ADVERTISEMENT

ವಿಶ್ಲೇಷಣೆ | ಸಂವಿಧಾನ: ಆಳಲಲ್ಲ, ಬಾಳಲು!

ಎಸ್.ನಟರಾಜ ಬೂದಾಳು
Published 30 ಡಿಸೆಂಬರ್ 2025, 23:20 IST
Last Updated 30 ಡಿಸೆಂಬರ್ 2025, 23:20 IST
<div class="paragraphs"><p>ಸಂವಿಧಾನ.</p></div>

ಸಂವಿಧಾನ.

   

ಬಾಬಾ ಸಾಹೇಬ್‌ ಅಂಬೇಡ್ಕರ್‌ ಕೊಟ್ಟ ಸಂವಿಧಾನ ನಮ್ಮ ಜೀವನವಿಧಾನ ಆಗಬೇಕಿತ್ತು; ಆದರೆ ಆಗಿಲ್ಲ. ನಾವು ಯಾವ್ಯಾವ ಸಂವಿಧಾನಗಳಲ್ಲಿ ಬದುಕುತ್ತಿದ್ದೇವೆ ಎಂಬುದನ್ನು ಈ ನೆಲದ ಶೂದ್ರ, ದಲಿತ ಮತ್ತು ಮಹಿಳಾ ಸಮೂಹಗಳು ಯೋಚಿಸಬೇಕಾದ ಅಗತ್ಯವಿದೆ.

ನಾವು ಒಪ್ಪಿಕೊಂಡಿರುವ ಸಂವಿಧಾನವು ರಾಜಕೀಯ ಸಂವಿಧಾನವೂ ಹೌದು; ಜೀವನ ವಿಧಾನವೂ ಹೌದು. ಸಂವಿಧಾನ ಪೀಠಿಕೆಯ ಮಾತುಗಳನ್ನು ಈಗೀಗ ಶಾಲೆ– ಕಾಲೇಜುಗಳಲ್ಲಿ, ಸಾರ್ವಜನಿಕ ಸಮಾರಂಭಗಳಲ್ಲಿ ಎದೆಯ ಮೇಲೆ ಕೈ ಇಟ್ಟುಕೊಂಡು ಹೇಳುವ ಸಂಪ್ರದಾಯವನ್ನು ಚಾಲ್ತಿಗೆ ತರುತ್ತಿದ್ದೇವೆ. ಆದರೆ, ಅದೊಂದು ಜೀವನವಿಧಾನ ಆಗಿದೆಯೆ? ಅಥವಾ ನಮಗೆ ಕೆಲವು ಹಕ್ಕುಗಳನ್ನು ಒದಗಿಸಿಕೊಡುವ ದಾಖಲೆ ಮಾತ್ರವೆ? ನಮ್ಮ ನಡುವೆ ಇರುವುದು ಇದೊಂದೇ ಸಂವಿಧಾನವೆ? ಈ ಪ್ರಶ್ನೆಗಳನ್ನು ಇದಿರಾಗಲೇಬೇಕಿದೆ. ಯಾಕೆಂದರೆ, ನಮ್ಮ ದಿನನಿತ್ಯದ ಬದುಕನ್ನು ನಿಯಂತ್ರಿಸುತ್ತಿರುವ ಧಾರ್ಮಿಕ–ಸಾಂಸ್ಕೃತಿಕ ಅನಧಿಕೃತ ಸಂವಿಧಾನಗಳೂ ಇವೆ. ಅವುಗಳಲ್ಲಿ ಸಾವಿರಾರು ವರ್ಷ ವಯಸ್ಸಾಗಿರುವ ಕೆಲವು ಸಾಂಸ್ಕೃತಿಕ ಸಂವಿಧಾನಗಳು ನಮ್ಮ ಬದುಕನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿವೆ. ಇನ್ನು ಕೆಲವು ನೂರಾರು ವರ್ಷಗಳಿಂದ ದಿನನಿತ್ಯ ಅಪಾರವಾದ ಕೊಳಕನ್ನು ತಂದು ನಮ್ಮ ಬದುಕಿನ ಅಂಗಳಕ್ಕೆ ಸುರಿಯುವ ಕೆಲಸ ಮಾಡುತ್ತ ಬಂದಿವೆ. ಮತ್ತೆ ಕೆಲವು ಹೀಗೆ ತಂದು ಸುರಿದ ಪರಂಪರೆಯ ಕೊಳಕನ್ನು ತೊಳೆಯುವ ಕೆಲಸ ಮಾಡುತ್ತ ಬಂದು ದಣಿದು ಕೈಚೆಲ್ಲಿವೆ. ಹೀಗೆ ಜಲಗಾರನ ಕೆಲಸ ಮಾಡುತ್ತ ಬಂದ ಸಾಂಸ್ಕೃತಿಕ ಸಂವಿಧಾನಗಳನ್ನು ಆಗಾಗ್ಗೆ ನೆನಪಿಸಿಕೊಳ್ಳುವ ಜಯಂತಿಗಳನ್ನು ಆಚರಿಸುತ್ತಾ ಬಂದಿದ್ದೇವೆ. ಒಳ್ಳೆಯದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತ, ಕೊಳಕನ್ನು ದಿನನಿತ್ಯ ಬದುಕುವ ಕಳ್ಳಾಟವನ್ನು ಅಭ್ಯಾಸ ಮಾಡಿಕೊಂಡಿದ್ದೇವೆ. ಈ ಸಮಸ್ಯೆ ಕೇವಲ ಹಿಂದೂಧರ್ಮ ಎಂದು ಕರೆದು ಕೊಂಡಿರುವ ಆವರಣದ್ದು ಮಾತ್ರವೇ ಅಲ್ಲ. ಅದು ಆಯಾ ಧಾರ್ಮಿಕ/ಸಾಂಸ್ಕೃತಿಕ ಆವರಣಗಳು ನಿರ್ವಹಿಸಿಕೊಳ್ಳಬೇಕಾದ ಸಮಸ್ಯೆ.

