ADVERTISEMENT

ವಿಶ್ಲೇಷಣೆ | ನವತಾರೆಗಳ ನಿರೀಕ್ಷೆಯಲ್ಲಿ ಭಾರತ ಕ್ರಿಕೆಟ್

ದಿಗ್ಗಜರ ನಿವೃತ್ತಿ: ಯುವ ಆಟಗಾರರಿಗೆ ಸಾಮರ್ಥ್ಯ ತೋರಲು ಸುವರ್ಣಾವಕಾಶ

ಗಿರೀಶದೊಡ್ಡಮನಿ
Published 17 ಮೇ 2025, 0:30 IST
Last Updated 17 ಮೇ 2025, 0:30 IST
   

ರವಿಚಂದ್ರನ್ ಅಶ್ವಿನ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ...

ಐದು ತಿಂಗಳ ಅವಧಿಯಲ್ಲಿ ಈ ಮೂವರು ‘ಮೆಗಾಸ್ಟಾರ್‌’ಗಳು ನಿವೃತ್ತಿ ಘೋಷಿಸಿದ್ದಾರೆ. ಅವರಲ್ಲಿ ಅಶ್ವಿನ್ ಮಾತ್ರ ಅಂತರರಾಷ್ಟ್ರೀಯ ಕ್ರಿಕೆಟ್‌ನ ಮೂರೂ ಮಾದರಿಗಳಿಗೆ ವಿದಾಯ ಹೇಳಿದರು. ರೋಹಿತ್ ಮತ್ತು ವಿರಾಟ್ ಅವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಆಟ ಉಳಿಸಿಕೊಂಡಿದ್ದಾರೆ. ನವಯುಗದ ಬಹುದೊಡ್ಡ ಕ್ರಿಕೆಟ್ ತಾರೆಗಳಾಗಿರುವ ರೋಹಿತ್ ಮತ್ತು ವಿರಾಟ್ ಹಿಂದಿನ ಒಂದು ವಾರದ ಅವಧಿಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಇದು ಕ್ರಿಕೆಟ್ ವಲಯವನ್ನು ಅಚ್ಚರಿಗೆ ತಳ್ಳಿದೆ.

ಅದೂ ಮುಂದಿನ ತಿಂಗಳು ಭಾರತ ತಂಡವು ಇಂಗ್ಲೆಂಡ್ ಪ್ರವಾಸಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ರೋಹಿತ್–ಕೊಹ್ಲಿ ಅವರ ನಿರ್ಣಯ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ನಾಲ್ಕು ಗೋಡೆಗಳ ನಡುವೆ ಏನೋ ನಡೆದಿದೆ ಎಂಬ ಗುಮಾನಿಯನ್ನೂ ಮೂಡಿಸಿರುವುದು ಸುಳ್ಳಲ್ಲ. ಆದರೆ ಐದು ತಿಂಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಭಾರತ ತಂಡವು ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಹೀನಾಯವಾಗಿ ಸೋತಾಗ ಇವರಿಬ್ಬರೂ ಹೆಚ್ಚು ಟೀಕೆಗಳಿಗೆ ತುತ್ತಾಗಿದ್ದರು. ಅದಕ್ಕೆ ಕಾರಣ ಅವರ ಕಳಪೆ ಬ್ಯಾಟಿಂಗ್ ಫಾರ್ಮ್‌.

ADVERTISEMENT

ರೋಹಿತ್ ನಾಯಕತ್ವದ ಬಗ್ಗೆಯೂ ಆಕ್ಷೇಪಗಳು ವ್ಯಕ್ತವಾಗಿದ್ದವು. ಅದರಿಂದಾಗಿ ಅವರು ಸಿಡ್ನಿ ಟೆಸ್ಟ್‌ನಲ್ಲಿ ಕಣಕ್ಕಿಳಿಯದೆ ಜಸ್‌ಪ್ರೀತ್ ಬೂಮ್ರಾ ಅವರಿಗೆ ನಾಯಕತ್ವದ ಹೊಣೆ ವಹಿಸಿದ್ದರು. ವಿರಾಟ್ ಅವರು ಆಫ್‌ಸ್ಟಂಪ್ ಹೊರಗೆ ಸಾಗುವ ಎಸೆತಗಳನ್ನು ಕೆಣಕಿ ಪದೇಪದೇ ವಿಕೆಟ್ ಚೆಲ್ಲಿದ್ದರು. ಅದಕ್ಕಾಗಿ ಅಪಾರ ಟೀಕೆಗಳಿಗೆ ಗುರಿಯಾಗಿದ್ದರು. ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಭಾರತದಲ್ಲಿ ನಡೆದಿದ್ದ ನ್ಯೂಜಿಲೆಂಡ್ ಎದುರಿನ ಸರಣಿಯಲ್ಲಿಯೂ ತಂಡವು ಹೀನಾಯವಾಗಿ ಸೋಲು ಅನುಭವಿಸಿತ್ತು.

