ADVERTISEMENT

ವಿಶ್ಲೇಷಣೆ: ಮಸಣಮೌನದಲ್ಲಿ ಗಾಜಾದ ದನಿ

ರಘುನಂದನ
Published 14 ಫೆಬ್ರುವರಿ 2026, 0:30 IST
Last Updated 14 ಫೆಬ್ರುವರಿ 2026, 0:30 IST
ವಿಶ್ಲೇಷಣೆ
ವಿಶ್ಲೇಷಣೆ   
ಮನುಷ್ಯವಿರೋಧಿ ಕೃತ್ಯಗಳನ್ನು ಅಡಗಿಸಿಡುವ ವಿದ್ಯಮಾನಗಳ ಭಾಗವಾಗಿ ಪ್ಯಾಲೆಸ್ಟೀನ್‌ನ ಸಂಕಟಗಳನ್ನು ಅನಾವರಣಗೊಳಿಸುವ ಕಲಾ ಅಭಿವ್ಯಕ್ತಿಗಳ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲಾಗುತ್ತಿದೆ. ಆದರೆ, ಈ ನಿರ್ಬಂಧಕ್ಕೆ ಕೇರಳದ ಬರಹಗಾರರು ಹಾಗೂ ಕಲಾವಿದರು ಕಂಡುಕೊಂಡ ಸೃಜನಶೀಲ ಪ್ರತಿರೋಧದ ದಾರಿ ‘ಅಳಿಸುವ ಪ್ರಯತ್ನವನ್ನು ಅಳಿಸಿಹಾಕು’ವಂತಿತ್ತು.

ಕೇರಳದ ಅಂತರರಾಷ್ಟ್ರೀಯ ನಾಟಕೋತ್ಸವ, ಇಂಟರ್‌ನ್ಯಾಷನಲ್ ಥಿಯೇಟರ್ ಫೆಸ್ಟಿವಲ್‍ ಆಫ್ ಕೇರಳ (ಐಟಿಎಫ್‌ಒಕೆ) ನಮ್ಮ ದೇಶದಲ್ಲಿ ನಡೆಯುವ ನಾಟಕೋತ್ಸವಗಳಲ್ಲಿ ಪ್ರಮುಖವಾದದ್ದು. ಈ ವರ್ಷದ ಜನವರಿ 27ರಂದು ಅದರಲ್ಲಿ ಇಸ್ರೇಲಿನ ‘ದ ಲಾಸ್ಟ್ ಪ್ಲೇ ಇನ್ ಗಾಜಾ’ ಎಂಬ ನಾಟಕದ ಎರಡುಆಟಗಳು ನಡೆಯಬೇಕಿತ್ತು. ಆದರೆ, ಆ ರಂಗತಂಡಕ್ಕೂ ಆ ನಾಟಕವನ್ನು ಬರೆದು, ನಿರ್ದೇಶಿಸಿದ ಎಯ್ನಾಟ್ ವೆಯ್‍ಟ್ಸ್‍ಮನ್ ಎಂಬಾಕೆಗೆ ನಮ್ಮ ಒಕ್ಕೂಟದ ಸರ್ಕಾರವು ವೀಸಾ ಕೊಡಲಿಲ್ಲ.

ಐವತ್ತೆರಡು ವರ್ಷ ವಯಸ್ಸಿನ ಎಯ್ನಾಟ್ ವೆಯ್‍ಟ್ಸ್‍ಮನ್ ಯಹೂದ್ಯರು; ಇಸ್ರೇಲಿನ ನಾಗರಿಕರು; ದೇಶದ ರಾಜಧಾನಿ ಟೆಲ್ ಅವಿವ್‍ನಲ್ಲಿ ಇರುವವರು; ಇಸ್ರೇಲ್‍ ರಾಷ್ಟ್ರಪ್ರಭುತ್ವದ ಯಹೂದ್ಯ ಪಾರಮ್ಯದ ಜ಼ಯೊನಿಸ್ಟ್ ನೀತಿಗೆ ಎದುರಾಗಿ ಪ್ಯಾಲೆಸ್ಟೀನಿಯರ ಹಕ್ಕುಗಳ ಪರವಾದ ರಂಗಕೃತಿಗಳನ್ನು ರಚಿಸುತ್ತ, ಆಡುತ್ತ, ಆಡಿಸುತ್ತ ಬಂದವರು; ದಬ್ಬಾಳಿಕೆಗೆ ಸಿಲುಕಿದ ಬೇರೆಡೆಯ ಜನತೆಯ ಪರವಾಗಿಯೂ ಹಾಗೆಯೇ ಮಾಡುತ್ತ ಬಂದವರು. ಆದರೆ, ಆಕೆಗೂ ಆಕೆಯ ತಂಡಕ್ಕೂ ನಮ್ಮ ದೇಶದ ವೀಸಾ ಸಿಗಲಿಲ್ಲ.

