ಒಕ್ಕೂಟ ವ್ಯವಸ್ಥೆಯನ್ನು ನೆನಪಿಸುವ ರಾಜ್ಯಗಳನ್ನು ಕೇಂದ್ರ ಸರ್ಕಾರ ಶತ್ರುವಿನಂತೆ ನೋಡುತ್ತಿದೆ. ಕೇಂದ್ರ ಸರ್ಕಾರದ ತೆರಿಗೆ ಪದ್ಧತಿಯು ಸೂತ್ರವಿಲ್ಲದ ಗಾಳಿಪಟದಂತೆ ಆಗಿರುವುದರಿಂದ, ಒಕ್ಕೂಟ ವ್ಯವಸ್ಥೆ ಏದುಸಿರು ಬಿಡುತ್ತಿದೆ. ಆದರೆ, ತೆರಿಗೆ ಅವ್ಯವಸ್ಥೆಯ ಬಗ್ಗೆ ಯಾರೂ ಪ್ರಶ್ನಿಸುತ್ತಿಲ್ಲ. ಎಲ್ಲರೂ ನಿರ್ಲಕ್ಷಿಸಿರುವ ಪ್ರಶ್ನೆಗಳನ್ನು ಯುವಜನ ಕೇಳಬೇಕಾಗಿದೆ.
ಬಹಳ ಹಿಂದೆಯೇ ತೆಲುಗು ದೇಶಂ ಪಕ್ಷದ ನಾಯಕ ಎನ್.ಟಿ. ರಾಮರಾವ್ ಅವರು ಭಾರತವನ್ನು ಆಳುತ್ತಿರುವುದೇ ರಾಜ್ಯಗಳು; ಕೇಂದ್ರ ಕೇವಲ ಒಂದು ಪರಿಕಲ್ಪನೆ ಮಾತ್ರ ಎಂದಿದ್ದರು. ದೇಶದ ನಿಜವಾದ ಅಭಿವೃದ್ಧಿ ಸಾಧ್ಯವಾಗುವುದು ರಾಜ್ಯಗಳಿಗೆ ಹೆಚ್ಚು ಸಂಪನ್ಮೂಲಗಳು ದೊರಕುವಂತಾದರೆ ಮಾತ್ರ ಎನ್ನುವುದು ಅವರ ಮಾತಿನ ಆಶಯ. ಇದು ಸರಿಯಾದ ಗ್ರಹಿಕೆ ಅನ್ನಿಸುತ್ತದೆ. ಹೀಗಾಗಿಯೇ, ಸಂವಿಧಾನದ ತಳಪಾಯವಾದ ಒಕ್ಕೂಟ ವ್ಯವಸ್ಥೆ, ಭಾರತದ ವೈವಿಧ್ಯ, ಇವುಗಳ ಆಂತರ್ಯವನ್ನು ಅರ್ಥಮಾಡಿಕೊಂಡು ಹಣಕಾಸು ಆಯೋಗವು ಕಾರ್ಯ ನಿರ್ವಹಿಸಬೇಕಿರುತ್ತದೆ.