ಈ ಸರಣಿಗಳ ಸಂದರ್ಭದಲ್ಲಿ ಡ್ರೆಸಿಂಗ್‌ ರೂಮ್ ಒಳಗೆ ನಡೆದಿದ್ದವೆನ್ನಲಾದ ಕೆಲವು ವಿಷಯಗಳು ಚರ್ಚೆಗೆ ಗ್ರಾಸವಾಗಿದ್ದವು. ಅಲ್ಲದೆ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಕೆಲವು ಆಟಗಾರರ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ಮಾತುಗಳೂ ಕೇಳಿಬಂದಿದ್ದವು. ‘ತಂಡದೊಳಗೆ ಸೂಪರ್‌ಸ್ಟಾರ್ ಸಂಸ್ಕೃತಿ ಇದೆ. ಈ ತಾರೆಗಳು ವೈಫಲ್ಯ ಅನುಭವಿಸಿದರೂ ಆಯ್ಕೆಗೆ ಪರಿಗಣಿಸಲಾಗುತ್ತದೆ. ಈ ರೀತಿಯ ಸಂಸ್ಕೃತಿ ಇರಬಾರದು’ ಎಂದು ಕೆಲವು ವೀಕ್ಷಕ ವಿವರಣೆಗಾರರೂ ಟೀಕಿಸಿದ್ದರು.

ಅದರ ನಂತರ ರೋಹಿತ್ ನಾಯಕತ್ವದಲ್ಲಿ ಭಾರತ ತಂಡವು ಚಾಂಪಿಯನ್ಸ್‌ ಟ್ರೋಫಿ (ಏಕದಿನ ಮಾದರಿ) ಜಯಿಸಿತು. ಆ ಸಡಗರದಲ್ಲಿ ಟೆಸ್ಟ್ ಸರಣಿ ಸೋಲಿನ ಕಹಿನೆನಪು ಮರೆಯಾಯಿತು. ಆದರೆ ಜನ ಮರೆತರೂ ವಿರಾಟ್ ಮತ್ತು ರೋಹಿತ್ ಸರಿಯಾದ ಸಮಯಕ್ಕೆ ಕಾದಿದ್ದರು. ಈಗ ಡಬ್ಲ್ಯುಟಿಸಿ (ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್) ನಾಲ್ಕನೇ ಆವೃತ್ತಿ ಶುರುವಾಗುವ ಹೊತ್ತಿನಲ್ಲಿ ಟೆಸ್ಟ್‌ಗೆ ಗುಡ್‌ಬೈ ಹೇಳಿದ್ದಾರೆ. ಹಾಗಾಗಿಯೇ ಪ್ರೇಕ್ಷಕರ ವಲಯದಿಂದ ಮಿಶ್ರ ಪ್ರತಿಕ್ರಿಯೆಗಳು ಕೇಳಿಬರುತ್ತಿವೆ. ವಿರಾಟ್ ದೈಹಿಕವಾಗಿ ಮತ್ತು ಮಾನಸಿಕವಾಗಿ ಫಿಟ್ ಆಗಿರುವುದರಿಂದ ಇನ್ನೂ ಕೆಲಕಾಲ ಆಡಬಹುದಿತ್ತು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. 