ಆದರೇನು? ಜ. 27ರಂದು ಆಕೆಯ ತಂಡದ ನಾಟಕದ ಆಟ ನಡೆಯಬೇಕಿದ್ದ ಆ ಎರಡೂ ವೇಳೆ ಗಳಲ್ಲಿ, ತ್ರಿಶ್ಶೂರಿನ ರಂಗಮಂದಿರವು ತುಂಬಿತ್ತು; ರಂಗದ ಮೇಲೆ, ಮಲಯಾಳ ಕವಿಗಳಾದ ಪಿ.ಎನ್. ಗೋಪಿಕೃಷ್ಣನ್, ಅನ್ವರ್ ಅಲಿ ಹಾಗೂ ಪಿ. ರಾಮನ್ ಅವರು ಗಾಜಾ–ಪ್ಯಾಲೆಸ್ಟೀನ್‌ ಕುರಿತ ಕವಿತೆಗಳನ್ನು ಓದಿದರು; ಅವರ ಓದಿಗೆ ಕೇರಳದ ವಾದ್ಯ ಸಂಗೀತಗಾರ ಥಾಮಸ್ ಜೋ ಅವರ ಸ್ಯಾಕ್ಸೊಫೋನಿನ ಘನಶೋಕದ ಸ್ವರಮೇಳವಿತ್ತು; ಕೇರಳ ಸಂಗೀತ ನಾಟಕ ಅಕಾಡೆಮಿಯ ಕಾರ್ಯದರ್ಶಿ ಕರಿವೆಳ್ಳೂರ್ ಮುರಳಿಯವರು ಮುಖ್ಯಭಾಷಣ ಮಾಡಿದರು; ಪ್ಯಾಲೆಸ್ಟೀನಿನ ಸ್ವಾತಂತ್ರ್ಯದ ಬಯಕೆಯ ಮೂರ್ತಿಯೇ ತಾನಾಗಿದ್ದ ಆ ನಾಡಿನ ಮಹಾಕವಿ ಮಹಮೂದ್ ದಾರ್ವಿಷ್ ಅವರ ಕವನಗಳನ್ನು ಓದಲಾಯಿತು. ಎಯ್ನಾಟ್ ವೆಯ್‍ಟ್ಸ್‍ಮನ್ ಅವರ ಬರೆದು ಕಳಿಸಿದ ಸಂದೇಶವನ್ನು ಶ್ರೀಲಂಕಾದ  ರಂಗನಿರ್ದೇಶಕಿ ರುವಾಂತಿ ಡಿ. ಚಿಖೇರಾ ಅವರು ಓದಿದರು. ಅಳಿವು ಅಳಿಯಿತು. ರಂಗಸ್ಥಳ, ರಂಗಮಂದಿರ ಮತ್ತು ಕೇಳುನೋಡುಗರೆದೆಯಲ್ಲಿ ಗಾಜಾ–ಪ್ಯಾಲೆಸ್ಟೀನ್ ತುಂಬಿಬಂತು.

