
ಆಟದ ಅಂಗಳದಲ್ಲಿ ರಾಜಕೀಯ ನುಸುಳಿದರೆ ಏನಾಗುತ್ತದೆ ಎನ್ನುವುದಕ್ಕೆ ಪಾಕಿಸ್ತಾನದ ಈ ಹೊತ್ತಿನ ಕ್ರಿಕೆಟ್ ನಿದರ್ಶನದಂತಿದೆ. ಹಿಂದೆಲ್ಲಾ, ಭಾರತ ಮತ್ತು ಪಾಕಿಸ್ತಾನದ ನಡುವಿನ ಕ್ರಿಕೆಟ್ ಪಂದ್ಯಗಳಿಗೆ ಉಭಯ ದೇಶಗಳ ನಡುವಣ ವೈಮನಸ್ಸಿನ ಆಯಾಮದ ಜೊತೆಗೆ, ಎರಡು ಪ್ರಬಲ ತಂಡಗಳ ತುರುಸಿನ ಸ್ಪರ್ಧೆಯ ಕಾರಣದಿಂದಾಗಿಯೂ ಮಹತ್ವ ಇರುತ್ತಿತ್ತು. ಈಗ, ವೈಮನಸ್ಸಷ್ಟೇ ಉಳಿದುಕೊಂಡಿದೆ. ಆಟದ ರೋಚಕತೆ ನೇಪಥ್ಯಕ್ಕೆ ಸರಿದಿದೆ.
ಹಿಂದಿನ ಉದಾಹರಣೆಗಳನ್ನು ನೆನಪಿಸಿಕೊಳ್ಳಿ. 1985ರಲ್ಲಿ ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ‘ವರ್ಲ್ಡ್ ಚಾಂಪಿಯನ್‌ಷಿಪ್’ ಫೈನಲ್ ನೋಡಲು 50 ಸಾವಿರ ಜನ ಸೇರಿದ್ದರು. ಆ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಶ್ರೀಕಾಂತ್ ಮತ್ತು ರವಿಶಾಸ್ತ್ರಿ ಅವರ ಅರ್ಧಶತಕಗಳು ಭಾರತ ಜಯಗಳಿಸಲು ಕಾರಣವಾಗಿದ್ದವು. ರವಿಶಾಸ್ತ್ರಿ ಅವತ್ತು ತಮಗೆ ಪ್ರಶಸ್ತಿಯಾಗಿ ಸಿಕ್ಕ ಔಡಿ ಕಾರಿನೊಂದಿಗೆ ಸಹ ಆಟಗಾರರ ಜೊತೆ ಸಂಭ್ರಮಿಸಿದ್ದು ಇವತ್ತಿಗೂ ಅವಿಸ್ಮರಣೀಯ ಚಿತ್ರವಾಗಿದೆ. 1983ರ ವಿಶ್ವಕಪ್ ಗೆದ್ದ ಎರಡು ವರ್ಷಗಳ ನಂತರ ಸಾಧಿಸಿದ್ದ ಈ ಜಯವು ಭಾರತದ ಕ್ರಿಕೆಟ್‌ಪ್ರಿಯರನ್ನು ಪುಳಕಿತಗೊಳಿಸಿತ್ತು.
1986ರಲ್ಲಿ ಶಾರ್ಜಾದಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯ ಭಾರತದ ಎದುರಿನ ಫೈನಲ್‌ನಲ್ಲಿ ಪಾಕಿಸ್ತಾನದ ಗೆಲುವಿಗೆ ಕೊನೆಯ ಎಸೆತದಲ್ಲಿ ನಾಲ್ಕು ರನ್ ಬೇಕಿತ್ತು. ಚೇತನ್ ಶರ್ಮಾ ಅವರ ಕೊನೆಯ ಎಸೆತವನ್ನು ಸಿಕ್ಸರ್‌ಗೆತ್ತಿದ್ದ ಮಿಯಾಂದಾದ್ ತಮ್ಮ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದ್ದರು. ಇಂದಿಗೂ ಆ ಪಂದ್ಯ ಕ್ರಿಕೆಟ್‌ಪ್ರಿಯರ ನೆನಪಿನ ಆಲ್ಬಮ್‌ನಲ್ಲಿ ಅಚ್ಚಳಿಯದೆ ಉಳಿದಿದೆ.
