
ಎಳ್ಳು
ಚಿತ್ರ: ಎಐ
ಸುಗ್ಗಿ ಹಬ್ಬ, ಕೊಯ್ಲಿನ ಹಬ್ಬವೆಂದು ಕರೆಯಲ್ಪಡುವ ಮಕರ ಸಂಕ್ರಾಂತಿಯ ದಿನ ಎಳ್ಳು–ಬೆಲ್ಲ ತಿನ್ನುವುದು ಸಂಪ್ರದಾಯವಾಗಿದೆ. ಚಳಿಗಾಲದಲ್ಲಿ ಎಳ್ಳಿನ ಸೇವನೆಯಿಂದ ಆರೋಗ್ಯಕ್ಕೆ ಸಾಕಾಷ್ಟು ಲಾಭಗಳಿವೆ. ಎಣ್ಣೆ ಬೀಜಗಳ ಪೈಕಿ, ಭಾರತದಲ್ಲಿ ಮೊದಲ ಸ್ಥಾನ ಪಡೆದುಕೊಂಡ ಎಳ್ಳು ಅಪ್ಪಟ ಭಾರತೀಯ ಮೂಲದ್ದಾಗಿದೆ. ಮಾನವ ಬಳಸಿದ ಅತೀ ಪುರಾತನ ಎಣ್ಣೆಕಾಳಾದ ಎಳ್ಳಿನ ಬಳಕೆ ಈಗ ಕಡಿಮೆಯಾಗಿದೆ.
ಪ್ರಾಚೀನ ಭಾರತದಲ್ಲಿ ಎಳ್ಳನ್ನು ಪ್ರಮುಖ ಎಣ್ಣೆ ಕಾಳಾಗಿ ಬಳಕೆ ಮಾಡಲಾಗುತ್ತಿತ್ತು. ಎಳ್ಳಿನ ಪ್ರಮುಖ ಉತ್ಪನ್ನವಾದ ಎಳ್ಳೆಣ್ಣೆಯನ್ನು ಅಡುಗೆಯಿಂದ ದೇವರ ಕಾರ್ಯಗಳವರೆಗೂ ಬಳಕೆ ಮಾಡಲಾಗುತ್ತದೆ. ಸಂಶೋಧನೆಗಳ ಪ್ರಕಾರ ಕ್ರಿ.ಪೂ 3500 ರಿಂದ ಕ್ರಿ.ಪೂ 3050ರ ನಡುವೆ ಸುಟ್ಟ ಎಳ್ಳಿನ ಕುರುಹುಗಳು ಭಾರತದಲ್ಲಿ ಲಭ್ಯವಾಗಿವೆ. ಇದನ್ನು ಆಧಾರವಾಗಿಟ್ಟುಕೊಂಡು, ಭಾರತೀಯ ಉಪಕಾಂಡದಲ್ಲಿ ಎಳ್ಳನ್ನು 5,500 ವರ್ಷಗಳ ಹಿಂದೆಯೇ ಬೆಳೆಯಲಾಗಿತ್ತು. ವ್ಯಾಪಾರದಿಂದಾಗಿ ವಿಶ್ವದ ಇತರ ದೇಶಗಳಿಗೆ ಹರಡಿತು ಎಂದು ತಜ್ಞರು ಹೇಳುತ್ತಾರೆ.
ಪುರಾತತ್ವಶಾಸ್ತ್ರಜ್ಞ ಡೋರಿಯನ್ ಕ್ಯೂ. ಫುಲ್ಲರ್ ಹೇಳುವಂತೆ ’ನಾಗರಿಕತೆಗಳ ತೊಟ್ಟಿಲಾದ ಮೆಸಪಟೋಮಿಯಾ ಸೇರಿದಂತೆ ಇತರೆ ಭಾರತೀಯ ಉಪಖಂಡಗಳ ನಡುವೆ ಕಿ.ಪೂ. 2000ರ ವೇಳೆಗೆ ಎಳ್ಳಿನ ವ್ಯಾಪಾರ ನಡೆಯುತ್ತಿತ್ತು. ಸಿಂಧೂ ನಾಗರಿಕತೆಯ ಜನರು ಎಳ್ಳಿನ ಎಣ್ಣೆಯನ್ನು ಮೆಸಪಟೋಮಿಯಾಗೆ ರಫ್ತು ಮಾಡುತ್ತಿದ್ದರು. ಸುಮೇರಿಯನ್ ಭಾಷೆಯಲ್ಲಿ ’ಇಲು’ ಮತ್ತು ಅಕ್ಕಾಡಿಯನ್ ಭಾಷೆಯಲ್ಲಿ ‘ಎಲು’ ಎಂದು ಎಳ್ಳಿನ ಎಣ್ಣೆಯನ್ನು ಕರೆಯಲಾಗಿದೆ. ದ್ರಾವಿಡ ಭಾಷೆಗಳಲ್ಲಿ ‘ಎನ್ನ’ ಅಥವಾ ‘ಎನ್ನೈ’ ಎಂದು ಕರೆಯಲಾಗಿದೆ’.