ADVERTISEMENT

ಕೇರಳದ ಎಡಪಂಥೀಯ ಸರ್ಕಾರದವರು ಹಾಗೂ ಉತ್ಸವದ ಸಂಘಟಕರು ಅದೆಲ್ಲ ಹಾಗಾಗು ವಂತೆ ನೋಡಿಕೊಂಡರು. ಈ ವಿದ್ಯಮಾನವನ್ನು ಮೊನ್ನೆಯಷ್ಟೇ ನಡೆದುಹೋದ ಬೆಂಗಳೂರು ಅಂತರ ರಾಷ್ಟ್ರೀಯ ಚಿತ್ರೋತ್ಸವದಲ್ಲಿ ಆದುದಕ್ಕೆ ಹೋಲಿಸಿ ನೋಡಿ. ಇಲ್ಲಿ ಪ್ಯಾಲೆಸ್ಟೀನಿನ ಬವಣೆಯನ್ನು ಕಾಣಿಸುವ ಸಿನಿಮಾಗಳ ದೇಖಾವೆಗೆ ದೇಶದ ಒಕ್ಕೂಟ ಸರ್ಕಾರದ ಪರವಾನಗಿ ದೊರಕಲಿಲ್ಲ. ಆದರೆ, ಕರ್ನಾಟಕ ಸರ್ಕಾರವಾಗಲಿ, ಉತ್ಸವದ ಸಂಘಟಕರಾಗಲಿ, ಅಲ್ಲಿ ನೆರೆಯುತ್ತಿದ್ದ ಸಿನಿಮಾ ಮಂದಿ, ಸಾಹಿತಿಗಳಾಗಲಿ ಆ ದುಷ್ಟಕ್ರಮ ದಿಂದಾದ ಶೂನ್ಯವನ್ನು ತುಂಬಿ, ಪ್ಯಾಲೆಸ್ಟೀನನ್ನು ನಮ್ಮ ಮನದಲ್ಲಿ ಉದ್ದೀಪಿಸಲು ಬೇಕಾದ ಧರ್ಮ ಪ್ರಜ್ಞೆ, ದಿಟ್ಟತನ ತೋರಲಿಲ್ಲ. ಇನ್ನು ನಮ್ಮಲ್ಲಿ ನಡೆಯುವ ಸಾಹಿತ್ಯಬ್ರಹ್ಮರ ಜಾತ್ರೆಗಳು, ಕವಿತೆಯ ಸಂಜೆಗಳು, ಕಲೆಗಳೊಂದಿಗಿನ ಮಾತುಕತೆಗಳು, ಪುಸ್ತಕ ಬಿಡುಗಡೆ, ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನೆಯ ಸಮಾರಂಭಗಳು, ರಾಜಧಾನಿ ಮತ್ತು ಜಿಲ್ಲಾ ಹಬ್ಬ ಹಾಗೂ ನಾಟಕೋತ್ಸವಗಳು, ಮತ್ತು ಅವುಗಳಲ್ಲಿ ಪಾಲ್ಗೊಳ್ಳುವವರು – ಇವರ, ಇವುಗಳ ಆತ್ಮಲೋಲುಪತೆಯ ಬಗ್ಗೆ ಹೇಳಲು ಏನೂ ಉಳಿದಿಲ್ಲ.

ಉಳಿದೆಲ್ಲವನ್ನೂ ಎಯ್ನಾಟ್ ವೆಯ್‍ಟ್ಸ್‍ಮನ್ ಅವರ ಸಂದೇಶವೇ ಹೇಳುತ್ತದೆ. ಅವರ ಇಡಿಯ ಬರಹದ ಇಂಗ್ಲಿಷ್‌ ಅನುವಾದವು ‘ದ ವಯರ್’ ಜಾಲಪತ್ರಿಕೆಯಲ್ಲಿ ಪ್ರಕಟಗೊಂಡಿದ್ದು, ಇಲ್ಲಿ ಅದರ ಸಾರಾಂಶವನ್ನು ಕನ್ನಡಕ್ಕೆ ಒಗ್ಗಿಸಿ ಕೊಟ್ಟಿದೆ:

‘‘ನಮ್ಮ ನಾಟಕವು ವಿಧ್ವಂಸಗೊಂಡಿರುವ ಗಾಜಾ ವನ್ನು ರಂಗಭೂಮಿಯ ಮೂಲಕ ಮತ್ತೊಮ್ಮೆ ಕಟ್ಟಿಕೊಳ್ಳುವುದರ ಕಡೆಗಿನ ಒಂದು ಆರ್ತ ಪ್ರಯತ್ನವಾಗಿದೆ.