ಆಗಲೂ ಆಟಗಾರರ ನಡುವೆ ಕ್ರೀಡಾಂಗಣದಲ್ಲಿ ಸೆಣಸಾಟ ತಾರಕಕ್ಕೇರುತ್ತಿತ್ತು. ಆದರೆ, ಹೊರಗೆ ಸ್ನೇಹವಿರುತ್ತಿತ್ತು. ಇಂದಿಗೂ ಸುನಿಲ್ ಗಾವಸ್ಕರ್ ಮತ್ತು ಇಮ್ರಾನ್ ಖಾನ್ ಗೆಳೆಯರೇ ಆಗಿದ್ದಾರೆ. ಅಂತಹ ಗೆಳೆತನ ಈಗಿನ ಆಟಗಾರರ ನಡುವೆ ನಿರೀಕ್ಷಿಸುವುದು ಅಸಾಧ್ಯ. ಆಗ, ರಾಜಕೀಯ ಹಸ್ತಕ್ಷೇಪ ನೇರವಾಗಿರಲಿಲ್ಲ. ರಾಜತಾಂತ್ರಿಕ ಬಿಕ್ಕಟ್ಟಿನ ಬಿಸಿ ಇಷ್ಟೊಂದು ಇರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ. ಪಾಕ್ ತಂಡವು ಭಾರತದ ಜೊತೆ ಆಡುವುದನ್ನು ಕುರಿತು ಅಲ್ಲಿಯ ಪ್ರಧಾನಮಂತ್ರಿ ನಿರ್ಧರಿಸುತ್ತಾರೆ. ಅದರಿಂದಾಗಿ ‘ಆಟ’ ಮಾಯವಾಗಿದೆ. ರಾಜಕೀಯ ಮೇಲಾಟಗಳೇ ಹೆಚ್ಚಾಗಿವೆ. ಈಚೆಗೆ ಕೊಲಂಬೊದಲ್ಲಿ ನಡೆದ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಉಭಯ ತಂಡಗಳ ಪಂದ್ಯವೇ ಈ ಮಾತಿಗೆ ಸಾಕ್ಷಿ. ಕ್ರಿಕೆಟ್ ಲೋಕದ ಕಡು ಎದುರಾಳಿಗಳಾಗಿರುವ ಭಾರತ–ಪಾಕಿಸ್ತಾನ ನಡುವಣ ಪೈಪೋಟಿ ಮೊದಲಿನ ತೀವ್ರತೆಯನ್ನು ಕಳೆದುಕೊಂಡಿದ್ದು, ಮಾರುಕಟ್ಟೆಯು ಪೈಪೋಟಿಯ ಕೃತಕ ವಾತಾವರಣವನ್ನು ಸೃಷ್ಟಿಸಿ ಹಣ ಮಾಡಿಕೊಳ್ಳುತ್ತಿದೆಯೆ ಎಂಬ ಪ್ರಶ್ನೆಗಳನ್ನು ಆ ಪಂದ್ಯವು ಹುಟ್ಟುಹಾಕಿದೆ. ಈ ಹಿನ್ನೆಲೆಯಲ್ಲಿಯೇ, ‘ಭಾರತ ಮತ್ತು ಪಾಕಿಸ್ತಾನದ ಹಣಾಹಣಿ ಕ್ರೀಡೆಯಾಗಿ ಅಷ್ಟೇ ಉಳಿದಿಲ್ಲ. ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಅಸ್ತ್ರವಾಗಿ ಮಾತ್ರ ಬಳಕೆಯಾಗುತ್ತಿದೆ. ಪ್ರಚೋದಕನಾರಿ ಹೇಳಿಕೆಗಳು ಮತ್ತು ಯುದ್ಧ ಸಿದ್ಧತೆಯ ಭಾವಭಂಗಿಗಳಿಂದ ಕ್ರಿಕೆಟ್ ಸ್ಫೂರ್ತಿ ಮಸುಕಾಗುತ್ತಿದೆ. ಇನ್ನು ಮುಂದೆ ಈ ಆಟವನ್ನು ಆನಂದಿಸಲಾಗದು ಎಂದು ನನಗನಿಸುತ್ತದೆ’ ಎನ್ನುವ ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಅವರ ಮಾತನ್ನು ಗಮನಿಸಬೇಕು.
