ADVERTISEMENT

ವಿಶ್ಲೇಷಣೆ: ವಿರಳ ಲೋಹ– ಭಾರತಕ್ಕೆ ದೆಸೆ?

ಗುರುರಾಜ್ ಎಸ್.ದಾವಣಗೆರೆ
Published 8 ಜನವರಿ 2026, 23:37 IST
Last Updated 8 ಜನವರಿ 2026, 23:37 IST
<div class="paragraphs"><p>ವಿಶ್ಲೇಷಣೆ: ವಿರಳ ಲೋಹ– ಭಾರತಕ್ಕೆ ದೆಸೆ? </p></div>

ವಿಶ್ಲೇಷಣೆ: ವಿರಳ ಲೋಹ– ಭಾರತಕ್ಕೆ ದೆಸೆ?

   
ವ್ಯಾಪಾರ ಮಾತ್ರವಲ್ಲದೆ, ರಾಜತಾಂತ್ರಿಕ ಅಸ್ತ್ರವಾಗಿಯೂ ಬಳಕೆಯಾಗುತ್ತಿರುವ ವಿರಳ ಲೋಹಗಳ ಕ್ಷೇತ್ರದಲ್ಲಿ ಚೀನಾದ ಏಕಸ್ವಾಮ್ಯ ಮುರಿಯುವ ಅವಕಾಶ ಭಾರತಕ್ಕಿದೆ. ಪರಿಸರಕ್ಕೆ ಗಾಸಿಯಾಗದೆ ವಿರಳ ಲೋಹಗಳ ಸಂಸ್ಕರಣೆಗೆ ಸಂಬಂಧಿಸಿದಂತೆ ಹೆಚ್ಚು ಪ್ರಯತ್ನಗಳು ನಡೆಯಬೇಕಾಗಿದೆ.

ಸ್ಮಾರ್ಟ್‌ಫೋನ್‌ನಿಂದ ಯುದ್ಧ ವಿಮಾನಗಳವರೆಗೆ ವಿರಳ ಲೋಹಗಳ ಬಳಕೆಯಿಲ್ಲದ ಆಧುನಿಕ ತಂತ್ರಜ್ಞಾನವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಈ ವಿರಳ ಲೋಹಗಳನ್ನು ಆಧುನಿಕ ತಂತ್ರಜ್ಞಾನದ ‘ವಿಟಮಿನ್’, ‘ಹೊಸ ಯುಗದ ಚಿನ್ನ’ ಎಂದು ಕರೆಯಲಾಗುತ್ತಿದೆ.

ಭೂಮಿಯ ಹೊರಪದರದಲ್ಲಿ 17 ವಿರಳ ಲೋಹಗಳು ತೆಳುವಾಗಿ ಹರಡಿಕೊಂಡಿವೆ. ಹೆಸರಿಗೆ ತಕ್ಕಂತೆ ಇವು ವಿರಳವೇನಲ್ಲ. ಚಿನ್ನ, ಬೆಳ್ಳಿಗಿಂತ ಹೆಚ್ಚೇ ಇವೆ. ಭೂಮಿಯಲ್ಲಿ ಒಂದೇ ಕಡೆ ಒತ್ತೊತ್ತಾಗಿ ಮತ್ತು ಶುದ್ಧ ರೂಪದಲ್ಲಿ ದೊರಕುವುದಿಲ್ಲವಾದ್ದರಿಂದ ಈ ಹೆಸರು! ನಮ್ಮ ಕರಾವಳಿಯುದ್ದಕ್ಕೂ ದೊರಕುವ ಮೊನಾಜೈಟ್ ಅದಿರಿನಲ್ಲಿ ಹಗುರ ವಿರಳ ಲೋಹಗಳು ಹೇರಳವಾಗಿವೆ. ಆದರೆ, ಇವುಗಳ ಗಣಿಗಾರಿಕೆ ದುಬಾರಿ. ಶುದ್ಧರೂಪಕ್ಕೆ ತರುವ ವಿಧಾನ ಸಂಕೀರ್ಣ; ಪರಿಸರಸ್ನೇಹಿಯೂ ಅಲ್ಲ.