ಕೇರಳದ ಈ ನಾಟಕೋತ್ಸವದ ವಸ್ತುವು ‘ಮಸಣಮೌನದ ನಡುವಿನ ದನಿಗಳು’ ಎಂಬುದು. ಆದ್ದರಿಂದ ಇಲ್ಲಿ ನಾಟಕ ಆಡಲು ನಾವು ಹಾತೊರೆದೆವು. ಆದರೆ, ನಮಗೆ ವೀಸಾ ಸಿಗಲಿಲ್ಲ. ಮೇಲ್ಮನವಿ ಸಲ್ಲಿಸಿದೆವು. ನಮ್ಮ ನಾಟಕ ಯಾಕೆ ಅಪಾಯಕಾರಿ ಅಲ್ಲ, ಒಂದಿಡೀ ಜನತೆಯ ನರಮೇಧ ಮತ್ತು ಕಗ್ಗೊಲೆ ವಿರುದ್ಧದ ನಮ್ಮ ನಿಲವು ಯಾಕೆ ನ್ಯಾಯಪರವಾದದ್ದು ಎಂದು ನಾವು ವಿವರಿಸಬೇಕಾಯಿತು. ನಮ್ಮ ವಿವರಣೆ ಮತ್ತು ಕೋರಿಕೆಗೆ ತಾತ್ತ್ವಿಕವಾದ ಒಪ್ಪಿಗೆ ಸಿಕ್ಕಿತು. ವೀಸಾ ಸಿಗಲಿಲ್ಲ. ತಾತ್ತ್ವಿಕವಾದ ಒಪ್ಪಿಗೆ! ಹೊಸ ಥರದ ಕಾಫ್ಕಾಲೋಕದ ಉಪಾಧಿ; ಅಡ್ಡಗೋಡೆ ಮೇಲೆ ತುದಿಗಾಲಲ್ಲಿ ನಿಲ್ಲೆಂದು ನೀಡುವ ಚಿತ್ರಹಿಂಸೆ.    

ಭಾರತದ ಇಂದಿನ ಸರ್ಕಾರ ಇಸ್ರೇಲನ್ನು ಬೆಂಬಲಿಸುತ್ತಿದೆ ಹೌದಾದರೂ, ಈ ದೇಶಕ್ಕೆ ವಸಾಹತುಶಾಹಿಯ ವಿರುದ್ಧ ಹೋರಾಡಿದ ದೊಡ್ಡ ಪರಂಪರೆಯೇ ಇದೆ. ಒಂದು ಕಾಲದಲ್ಲಿ ಭಾರತವು ಅಲಿಪ್ತ ರಾಷ್ಟ್ರಗಳ ಕೂಟದ ಮುಂಚೂಣಿಯಲ್ಲಿತ್ತು; ಪ್ರಪಂಚದ ಬೇರೆ ಬೇರೆ ದೇಶಗಳ ಸ್ವಾತಂತ್ರ್ಯ ಹೋರಾಟಗಳನ್ನು ಬೆಂಬಲಿಸಿತು; ಪ್ಯಾಲೆಸ್ಟೀನ್ ತಾನೊಂದು ಸ್ವತಂತ್ರ ದೇಶ ಅನ್ನುವುದಕ್ಕೆ 1988ರಷ್ಟು ಹಿಂದೆಯೇ ಅಧಿಕೃತ ಮನ್ನಣೆ ನೀಡಿತು. ಆದರೆ, ಈಚಿನ ದಶಕಗಳಲ್ಲಿ– ಅದರಲ್ಲೂ ಮೋದಿ ಅವರು ಪ್ರಧಾನಿ
ಯಾದ ಮೇಲೆ– ಅದು ಇಸ್ರೇಲಿನೊಂದಿಗೆ ಅಧಿಕೃತ ಅನುಸಂಧಾನ–ಅನುಷ್ಠಾನದಲ್ಲಿ ತೊಡಗಿದೆ. ಭಾರತಕ್ಕೆ ಶಸ್ತ್ರಾಸ್ತ್ರ ಸರಬರಾಜು ಮಾಡುವ ದೇಶಗಳ ಪೈಕಿ ಇಸ್ರೇಲ್ ಮೂರನೆಯ ಸ್ಥಾನದಲ್ಲಿದೆ. ಭಾರತದ ಸರ್ಕಾರವು ಅಲ್ಪಸಂಖ್ಯಾತರನ್ನು– ವಿಶೇಷವಾಗಿ ಕಾಶ್ಮೀರದಲ್ಲಿರುವವರನ್ನು ಮತ್ತಿತರ ಮುಸಲ್ಮಾನ ರನ್ನು– ಹತ್ತಿಕ್ಕಲು ಇಸ್ರೇಲಿನ ಸರ್ವೇಕ್ಷಣ ಹಾಗೂ ಬೇಹುಗಾರಿಕೆಯ ತಂತ್ರಜ್ಞಾನವನ್ನು ಬಳಸುತ್ತಿದೆ.