ರಾಜಕೀಯ ಕೆಸರೆರಚಾಟ ಮುನ್ನೆಲೆಗೆ ಬಂದಿದೆ. ಆಟಗಾರರು ಹಸ್ತಲಾಘವ ಮಾಡದಿರುವ, ಒಬ್ಬರನ್ನೊಬ್ಬರು ಟೀಕಿಸುವ ಮತ್ತಿತರ ವಿವಾದಗಳೇ ಸುದ್ದಿಯಾಗುತ್ತಿರುವುದು ಕ್ರೀಡಾಸ್ಫೂರ್ತಿಯ ಅಣಕದಂತಿದೆ. ಈ ಸಲ ಪಾಕ್ ಸರ್ಕಾರವು ಬಾಂಗ್ಲಾದೇಶವನ್ನು ಬೆಂಬಲಿಸುವ ನೆಪದಲ್ಲಿ ತಮ್ಮ ತಂಡ ವಿಶ್ವಕಪ್ ಟೂರ್ನಿಯಲ್ಲಿ ಆಡುವುದಿಲ್ಲ ಎಂದಿತು. ನಂತರ ಭಾರತ ಎದುರಿನ ಪಂದ್ಯದಲ್ಲಿ ಆಡುವುದಿಲ್ಲ, ಉಳಿದಿದ್ದರಲ್ಲಿ ಕಣಕ್ಕಿಳಿಯಲಿದೆ ಎಂದಿತು. ಮತ್ತೆ ಕೆಲವು ಬೇಡಿಕೆಗಳನ್ನು ಮುಂದಿಟ್ಟಿತು. ಆ ಎಲ್ಲ ಬೇಡಿಕೆಗಳನ್ನೂ ಐಸಿಸಿ ತಿರಸ್ಕರಿಸಿತು. ಆದರೆ, ಪಾಕ್ ಮತ್ತು ಭಾರತ ಪಂದ್ಯ ನಡೆಯುವಂತೆ ಐಸಿಸಿ ನೋಡಿಕೊಂಡಿತು. ಈ ಪಂದ್ಯಕ್ಕೆ ಆತಿಥ್ಯ ಒದಗಿಸಿದ ಶ್ರೀಲಂಕಾವೂ ಐಸಿಸಿಗೆ ಜೊತೆ ನೀಡಿತು. ಇದೆಲ್ಲದರ ಫಲವಾಗಿ ಪಂದ್ಯ ನಡೆಯಿತು. ಕೋಟ್ಯಂತರ ಜನರೂ ಪಂದ್ಯ ವೀಕ್ಷಿಸಿದರು. ಆದರೆ ನಿರೀಕ್ಷೆಗಿಂತಲೂ ಸುಲಭವಾಗಿ ಭಾರತದ ಬೌಲರ್‌ಗಳು ಪಂದ್ಯ ಗೆಲ್ಲಿಸಿಕೊಟ್ಟರು. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಗೆದ್ದ ಪಾಕ್ ಅಂತೂ ಇಂತೂ ಸೂಪರ್ ಎಂಟಕ್ಕೆ ಪ್ರವೇಶಿಸಿತು.
