
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದಿರುವ ಭೀಕರ ಮರ್ಯಾದೆಗೇಡು ಹತ್ಯೆ ನಾಗರಿಕ ಸಮಾಜವನ್ನು ಕಳವಳಕ್ಕೀಡುಮಾಡುವ ವಿದ್ಯಮಾನ. ಕರ್ನಾಟಕದಲ್ಲಿ ಇತ್ತೀಚೆಗೆ ನಡೆದಿರುವ ಇಂಥ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಮರ್ಯಾದೆಗೇಡು ಹತ್ಯೆಗಳಿಗೆ ಸಂಬಂಧಿಸಿದ ಹಾಗೆ ಒಂದು ಸಮಗ್ರವಾದ ಕಾನೂನಿನ ಅವಶ್ಯಕತೆ ಇದೆ. ಏಕೆಂದರೆ, ನಮ್ಮ ಮುಂದೆ ನಡೆಯುವ ಪ್ರತಿಯೊಂದು ಮರ್ಯಾದೆಗೇಡು ಹತ್ಯೆ ಜಾತ್ಯತೀತತೆಯ ಆಶಯವನ್ನು ನಾಶ ಮಾಡುವಂತಹ ಕೃತ್ಯವಾಗಿದೆ.
ಭಾರತದ ಸುಪ್ರೀಂ ಕೋರ್ಟ್ ‘ಶಕ್ತಿವಾಹಿನಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ’ (2018) 7 ಎಸ್.ಸಿ.ಸಿ 192:2018 3 ಎಸ್.ಸಿ.ಸಿ (ಕ್ರಿ. 1:2018) ಪ್ರಕರಣದಲ್ಲಿ, ಮರ್ಯಾದೆಗೇಡು ಹತ್ಯೆಗಳಿಗೆ ಸಂಬಂಧಪಟ್ಟಂತೆ ಒಂದು ವಿಶೇಷವಾದ ಕಾನೂನಿನ ಅಗತ್ಯದ ಬಗ್ಗೆ ಸ್ಪಷ್ಟ ಸಂದೇಶ ಕೊಟ್ಟಿದೆ. ಆ ತೀರ್ಪಿನ ಪುಟ ಸಂಖ್ಯೆ 215, ಪ್ಯಾರಾ 53ರಲ್ಲಿ ಸುಪ್ರೀಂ ಕೋರ್ಟಿನ ಪೀಠವು ವ್ಯಕ್ತಪಡಿಸಿರುವ ಅಭಿಪ್ರಾಯ ಹೀಗಿದೆ:
‘ಸತಿಪದ್ಧತಿ ಹಾಗೂ ವರದಕ್ಷಿಣೆಯಂತಹ ಸಾಮಾಜಿಕ ಪಿಡುಗುಗಳಿಗೆ ಸಂಬಂಧಪಟ್ಟ ಹಾಗೆ
ಶಾಸನಬದ್ಧವಾದ ಕಾನೂನುಗಳು ಜಾರಿಗೆ ಬಂದಿವೆ. ಸದರಿ ಕಾನೂನುಗಳು ಸಂವಿಧಾನಕ್ಕೆ ಅನುಗುಣವಾಗಿ ಇವೆ. ಅದೇ ರೀತಿಯಲ್ಲಿ ಮಾನವ ಹಕ್ಕುಗಳ ರಕ್ಷಣೆಯೂ ನಮ್ಮ ಸಂವಿಧಾನದ ಅತ್ಯಗತ್ಯ ಅಂಶ
ಆಗಿದ್ದು, ಈ ಅಂಶವು ಮಾನವತಾವಾದವನ್ನು ಎತ್ತಿಹಿಡಿಯುತ್ತದೆ. ಹೀಗಾಗಿ ನಾಗರಿಕರಿಗೆ ಲಭ್ಯ