ಇದೆಲ್ಲವೂ ಸೃಜನಶೀಲ ಕಲೆಯ ಮೇಲೆ ನಿಗಾ ಇಟ್ಟು ಕಲಾವಿದರ ಸ್ವೇಚ್ಛೆಯನ್ನು ನಿಗ್ರಹಿಸುವ ಸೆನ್ಸಾರು ಕೆಲಸವಷ್ಟೇ ಎಂದು ತಿಳಿಯಬಾರದು. ದುರಧಿಕಾರದ ಗಳಿಕೆ ಮತ್ತು ರಕ್ಷಣೆ ಹಾಗೂ ದೌರ್ಜನ್ಯವೇ ಅಡಿಪಾಯವಾದ ರಾಷ್ಟ್ರಗಳ ದುಷ್ಟಕೂಟಗಳಿಂದಾಗಿ ನಮ್ಮ ಕಣ್ಣೆದುರು ಜಗತ್ತಿನಲ್ಲಿ ಮೈದಾಳುತ್ತಿರುವ ಹೊಸದೊಂದು ಏರ್ಪಾಡಿನ ಆಳ ಕಳವಳಕಾರಿಯಾದ ಕುರುಹು ಇದು. ಭಾರತ, ಇಸ್ರೇಲ್‍ಗಳ– ಜ಼ಯೊನಿಸಂ ಮತ್ತು ಹಿಂದೂತ್ವಗಳ– ನಡುವೆ ದಿನದಿನಕ್ಕೂ ಹೆಚ್ಚು ಬಿಗಿಯಾಗುತ್ತ ಬಂದಿರುವ ಜೋಡಾಟದೊಂದು ದಿಗಣ ಇದು, ಸೊಕ್ಕುಸೊಕ್ಕಿನ ಕುಮ್ಮುಚಟ್ಟು: ಈ ಜೋಡಿಯಾಟ ನಡೆಯುತ್ತಿರುವುದು ಸೈನ್ಯಗಳ ಸಜಾವಣೆ ಮತ್ತು ಶಸ್ತ್ರಾಸ್ತ್ರಗಳ ವಿಷಯ, ಆರ್ಥಿಕತೆಯ ವಲಯ, ಹಾಗೂ ತಂತ್ರಜ್ಞಾನ ಹಂಚಿಕೆ ಹಾಗೂ ಸಹಕಾರದ ವಿಷಯದಲ್ಲಿ ಮಾತ್ರವಲ್ಲ. ಅದೆಲ್ಲವುದರಾಚೆಗೆ (ವರ್ಣಭೇದ ನೀತಿಯನ್ನೂ ಮತ್ತೆಲ್ಲ ರೀತಿಯ ದೌರ್ಜನ್ಯವನ್ನೂ ಎತ್ತಿಹಿಡಿಯುವ ರಾಷ್ಟ್ರೀಯತಾವಾದಗಳು, ಸಾತ್ತ್ವಿಕ ರಾಜಕೀಯ ಮತ್ತು ಕಲೆಗಳ ದನಿಯನ್ನು ನಿರ್ನಾಮ ಮಾಡುವ ಹುನ್ನಾರಗಳು – ಇವು ಕೂಡ ಸುಸಂಸ್ಕೃತಿಯೇ ಎಂದು ನಾವು ಒಪ್ಪಬಲ್ಲೆವಾದರೆ) ‘ನೀ ನಾನೇ, ನಾ ನೀನೇ’ ಎಂಬಂಥ ಈ ನೆಂಟಸ್ತನದ ಆಟ ನಡೆಯುತ್ತಿರುವುದು ಸಂಸ್ಕೃತಿಯ ಕ್ಷೇತ್ರದಲ್ಲಿ. ಭಾರತವು ಇಸ್ರೇಲ್‍ನಿಂದ ಕೊಳ್ಳುತ್ತಿರುವುದು ಶಸ್ತ್ರಾಸ್ತ್ರಗಳನ್ನು ಮಾತ್ರವಲ್ಲ. ಭಾರತದ ಇಸ್ರೇಲ್–ಅಪ್ಪುಗೆ ಅದಕ್ಕಿಂತಲೂ ಬಿಗಿ, ಬಿಸಿಯಾದದ್ದು. ಪ್ರಭುತ್ವಶಕ್ತಿಯೊಂದು ನಿಜ, ಸಹಜ, ದೇಸೀ ಸಂಸ್ಕೃತಿಯ ಜಾಗದಲ್ಲಿ ಭ್ರಾಮಕ ರಾಷ್ಟ್ರೀಯತಾವಾದದ ಸಂಸ್ಕೃತಿಯನ್ನು ಜನತೆಯ ಮೇಲೆ ಹೇಗೆ, ಎಷ್ಟೆಲ್ಲ ಹೇರಬಹುದು ಎಂಬ ಕಡುಜುಲುಮೆಯ ಪಾಠಗಳನ್ನು ಕಲಿಯುತ್ತಿದೆ ಅದು ಇಸ್ರೇಲ್‍ನಿಂದ.