ಆಟದೊಳಗಿನ ಪೈಪೋಟಿ ಹೆಚ್ಚಾಗಿದ್ದ ಸಂದರ್ಭದಲ್ಲಿ ಉಭಯ ತಂಡಗಳ ಗುಣಮಟ್ಟವೂ ಬೆಳೆಯಿತು. ಆಟಗಾರರೂ ಬೆಳೆದರು. ಪಾಕಿಸ್ತಾನದ ನೆಲದಲ್ಲಿಯೇ ‘ಯೇ ಥೋ ಬಚ್ಚಾ ಹೈ ರೇ’ ಎಂದು ತಮ್ಮನ್ನು ಹೀಯಾಳಿಸಿದವರಿಗೆ 16 ವರ್ಷದ ಸಚಿನ್ ನೀಡಿದ್ದ ತಿರುಗೇಟು ಹಲವರಿಗೆ ಪ್ರೇರಣೆಯಾಯಿತು. ಸಚಿನ್ ದಿಗ್ಗಜರಾಗಿ ಬೆಳೆದರು. ಪಾಕಿಸ್ತಾನದಲ್ಲಿಯೂ ಅವರಿಗೆ ಅಭಿಮಾನಿಗಳ ದೊಡ್ಡ ಬಳಗ ಸೃಷ್ಟಿಯಾಯಿತು. 1996ರ ವಿಶ್ವಕಪ್ ಟೂರ್ನಿಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಮೀರ್ ಸೊಹೇಲ್ ತೋರಿದ್ದ ದರ್ಪಕ್ಕೆ ವೇಗಿ ವೆಂಕಟೇಶ್ ಪ್ರಸಾದ್ ಅವರು ವಿಕೆಟ್ ಎಗರಿಸಿ ಕೊಟ್ಟಿದ್ದ ಪ್ರತ್ಯುತ್ತರ, 2007ರ ಟಿ20 ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಮಹೇಂದ್ರಸಿಂಗ್ ಧೋನಿ ಬಳಗವು ಪಾಕಿಸ್ತಾನವನ್ನು ಸೋಲಿಸಿದ್ದ ಪರಿ, 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಚುಟುಕು ವಿಶ್ವಕಪ್ ಪಂದ್ಯದಲ್ಲಿ ಹ್ಯಾರಿಸ್ ರವೂಫ್ ಎಸೆತಗಳಲ್ಲಿ ಎರಡು ಸಿಕ್ಸರ್ ಹೊಡೆದಿದ್ದ ವಿರಾಟ್ ಕೊಹ್ಲಿಯ ಆಟವನ್ನು ಮರೆಯಲು ಸಾಧ್ಯವೇ?
ಆಟದಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ ಅವುಗಳನ್ನು ಸಾಧಿಸುವ ರೀತಿ ಮುಖ್ಯ. ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನದ ಯುವ ಕ್ರಿಕೆಟ್‌ಪ್ರೇಮಿಗಳು ಹೇಳುತ್ತಿರುವುದೂ ಇದನ್ನೇ. ಯಾವುದೇ ಪ್ರತಿರೋಧ, ಯೋಜನಾಬದ್ಧ ಆಟವೇ ಇಲ್ಲದೆ ಪಾಕ್ ಮಂಡಿಯೂರಿತು ಎಂಬ ಬೇಸರ ಅವರ ಮಾತುಗಳಲ್ಲಿದೆ. ತರಬೇತಿ, ಹಣ ಮತ್ತಿತರ ಸೌಲಭ್ಯಗಳಿಲ್ಲದೆ ಆಟಗಾರರೇ ಪರದಾಡುವುದನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಹಲವು ಬಾರಿ ಒಪ್ಪಿಕೊಂಡಿದ್ದಾರೆ. ಪಾಕ್ ದೇಶಕ್ಕೆ ಇತಿಹಾಸದಲ್ಲಿ ವಿಶ್ವಕಪ್ ಜಯಿಸಿಕೊಟ್ಟ ಏಕೈಕ ನಾಯಕ ಇಮ್ರಾನ್ ಖಾನ್ ಅವರು ಇವತ್ತು ಜೈಲಿನಲ್ಲಿದ್ದಾರೆ. ಆ ದೇಶದ ಪ್ರಧಾನಿಯೂ ಆಗಿದ್ದ ಅವರು ಈಗ ಜೈಲಿನಲ್ಲಿ ಚಿಕಿತ್ಸೆಗಾಗಿ ಅಂಗಲಾಚುವ ಪರಿಸ್ಥಿತಿ ಇದೆ.