ಇದೆಲ್ಲದರಾಚೆ ಆಧುನಿಕ ಕ್ರಿಕೆಟ್ ಜಗತ್ತಿನ ಈ ದಿಗ್ಗಜರು ಅದ್ಭುತವಾದ ಕೊಡುಗೆಯನ್ನು ನೀಡಿ ಹೋಗಿದ್ದಾರೆ. ಅದರಿಂದಾಗಿಯೇ ಭಾರತ ತಂಡದಲ್ಲಿ ದೊಡ್ಡ ನಿರ್ವಾತ ಸೃಷ್ಟಿಯಾಗಿರುವುದೂ ಸತ್ಯ. ಈ ಪರಿಸ್ಥಿತಿಯನ್ನು ಯುವ ಆಟಗಾರರು ಸಕಾರಾತ್ಮಕವಾಗಿ ಪರಿಗಣಿಸಿದರೆ ಅವರ ಸ್ಥಾನಗಳನ್ನು ತುಂಬುವ ಅವಕಾಶ ಇದೆ. ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ದೇವದತ್ತ ಪಡಿಕ್ಕಲ್ ಅವರಂತಹ ಪ್ರತಿಭಾವಂತರಿಗೆ ಸಾಧನೆ ಮಾಡುವ ಸಾಮರ್ಥ್ಯ ಇದೆ. ತಾವೂ ಕ್ರಿಕೆಟ್ ಆಗಸದ ನಕ್ಷತ್ರಗಳಾಗಿ ಹೊಳೆಯುವ ಈ ಸುವರ್ಣಾವಕಾಶವನ್ನು ಅವರು ಎರಡೂ ಕೈಗಳಿಂದ ಬಾಚಿಕೊಳ್ಳಬೇಕು. ಮುಖ್ಯವಾಗಿ ಭಾರತಕ್ಕೆ ವಿಶ್ವ ಟೆಸ್ಟ್ ಕಿರೀಟವನ್ನು ಗೆದ್ದು ತರುವ  ಹೊಣೆಗಾರಿಕೆಯೂ ಯುವ ಆಟಗಾರರ ಮುಂದಿದೆ. ವಿರಾಟ್ ಮತ್ತು ರೋಹಿತ್‌ ನಾಯಕತ್ವದಲ್ಲಿ ಭಾರತವು ಡಬ್ಲ್ಯುಟಿಸಿ ಫೈನಲ್‌ನಲ್ಲಿ ತಲಾ ಒಂದು ಬಾರಿ ರನ್ನರ್ ಅಪ್ ಆಗಿತ್ತು.

ಕರ್ನಲ್ ಸಿ.ಕೆ. ನಾಯ್ಡು ಅವರಿಂದ ಶುರುವಾಗಿ ರೋಹಿತ್ ಶರ್ಮಾ ಅವರವರೆಗೂ ಹಲವು ಆಟಗಾರರು ಟೆಸ್ಟ್ ಮಾದರಿಯ ಉಳಿವಿಗೆ ಅಮೋಘ ಕಾಣಿಕೆ ನೀಡಿದ್ದಾರೆ. ಅದರಲ್ಲೂ ಟಿ20 ಕ್ರಿಕೆಟ್ ಅಬ್ಬರದಲ್ಲಿ ಟೆಸ್ಟ್ ಪಂದ್ಯಗಳನ್ನೂ ಜನ ನೋಡುವಂತೆ ಮಾಡಿದ ಬಹುಪಾಲು ಶ್ರೇಯ ವಿರಾಟ್ ಮತ್ತು ರೋಹಿತ್ ಅವರಿಗೇ ಸಲ್ಲಬೇಕು. ನವಪೀಳಿಗೆಯ ಪ್ರೇಕ್ಷಕರಿಗೆ ರುಚಿಸುವಂತಹ ಆಟವನ್ನು ಬಿಳಿ ದಿರಿಸಿನಲ್ಲಿಯೂ ಉಣಬಡಿಸಿದವರು ವಿರಾಟ್ ಮತ್ತು ರೋಹಿತ್. ಆಸ್ಟ್ರೇಲಿಯಾದ ನೆಲದಲ್ಲಿ ಮೊದಲ ಬಾರಿ ಬಾರ್ಡರ್‌–ಗಾವಸ್ಕರ್ ಟ್ರೋಫಿ ಜಯಿಸಲು ಸಾಧ್ಯವಾಗಿದ್ದೇ ವಿರಾಟ್ ನಾಯಕತ್ವದಲ್ಲಿ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮತ್ತು ಟಿ20 ಪಂದ್ಯಗಳು ಮನರಂಜನೆಯ ಮೂಲಗಳು ಎಂಬುದು ನಿಜ. ಅವು ಕ್ರಿಕೆಟ್ ಮಂಡಳಿಗೆ ದೊಡ್ಡ ಪ್ರಮಾಣದ ವರಮಾನ ಗಳಿಸಿಕೊಡುತ್ತವೆ ಎಂಬುದೂ ದಿಟ. ಆದರೆ ಕ್ರಿಕೆಟ್‌ನ ತಾಯಿಬೇರು ಟೆಸ್ಟ್ ಮಾದರಿಯ ಸೊಬಗಿಗೆ ಸರಿಸಾಟಿ ಮತ್ತೊಂದಿಲ್ಲ. ಇದನ್ನು ಕ್ರಿಕೆಟ್ ಕಸ್ಟೋಡಿಯನ್ ಮೆರಿಲ್‌ಬೊನ್ ಕ್ರಿಕೆಟ್ ಕ್ಲಬ್‌ (ಎಂಸಿಸಿ) ಕೂಡ ಪ್ರತಿಪಾದಿಸುತ್ತದೆ. 