ನಮ್ಮ ಸಂವಿಧಾನವು ಭಾರತವನ್ನು ರಾಜ್ಯಗಳ ಒಕ್ಕೂಟ ಎಂದು ಸ್ಪಷ್ಟಪಡಿಸುತ್ತದೆ. ಸುಪ್ರೀಂ ಕೋರ್ಟ್‌ನ ಪೂರ್ಣಪೀಠ ನೀಡಿರುವ ಸಾಂವಿಧಾನಿಕ ಆದೇಶದಲ್ಲೂ ಭಾರತದ ಒಕ್ಕೂಟ ಸ್ವರೂಪವು ಸಂವಿಧಾನದ ಮೂಲ ರಚನೆಯ ಭಾಗವೆಂದು ಹೇಳಲಾಗಿದೆ. ಇದರ ಭಾಗವಾಗಿ ತೆರಿಗೆ ಸಂಗ್ರಹ ಮಾಡುವ ಮತ್ತು ಶಾಸನಗಳನ್ನು ರೂಪಿಸುವ ಅಧಿಕಾರವನ್ನು ಕೇಂದ್ರಕ್ಕೂ ಹಾಗೂ ರಾಜ್ಯಗಳಿಗೂ ಹಂಚಲಾಗಿದೆ. ಸಂವಿಧಾನದ ಆರ್ಟಿಕಲ್ 246ರ ಅನ್ವಯ ರೂಪಿಸಲಾಗಿರುವ ಶೆಡ್ಯೂಲ್ 7ರಲ್ಲಿ ಕೇಂದ್ರ ಹಾಗೂ ರಾಜ್ಯಗಳ ಪರಮಾಧಿಕಾರ ಇರುವ ಬಾಬತ್ತುಗಳನ್ನು ನಿರ್ದಿಷ್ಟೀಕರಿಸಲಾಗಿದೆ. ಜೊತೆಗೆ, ಕೇಂದ್ರ ಹಾಗೂ ರಾಜ್ಯಗಳು ಸೇರಿ ಶಾಸನಗಳನ್ನು ಮಾಡಬಹುದಾದ ಸಮವರ್ತಿ ಪಟ್ಟಿಯನ್ನು ನೀಡಲಾಗಿದೆ. ಇದರ ಅನುಸಾರ, ಜನರ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಿರುವ ಆಹಾರ, ಆರೋಗ್ಯ, ಶಿಕ್ಷಣ, ಕೃಷಿ, ಉದ್ಯೋಗ, ಭದ್ರತೆಯಂತಹ ಎಲ್ಲಾ ಜವಾಬ್ದಾರಿಗಳು ಮೂಲಭೂತವಾಗಿ ರಾಜ್ಯಗಳ ಜವಾಬ್ದಾರಿಯಾಗಿದೆ. ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಏಕರೂಪತೆ ತರುವ ಮತ್ತು ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುವ ಅಧಿಕಾರ, ದೇಶದ ರಕ್ಷಣೆ, ವಿದೇಶಾಂಗ ಇತ್ಯಾದಿ ಜವಾಬ್ದಾರಿಗಳಿವೆ.
ಸಂವಿಧಾನದ ಆಶಯಕ್ಕೆ ತಕ್ಕಂತೆ ಒಕ್ಕೂಟ ಸ್ವರೂಪವನ್ನು ಸಮತೋಲಿಸುವುದಕ್ಕೆ ಒಂದು ಮಾದರಿ ಎಂದರೆ, ಯುಪಿಎ ಸರ್ಕಾರದಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರು ನೇಮಿಸಿದ್ದ ವೈ.ವಿ. ರೆಡ್ಡಿಯವರ ಅಧ್ಯಕ್ಷತೆಯ 14ನೇ ಹಣಕಾಸು ಆಯೋಗ. ಈ ಆಯೋಗವು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದು ಮತ್ತೊಂದರ ಸ್ವಾಯತ್ತತೆಯನ್ನು ಅತಿಕ್ರಮಿಸದಂತೆ ಎಚ್ಚರ ವಹಿಸಿತ್ತು. ಜನಜೀವನದೊಡನೆ ಬೆರೆತು ರಾಜ್ಯಗಳು ಕಾರ್ಯ ನಿರ್ವಹಿಸಬೇಕಾಗಿರುವುದರಿಂದ ರಾಜ್ಯಗಳ ತೆರಿಗೆ ಪಾಲನ್ನು ಶೇ 32ರಿಂದ ಶೇ 42ಕ್ಕೆ ಏರಿಸಿತ್ತು. ರಾಜ್ಯಗಳಿಗೆ ಯಾವುದೇ ಷರತ್ತುಗಳಿಲ್ಲದೆ ಅನುದಾನವನ್ನು ನೀಡಿ ತಮ್ಮದೇ ಆದ ಯೋಜನೆಗಳನ್ನು ರೂಪಿಸಿಕೊಳ್ಳುವುದಕ್ಕೂ ಅವಕಾಶ ಮಾಡಿಕೊಟ್ಟಿತ್ತು. ಕೇಂದ್ರದ ಯೋಜನೆಗಳಿಗೆ ಅವಕಾಶ ತಗ್ಗಿಸಿ ರಾಜ್ಯಗಳ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಿತಿಗೊಳಿಸಲು ಪ್ರಯತ್ನಿಸಿತ್ತು.