ಪಾಕಿಸ್ತಾನದಲ್ಲಿ ಈ ಅಧೋಗತಿ ಕ್ರಿಕೆಟ್‌ಗೆ ಮಾತ್ರ ಒದಗಿಲ್ಲ, ಹಾಕಿಗೂ ಬಂದಿದೆ. ಒಂದು ಕಾಲದಲ್ಲಿ ಒಲಿಂಪಿಕ್ ಪದಕ ವಿಜೇತ ತಂಡವಾಗಿದ್ದ ಪಾಕ್ ಹಾಕಿ ತಂಡವು ಈಗ ಎಲ್ಲಿಯೂ ಇಲ್ಲದಂತಾಗಿದೆ. ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಎಫ್‌ಐಎಚ್ ಪ್ರೊ ಲೀಗ್ ಟೂರ್ನಿಯಲ್ಲಿ ಆಡಲು ತೆರಳಿದ್ದ ಪಾಕ್ ತಂಡವು ವಸತಿ, ಊಟಕ್ಕಾಗಿ ಪರದಾಡಿತ್ತು. ‘ರಾತ್ರಿಯನ್ನು ಬೀದಿ ಬದಿಯಲ್ಲಿ ಕಳೆದಿದ್ದೇವೆ. ನಮಗೆ ಕೊಟ್ಟಿದ್ದ ಕೋಣೆಯಿಂದ ಪಂದ್ಯಕ್ಕೆ ಹೊರಡುವ ಮುನ್ನ ನಾವು ತಿಂದುಂಡ ಪಾತ್ರೆ ಪಡಗಗಳನ್ನು ತೊಳೆದಿಡಬೇಕಿತ್ತು. ನಮ್ಮ ಆಹಾರ ನಾವೇ ಹೊಂದಿಸಿಕೊಳ್ಳಬೇಕಾಗಿತ್ತು’ ಎಂದು ಪಾಕ್ ತಂಡದ ನಾಯಕ ಶಕೀಲ್ ಅಹ್ಮದ್ ಬಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಟ್ಟ ರಾಜಕೀಯದ ಕಪಿಮುಷ್ಟಿಯಲ್ಲಿ ಪಾಕ್ ಕ್ರೀಡಾಕ್ಷೇತ್ರ
ಸಿಲುಕಿರುವುದಕ್ಕೆ ಕನ್ನಡಿ ಇದು.
ಇಂತಹುದೇ ಸನ್ನಿವೇಶದಿಂದ ಪಾತಾಳಕ್ಕೆ ಹೋಗಿದ್ದ ಜಿಂಬಾಬ್ವೆ ತಂಡವು ಮತ್ತೆ ಪುಟಿದೆದ್ದು, ಮುಖ್ಯವಾಹಿನಿಗೆ ಬರುವತ್ತ ಮಹತ್ವದ ಹೆಜ್ಜೆ ಇರಿಸಿದೆ. ಆಸ್ಟ್ರೇಲಿಯಾದಂತಹ ಬಲಾಢ್ಯ ತಂಡವನ್ನು ಸೋಲಿಸಿ ಸೂಪರ್ 8ರ ಘಟ್ಟಕ್ಕೆ ಪ್ರವೇಶಿಸಿದೆ. ಭಯೋತ್ಪಾದನೆಯ ಕರಿನೆರಳಿನಲ್ಲಿ ನಲುಗಿದ್ದ ಅಫ್ಗಾನಿಸ್ತಾನದ ಕ್ರಿಕೆಟ್ ತಂಡವೂ ಇವತ್ತು ಘಟಾನುಘಟಿ ದೇಶಗಳಿಗೆ ದಿಟ್ಟ ಉತ್ತರ ನೀಡುವ ಮಟ್ಟಕ್ಕೆ ಬೆಳೆದಿದೆ.