ವಾಗಿರುವ ನ್ಯಾಯಯುತವಾದ, ಸಮಾನವಾದ ಹಕ್ಕುಗಳನ್ನು ಕಿತ್ತುಕೊಳ್ಳುವ ಯಾವುದೇ ರೀತಿಯ ಅನಗತ್ಯ ನಿಷೇಧವನ್ನು, ಅಥವಾ ನಿರ್ಬಂಧವನ್ನು ಸಂವಿಧಾನದ ಮೂಲತತ್ತ್ವವಾದ ಮಾನವ ಹಕ್ಕುಗಳ
ಸಿದ್ಧಾಂತ ಸಹಿಸುವುದಿಲ್ಲ. ಕಾನೂನಿನ ಸಾರ್ವಭೌಮತ್ವದ ವಿಸ್ತಾರವನ್ನು ಉಸಿರುಗಟ್ಟಿಸುವ ಯಾವುದೇ ಥರದ ಮಾನವ ವಿರೋಧಿ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂಬ ಕಾರಣದಿಂದ ನಮ್ಮ ಪೀಠವು ಮರ್ಯಾದೆಗೇಡು ಹತ್ಯೆಗೆ ಸಂಬಂಧಿಸಿದ ಒಂದು ಬಲವಾದ ಕಾನೂನನ್ನು ಜಾರಿಮಾಡುವುದಕ್ಕೆ ಶಾನಸಭೆಗೆ ಒಂದು ಗಟ್ಟಿಯಾದ ಸೂಚನೆಯನ್ನು ನೀಡುತ್ತಿದೆ.’
ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ನಿಯಂತ್ರಣ ರಾಜ್ಯಗಳ ವ್ಯಾಪ್ತಿಗೆ ಬರುವುದರಿಂದ, ಕರ್ನಾಟಕ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕಾಯ್ದೆ ರೂಪಿಸಲು ಇದು ಸಕಾಲವಾಗಿದೆ. ಮರ್ಯಾದೆಗೇಡು ಹತ್ಯೆ ಕುರಿತಂತೆ 2018ರ ಮಾರ್ಚ್ 27ರ ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಕೇಂದ್ರ ಗೃಹ ಸಚಿವಾಲಯವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಒಂದು ಸುತ್ತೋಲೆ ಹೊರಡಿಸಿತು. ಆ ಸುತ್ತೋಲೆ
ಮರ್ಯಾದೆಗೇಡು ಹತ್ಯೆಗಳ ವಿರುದ್ಧ ಮುಂಜಾಗ್ರತಾ ಕ್ರಮಗಳು, ಪರಿಹಾರಾತ್ಮಕ ಕ್ರಮಗಳು ಹಾಗೂ ದಂಡನಾತ್ಮಕ ಕ್ರಮಗಳನ್ನು ಸೂಚಿಸಿದೆ. ಮುಂಜಾಗ್ರತಾ ಕ್ರಮವಾಗಿ ಇಂಥ ಕೃತ್ಯಗಳು ದಾಖಲಾಗಿರುವ ಹಳ್ಳಿ, ತಾಲ್ಲೂಕು, ಜಿಲ್ಲೆಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದೂ ಸುತ್ತೋಲೆ ಸೂಚಿಸಿದೆ.