ADVERTISEMENT

ವಾಹನದ ಬ್ಯಾಟರಿ, ವಿಮಾನದ ಎಂಜಿನ್, ಪವನ ವಿದ್ಯುತ್ ಟರ್ಬೈನ್‌ಗಳಿಗೆ ಬೇಕಾದ ಶಕ್ತಿಶಾಲಿ ಆಯಸ್ಕಾಂತ ತಯಾರಿಕೆಯಲ್ಲಿ ಬಳಸುವ ಪ್ರಸೋಡೈಮಿಯಂ ಮತ್ತು ನಿಯೋಡೈಮಿಯಂಗಳು ಜೊತೆಯಾಗಿಯೇ ದೊರಕುತ್ತವೆ. ಇವೆರಡನ್ನೂ ಆಯಸ್ಕಾಂತ ಉದ್ಯಮದ ‘ಓಡುವ ಕುದುರೆ’ ಎನ್ನುತ್ತೇವೆ. ನ್ಯೂಕ್ ಲಿಯರ್ ಬ್ಯಾಟರಿ (ಪ್ರೊಮಿಥಿಯಂ), ಕ್ಯಾನ್ಸರ್ ಚಿಕಿತ್ಸೆ (ಸಮೇರಿಯಂ), ತೈಲ ಸಂಸ್ಕರಣೆ (ಲುಟೇಶಿಯಂ), ಚಿಕ್ಕ ಎಕ್ಸ್‌ರೇ ಯಂತ್ರ (ಥುಲಿಯಂ), ಹೈ ಪವರ್ ಲೇಸರ್ (ಹೊಲ್ಮಿಯಂ), ಎಂಆರ್‌ಐ ಸ್ಕ್ಯಾನರ್ (ಗಡೊಲಿನಿಯಂ) ಹಾಗೂ ಬ್ಯಾಟರಿ ಎಲೆಕ್ಟ್ರೋಡ್‌ಗಳಲ್ಲಿ (ಲ್ಯಾಂಥನಂ) ಬಳಸಲಾಗುವ ವಿರಳ ಲೋಹಗಳು ಸದ್ಯಕ್ಕೆ ಜಾಗತಿಕ ರಾಜಕೀಯ ನಿಯಂತ್ರಣದ ಕೇಂದ್ರಬಿಂದುವಾಗುತ್ತಿವೆ. ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಫೈಬರ್ ಆಪ್ಟಿಕ್ಸ್, ಸೆಮಿಕಂಡಕ್ಟರ್, ಸೂಪರ್ ಕಂಡಕ್ಟರ್‌ಗಳಿಂದ ಹಿಡಿದು ದೇಶ ರಕ್ಷಣೆಯ ಡ್ರೋನ್, ಉಪಗ್ರಹ ವ್ಯವಸ್ಥೆ, ಜೆಟ್ ವಿಮಾನ, ಸೋನಾರ್, ರಾಡಾರ್‌ಗಳಲ್ಲಿ ಇವು ವ್ಯಾಪಕವಾಗಿ ಬಳಕೆಯಾಗುತ್ತಿವೆ. ಎಲೆಕ್ಟ್ರಿಕ್ ವಾಹನಗಳ ಮೋಟರ್‌ಗಳು ಮತ್ತು ವಿಂಡ್ ಟರ್ಬೈನ್‌ಗಳಿಗೆ ಬೇಕಾದ ಶಕ್ತಿಶಾಲಿ ಶಾಶ್ವತ ಆಯಸ್ಕಾಂತ ತಯಾರಿಕೆಗೆ ವಿರಳ ಲೋಹಗಳು ಬೇಕು.