ಈ ಎರಡೂ ದೇಶಗಳ ಸರ್ಕಾರಗಳು ಸಾತ್ತ್ವಿಕ ವಾದ ವಿರೋಧದ ದನಿಯಡಗಿಸಿ, ಮಟ್ಟಹಾಕಲು ಕೈಜೋಡಿಸಿರುವುದಕ್ಕೆ ಇದೀಗ ನಮ್ಮ ತಂಡಕ್ಕೆ ಆಗಿರುವುದು ಮತ್ತೊಂದು ಉದಾಹರಣೆಯಾಗಿದೆ. ನ್ಯಾಯವಂತಿಕೆಯನ್ನು ಹಂತ ಹಂತವಾಗಿ ನಿರ್ನಾಮ ಮಾಡುವ ಉದ್ಯಮ ಇದು. ಮೊದಲು ಕಲ್ಲುಮಣ್ಣು ಸಿಮೆಂಟುಕಬ್ಬಿಣ ಸಮೇತ ಗಾಜಾ ಎಂಬ ಊರಿಗೆ ಊರನ್ನೇ ನೆಲಸಮಮಾಡುವುದು; ಅಲ್ಲಿನ ಜನರನ್ನು ನರಮೇಧಕ್ಕೆ ಗುರಿಮಾಡಿ, ಇಡೀ ಜನತೆಗೆ ಜನತೆಯ ಹುಟ್ಟನ್ನೇ ಅವರ  ರಕ್ತಮಾಂಸಮೂಳೆಗಳ ಸಮೇತ ಅಡಗಿಸಿಬಿಡುವುದು. ಬಳಿಕ ಪತ್ರಕರ್ತ, ಫೋಟೊಗ್ರಾಫರ್‌ಗಳೆಂಬ ನೂರಾರು ಜನ ಸಾಕ್ಷಿದಾರ
ರನ್ನು  ಕೊಲ್ಲುವುದು; ಅವರು ಒದಗಿಸುವ ಸಾಕ್ಷ್ಯ ಗಳನ್ನು ಸುಟ್ಟುಹಾಕುವುದು; ದಾಖಲೆ–ಮಾಹಿತಿಯ ಕೇಂದ್ರಗಳೆಂಬ ಇತಿಹಾಸದ ಕಾವಲುಗಳ ಮೇಲೆ ಬಾಂಬಿನ ಮಳೆಗರೆಯುವುದು; ಆ ಬಳಿಕ, ಕಲೆಯಕೊರಳಾದ ಕಲಾವಿದರು, ಸಾಹಿತಿಗಳು, ಕವಿಗಳೆಂಬ ಅಂತಃಸಾಕ್ಷಿಗಳನ್ನು ಸಾಯಿಸುವುದು; ಇನ್ನಿದೀಗ, ನೆನಪಿನ ದುಮ್ಮಾನದೊಂದು ದಾಖಲೆಯೂ ಕಳೆದು ಹೋದದ್ದರ ಮರುಗಳಿಕೆಯ ಸಾತ್ತ್ವಿಕ ಪ್ರಯತ್ನವೂ ಆದ ನಮ್ಮ ಈ ನಾಟಕವನ್ನು ಅಡಗಿಸುವುದು. ಅಳಿದುಹೋದದ್ದನ್ನು ನೆನಪಿನಲ್ಲಾದರೂ ಕಾಯ್ದುಕೊಳ್ಳುವುದರ ಪ್ರಯತ್ನವನ್ನೂ, ಅದನ್ನು ಕುರಿತ ಮರುಕವನ್ನೂ ಅಳಿಸಿಹಾಕಲು ಹವಣಿಸುವ ರಾಷ್ಟ್ರಪ್ರಭುತ್ವಗಳ ಒಗ್ಗಟ್ಟಿನ ಉದ್ಯಮ ಇದು.