ಇದೇ ರೀತಿಯಲ್ಲಿ ಸುಪ್ರೀಂ ಕೋರ್ಟ್ ‘ಲತಾ ಸಿಂಗ್ ವರ್ಸಸ್ ದಿ ಸ್ಟೇಟ್ ಆಫ್ ಉತ್ತರ ಪ್ರದೇಶ
ಮತ್ತು ಇತರರು’ (2006 (5) ಎಸ್.ಸಿ.ಸಿ 475) ಪ್ರಕರಣದಲ್ಲಿ ಮರ್ಯಾದೆಗೇಡು ಹತ್ಯೆಗೆ ಸಂಬಂಧಿ
ಸಿದಂತೆ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ:
‘ಕೆಲವೊಮ್ಮೆ ವಯಸ್ಕ ವ್ಯಕ್ತಿಗಳು ತಮ್ಮ ಇಚ್ಛಾನುಸಾರ ಜಾತಿ, ಧರ್ಮ ಮೀರಿ ಮದುವೆ
ಆದಾಗ, ಈ ವ್ಯಕ್ತಿಗಳು ಮರ್ಯಾದೆಗೇಡು ಹತ್ಯೆಗಳಿಗೆ ಗುರಿಯಾಗಿರುವ ವಿಷಯದ ಬಗ್ಗೆ ನಾವು ಕೇಳುತ್ತಿರುತ್ತೇವೆ. ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ, ಇಂಥ ಹತ್ಯೆಗಳಲ್ಲಿ ಯಾವುದೇ ‘ಮರ್ಯಾದೆ’ ಇರುವುದಿಲ್ಲ. ಈ ರೀತಿಯ ಭೀಕರವಾದ ಹತ್ಯೆಗಳನ್ನು ಕ್ರೂರವಾದ ಮತ್ತು ಪಾಳೆಗಾರಿಕೆಯ
ಮನಃಸ್ಥಿತಿ ಉಳ್ಳವರು ಮಾತ್ರ ಮಾಡಬಲ್ಲರು. ಈ ರೀತಿಯ ಹತ್ಯೆ ಮಾಡುವ, ಮಾಡಿಸುವ ವ್ಯಕ್ತಿಗಳಿಗೆ ಅತ್ಯಂತ ಉಗ್ರವಾದ ಶಿಕ್ಷೆ ನೀಡಿದಾಗ ಮಾತ್ರ ಇಂಥ ಬರ್ಬರವಾದ ಕ್ರಿಯೆಗಳು ನಿಲ್ಲಬಹುದು.’
ಇದೇ ತೀರ್ಪಿನ ಪ್ಯಾರಾ 17ರಲ್ಲಿ ಸುಪ್ರೀಂ ಕೋರ್ಟ್, ಮರ್ಯಾದೆಗೇಡು ಹತ್ಯೆಗಳಿಗೆ ಸಂಬಂಧಿಸಿದ ಹಾಗೆ ಆಡಳಿತಾತ್ಮಕ ಸಂಸ್ಥೆಗಳಿಗೆ, ಪೊಲೀಸ್ ಇಲಾಖೆಗೆ ನಿರ್ದೇಶನವನ್ನೂ ನೀಡಿದೆ: ‘ಈ ಪೀಠ ನೀಡುವ ನಿರ್ದೇಶನವೇನೆಂದರೆ, ವಯಸ್ಕರಾಗಿರುವ ಅಥವಾ ಪ್ರೌಢಾವಸ್ಥೆಗೆ ಬಂದಿರುವ ಗಂಡು ಅಥವಾ ಹೆಣ್ಣು ಅಂತರ್ಜಾತಿ ಅಥವಾ ಅಂತರ್‌ಧರ್ಮೀಯ ಮದುವೆಯಾದರೆ, ಅಂತಹ ಜೋಡಿಗೆ ಯಾವುದೇ ರೀತಿಯ ತೊಂದರೆಯಾಗದಂತೆ, ಅವರು ಯಾವುದೇ ರೀತಿಯ ಹಿಂಸಾಚಾರಕ್ಕೆ ಗುರಿಯಾಗದಂತೆ ದೇಶದಾದ್ಯಂತ ಇರುವ ಆಡಳಿತಾತ್ಮಕ ಸಂಸ್ಥೆಗಳು, ಪೊಲೀಸ್ ಇಲಾಖೆ, ರಾಜ್ಯ ಹಾಗೂ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕಾಗುತ್ತದೆ. ಹಾಗೆಯೇ ಯಾರಾದರೂ ಹಿಂಸೆಗೆ ಕುಮ್ಮಕ್ಕು ಕೊಟ್ಟರೆ, ಅಂಥವರ ವಿರುದ್ಧವೂ ಪೊಲೀಸರು ಸ್ವಯಂಪ್ರೇರಣೆಯಿಂದ ಕ್ರಮ ತೆಗೆದುಕೊಳ್ಳಬೇಕು.’