ಸದ್ಯಕ್ಕೆ ಈ ಲೋಹಗಳ ವಿಷಯದಲ್ಲಿ ಚೀನಾ ನಂಬರ್‌ ಒನ್‌ ಸ್ಥಾನದಲ್ಲಿದೆ. ವಿಶ್ವದ ಸುಮಾರು ಶೇ 90ರಷ್ಟು ವಿರಳ ಲೋಹಗಳ ಸಂಸ್ಕರಣೆ ಚೀನಾದಲ್ಲೇ ಆಗುತ್ತದೆ. ದೇಶವೊಂದರ ರಕ್ಷಣಾವಲಯ ಸದೃಢಗೊಳ್ಳಲು ವಿರಳ ಲೋಹಗಳ ಖಜಾನೆಯೇ ಇರಬೇಕು. ಈ ಲೋಹಗಳನ್ನು ತಾನೂ ಬಳಸಿಕೊಂಡು, ಇತರರಿಗೂ ಮಾರುತ್ತಿರುವ ಚೀನಾದ ಆರ್ಥಿಕತೆ ಸಶಕ್ತವಾಗಿಯೇ ಇದೆ. ಚೀನಾದ ಮೇಲಿನ ಇತರ ದೇಶಗಳ ಅವಲಂಬನೆ ಹೆಚ್ಚುತ್ತಿದೆ.

ನಮಗೀಗ ವಾತಾವರಣಕ್ಕೆ ಇಂಗಾಲದ ಡೈ ಆಕ್ಸೈಡ್ ಹೊಮ್ಮಿಸದ, ಏರುತ್ತಿರುವ ಭೂಮಿಯ ಬಿಸಿ ನಿಯಂತ್ರಿಸಬಲ್ಲ ಇಂಧನ ಮೂಲಗಳು ಬೇಕು. ಆ ದಿಸೆಯಲ್ಲಿ ಮೊನಾಜೈಟ್ ಅದಿರು ಆಪದ್ಬಾಂಧವನಂತಿದೆ. ಈ ಅದಿರಿನಲ್ಲಿ ಹೇರಳವಾಗಿ ದೊರಕುವ ವಿರಳ ಲೋಹಗಳನ್ನು ಬಳಸಿಕೊಂಡು, ಕಾರ್ಬನ್ ಸಮತೋಲನದ ವ್ಯವಸ್ಥೆಯನ್ನು ನಿರ್ಮಿಸಬಹುದಾಗಿದೆ.

ಮೊನಾಜೈಟ್‌ಯುಕ್ತ ಮರಳಿನ ಗಣಿಗಳು ನಮ್ಮಲ್ಲಿವೆ. ವಿಶ್ವದ ಒಟ್ಟು ವಿರಳ ಲೋಹಗಳ ನಿಕ್ಷೇಪದಲ್ಲಿ ಭಾರತದ ಪಾಲು ಶೇ 6ರಷ್ಟಿದೆ. ವಿರಳ ಲೋಹಗಳ ಆಕ್ಸೈಡ್ ರೂಪದ 72 ಲಕ್ಷ ಟನ್ ನಿಕ್ಷೇಪಗಳು ನಮ್ಮಲ್ಲಿವೆ. ಇದು ಜಗತ್ತಿನ ಮೂರನೇ ಅತಿದೊಡ್ಡ ನಿಕ್ಷೇಪವಾಗಿದೆ. ನಿಕ್ಷೇಪಗಳು ಹೇರಳವಾಗಿದ್ದರೂ, ಜಾಗತಿಕ ವಿರಳ ಲೋಹ ಉತ್ಪಾದನೆಯಲ್ಲಿ ಭಾರತದ ಪಾಲು ಶೇ 1ಕ್ಕಿಂತ ಕಡಿಮೆ. ಇದಕ್ಕೆ ಮುಖ್ಯ ಕಾರಣ, ಗಣಿಗಾರಿಕೆ ಮತ್ತು ಸಂಸ್ಕರಣಾ ತಂತ್ರಜ್ಞಾನದಲ್ಲಿ ನಿರೀಕ್ಷಿತ ಪ್ರಗತಿ ಆಗದಿರುವುದು. ಸದ್ಯಕ್ಕೆ ಪ್ರಾಥಮಿಕ ಸಂಸ್ಕರಣೆಯನ್ನಷ್ಟೇ ಮಾಡಬಲ್ಲ ಸಾಮರ್ಥ್ಯ ನಮ್ಮಲ್ಲಿದೆ. 2024ರಲ್ಲಿ ಚೀನಾದಲ್ಲಿ 2.7 ಲಕ್ಷ ಟನ್ ವಿರಳ ಲೋಹ ಉತ್ಪಾದನೆಯಾದರೆ, ಭಾರತದಲ್ಲಿನ ಉತ್ಪಾದನೆ ಬರೀ 2,900 ಟನ್‌ನಷ್ಟಿತ್ತು.