ADVERTISEMENT

ನಮ್ಮ ದಿನನಿತ್ಯದ ಬದುಕನ್ನು ನಿರ್ದೇಶಿಸುತ್ತಿರುವ ಸಾಂಸ್ಕೃತಿಕ ಸಂವಿಧಾನಗಳು ಶಕ್ತಿಶಾಲಿಯಾದವು ಗಳು. ಈ ಸಂವಿಧಾನಗಳು ಹೆಚ್ಚೋ, ರಾಜಕೀಯ ಸಂವಿಧಾನ ಹೆಚ್ಚೋ ಎನ್ನುವ ಪ್ರಶ್ನೆಯೇ ಅನಗತ್ಯ. ಯಾಕೆಂದರೆ, ಸಾಂಸ್ಕೃತಿಕ ಸಂವಿಧಾನಗಳಾಗಲೀ ರಾಜಕೀಯ ಸಂವಿಧಾನವಾಗಲೀ ಯಾವುದೂ ಪ್ರಶ್ನಾತೀತ ಪ್ರಮಾಣವಲ್ಲ. ಆದರೆ, ನಮ್ಮನ್ನು ಪ್ರಶ್ನಿಸುವಂತಿಲ್ಲ ಎನ್ನುವ ಸಾಂಸ್ಕೃತಿಕ ಸಂವಿಧಾನಗಳು ಗಂಭೀರ ಸಮಸ್ಯೆ ಒಡ್ಡುತ್ತವೆ. ಈ ದೇಶದ ಬಹುಸಂಖ್ಯಾತರಾದ ಶೂದ್ರ, ದಲಿತ ಮತ್ತು ಮಹಿಳೆಯರ ಮೇಲೆ ಯಾವ ಯಾವ ಧಾರ್ಮಿಕ ಸಂವಿಧಾನಗಳು ಹೇಗೆ ನಿಯಂತ್ರಣ ಹೇರಿವೆ ಮತ್ತು ಎಷ್ಟರಮಟ್ಟಿಗೆ ಸಮಾನವಾಗಿ ಬದುಕಲು ಬಿಟ್ಟಿವೆ ಎನ್ನುವುದನ್ನು ಈ ಸಮೂಹಗಳು ಈಗಲಾದರೂ ಪರಿಶೀಲಿಸಿಕೊಳ್ಳಬೇಕು. ನಮ್ಮ ಬಾಳನ್ನು ನಾವು ಬಾಳಬೇಕು ಎಂದಾದರೆ, ಬೇರೆ ಯಾರೋ ಬಂದು ನಮ್ಮ ಬದುಕನ್ನು ಸರಿಮಾಡುವುದಿಲ್ಲ. ದಿನನಿತ್ಯ ಕೊಳಕನ್ನು ತಂದು ಸುರಿಯುತ್ತಿರುವವರನ್ನು ತರಾಟೆಗೆ ತೆಗೆದುಕೊಂಡು ನಮ್ಮ ನಮ್ಮ ಮನೆಯಂಗಳದ ಕೊಳಕನ್ನು ನಾವೇ ತೊಳೆದುಕೊಂಡು ಬಾಳಬೇಕು.