‘ಟೆಸ್ಟ್ ಕ್ರಿಕೆಟ್‌ ನನ್ನ ಹೃದಯಕ್ಕೆ ಹತ್ತಿರವಾದದ್ದು. ಅದು ನೀಡಿರುವ ನೆನಪುಗಳು ನನ್ನ ಪಾಲಿಗೆ ಶಾಶ್ವತ. ಈ ಮಾದರಿಯು ನನ್ನ ಸಾಮರ್ಥ್ಯವನ್ನು ಪ್ರತಿ ಹಂತದಲ್ಲಿಯೂ ಪರೀಕ್ಷೆಗೊಡ್ಡಿದೆ. ತಿದ್ದಿ, ತೀಡಿ ರೂಪಿಸಿದೆ’ ಎಂದು ಸ್ವತಃ ವಿರಾಟ್ ತಮ್ಮ ವಿದಾಯಪತ್ರದಲ್ಲಿ ಬರೆದಿದ್ದಾರೆ. 

ವೈಟ್‌ಬಾಲ್ ಕ್ರಿಕೆಟ್‌ನ ಪರಿಣತರಲ್ಲಿ ಅಗ್ರಮಾನ್ಯರಾಗಿರುವ ರೋಹಿತ್ ಕೂಡ ಟೆಸ್ಟ್‌ ಆಟಗಾರರಾಗಿ ಗುರುತಿಸಿಕೊಳ್ಳಲು ತಮ್ಮನ್ನು ಅಗ್ನಿದಿವ್ಯಕ್ಕೆ ಒಡ್ಡಿಕೊಂಡವರು. ಏಕದಿನ ಮಾದರಿಯಲ್ಲಿ ಮೂರು ದ್ವಿಶತಕ ಹೊಡೆದ ಆಟಗಾರ ರೋಹಿತ್ ಅವರು ಟಿ20 ಮತ್ತು ಐಪಿಎಲ್‌ನಲ್ಲಿಯೂ ಚಾರಿತ್ರಿಕ ಸಾಧನೆ ಮಾಡಿದ್ದಾರೆ. ಆದರೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಬಾರಿಸಿದ ಶತಕವನ್ನು ಕ್ರಿಕೆಟ್‌ಪ್ರೇಮಿಗಳು ಮರೆಯಲಾಗದು.

2013ರಲ್ಲಿ ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್‌ ಪಂದ್ಯದಲ್ಲಿ ರೋಹಿತ್ ಮತ್ತು ಅಶ್ವಿನ್ ಇಬ್ಬರೂ ಶತಕ ಬಾರಿಸಿದ್ದರು. ಇದಷ್ಟೇ ಅಲ್ಲ, 67 ಟೆಸ್ಟ್‌ಗಳಲ್ಲಿ ಅವರು ಹೊಡೆದ ಒಟ್ಟು 12 ಶತಕಗಳಿಗೂ ಒಂದೊಂದು ವೈಶಿಷ್ಟ್ಯವಿದೆ. ಅವೆಲ್ಲವೂ ರೋಹಿತ್ ಅವರು ತಾವು ಟೆಸ್ಟ್‌ಗೂ ಸೈ ಎಂಬುದನ್ನು ಸಾಬೀತುಪಡಿಸಿದ ದಾಖಲೆಗಳಾಗಿವೆ. ಐದು ಮತ್ತು ಆರನೇ ಕ್ರಮಾಂಕಗಳಲ್ಲಿ ಬ್ಯಾಟಿಂಗ್ ಮಾಡುವುದರೊಂದಿಗೆ ಟೆಸ್ಟ್ ಕ್ರಿಕೆಟ್ ಜೀವನ ಆರಂಭಿಸಿದ್ದ ಅವರು, ನಂತರದಲ್ಲಿ ಆರಂಭಿಕ ಬ್ಯಾಟರ್ ಆಗಿ ಬಡ್ತಿ ಪಡೆದು ಯಶಸ್ವಿಯಾದರು.