ಆಂಧ್ರಪ್ರದೇಶದ ಕರಾವಳಿಯುದ್ದಕ್ಕೂ ಮೊನಾಜೈಟ್ ದೊರಕುತ್ತದೆ. ಕೇರಳ, ಒಡಿಶಾ, ತಮಿಳುನಾಡು ಸಮುದ್ರ ತೀರಗಳಲ್ಲೂ ಮೊನಾಜೈಟ್ ಇದೆ. ಈ ಅದಿರಿನಲ್ಲಿ ಶೇ 50ರಿಂದ 60ರಷ್ಟು ಉತ್ತಮ ಗುಣಮಟ್ಟದ ವಿರಳ ಲೋಹಗಳಲ್ಲದೆ, ಶೇ 8–10ರಷ್ಟು ಥೋರಿಯಂ ಸಹ ದೊರಕುತ್ತದೆ. ಇದು ವಿಕಿರಣ ಹೊಮ್ಮಿಸುತ್ತದೆ ಮತ್ತು ಅಣು ವಿದ್ಯುತ್ ಉತ್ಪಾದನೆಗೆ ಬೇಕಾದ ಕಚ್ಚಾವಸ್ತುವಾದ್ದರಿಂದ, ಇದರ ಗಣಿಗಾರಿಕೆ ಪರಿಸರಸ್ನೇಹಿ ವಿಧಾನದಲ್ಲೇ ಆಗಬೇಕು. ಜಗತ್ತಿನ ಇತರ ಭಾಗದ ನಿಕ್ಷೇಪಗಳಿಗೆ ಹೋಲಿಸಿದರೆ ನಮ್ಮಲ್ಲಿ ದೊರಕುವ ಅದಿರಿನ ಪ್ರಮಾಣ ಹೆಚ್ಚು ಎಂಬ ಮಾತಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಹಸಿರು ಇಂಧನ (ಇವಿ ಬ್ಯಾಟರಿಗಳು) ವಲಯಕ್ಕೆ ಅಗತ್ಯವಾದ, ಸಿದ್ಧಪಡಿಸಿದ ವಿರಳ ಲೋಹದ ಉತ್ಪನ್ನಗಳಿಗಾಗಿ ಈಗಲೂ ಚೀನಾವನ್ನೇ ಅವಲಂಬಿಸಿದ್ದೇವೆ. ಚೀನಾದ ಮೇಲಿನ ಅವಲಂಬನೆ ತಗ್ಗಿಸಲು ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್‌ಗಳು ಈಗ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿವೆ. ಭಾರತಕ್ಕೂ ಮುಕ್ತ ಅವಕಾಶವಿದೆ. ಪರಿಸರಕ್ಕೆ ಹಾನಿಯಾಗದಂತೆ ನಮ್ಮ ಸಂಪನ್ಮೂಲಗಳನ್ನು ಬಳಸಿಕೊಂಡರೆ, ವಿರಳ ಲೋಹಗಳ ದಾಸ್ತಾನಿನ ವಿಷಯದಲ್ಲಿ ಜಗತ್ತಿಗೆ ಭಾರತ ಪ್ರಮುಖ ಕೇಂದ್ರವಾಗಲಿದೆ.