ಗಾಜಾದಲ್ಲಿ ಆಗುತ್ತ ಬಂದಿರುವ ನರಮೇಧದ ಬಗೆಗೆ ಮೌನ ತಾಳುವುದೆಂದರೆ ಮುಂದೆ ಬೇರೆಲ್ಲೆಲ್ಲೋ ಆಗಲಿರುವ ನರಮೇಧಗಳಿಗೊಂದು ಪರವಾನಗಿ, ಸಮಜಾಯಿಷಿ ನೀಡಿದಂತೆ; ಅಂಥದು ಮತ್ತೆ ಮತ್ತೆ ಆಗಲಿ ಎಂದು ಕರೆ ನೀಡಿದಂತೆ.

ಆದರೆ ಕೇರಳದ ಕಲಾವಿದರು, ಸಾಹಿತಿಗಳು, ಬೇರೆಲ್ಲ ಜನರೂ ನಮ್ಮೊಂದಿಗೆ, ಗಾಜಾ–ಪ್ಯಾಲೆಸ್ಟೀನಿನ ಜನರೊಂದಿಗೆ ನಿಂತರು. ‘ಐಟಿಎಫ್‌ಒಕೆ’ ಉತ್ಸವವು ಎಲ್ಲ ಜುಲುಮೆಯ ನಡುವೆಯೂ ಬಾರದಿದ್ದ, ಆಗದಿದ್ದ ನಾಟಕವೊಂದಕ್ಕೆ ಒಂದಿಡೀ ಸಂಜೆಯನ್ನು ಮುಡಿಪಿಡುವ ನ್ಯಾಯವಂತಿಕೆ ಮತ್ತು ಎದೆಗಾರಿಕೆ ತೋರಿದೆ; ಅಳಿಸುವ ಪ್ರಯತ್ನವನ್ನು ಅಳಿಸಿಹಾಕುವುದರ ಕಡೆಗಿನ ದಮ್ಮಪದ ತಾನಾಗಿದೆ.’’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.