಾಗಲಿ ಇದರ ಬಗ್ಗೆ ಕಾಳಜಿಯಿಲ್ಲ. ಸ್ವಲ್ಪಮಟ್ಟಿಗೆ ಆಮ್ ಆದ್ಮಿ ಪಕ್ಷ ಹಾಗೂ ಕೇರಳದ ಎಡಪಕ್ಷ ಹೊರತುಪಡಿಸಿದರೆ, ಶಿಕ್ಷಣದ ಮೂಲಭೂತ ಹಕ್ಕನ್ನು ನಿರ್ಲಕ್ಷಿಸುವಲ್ಲಿ ಉಳಿದೆಲ್ಲ ರಾಜಕೀಯ ಪಕ್ಷಗಳು ಒಂದೇ ಆಗಿವೆ. ಮಾನವ ಹಕ್ಕು ಆಧಾರಿತ ನೆಲೆಯ ಕಾನೂನುಗಳನ್ನು ನಿರ್ಲಕ್ಷಿಸುವುದು ಅಥವಾ ತಿರುಚಿ ತಿಳಿಗೊಳಿಸುವುದು ಇಂದು ಹೊಸ ಬಗೆಯ ರಾಜಕೀಯವಾಗಿದೆ.
ರಾಷ್ಟ್ರೀಯ ಬದ್ಧತೆಯ ಶಾಲಾ ಶಿಕ್ಷಣವು ಫಿನ್ಲೆಂಡ್‌ನಲ್ಲಿ ಸ್ಪರ್ಧೆ ಆಗಿರದೆ ಸಾಮೂಹಿಕ ಧ್ಯೇಯವಾಗಿದೆ. ಸರ್ಕಾರ, ಶಿಕ್ಷಕರು, ಪೋಷಕರು, ಸಮಾಜ ಮತ್ತು ಇಡೀ ದೇಶ ಒಟ್ಟಾರೆಯಾಗಿ ಅತ್ಯುತ್ತಮ ಶಿಕ್ಷಣದ ಮೂಲಕ ಪ್ರತಿ ಮಗುವಿನ ಪೂರ್ಣ ಸಾಮರ್ಥ್ಯವನ್ನು ಪೋಷಿಸುವಲ್ಲಿ ನಂಬಿಕೆ ಇಟ್ಟಿದ್ದಾರೆ. ವ್ಯವಸ್ಥೆಯ ಒಳಗೊಳ್ಳುವಿಕೆಯ ತತ್ತ್ವವು ಆಯ್ಕೆಯಲ್ಲ, ಸಮಾನ ಅವಕಾಶ. ಮಗು ಫಿನ್ಲೆಂಡ್‌ನಲ್ಲಿನ ಲ್ಯಾಪ್‌ಲ್ಯಾಂಡ್‌ನ ಸಣ್ಣ ಸರೋವರದ ಹಳ್ಳಿಯಲ್ಲಿರಲಿ ಅಥವಾ ಪ್ರತಿಷ್ಠಿತ ಹೆಲ್ಸಿಂಕಿ ನಗರದ ನೆರೆಹೊರೆಯಲ್ಲಿರಲಿ, ಅರ್ಹ ಶಿಕ್ಷಕರು, ಸ್ವಚ್ಛ ಸೌಲಭ್ಯಗಳು, ಬೆಚ್ಚಗಿನ ಊಟ ಮತ್ತು ಕಲಿಕೆಗೆ ಪೂರಕವಾದ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತ ಶಾಲೆಗೆ ಹಾಜರಾಗುತ್ತದೆ. ಅಮೆರಿಕದಂತೆ ಉತ್ತಮ ಶಾಲೆ ಹುಡುಕಲು ವಾಸ್ತವ್ಯ ಬದಲಿಸಬೇಕಾದ ಬಗ್ಗೆ ಚಿಂತಿಸಬೇಕಾಗಿಲ್ಲ. ದೇಶದ ಪ್ರತಿಯೊಂದು ಶಾಲೆಯೂ ಉತ್ತಮ ಶಾಲೆಯಾಗಿದೆ. ಈ ಬಗೆಯ ಸಮಾನತೆ ಮತ್ತು ಸ್ಥಿರತೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಬಲವಾದ ನಂಬಿಕೆಯನ್ನು ಹುಟ್ಟುಹಾಕಿದೆ.