‘ಆತ್ಮನಿರ್ಭರ ಭಾರತ’ ಯೋಜನೆಯಡಿ ವಿರಳ ಲೋಹಗಳ ಸಂಸ್ಕರಣೆಗೆ ಒತ್ತು ನೀಡಲಾಗುತ್ತಿದೆ. ಇಲ್ಲಿಯವರೆಗೂ ಸುರಕ್ಷತೆಯ ದೃಷ್ಟಿಯಿಂದ, ವಿಕಿರಣ ಹೊಮ್ಮಿಸುವ ಮೊನಾಜೈಟ್ ಗಣಿಗಾರಿಕೆಯು ಸರ್ಕಾರಿ ಸಂಸ್ಥೆ ಐಆರ್‌ಇಎಲ್ (ಇಂಡಿಯನ್‌ ರೇರ್‌ ಅರ್ಥ್ಸ್‌ ಲಿಮಿಟೆಡ್) ಅಧೀನದಲ್ಲಿತ್ತು. ಇದು ಉತ್ಪಾದನೆಯ ವೇಗವನ್ನು ಮಿತಗೊಳಿಸಿತ್ತು. ಈ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಭಾರತ ಸರ್ಕಾರವು ಗಣಿಗಾರಿಕೆ ಕಾಯ್ದೆಗೆ ತಿದ್ದುಪಡಿ (ಖನಿಜಗಳ ಕಾಯ್ದೆ ತಿದ್ದುಪಡಿ– 2023) ತಂದು, ವಿರಳ ಲೋಹಗಳು ಸೇರಿದಂತೆ 24 ಪ್ರಮುಖ ‘ಕ್ರಿಟಿಕಲ್ ಮಿನರಲ್ಸ್’ಗಳನ್ನು ಪಟ್ಟಿ ಮಾಡಿ, ಖಾಸಗಿ ಕಂಪನಿಗಳಿಗೆ ಗಣಿಗಾರಿಕೆ ಮಾಡಲು ಅವಕಾಶ ನೀಡಿದೆ.

ಈಗಾಗಲೇ ಅಣು ವಿದ್ಯುತ್ ಉತ್ಪಾದನೆಯ ಕ್ಷೇತ್ರಕ್ಕೆ ಖಾಸಗಿಯವರಿಗೆ ನೀಡಲಾಗುತ್ತಿರುವ ಆಹ್ವಾನಕ್ಕೆ ತಜ್ಞರಿಂದ ಮತ್ತು ಸಮಾಜ ವಿಜ್ಞಾನಿಗಳಿಂದ ವಿರೋಧ ವ್ಯಕ್ತವಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಭಾರೀ ಅನಾಹುತವನ್ನೇ ತಂದೊಡ್ಡಬಲ್ಲ ಅಣು ವಿದ್ಯುತ್ ಉತ್ಪಾದನೆಯಲ್ಲಿ ಅವಘಡಗಳಾದರೆ ಖಾಸಗಿ ಕಂಪನಿಯನ್ನು ಪ್ರಶ್ನಿಸುವ ಅಥವಾ ಹೊಣೆಗಾರರನ್ನಾಗಿಸುವ ಯಾವ ಹಕ್ಕೂ ನಮಗಿಲ್ಲ. ಪರಿಸ್ಥಿತಿ ಹೀಗಿರುವಾಗ ಅಣುವಿದ್ಯುತ್ ಉತ್ಪಾದನೆಯಷ್ಟೇ ಸವಾಲಿನ ಹಾಗೂ ಸಂಕೀರ್ಣವಾದ ವಿರಳ ಲೋಹ ಗಣಿಗಾರಿಕೆಯನ್ನು ಖಾಸಗಿಯವರಿಗೆ ವಹಿಸುವುದು ಎಷ್ಟು ಸರಿ?