ಇನ್ನೊಂದು ಕಡೆ ನೇಪಾಳ, ಕೆನಡಾ, ಅಮೆರಿಕ, ಇಟಲಿ, ನಮೀಬಿಯಾ ಮತ್ತು ನೆದರ್ಲೆಂಡ್ಸ್‌ನಂತಹ ದೇಶಗಳು ತಮ್ಮ ಸೀಮಿತ ಅನುಭವ ಮತ್ತು ಅವಕಾಶಗಳ ಚೌಕಟ್ಟಿನಲ್ಲಿ ಅಮೋಘವಾದ ಬೆಳವಣಿಗೆ ಸಾಧಿಸಿವೆ. ಈ ಎಲ್ಲ ತಂಡಗಳಲ್ಲಿಯೂ ಭಾರತೀಯ ಆಟಗಾರರಿರುವುದು ವಿಶೇಷ. ಅದರಲ್ಲೂ ಅಮೆರಿಕ ತಂಡದಲ್ಲಿ ಭಾರತದವರೇ ಆದ ಸೌರಭ್ ನೇತ್ರಾವಳ್ಕರ್, ನಾಸ್ತುಷ್ ಕೆಂಜಿಗೆ (ಕನ್ನಡಿಗ), ಮೊನಾಂಕ್ ಪಟೇಲ್, ಮಿಲಿಂದ್ ಕುಮಾರ್ ಅವರಿದ್ದಾರೆ. ಅದೇ ತಂಡದಲ್ಲಿ ಪಾಕ್ ಆಟಗಾರ ಮೊಹಮ್ಮದ್ ಮೊಹಸೀನ್ ಕೂಡ ಇದ್ದರು. ನೆದರ್ಲೆಂಡ್ಸ್ ತಂಡದಲ್ಲಿ ಇರುವ ಆರ್ಯನ್ ದತ್ ಕೂಡ ಭಾರತದವರೇ.
ನೇಪಾಳ ತಂಡವು ಕ್ರಿಕೆಟ್ ಜನಕ ಇಂಗ್ಲೆಂಡ್ ತಂಡದ ಎದುರು ಬರೀ 4 ರನ್‌ಗಳಿಂದ ಸೋತಿತ್ತು. ಕಳೆದೊಂದು ದಶಕದಿಂದ ಒಂದೊಂದೇ ಮೆಟ್ಟಿಲು ಹತ್ತಿ ಬಂದಿರುವ ತಂಡ ಅದು. ಇನ್ನು ಅತಿಯಾದ ರಾಜಕೀಯ ಹಸ್ತಕ್ಷೇಪ, ಆಂತರಿಕ ಸಂಘರ್ಷಗಳಿಂದಾಗಿ ಪಾತಾಳ ಕಂಡಿದ್ದ ವೆಸ್ಟ್ ಇಂಡೀಸ್ ತಂಡ ಈ ಬಾರಿ ಒಂದಿಷ್ಟು ಚೇತರಿಸಿಕೊಂಡಿದೆ. 2016ರಲ್ಲಿ ವಿಂಡೀಸ್ ವಿಶ್ವಕಪ್ ಗೆದ್ದಾಗ ನಾಯಕರಾಗಿದ್ದ ಡ್ಯಾರೆನ್ ಸಮಿ ಈಗ ಮುಖ್ಯ ಕೋಚ್ ಆಗಿದ್ದಾರೆ. ಆಟಗಾರರಲ್ಲಿ ಶಿಸ್ತು, ಸಂಯಮ ಮತ್ತು ವೃತ್ತಿಪರತೆ ಮೂಡಿಸುವಲ್ಲಿ ಒಂದಿಷ್ಟು ಯಶಸ್ಸು ಸಾಧಿಸಿದ್ದಾರೆ. ಇದೆಲ್ಲವೂ ಪಾಕಿಸ್ತಾನ ಮತ್ತು ಬಾಂಗ್ಲಾದಂತಹ ರಾಷ್ಟ್ರಗಳಿಗೆ ಪಾಠವಾಗಬೇಕು. ಆಟದಂಗಳದಲ್ಲಿ ರಾಜಕೀಯದಾಟಕ್ಕೆ ಮಿತಿಮೀರಿ ಆಸ್ಪದ ನೀಡುವ ಎಲ್ಲ ದೇಶಗಳೂ ಎಚ್ಚತ್ತುಕೊಳ್ಳಲು ಇದು ಸಕಾಲ. ವೀರೋಚಿತ ಹೋರಾಟದ ಮೂಲಕವೇ ಮನಸ್ಸುಗಳನ್ನು ಗೆಲ್ಲಬೇಕು. ಕ್ರಿಕೆಟ್ ಜಯಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.