ಸುಪ್ರೀಂ ಕೋರ್ಟ್‌ನ ಆದೇಶಗಳನ್ನು, ತೀರ್ಪುಗಳನ್ನು ಗಮನದಲ್ಲಿಟ್ಟುಕೊಂಡು ಇವತ್ತಿಗೂ ಈ ಮರ್ಯಾದೆಗೇಡು ಹತ್ಯೆಗಳು ನಡೆಯುವುದು ಏಕೆ ಎಂಬುದನ್ನು ಸೂಕ್ಷ್ಮವಾಗಿ ನೋಡಬೇಕಾಗುತ್ತದೆ. ಮೊದಲಿಗೆ, ಅಂತರ್ಜಾತಿ ವಿವಾಹಿತರನ್ನು, ಅಂತರ್‌ಧರ್ಮೀಯ ವಿವಾಹಿತರನ್ನು ಕೊಲೆ ಮಾಡುವ ಕ್ರಿಯೆಯನ್ನು ‘ಮರ್ಯಾದಾ’ಹತ್ಯೆಯೆಂದು ಕರೆಯುವುದೇ ತಪ್ಪು. ಇಂಥ ಹತ್ಯೆಗಳಲ್ಲಿ ಯಾವುದೇ ‘ಮರ್ಯಾದೆ’ ಇಲ್ಲದಿರುವುದರಿಂದ, ಈ ಕೊಲೆಗಳನ್ನು ಬೇರೆಯದೇ ಆದ ರೀತಿಯಲ್ಲಿ ನೋಡಬೇಕಾಗುತ್ತದೆ. ಸಾಮಾನ್ಯವಾಗಿ, ಮನುಷ್ಯರು ಆಸ್ತಿಗಾಗಿ, ಜಿದ್ದಿಗಾಗಿ, ಹಣಕ್ಕಾಗಿ ಕೊಲೆ ಮಾಡುತ್ತಾರೆ. ಆದರೆ, ಈ ದೇಶದಲ್ಲಿ ಕೊಲೆಗೆ ಕಾರಣಗಳಾಗಿ ಇನ್ನೂ ಒಂದೆರಡು ಸಂಗತಿ ಸೇರಿಕೊಳ್ಳುತ್ತವೆ: ಅವುಗಳೆಂದರೆ: ಜಾತೀಯತೆ ಹಾಗೂ ಧರ್ಮಾಂಧತೆ. ತಮ್ಮ ಮನೆಯ ಮಗಳು, ಇನ್ನೊಂದು ಜಾತಿಗೆ, ಧರ್ಮಕ್ಕೆ ಸೇರಿದ ಯುವಕನನ್ನು ಮದುವೆಯಾದರೆ, ತಮ್ಮ ‘ಮರ್ಯಾದೆ’ ಏನಾಗುತ್ತದೆಯೋ ಎಂಬ ಹುಸಿ ಭ್ರಮೆಯಲ್ಲಿ ಇರುವ ಇಂಥವರು ದೇಶದ ಏಕತೆಗೆ ದೊಡ್ಡ ಧಕ್ಕೆಯಾಗಿದ್ದಾರೆ.
ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ ನಮ್ಮನ್ನು ನಾವು ‘ವಿ ದ ಪೀಪಲ್ ಆಫ್ ಇಂಡಿಯಾ’ (ಭಾರತ
ದೇಶದ ಜನರಾದ ನಾವು) ಎಂದು ಘೋಷಿಸಿಕೊಂಡಿದ್ದೇವೆ. ಈ ಸಾಲಿನ ಒಳಾರ್ಥವನ್ನು ಅರಗಿಸಿಕೊಳ್ಳಲು ಎಷ್ಟೋ ಜನ ಭಾರತೀಯರೇ ತಯಾರಿಲ್ಲ. ಅಂದರೆ, ಇನ್ನೊಂದು ಜಾತಿಗೆ ಸೇರಿದ ಜನರನ್ನು ‘ಮನುಷ್ಯರು’ ಎಂದು ಪರಿಗಣಿಸಲೂ ಕೆಲವರು ತಯಾರಿಲ್ಲವೆಂದಾದರೆ, ಬರೀ ಕಾನೂನಿನ ಬಲದಿಂದ ಮಾತ್ರ ‘ಮರ್ಯಾದೆಗೇಡು’ ಹತ್ಯೆಗಳು ನಿಲ್ಲುವುದಿಲ್ಲ. ಕಾನೂನು ಜಾರಿಯ ಜೊತೆ ಜೊತೆಗೆ, ಮನೆಗಳಲ್ಲೇ ಜಾತೀಯತೆ ಆಚರಿಸುವುದು ತಪ್ಪು ಎಂದು ಮಕ್ಕಳಿಗೆ ಹೇಳಿಕೊಡಬೇಕಾಗುತ್ತದೆ.
ಮರ್ಯಾದೆಗೇಡು ಹತ್ಯೆಗೆ ಸಂಬಂಧಿಸಿದಂತೆ ಸರ್ಕಾರ ಮಸೂದೆ ರೂಪಿಸಿದೆ. ಅದು ಕಾಯ್ದೆ ಆಗುವಾಗ ಇಂತಹ ಕೃತ್ಯಗಳನ್ನು ‘ವಿಶೇಷ ಅಪರಾಧ’ ಎಂದು ಪರಿಗಣಿಸಬೇಕು. ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸಿ, ಶೀಘ್ರದಲ್ಲಿ ನ್ಯಾಯ ನೀಡುವ ಪ್ರಕ್ರಿಯೆಯನ್ನು ಜಾರಿಯಾಗುವಂತೆ ನೋಡಿಕೊಂಡರೆ, ಮರ್ಯಾದೆ
ಗೇಡು ಹತ್ಯೆಗಳು ನಿಲ್ಲಬಹುದು.
ಈ ಅಪರಾಧಕ್ಕೆ ಸಂಬಂಧಿಸಿದ ಹಾಗೆ ಪೊಲೀಸರಿಗೆ ವಿಶೇಷವಾದ ತರಬೇತಿ ನೀಡುವ, ಶಿಬಿರಗಳನ್ನು ಆಯೋಜಿಸುವ ಕೆಲಸಗಳು ಕೂಡ ಆಗಬೇಕಾಗಿದೆ. ಕೆಲವೊಮ್ಮೆ ಪೊಲೀಸರೇ ಜಾತಿ, ಧರ್ಮ ಮೀರಿ ಪ್ರೀತಿಸುವ ಗಂಡು–ಹೆಣ್ಣುಗಳ ಮೇಲೆಯೇ ಎಫ್‌ಐಆರ್ ದಾಖಲು ಮಾಡುವ ಸಾಧ್ಯತೆಗಳಿವೆ. ಇನ್ನೂ ಒಂದು ವಿಚಿತ್ರವೆಂದರೆ, ಮರ್ಯಾದೆಗೇಡು ಹತ್ಯೆ ಮಾಡುವವರ ಪರ ಮಾತಾಡುವ ಒಂದು ವರ್ಗವೂ ಸಮಾಜದಲ್ಲಿ ಹುಟ್ಟಿಕೊಂಡಿದೆ. ಹೀಗೆ ಚೀರಾಡುವ ಮನಃಸ್ಥಿತಿಗಳೇ ಜಾತೀಯತೆಯನ್ನು ಪೋಷಿಸುವ ವರ್ಗಗಳಾಗಿ ಮಾರ್ಪಟ್ಟಿವೆ. ಮನೋವೈಜ್ಞಾನಿಕ ದೃಷ್ಟಿಕೋನದಲ್ಲಿ ನೋಡುವುದಾದರೆ, ನಮ್ಮ ದೇಶದಲ್ಲಿ ಜಾತಿಯ ಹೆಸರಿನಲ್ಲಿ ಶುರುವಾಗುವ ಅಸಹನೆಯೇ ಇದಕ್ಕೆಲ್ಲ ಕಾರಣವೇ ಹೊರತು, ಇನ್ನಾವ ಕಾರಣವೂ ಇಲ್ಲ.
ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ ‘ಕೆ.ಪಿ. ತಮಿಳ್‌ಮಾರನ್ ವರ್ಸಸ್ ದಿ ಸ್ಟೇಟ್ ಬೈ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್’ ಪ್ರಕರಣದ ಪ್ಯಾರಾ ಏಳರಲ್ಲಿ, ಮರ್ಯಾದೆಗೇಡು ಹತ್ಯೆಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದೆ:
‘ಮುರುಗೇಸನ್ ಮತ್ತು ಕಣ್ಣಗಿ ಎಂಬ ನವಜೋಡಿಯನ್ನು ಅತ್ಯಂತ ಭೀಕರವಾಗಿ ಕೊಲೆ ಮಾಡಿದಾಗ ಅವರಿನ್ನೂ ಇಪ್ಪತ್ತರಿಂದ ಇಪ್ಪತ್ತೈದರ ಅಸುಪಾಸಿನಲ್ಲಿದ್ದರು. ಅವರಿಬ್ಬರಿಗೂ ಊರಿನ ಜನರ ಸಮ್ಮುಖದಲ್ಲೇ ವಿಷ ಕೊಡಲಾಯಿತು. ಆ ಕೃತ್ಯದ ಹಿಂದೆಯಿರುವ ಪಿತೂರಿಗಾರರು ಸ್ವತಃ ಆ ಹೆಣ್ಣುಮಗಳ ತಂದೆ ಮತ್ತು ಆಕೆಯ ಸಹೋದರ. ಇದರ ಹಿಂದೆ ಇರುವ ಏಕೈಕ ಕಾರಣ, ತಮ್ಮ ಜಾತಿಗೆ ಸೇರಿದ ಯುವತಿ ಅದೇ ಊರಿನ ‘ದಲಿತ’ ಯುವಕನನ್ನು ಮದುವೆಯಾಗಲು ಹೊರಟಿದ್ದು. ಇದನ್ನು ಅರಗಿಸಿಕೊಳ್ಳಲಾರದೆ ಅವರಿಗೆ ವಿಷ ಕೊಡಲಾಯಿತು. ಹಾಗಾಗಿ, ಈ ಅಪರಾಧದ ಮೂಲ ನಮ್ಮ ಭಾರತದಲ್ಲಿ ಆಳವಾಗಿ ಬೇರೂರಿರುವ ಶ್ರೇಣೀಕೃತ ಜಾತಿ ವ್ಯವಸ್ಥೆ. ಆ ವ್ಯವಸ್ಥೆಯಿಂದಲೇ ಮರ್ಯಾದೆಗೇಡು ಕೃತ್ಯಗಳು ‘ಮರ್ಯಾದೆಗೇಡು ಹತ್ಯೆ’ಯ ಹೆಸರಿನಲ್ಲಿ ನಡೆಯುತ್ತಿವೆ.
ಕರ್ನಾಟಕ ಸರ್ಕಾರವು ಮರ್ಯಾದೆಗೇಡು ಹತ್ಯೆ ನಿಷೇಧ ಕಾನೂನನ್ನು ಜಾರಿ ಮಾಡಲು ಹೊರಟಿರು
ವುದು ಸ್ವಾಗತಾರ್ಹ. ಜಾತಿ ಹೆಸರಿನಲ್ಲಿ ಸ್ವಂತ ಮಕ್ಕಳನ್ನೇ ಕೊಲ್ಲುವ ಕೃತ್ಯಗಳು ಇನ್ನಾದರೂ ಕೊನೆಗೊಳ್ಳಲು ಸಮರ್ಥ ಕಾನೂನು ಅಗತ್ಯ, ಜನರ ಸಂಕಲ್ಪವೂ ಅತ್ಯಗತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.