ವಿರಾಟ್ ಟೆಸ್ಟ್‌ನಲ್ಲಿ ಸಚಿನ್ ನಂತರದ ಸ್ಥಾನ ತುಂಬಿದವರು. ಹೆಚ್ಚಾಗಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಉತ್ತಮವಾಗಿ ಆಡಿದಾಗ ದೊಡ್ಡ ಮೊತ್ತದತ್ತ ತಂಡವನ್ನು ನಡೆಸುವ ಹೊಣೆ ಈ ಕ್ರಮಾಂಕದ ಬ್ಯಾಟರ್‌ಗಿರುತ್ತದೆ. ಒಂದೊಮ್ಮೆ ಅಗ್ರಕ್ರಮಾಂಕದವರು ಬೇಗನೆ ಔಟಾದಾಗ ಮುಳುಗುವ ಇನಿಂಗ್ಸ್‌ ರಕ್ಷಿಸುವ ಹೊಣೆ ಕೂಡ ಈ ಬ್ಯಾಟರ್‌ಗಿರುತ್ತದೆ. ಅದಕ್ಕೆ ದೈಹಿಕ ಕ್ಷಮತೆಯ ಜೊತೆಗೆ ಗಟ್ಟಿ ಮನೋಭೂಮಿಕೆಯೂ ಇರಬೇಕು. ಈ ಗುಣಗಳು ಕೊಹ್ಲಿ ಅವರಲ್ಲಿ ಮೇಳೈಸಿದ್ದವು. ಎಲ್ಲಕ್ಕಿಂತ ಮುಖ್ಯವಾಗಿ ಭಾರತದ ಕ್ರಿಕೆಟ್‌ನಲ್ಲಿ ಒಬ್ಬ ತಾರೆಯ ನಿರ್ಗಮನದ ಹೊತ್ತಿನಲ್ಲಿ ಮತ್ತೊಬ್ಬ ಪ್ರತಿಭಾನ್ವಿತನ ಆಗಮನದ ಉದಾಹರಣೆಗಳಿವೆ.

ಸುನಿಲ್ ಗಾವಸ್ಕರ್ ಸ್ಥಾನಕ್ಕೆ ಸಚಿನ್, ನಂತರ ಕೊಹ್ಲಿ, ರಾಹುಲ್ ದ್ರಾವಿಡ್ ನಂತರ ಚೇತೇಶ್ವರ ಪೂಜಾರ, ವೀರೇಂದ್ರ ಸೆಹ್ವಾಗ್ ಅವರಿಗೆ ರೋಹಿತ್, ಕಪಿಲ್ ದೇವ್ ಜಾಗಕ್ಕೆ ಜಾವಗಲ್ ಶ್ರೀನಾಥ್ ಹಾಗೂ ಹರಭಜನ್ ಸಿಂಗ್ ಅವರ ಸ್ಥಾನಕ್ಕೆ ಅಶ್ವಿನ್ ಸಿಕ್ಕರು. ಈಗ ಐಪಿಎಲ್‌ನಿಂದಾಗಿ ಯುವಪ್ರತಿಭೆಗಳು ಕಣದಲ್ಲಿದ್ದಾರೆ. ಆದರೆ ರೋಹಿತ್, ಕೊಹ್ಲಿ, ಅಶ್ವಿನ್ ಸ್ಥಾನ ತುಂಬುವವರು ಈ ಗುಂಪಿನಲ್ಲಿ ಇದ್ದಾರೆಯೇ ಎಂಬುದು ಪ್ರಶ್ನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.