ನಮ್ಮ ನೆಲದಲ್ಲಿ ಪ್ರಧಾನವಾಗಿ ನಾಲ್ಕು ರೀತಿಯ ಧಾರ್ಮಿಕ–ಸಾಂಸ್ಕೃತಿಕ ಜೀವನವಿಧಾನಗಳಿವೆ. ಒಂದು, ವೇದೋಪನಿಷತ್ತುಗಳು, ಭಗವದ್ಗೀತೆ, ಮನುಸ್ಮೃತಿ ಇತ್ಯಾದಿಗಳನ್ನಾಧರಿಸಿರುವ ವೈದಿಕ ಜೀವನವಿಧಾನ. ಎರಡನೆಯದು: ಬೌದ್ಧ, ನಾಥ, ಸಿದ್ಧ, ಸೂಫಿ, ಶೈವ, ವೀರಶೈವ–ಲಿಂಗಾಯತ, ಆರೂಢ, ಅವಧೂತ, ಅಚಲ, ಜೈನ, ವಿವಿಧ ತತ್ತ್ವಪದಧಾರೆಗಳು ಮುಂತಾದ ಶ್ರಮಣ ಅಥವಾ ಅವೈದಿಕ ಎಂದು ಕರೆಯುವ ಗುಂಪು ಮುಂದಿಡುವ ಜೀವನವಿಧಾನಗಳು. ಮೂರನೆಯದು, ಈ ನೆಲದ ಮೂಲ ಬುಡಕಟ್ಟುಗಳ ಜೀವನಕ್ರಮವನ್ನಾಧರಿಸಿದ, ಕ್ರಮೇಣ ಮೇಲಿನ ಎರಡು ಜೀವನವಿಧಾನಗಳೊಡನೆ ಕೊಳು ಪಡೆ ನಡೆಸಿ ರೂಪಿಸಿಕೊಂಡಿರುವ ಶೂದ್ರ–ದಲಿತ ಜೀವನವಿಧಾನ. ನಾಲ್ಕನೆಯದು, ಅಬ್ರಹಾಮಿಕ್‌ ಧರ್ಮಗಳು ಎಂದು ಕರೆದುಕೊಳ್ಳುವ ಇಸ್ಲಾಂ, ಕ್ರಿಶ್ಚಿಯಾನಿಟಿ ಮತ್ತು ಯಹೂದಿ ಧರ್ಮಗಳ ಜೀವನವಿಧಾನಗಳು.

ಒಂದೊಂದು ಆವರಣಕ್ಕೂ ವಿಶಿಷ್ಟವಾದ ಗುಣ ಲಕ್ಷಣಗಳಿವೆ. ಮೊದಲಿನ ಮೂರು ಗುಂಪುಗಳನ್ನು ಒಂದೇ ಧರ್ಮ ಎಂದು ಕರೆಯುವ ನಡೆ ಇತ್ತೀಚಿನದ್ದು. ಇದರ ಹಿಂದೆ ಗಂಭೀರವಾದ ಸಾಂಸ್ಕೃತಿಕ ರಾಜಕಾರಣವಿದೆ. ಇದರಿಂದಾಗಿ ಇಲ್ಲಿನ ಸಹಜ ಬದುಕಿನ ಬಹುತ್ವವು ನಿರಾಕರಣೆಗೆ ಒಳಗಾಗುತ್ತದೆ. ಅನೇಕ ರೀತಿಯ ತಾರತಮ್ಯಗಳನ್ನು ಹೇರಲು ಅವಕಾಶವಾಗುತ್ತದೆ. ಒಂದು ಜೀವನವಿಧಾನ ಇನ್ನೊಂದರ ಮೇಲೆ ಯಾವುದೇ ರೀತಿಯ ಯಜಮಾನಿಕೆ ಹೇರುವುದು ವಸಾಹತುಶಾಹಿ ನಡವಳಿಕೆ. ಇಂತಹ ಸಾಂಸ್ಕೃತಿಕ ವಸಾಹತುಶಾಹಿಯ ಅಡಿಯಲ್ಲಿ ಈ ದೇಶ ಸಾವಿರಾರು ವರ್ಷಗಳಿಂದ ನಲುಗಿದೆ. ಶ್ರಮಣಧರ್ಮಗಳು ಅಪಮಾನಕ್ಕೀಡಾದ ಸಮೂಹಗಳ ಬಿಡುಗಡೆಗೆ ಆಗಾಗ್ಗೆ ದುಡಿದಿವೆ. ಈ ಮೂರೂ ಜೀವನಸಂವಿಧಾನಗಳ ಗುಣಲಕ್ಷಣ ಗಳನ್ನು ಸ್ಪಷ್ಟವಾಗಿ ಗುರುತಿಸಿಕೊಂಡರೆ, ಅವುಗಳ ಇತಿಮಿತಿಗಳು ಮತ್ತು ಕೇಡುಗಳಿಂದ ಮುಕ್ತ ವಾಗಲು ಸಾಧ್ಯವಾಗುತ್ತದೆ. ಆದರೆ, ಅದು ಅಷ್ಟು ಸರಳ ಸಂಗತಿ ಅಲ್ಲ. ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಒಟ್ಟಾರೆ ಬದುಕಿನಲ್ಲಿ ಇರುವ ನಾನಾ ರೀತಿಯ ತಾರತಮ್ಯಗಳಿಗೆ ಒಪ್ಪಿಗೆಯನ್ನು ಉತ್ಪಾದಿಸಿಕೊಂಡಿರುವ ವಸಾಹತುಶಾಹಿ ಜೀವನ ಸಂವಿಧಾನಗಳು ಅಷ್ಟು ಸುಲಭವಾಗಿ ತಮ್ಮ ಧಾರ್ಮಿಕ ಅಧಿಕಾರವನ್ನು ಬಿಟ್ಟುಕೊಡುವುದಿಲ್ಲ. ಜೊತೆಗೆ, ಅಧಿಕಾರ ಕೇಂದ್ರಗಳ ಜೊತೆಗೆ ಅವು ಅಪವಿತ್ರ ಮೈತ್ರಿಯನ್ನು ಸಾಧಿಸಿಕೊಂಡು ರಾಜಕೀಯ ಅಧಿಕಾರವನ್ನು ದಕ್ಕಿಸಿಕೊಂಡಿವೆ. ಅವೀಗ ಯಜಮಾನ ಸಂಸ್ಕೃತಿಗಳಾಗಿವೆ. ಸಾಂಸ್ಕೃತಿಕ ಯಜಮಾನಿಕೆ ಎನ್ನುವುದೊಂದು ನಿರ್ಲಜ್ಜ ನಡವಳಿಕೆ. ಅದಕ್ಕೆ ಒಪ್ಪಿಗೆಯನ್ನು ಪಡೆದುಕೊಳ್ಳಲಾಗಿದೆ ಎಂದ ಮಾತ್ರಕ್ಕೆ ಅದು ಸಮರ್ಥನೀಯವಲ್ಲ.