ವ್ಯಾಪಾರದ ಮೂಲಕ ಇತರ ದೇಶಗಳಿಗೆ ಹರಡಿದ ಎಳ್ಳನ್ನು ಪ್ರಾಚೀನ ಈಜಿಪ್ಟ್‌ನಲ್ಲಿಯೂ ಬೆಳೆಯಲಾಗುತ್ತಿತ್ತು. ಅವರು ಎಳ್ಳನ್ನು ‘ಸೆಸೆಮ್ಟ್’ ಎಂದು ಕರೆಯುತ್ತಿದ್ದರು. ಇಲ್ಲಿನ ಪಿರಮಿಡ್‌ಗಳಲ್ಲಿ ಎಳ್ಳು ಪತ್ತೆಯಾಗಿದ್ದು, ಎಳ್ಳಿನ ಬಳಕೆ ಇತ್ತು ಎಂಬುದಕ್ಕೆ ಸಾಕ್ಷ್ಯ ಒದಗಿಸಿದೆ. ಅಲ್ಲದೇ ಕ್ರಿ.ಪೂ. 1350ರ ಹೊತ್ತಿಗೆ ಈಜಿಪ್ಟ್‌ನಲ್ಲಿ ಎಳ್ಳು ಲಭ್ಯವಿತ್ತು ಎಂಬ ಉಲ್ಲೇಖಗಳು ಸಿಗುತ್ತವೆ.
ಹೊಲದಲ್ಲಿ ಬೆಳೆದಿರುವ ಎಳ್ಳಿನ ಗಿಡಗಳು
ವಿಶ್ವದ ಇತರೆ ಭಾಗಗಳಲ್ಲಿ ಎಳ್ಳು
ಈಜಿಪ್ಟ್‌ನ ಟುಟಾಂಖಾಮುನ್ ಎಂಬ ಸಮಾಧಿಯಲ್ಲಿ ಎಳ್ಳಿನ ಕುರುಹುಗಳು ಪತ್ತೆಯಾಗಿವೆ. ಅಲ್ಲದೇ ಎಳ್ಳಿನ ವರ್ಣ ಚಿತ್ರಗಳನ್ನೂ ಕಾಣಬಹುದು. ಬ್ಯಾಬಿಲೋನಿಯನ್ ಹಾಗೂ ಅಸ್ಸೀರಿಯದಲ್ಲಿ ದೇವರು ಎಳ್ಳಿನಿಂದ ತಯಾರಿಸಿದ ವೈನ್ ಸೇವಿಸಿ ಭೂಮಿ ಮೇಲಿನ ಜೀವರಾಶಿಗಳನ್ನು ಸೃಷ್ಟಿಸಿದ ಎಂಬ ನಂಬಿಕೆ ಇದೆ. ಇತಿಹಾಸಕಾರ ಹೆರೊಡೋಟಸ್ ‘ಬ್ಯಾಬಿಲೋನಿಯನ್ನರು ಕ್ರಿ. ಪೂ. 5ನೇ ಶತಮಾನದ ವೇಳೆಗೆ ಎಳ್ಳಿನ ಎಣ್ಣೆಯನ್ನು ಬಳಸುತ್ತಿದ್ದರು’ ಎಂದು ಬರೆದಿದ್ದಾರೆ. 5,000 ವರ್ಷಗಳ ಹಿಂದೆಯೇ ಚೀನಿಯರು ಎಳ್ಳೆಣ್ಣೆಯನ್ನು ಬಳಸುತ್ತಿದ್ದರು. ಎಳ್ಳನ್ನು ಸುಟ್ಟು ಅದರಿಂದ ಮಸಿ ಹಾಗೂ ಶಾಯಿಯನ್ನು ತಯಾರಿಸುತ್ತಿದ್ದರು ಎಂಬ ಉಲ್ಲೇಖಗಳಿವೆ. 1000 ವರ್ಷಗಳ ಹಿಂದೆ ಬರೆಯಲಾದ ‘ಸ್ಟ್ಯಾಂಡರ್ಡ್ ಇನ್ವೆಂಟರಿ ಆಫ್ ಫಾರ್ಮಕಾಲಜಿ’ ಎಂಬ ವೈದ್ಯಕೀಯ ಗ್ರಂಥದ ಪ್ರಕಾರ, ಹಾನ್ ರಾಜವಂಶದ ಅವಧಿಯಲ್ಲಿ ಜಾಂಗ್ ಕಿಯಾನ್ ಅವರು ಎಳ್ಳನ್ನು ಪಶ್ಚಿಮದಿಂದ ತಂದರು ಎಂಬ ಉಲ್ಲೇಖವಿದೆ.