ಒಕ್ಕೂಟ ವ್ಯವಸ್ಥೆಗೆ ಪೂರಕವಾಗಿದ್ದ ಈ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಬೇಕಾದ ಹೊಣೆಗಾರಿಕೆಯು ತದನಂತರ ಪ್ರಧಾನಿಯಾಗಿ ಬಂದ ಮೋದಿಯವರಿಗೆ ಎದುರಾಗುತ್ತದೆ. ಇದು ಅವರಿಗೆ ನುಂಗಲಾರದ ತುತ್ತಾಗಿತ್ತು. ರಾಜ್ಯಗಳ ತೆರಿಗೆ ಪಾಲನ್ನು ಶೇ 42ರಿಂದ ಕೆಳಗೆ ಇಳಿಸುವುದಕ್ಕೆ ವೈ.ವಿ. ರೆಡ್ಡಿಯವರ ಮನವೊಲಿಸುವ ಮೋದಿಯವರ ಪ್ರಯತ್ನ ವಿಫಲವಾಯಿತು. ಹಾಗಾದರೆ ಪ್ರಧಾನಿ ಮೋದಿಯವರಿಗೆ ಒಕ್ಕೂಟ ವ್ಯವಸ್ಥೆ ಉಳಿಯುವುದು ಬೇಕಿರಲಿಲ್ಲವೆ? ಮೋದಿಯವರು ಪಳಗಿದ ಆರ್‌ಎಸ್‌ಎಸ್ ಸಿದ್ಧಾಂತದ ಮೂಲವನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ.
ಆರ್‌ಎಸ್‌ಎಸ್ ಗುರೂಜಿ ಗೋಲ್ವಾಲ್ಕರ್ ಅವರು, ‘ನಮ್ಮ ದೇಶವನ್ನು ರಾಜ್ಯಗಳ ಒಕ್ಕೂಟ’ ಎಂದು ಸಂವಿಧಾನ ರಚನಕಾರರು ಕರೆದಿದ್ದಾರೆ... ಈಗಿನ ಒಕ್ಕೂಟ ರಚನೆಯಲ್ಲಿ ಛಿದ್ರತೆಯ ಬೀಜಗಳು ಅಡಗಿವೆ ಎಂದು ಶಂಕಿಸುತ್ತಾರೆ. (ಉಲ್ಲೇಖ: ಗೋಲ್ವಾಲ್ಕರ್, ಚಿಂತನಗಂಗಾ, ಮೂರನೇ ಮುದ್ರಣ, ಪುಟ 229, ಪ್ರಕಟಣೆ: ಸಾಹಿತ್ಯಸಿಂಧು, ಬೆಂಗಳೂರು) ಹಾಗೂ, ಹೀಗೂ ಹೇಳುತ್ತಾರೆ: ಇದಕ್ಕಾಗಿ ನಮ್ಮ ದೇಶದ ಸಂವಿಧಾನದ ಒಕ್ಕೂಟ ಸ್ವರೂಪದ ಎಲ್ಲ ಮಾತನ್ನು ಆಳವಾಗಿ ಹೂತು ಹಾಕಬೇಕಿದೆ. ಭಾರತದಲ್ಲಿ ‘ಸ್ವಯಂ ಅಧಿಕಾರ’ವುಳ್ಳ ಅಥವಾ ‘ಭಾಗಶಃ ಸ್ವಯಂ ಅಧಿಕಾರ’ವುಳ್ಳ ರಾಜ್ಯಗಳ ಅಸ್ತಿತ್ವವನ್ನೆ ಅಳಿಸಿ ಹಾಕಬೇಕು... ಏಕಾತ್ಮಕ ಸರ್ಕಾರದ ಪದ್ಧತಿಯನ್ನು ಸ್ಥಾಪಿಸುವಂತೆ ಸಂವಿಧಾನವನ್ನು ಪುನಃ ಬರೆದಿಡೋಣ ಎನ್ನುತ್ತಾರೆ. (ಉಲ್ಲೇಖ: ಗೋಲ್ವಾಲ್ಕರ್, ಚಿಂತನಗಂಗಾ, ಪುಟ 474). ಹೀಗೆ ಸೈದ್ಧಾಂತಿಕತೆ, ತಾತ್ವಿಕತೆಗಳಲ್ಲೇ ಭ್ರಷ್ಟವಾಗಿರುವ ಆರ್‌ಎಸ್‌ಎಸ್‌ನಲ್ಲಿ ಮುಳುಗಿ ಎದ್ದು ಪಳಗಿದ ಸೈದ್ಧಾಂತಿಕ ಭ್ರಷ್ಟ ಮೋದಿಯವರು ಒಕ್ಕೂಟ ವ್ಯವಸ್ಥೆಯನ್ನು ಹೇಗೆ ತಾನೆ ಸಹಿಸಿಯಾರು? ಅದಕ್ಕಾಗಿ ಅವರು ಹಣಕಾಸು ಆಯೋಗವು ರಾಜ್ಯಗಳಿಗೆ ನಿಗದಿಪಡಿಸಿದ್ದ ಶೇ 42ರಷ್ಟು ತೆರಿಗೆ ಪಾಲು ತನ್ನಷ್ಟಕ್ಕೆ ತಾನೇ ಕುಸಿದು ಹೋಗುವಂತೆ ಮಾಡಿಬಿಟ್ಟರು. ಅದು ಹೀಗೆ:
ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಕೇಂದ್ರ ಹಾಗೂ ರಾಜ್ಯಗಳು ಸಮಾಲೋಚಿಸಿ ದೇಶದ ಅಭಿವೃದ್ಧಿ ರೂಪಿಸುತ್ತಿದ್ದ ಸ್ವತಂತ್ರ ಯೋಜನಾ ಆಯೋಗವನ್ನು ರದ್ದು ಮಾಡಿ, ಬದಲಿಗೆ ಕೇಂದ್ರದ ಹಣಕಾಸು ಇಲಾಖೆಯ ಉಪ ಇಲಾಖೆಯಂತಿರುವ ‘ನೀತಿ ಆಯೋಗ’ ಸ್ಥಾಪಿಸಿದರು. ಆಮೇಲೆ, ರಾಜ್ಯಗಳೊಡನೆ ಹಂಚಿಕೊಳ್ಳದ ಮೇಲ್ತೆರಿಗೆ ಸೆಸ್ ಮತ್ತು ಸರ್‌ಚಾರ್ಜ್‌ಗಳನ್ನು ನಿರಂತರವಾಗಿ ಹೆಚ್ಚಿಸುತ್ತ ಬಂದರು. ಮೋದಿ ಪೂರ್ವದಲ್ಲಿ ಸೆಸ್ ಮತ್ತು ಸರ್‌ಚಾರ್ಜ್ ಪ್ರಮಾಣ ಶೇ 10ಕ್ಕಿಂತ ಮೇಲೆ ದಾಟಿರಲಿಲ್ಲ. 2022ರ ಡಿಸೆಂಬರ್ 20ರಂದು ರಾಜ್ಯಸಭೆಯಲ್ಲಿ ಜಾನ್ ಬ್ರಿಟ್ವಾಸ್ ಪ್ರಶ್ನೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸೆಸ್ ಮತ್ತು ಸರ್‌ಚಾರ್ಜ್‌ಗಳ ಪಾಲು ಶೇ 28.1 ಇದೆ ಎಂದು ಉತ್ತರಿಸುತ್ತಾರೆ. ಪ್ರಧಾನಿಯವರಿಗೆ ಇಷ್ಟಾದರೂ ಸಮಾಧಾನವಾಗಲಿಲ್ಲ ಎಂದು ಕಾಣುತ್ತದೆ. ರಾಜ್ಯಗಳಿಗೆ ನೀಡುತ್ತಿದ್ದ ಅನುದಾನ ಹಾಗೂ ಷರತ್ತಿನ ಯೋಜನಾ ಪಾಲನ್ನು ದೊಡ್ಡಮಟ್ಟದಲ್ಲಿ ಕಡಿತಗೊಳ್ಳುವಂತೆ ನೋಡಿಕೊಂಡರು. ಹೀಗೆಲ್ಲಾ ಆಗುತ್ತ, 2020–21ನೇ ಸಾಲಿನ ಬಜೆಟ್ಟಿನ ಪರಿಷ್ಕೃತ ಅಂಕಿ–ಅಂಶಗಳ ಪ್ರಕಾರ ರಾಜ್ಯಗಳ ಪಾಲು ಶೇ 28.9ಕ್ಕೆ ಕುಸಿದುಬಿಟ್ಟಿತು.