​ದೇಶಕ್ಕೆ ಅಗತ್ಯವಿರುವ ಖನಿಜಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ‘ನ್ಯಾಷನಲ್ ಕ್ರಿಟಿಕಲ್ ಮಿನರಲ್ಸ್ ಮಿಷನ್’ ಎಂಬ ಪ್ರತ್ಯೇಕ ಮಿಷನ್ ಸ್ಥಾಪಿಸಲಾಗಿದೆ. ಜಾಗತಿಕ ಸಹಯೋಗಕ್ಕಾಗಿ ‘ಮಿನರಲ್ಸ್ ಸೆಕ್ಯುರಿಟಿ ಪಾರ್ಟನರ್‌ಶಿಪ್’ ಸ್ಥಾಪಿಸಿ ವಿದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಇದರ ಮೂಲಕ ಪೂರೈಕೆ ಸರಪಳಿಯನ್ನು ಚೀನಾದ ಹಿಡಿತದಿಂದ ಮುಕ್ತಗೊಳಿಸಿ, ಮಿತ್ರರಾಷ್ಟ್ರಗಳೊಂದಿಗೆ ತಂತ್ರಜ್ಞಾನ ಮತ್ತು ಸಂಪನ್ಮೂಲ ಹಂಚಿಕೊಳ್ಳುವುದು ಭಾರತದ ಗುರಿಯಾಗಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಅಮೆರಿಕದಲ್ಲಿ ಇರುವ ವಿರಳ ಲೋಹದ ನಿಕ್ಷೇಪಗಳ ಗಣಿಗಾರಿಕೆ ನಡೆಸಲು ಅಥವಾ ಪಾಲುದಾರಿಕೆ ಹೊಂದಲು ಭಾರತವು ‘ಖನಿಜ್ ಬಿದೇಶ್ ಇಂಡಿಯಾ ಲಿಮಿಟೆಡ್’ ಎಂಬ ಸಾರ್ವಜನಿಕ ವಲಯದ ಕಂಪನಿಯನ್ನು ಸ್ಥಾಪಿಸಿದ್ದು, ಈಗಾಗಲೇ ಜಾಂಬಿಯಾದಲ್ಲಿ 9,000 ಚ.ಕಿ.ಮೀ. ವ್ಯಾಪ್ತಿಯಲ್ಲಿ ಭೂಸರ್ವೇಕ್ಷಣೆ ನಡೆಸಲಾಗುತ್ತಿದೆ.

​ನಮ್ಮ ಗುರಿ 2070ರ ವೇಳೆಗೆ ‘ನೆಟ್ ಜೀರೊ’ ಗುರಿ ತಲಪುವುದು. ಇದಕ್ಕೆ ಎಲೆಕ್ಟ್ರಿಕ್ ವಾಹನಗಳು, ಪವನ ಮತ್ತು ಸೌರಶಕ್ತಿ ಅತಿಮುಖ್ಯ. ಈ ವಲಯಗಳಿಗೆ ವಿರಳ ಲೋಹಗಳು ಅನಿವಾರ್ಯ. ಆದ್ದರಿಂದ, ಮುಂದಿನ ದಶಕದಲ್ಲಿ ಭಾರತವು ಬರೀ ಕಚ್ಚಾಲೋಹ ರಫ್ತು ಮಾಡುವ ದೇಶವಾಗದೆ, ಶಕ್ತಿಶಾಲಿ ಶಾಶ್ವತ ಆಯಸ್ಕಾಂತ (ಮ್ಯಾಗ್ನೆಟ್) ಮತ್ತು ಹೈ–ಟೆಕ್ ಉಪಕರಣಗಳನ್ನು ತಯಾರಿಸುವ ಕೇಂದ್ರವಾಗಬೇಕು. ವಿರಳ ಲೋಹಗಳ ಉತ್ಪಾದನೆ, ಸಂಸ್ಕರಣೆ, ದಾಸ್ತಾನು ಮತ್ತು ರಫ್ತು ಕೇವಲ ವ್ಯಾಪಾರದ ವಿಷಯವಲ್ಲ. ವಿಶ್ವದ ಒಟ್ಟು ಉತ್ಪಾದನೆಯ ಶೇ 60ರಷ್ಟನ್ನು ತಾನೇ ಉತ್ಪಾದಿಸಿ, ಶೇ 90ರಷ್ಟನ್ನು ಸಂಸ್ಕರಿಸುವ ಚೀನಾ ಅದನ್ನು ಜಾಗತಿಕ ರಾಜತಾಂತ್ರಿಕತೆಯ ಅಸ್ತ್ರವನ್ನಾಗಿಸಿಕೊಂಡಿದೆ. 2010ಲ್ಲಿ ಜಪಾನ್‌ನೊಂದಿಗೆ ಸಂಘರ್ಷ ಉಂಟಾದಾಗ ವಿರಳ ಲೋಹಗಳ ರಫ್ತನ್ನು ಸ್ಥಗಿತಗೊಳಿಸಿತ್ತು. ಈಗ ಅಮೆರಿಕದೊಂದಿಗೆ ಸುಂಕ ಸಮರದಲ್ಲಿರುವ ಚೀನಾ, ಅಮೆರಿಕಕ್ಕೆ ರಫ್ತು ನಿಲ್ಲಿಸಿದೆ.