ಪ್ರಸ್ತುತ ಎಲ್ಲ ಶೂದ್ರ, ದಲಿತ, ಮಹಿಳೆಯರಿಗೆ ಬಿಡುಗಡೆಯನ್ನು ದೊರಕಿಸಿಕೊಡುವ ಸಾಧ್ಯತೆ ಇರುವುದು ನಮ್ಮ ರಾಜಕೀಯ ಸಂವಿಧಾನಕ್ಕೆ ಮಾತ್ರ. ಎಲ್ಲರ ಬದುಕಿನ ವಿಧಾನಗಳಿಗೆ ಅವಕಾಶ ನೀಡಿಯೂ ಎಲ್ಲರಿಗೂ ಸಮಾನತೆಯನ್ನು ನೀಡುತ್ತದೆ ಎನ್ನುವ ಕಾರಣದಿಂದಲೇ ಅದಕ್ಕೆ ಮಹತ್ವ ದೊರಕಿದೆ. ಹಾಗಾಗಿ, ಎಲ್ಲ ಸಾಂಸ್ಕೃತಿಕ–ಧಾರ್ಮಿಕ ಜೀವನವಿಧಾನಗಳಿಗೆ ಅವಕಾಶ ನೀಡುತ್ತಲೇ, ಸಮಾನತೆಯ ಬದುಕಿಗೆ ಕೊರತೆಯಾಗದ ಹಾಗೆ ಎಲ್ಲರನ್ನೂ ಬಾಳಿಸಿಕೊಂಡು ಬಾಳುವ ಹಕ್ಕು ಬಾಧ್ಯತೆಗಳನ್ನು ಕೊಡುವ, ಅಂಬೇಡ್ಕರ್‌ ನೀಡಿರುವ ಸಂವಿಧಾನವೇ ಎಲ್ಲ ಧಾರ್ಮಿಕ–ಸಾಂಸ್ಕೃತಿಕ ಸಂವಿಧಾನಗಳಿಗಿಂತ ಶ್ರೇಷ್ಠ ಹಾಗೂ ಅಂತಿಮ.

ಜಗತ್ತಿನ ಯಾವ ಧರ್ಮವೂ ಪ್ರಜಾಸತ್ತೆಗಿಂತ ದೊಡ್ಡದಲ್ಲ. ಯಾಕೆಂದರೆ, ಸಕಲ ಜೀವಗಳಿಗೂ ನಿಸರ್ಗ ನೀಡಿರುವ ಹಕ್ಕುಬಾಧ್ಯತೆಗಳನ್ನು ಒದಗಿಸಲು ಸಾಧ್ಯವಿರುವುದು ಪ್ರಜಾಸತ್ತೆಗೆ ಮಾತ್ರ. ಪ್ರಜಾಸತ್ತೆಯ ನಿಜ ಆಶಯಗಳನ್ನು ಯಾವ ಧರ್ಮ ಎಷ್ಟರ ಮಟ್ಟಿಗೆ ಒಳಗೊಳ್ಳುತ್ತದೆಯೋ ಅಷ್ಟರ ಮಟ್ಟಿಗೆ ಮಾತ್ರ ಅದು ಪಾಲಿಸಲು ಯೋಗ್ಯವಾದ ಧರ್ಮವಾಗುತ್ತದೆ. ಇದು ವಿಜ್ಞಾನಕ್ಕೂ ಅನ್ವಯವಾಗುವ ಮಾತು. ಲೋಕದ ಹಿತಕ್ಕೇ ದುಡಿಯುತ್ತದೆ ಎನ್ನುವ ವಿಜ್ಞಾನವೂ ಅಧಿಕಾರ ಕೇಂದ್ರಗಳ ಅಡಿಯಾಳಾಗಿ ಅನೇಕ ವಿಷಯಗಳಲ್ಲಿ ಲೋಕಕಂಟಕವಾಗಿರುವುದನ್ನು ನೋಡಿದ್ದೇವೆ. ಹಾಗಾಗಿ, ಮಾನವ ಸಮಾಜದ ಈವರೆಗಿನ ಅತ್ಯುತ್ತಮ ಆವಿಷ್ಕಾರವೆಂದರೆ ಪ್ರಜಾಸತ್ತೆ ಎನ್ನುವುದು ನನ್ನ ನಂಬಿಕೆ. ಪ್ರಜಾಸತ್ತೆಯು ಒಂದು ರಾಜಕೀಯ ವ್ಯವಸ್ಥೆ ಮಾತ್ರವಲ್ಲ; ಅದೊಂದು ಜೀವನವಿಧಾನ. ಮತ್ತೂ ವಿಶೇಷವೆಂದರೆ, ಪ್ರಜಾಸತ್ತೆಯು ನಿಸರ್ಗದ ಹಾಗೆ ಹೋಗಹೋಗುತ್ತಲೇ ಕಂಡುಕೊಳ್ಳಬೇಕಾದ ಮತ್ತು ನಿರಂತರ ಬದಲಾವಣೆಗೆ ತೆರೆದುಕೊಂಡಿರುವ ಸಂವಿಧಾನ. ಹಾಗಾಗಿ, ಎಲ್ಲರನ್ನೂ ಪೊರೆಯುವ ನಿಸರ್ಗದ ನಡೆಯನ್ನು ಪ್ರಜಾಸತ್ತೆಯು ಅನುಸರಿಸುತ್ತದೆ.