ಮಕರ ಸಂಕ್ರಾಂತಿಯಲ್ಲಿ ಚಳಿಗಾಲದ ಶುಷ್ಕತೆ ಗರಿಷ್ಠ ಮಟ್ಟದಲ್ಲಿರುತ್ತದೆ. ಈ ವೇಳೆ ರೋಗನಿರೋಧಕ ಶಕ್ತಿ ಕ್ಷೀಣಿಸುವುದರಿಂದ ದೇಹಕ್ಕೆ ಹೆಚ್ಚಿನ ಖನಿಜಗಳ ಅಗತ್ಯವಿರುತ್ತದೆ. ಎಳ್ಳಿನಲ್ಲಿರುವ ಸತು, ಸೆಲೆನಿಯಮ್ ಮತ್ತು ಮೆಗ್ನೀಷಿಯಮ್ ರೋಗನಿರೋಧಕತೆಯನ್ನು ಹೆಚ್ಚಿಸುತ್ತದೆ. ಎಳ್ಳಿನಲ್ಲಿರುವ ಎಣ್ಣೆಯ ಅಂಶ ದೇಹಕ್ಕೆ ಮೃದುತ್ವವನ್ನು ನೀಡುತ್ತದೆ.ಸುಪರ್ಣಾ ಮುಖರ್ಜಿ, ಕ್ಲಿನಿಕಲ್ ನ್ಯೂಟ್ರಿಷನ್, ನಾರಾಯಣ ಹೆಲ್ತ್ ಸಿಟಿ, ಬೆಂಗಳೂರು
ಹೂ ಕಾಯುತ್ತೀರುವ ಎಳ್ಳಿನ ಗಿಡಗಳು
ಎಳ್ಳನ್ನು ಎಲ್ಲ ರೀತಿಯ ಮಣ್ಣುಗಳಲ್ಲಿ ಬೆಳೆಯಬಹುದಾಗಿದೆ. ಆದರೆ ನೀರು ನಿಲ್ಲುವ ಜೌಗು ಮಣ್ಣಿನ ಪ್ರದೇಶ ಸೂಕ್ತವಲ್ಲ. ಮಳೆ ಬೀಳುವ ಪ್ರದೇಶಗಳಾದರೆ ಏಪ್ರಿಲ್ ಎರಡನೆಯ ವಾರದಿಂದ ಮೇ ಎರಡನೆಯ ವಾರದವರೆಗೆ ಮತ್ತು ಹಿಂಗಾರು ಭತ್ತದ ಗದ್ದೆಯಲ್ಲಿ ನವೆಂಬರ್ ಮೊದಲನೆಯ ವಾರದಿಂದ ಜನವರಿ ಕೊನೆಯ ವಾರದವರೆಗೆ ಬಿತ್ತನೆಯನ್ನು ಮಾಡಬಹುದು. ಎಳ್ಳು ವ್ಯರ್ಥ ಭೂಮಿಯಲ್ಲಿಯೂ ಬೆಳೆಯುತ್ತದೆ ಎಂಬುದು ವಿಶೇಷ.ಡಾ. ಯಮನೂರ, ತಳಿ ತಜ್ಞರು, ಜಿಕೆವಿಕೆ, ಬೆಂಗಳೂರು.
ಮಕರ ಸಂಕ್ರಾಂತಿ ವರ್ಷವನ್ನು ಉತ್ತರಾಯಣ ಮತ್ತು ದಕ್ಷಿಣಾಯಣ ಎಂಬ ಎರಡು ಭಾಗ ಮಾಡುತ್ತದೆ. ದಕ್ಷಿಣಾಯಣ ಪಿತೃಗಳಿಗೆ, ಉತ್ತರಾಯಣ ದೇವತೆಗಳಿಗೆ ಸಂಬಂಧಿಸಿದೆ. ದಕ್ಷಿಣಾಯಣ ಎಳ್ಳನ್ನು, ಉತ್ತರಾಯಣ ಬೆಲ್ಲವನ್ನು ಸೂಚಿಸುತ್ತದೆ. ದಕ್ಷಿಣಾಯಣ ಮುಗಿದು, ಉತ್ತರಾಯಣ ಆರಂಭವಾಗುವುದರಿಂದ ಎಳ್ಳು ಅಂತ್ಯ, ಬೆಲ್ಲ ಆರಂಭವೆಂದು ಶಾಸ್ತ್ರಗಳ ಮೂಲಕ ಅರ್ಥೈಸಿಕೊಳ್ಳಬಹುದು.ರಾಮಚಂದ್ರ ಭಟ್ಟ ಕೆಕ್ಕಾರು, ಜ್ಯೋತಿಷಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.