ಭಾರತದಲ್ಲಿ ವರ್ಗಾಧಾರಿತ ಶಿಕ್ಷಣ ವ್ಯವಸ್ಥೆಯಿದೆ. ಬೆರಳೆಣಿಕೆಯ ಶ್ರೀಮಂತ ಉದ್ಯಮಿ ಹಾಗೂ ವ್ಯಾಪಾರಸ್ಥ ವರ್ಗಕ್ಕೆ ಸಕಲ ಸೌಲಭ್ಯಗಳಿರುವ ಅಂತರರಾಷ್ಟ್ರೀಯ ಬ್ಯಾಕಲೌರಿಯೇಟ್ ಶಾಲೆಗಳಿವೆ. ಮೇಲ್ವರ್ಗದ ಶ್ರೀಮಂತರಿಗೆ ಆಕ್ಸ್‌ಫರ್ಡ್–ಕೇಂಬ್ರಿಡ್ಜ್‌ನ ಇಂಟರ್‌ನ್ಯಾಷನಲ್ ಜನರಲ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಷನ್ ಶಾಲೆಗಳಿವೆ. ರಾಜಕಾರಣಿಗಳು, ಜನಪ್ರತಿನಿಧಿಗಳು, ಮೇಲ್ಮಧ್ಯಮ ವರ್ಗ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳು, ನ್ಯಾಯಾಂಗದ ಪ್ರಮುಖ ವರ್ಗಕ್ಕೆ ಪ್ರತಿಷ್ಠಿತ ಸಿಬಿಎಸ್‌ಇ ಮತ್ತು ಐಸಿಎಸ್ಇ ಶಾಲೆಗಳು ಹಾಗೂ ಕೆಳ ಮಧ್ಯಮ ವರ್ಗ ಮತ್ತು ಸಣ್ಣಪುಟ್ಟ ವ್ಯಾಪಾರಿ ವರ್ಗಕ್ಕೆ ಚೋಟಾಮೋಟಾ ಲೋ ಬಜೆಟ್ ಖಾಸಗಿ ಶಾಲೆಗಳಿವೆ. ಬಹುಸಂಖ್ಯಾತ ಬಡ ಮಧ್ಯಮ, ಹಿಂದುಳಿದ, ದಲಿತ ಹಾಗೂ ಮುಸ್ಲಿಂ ಅಲ್ಪಸಂಖ್ಯಾತ ವರ್ಗಕ್ಕೆ ಕನಿಷ್ಠ ಸೌಲಭ್ಯಗಳ ಸರ್ಕಾರಿ ಶಾಲೆಗಳು! ಶಿಕ್ಷಣದಲ್ಲಿ ಅಸಮಾನತೆ, ತಾರತಮ್ಯ ಹಾಗೂ ಶ್ರೇಣೀಕೃತ ವ್ಯವಸ್ಥೆ ಸಾಂಸ್ಥೀಕರಣಗೊಂಡಿದೆ. ಸಂವಿಧಾನ, ಶಿಕ್ಷಣ ಆಯೋಗಗಳು, ರಾಷ್ಟ್ರೀಯ ಶಿಕ್ಷಣ ನೀತಿಗಳು (2020 ಅನ್ನು ಹೊರತುಪಡಿಸಿ) ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ಎಲ್ಲಾ ಮಕ್ಕಳಿಗೆ ಸಮಾನ ಗುಣಮಟ್ಟ ಒದಗಿಸಬಹುದಾದ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯ ಪರವಾಗಿ ಜನಾಶಯ ಇದ್ದರೂ, ಪ್ರಭುತ್ವಕ್ಕೆ ಅದು ಆಶಯವೂ ಅಲ್ಲ, ಆದ್ಯತೆಯೂ ಅಲ್ಲ.
ಕಲಿಕಾ ವ್ಯವಸ್ಥೆಯ ಬಗ್ಗೆ ಹೇಳುವುದಾದರೆ, ಫಿನ್ನಿಷ್ ವಿದ್ಯಾರ್ಥಿಗಳು ಶಾಲೆಯಲ್ಲಿ ಅತ್ಯಂತ ಕಡಿಮೆ ಸಮಯ ಕಳೆಯುತ್ತಾರೆ, ಶಿಕ್ಷಕರಿಂದ ಕಡಿಮೆ ಹೋಂವರ್ಕ್ ಪಡೆಯುತ್ತಾರೆ ಮತ್ತು ವಿರಳವಾಗಿ ಬೋರ್ಡ್ ಪರೀಕ್ಷೆಗಳನ್ನು ಬರೆಯುತ್ತಾರೆ. ಹೀಗಿದ್ದರೂ, ಆ ಮಕ್ಕಳು ಕಲಿಕೆಯ ಫಲಿತಾಂಶಗಳಲ್ಲಿ ಅನೇಕ ಜಾಗತಿಕ ಗೆಳೆಯರನ್ನು ಮೀರಿಸುತ್ತಾರೆ. ಈ ಯಶಸ್ಸಿನ ಹಿಂದೆ ಒಂದು ಪ್ರಬಲ ಸಂದೇಶವಿದೆ. ವಿಶ್ವದರ್ಜೆಯ ಶಿಕ್ಷಣದ ಅಡಿಪಾಯವು ಹೆಚ್ಚಿನ ಬೋರ್ಡ್ ಪರೀಕ್ಷೆಗಳು ಅಥವಾ ದೀರ್ಘಕಾಲದ ಶಾಲಾ ದಿನಗಳು ಅಥವಾ ಮಕ್ಕಳಿಗೆ ಗೂನು ಬೆನ್ನಾಗುವಷ್ಟು ಶಿಕ್ಷಣದ ಹೊರೆ ಅಥವಾ ಮನೆ ಕೆಲಸದಲ್ಲಿ ಇರುವುದಿಲ್ಲ. ಬದಲಿಗೆ, ಮಕ್ಕಳ ಮೇಲಿನ ನಂಬಿಕೆ, ಆತ್ಮವಿಶ್ವಾಸ, ಕಲಿಕಾ ಸ್ವಾತಂತ್ರ್ಯ, ಕಲಿಯುವ ಕ್ರಮ, ಕಲಿಸುವವರ ಸಾಮರ್ಥ್ಯ, ಉತ್ತಮ ಕಲಿಕಾ ವಾತಾವರಣ, ಎಲ್ಲಕ್ಕಿಂತ ಮಿಗಿಲಾಗಿ ಮಕ್ಕಳ ಯೋಗಕ್ಷೇಮದಲ್ಲಿದೆ. ಅಭಿವೃದ್ಧಿ ಹೊಂದಿದ ಜಗತ್ತಿನಲ್ಲಿ, ಫಿನ್ಲೆಂಡ್ ಅತ್ಯಂತ ಕಡಿಮೆ ಶಾಲಾ ದಿನಗಳು ಮತ್ತು ಕಡಿಮೆ ಪ್ರಮಾಣದ ಹೋಂವರ್ಕ್ ಹೊಂದಿದ್ದರೂ, ಅಲ್ಲಿನ ವಿದ್ಯಾರ್ಥಿಗಳು ಶೈಕ್ಷಣಿಕ ಕಾರ್ಯಕ್ಷಮತೆ, ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ ಮತ್ತು ಜೀವನತೃಪ್ತಿಯಲ್ಲಿ ನಿರಂತರವಾಗಿ ಉನ್ನತ ಸ್ಥಾನ ಹೊಂದಿದ್ದಾರೆ; ಶಾಲೆಗೆ ಹೋಗುವುದನ್ನು ಆನಂದಿಸುತ್ತಾರೆ.
ಭಾರತದಲ್ಲಿ ಬೆನ್ನು ಬಾಗಿ ಮುರಿಯುವಷ್ಟು ಪುಸ್ತಕದ ಹೊರೆಯಿಂದಾಗಿ, ಶಾಲೆ ಮುಟ್ಟುವ ವೇಳೆಗೆ ಮಕ್ಕಳು ಅರ್ಧ ದಣಿದಿರುತ್ತಾರೆ. ತರಗತಿಯಲ್ಲಿ ಕುಳಿತು, ಶಿಕ್ಷಕರು ಹೇಳಿದ್ದನ್ನು ಪುನರಾವರ್ತಿಸುವ ಮೂಲಕ, ಬರೀ ಪರೀಕ್ಷೆಗಾಗಿ ಉರು ಹೊಡೆಯುವ ಪದ್ಧತಿ ನಮ್ಮ ಪ್ರಧಾನ ಕಲಿಕಾ ವಿಧಾನ. ಆಳವಾದ ತಿಳಿವಳಿಕೆಗಿಂತ ಮಾಹಿತಿ ನೆನಪಿಡುವ ಮೂಲಕ ಪರೀಕ್ಷೆಗಳಿಗೆ ತ್ವರಿತವಾಗಿ ಸಿದ್ಧವಾಗುವುದೇ ಶಿಕ್ಷಣದ ಮೂಲ ಉದ್ದೇಶ. ಶಾಲೆ ಸಂತಸದ ಕಲಿಕಾ ತಾಣವಾಗುವ ಬದಲು, ಅತಿಯಾದ ಶಿಸ್ತು–ಶಿಕ್ಷೆಯ ಮೂಲಕ, ಭಯ–ಆತಂಕದ ನಡುವೆ ಮಾಹಿತಿಯನ್ನು ಒದಗಿಸುವ ಮಾಹಿತಿ ಕೇಂದ್ರವಾಗಿದೆ.
ಶಾಲಾ ಶಿಕ್ಷಣದ ಗುರಿ ಸೃಜನಶೀಲತೆ, ವಿಮೋಚನೆ ಹಾಗೂ ಉತ್ತಮ ಪೌರತ್ವ. ಆದರೆ, ನಮ್ಮ ಆಧುನಿಕ ಶಿಕ್ಷಣ ಮಕ್ಕಳಿಗೆ ತೀವ್ರ ಶೈಕ್ಷಣಿಕ ಹೊರೆ, ಒತ್ತಡ ಹಾಗೂ ಹಾನಿಕಾರಕ ಶಿಸ್ತಿನ ಮೂಲಕ ಮಕ್ಕಳಿಗೆ ಚಿತ್ರಹಿಂಸೆ ನೀಡುವ ಕಾರಾಗೃಹಗಳಂತಾಗಿವೆ. ಇದು ಶಿಕ್ಷಣದ ಆಶಯವೂ ಅಲ್ಲ, ಆದ್ಯತೆಯೂ ಅಲ್ಲ. ನಮ್ಮ ಹೊಸ ಸುಧಾರಣೆಗಳು ಭಿನ್ನವಾದಾಗ ಮಕ್ಕಳು ಶಾಲೆಯನ್ನು ಪ್ರೀತಿಸುತ್ತಾರೆ, ಆನಂದಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.