ಕುವೆಂಪು ಅವರ ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ!’ ಮಾತುಗಳು ನಿಸರ್ಗ ಮತ್ತು ಪ್ರಜಾಸತ್ತೆಯನ್ನು ವಿವರಿಸಿಕೊಳ್ಳಲು ಒದಗಿಬರುತ್ತವೆ. ಈ ಮಾತುಗಳು, ಒಂದು ಆಯಾಮದಿಂದ ಪ್ರಜಾಸತ್ತೆಯ ಪೂರ್ವಪೀಠಿಕೆ. ಯಾರನ್ನೂ ಹೊರನೂಕಿ, ಹೊರಗೆ ನಿಲ್ಲಿಸಿ, ತುಳಿದು ಬಾಳುವು ದನ್ನು ನಿಸರ್ಗವೂ ಒಪ್ಪುವುದಿಲ್ಲ; ಪ್ರಜಾಸತ್ತೆಯೂ ಒಪ್ಪುವುದಿಲ್ಲ. ಪ್ರಜಾಸತ್ತೆಯ ಪ್ರಾಥಮಿಕ ನಿಲುವು ಗಳಾಗಿ ಬಹುತ್ವ, ನಿಸರ್ಗ ವಿವೇಕ ಮತ್ತು ಮನುಷ್ಯ ನಿರ್ಮಿತ ಎಲ್ಲ ತಾರತಮ್ಯಗಳನ್ನು ಮೀರಿ ನಡೆಯುವ ಜಾತ್ಯತೀತ ನಿಲುವು– ಇವುಗಳನ್ನು ಅನ್ವಯಿಸಿಕೊಂಡು ಬಾಳುವುದರಿಂದಲೇ ಲೋಕಹಿತ ಎನ್ನುವ ಧರ್ಮ ಮಾತ್ರ ಸಮ್ಯಕ್ ಧರ್ಮವಾಗಿರಲು ಸಾಧ್ಯ.

ಅಂಬೇಡ್ಕರ್‌ ಪ್ರಜಾಪ್ರಭುತ್ವಕ್ಕೆ ಅಗತ್ಯವಾದ ಭೂಮಿಕೆಯನ್ನು ಸಿದ್ಧಪಡಿಸುವ ಮಹತ್ತರ ಉದ್ದೇಶ
ಹೊಂದಿದ್ದವರು. ಅದು ಆಗಬೇಕಾದರೆ ಮೊದಲಿಗೆ ಆಗಬೇಕಾದದ್ದು ಅತ್ಯಂತ ದೀನರ ಮತ್ತು ದಾಸ್ಯದಲ್ಲಿ ಇದ್ದವರ ವಿಮೋಚನೆ. ಅದು ಆಗದೆ ಪ್ರಜಾಪ್ರಭುತ್ವದ ಪ್ರತಿಷ್ಠಾಪನೆ ಅಸಾಧ್ಯ ಎನ್ನುವುದು ಅವರಿಗೆ ಗೊತ್ತಿತ್ತು. ಅಂಬೇಡ್ಕರ್‌ ಪಾಲಿಗೆ ಸ್ವಾತಂತ್ರ್ಯ ಎನ್ನುವುದು ಕೇವಲ ರಾಜಕೀಯ ಪರಿಕಲ್ಪನೆ ಅಲ್ಲ; ಅದು ಎಲ್ಲರ ಸಾಂಸ್ಕೃತಿಕ, ಧಾರ್ಮಿಕ ಜೀತಮುಕ್ತ ಬದುಕು. ಅದು ಸಾಧ್ಯವಿರುವುದು ಪ್ರಜಾಸತ್ತೆ, ಸಂವಿಧಾನದಿಂದ ಮಾತ್ರ. ಬಾಬಾ ಸಾಹೇಬರ ಈ ಸಂವಿಧಾನವನ್ನು ನಾವು ಎಚ್ಚರದಿಂದ ಉಳಿಸಿಕೊಳ್ಳಬೇಕಾಗಿದೆ.

ಎಸ್‌. ನಟರಾಜ ಬೂದಾಳು