ಅಮೆರಿಕ ಮತ್ತು ಯುರೋಪ್‌ ರಾಷ್ಟ್ರಗಳು ತಮ್ಮ ಹೈ–ಟೆಕ್ ಉತ್ಪನ್ನಗಳ ಉತ್ಪಾದನೆಗಾಗಿ ಚೀನಾವನ್ನು ಅವಲಂಬಿಸಿರುವುದು ಅವುಗಳ ರಾಷ್ಟ್ರೀಯ ಭದ್ರತೆಗೆ ಇರುವ ದೊಡ್ಡ ಸವಾಲಾಗಿದೆ. ಈ ಕಾರಣಕ್ಕಾಗಿಯೇ ಇಂದು ಜಗತ್ತು ‘ಚೀನಾ ಪ್ಲಸ್ ಒನ್’ ಕಾರ್ಯತಂತ್ರವನ್ನು ಅನುಸರಿಸುತ್ತಿದೆ. ಅಂದರೆ, ಪೂರೈಕೆ ಸರಪಳಿಗಾಗಿ ಚೀನಾ ಹೊರತಾದ ಪರ್ಯಾಯ ರಾಷ್ಟ್ರಗಳತ್ತ ಕಣ್ಣು ನೆಟ್ಟಿವೆ. ಇಲ್ಲಿ ಭಾರತಕ್ಕೆ ದೊಡ್ಡ ಅವಕಾಶದ ಬಾಗಿಲು ತೆರೆದಿದೆ.

ವಿರಳ ಲೋಹಗಳ ಸಂಸ್ಕರಣೆಯ ತಂತ್ರಜ್ಞಾನವನ್ನು ಪರಿಸರಕ್ಕೆ ಪೂರಕವಾಗುವಂತೆ ರೂಪಿಸುವುದು ನಮ್ಮ ವಿಜ್ಞಾನಿಗಳು, ತಂತ್ರಜ್ಞರ ಆದ್ಯತೆಯಾಗಬೇಕು. ಭಾರತವು ಈ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮುವ ಸಾಧ್ಯತೆಗಳಿವೆ. ಮುಂದಿನ ದಶಕದಲ್ಲಿ ವಿರಳ ಲೋಹಗಳ ಪೂರೈಕೆ ನಿಯಂತ್ರಿಸುವ ದೇಶವೇ ಜಗತ್ತಿನ ರಾಜತಾಂತ್ರಿಕ ದಿಕ್ಕನ್ನು ನಿರ್ಧರಿಸುವ ತಾಕತ್ತು ಪಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.