ಈಗ ಕರ್ನಾಟಕದ ಗತಿಯನ್ನೇ ನೋಡಿ, ಇಡೀ ದೇಶದಲ್ಲೇ ತೆರಿಗೆ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿರುವ ಹಾಗೂ ಜನಸಂಖ್ಯಾ ನಿಯಂತ್ರಣವನ್ನು ಯಶಸ್ವಿಯಾಗಿ ಮಾಡಿರುವ ಕರ್ನಾಟಕಕ್ಕೇನೆ ಈ ಹಿಂದೆ ಇದ್ದ ರಾಜ್ಯದ ತೆರಿಗೆ ಪಾಲು ಶೇ 4.71ರಿಂದ ಶೇ 3.64ಕ್ಕೆ ಇಳಿದಿದೆ. ಇದಿಷ್ಟೇ ಅಲ್ಲ, ನಿರ್ದಿಷ್ಟ ಅನುದಾನದಡಿ ಕರ್ನಾಟಕಕ್ಕೆ ನೀಡಿದ್ದ ₹6,000 ಕೋಟಿ ಅನುದಾನ ಬಿಡುಗಡೆಯಾಗಿಲ್ಲ. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ ₹5,300 ಕೋಟಿ ಬಿಡುಗಡೆಯಾಗಿಲ್ಲ. ಇಷ್ಟಲ್ಲದೆ, ಕರ್ನಾಟಕಕ್ಕೆ ಆಗಿದ್ದ ಅನ್ಯಾಯವನ್ನು ಸರಿದೂಗಿಸಲು 15ನೇ ಹಣಕಾಸು ಆಯೋಗ ನಿಗದಿಪಡಿಸಿದ್ದ ವಿಶೇಷ ಅನುದಾನ ₹5,496 ಕೋಟಿಯನ್ನು ಕೇಂದ್ರ ಸರ್ಕಾರ ಕೊಡಲೇ ಇಲ್ಲ. ಒಕ್ಕೂಟ ವ್ಯವಸ್ಥೆಯನ್ನು ನೆನಪಿಸುವ ರಾಜ್ಯಗಳನ್ನು ತನ್ನ ಶತ್ರುಗಳೇನೊ ಎಂಬಂತೆ ಕೇಂದ್ರ ಸರ್ಕಾರ ನೋಡುತ್ತಿರುವಂತಿದೆ.
ಹೀಗೆ ಭಾರತದ ತೆರಿಗೆ ಪದ್ಧತಿಯು ಸೂತ್ರವಿಲ್ಲದ ಗಾಳಿಪಟದಂತೆ ಯದ್ವಾತದ್ವಾ ಆಡುತ್ತ, ಇದರಿಂದಾಗಿಯೂ ನಮ್ಮ ಒಕ್ಕೂಟ ವ್ಯವಸ್ಥೆ ಉಸಿರಾಡಲು ಕಷ್ಟಪಡುತ್ತಿದ್ದರೂ ಯಾಕೆ ಯಾರೂ ಬೆಚ್ಚುತ್ತಿಲ್ಲ? ಬಹುತೇಕ ಮಾಧ್ಯಮಗಳಿಗೆ ದನಿ ಇಲ್ಲ, ಗದ್ದಲ ಮಾತ್ರವಿದೆ. ಆದರೆ ಜನಪ್ರತಿನಿಧಿಗಳೂ, ಸಮಾಜಮುಖಿ ಜನಾಂದೋಲನಗಳೂ ಗಂಭೀರವಾಗಿ ಚರ್ಚಿಸುತ್ತಿಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ಪ್ರಜ್ಞಾವಂತರು ಇದನ್ನೆಲ್ಲಾ ಮಾತಾಡುತ್ತಿದ್ದರೂ ಅದು ಕೇಳಿಸುತ್ತಿಲ್ಲ, ಸಮುದಾಯವನ್ನು ಮುಟ್ಟುತ್ತಿಲ್ಲ. ಈ ಎಲ್ಲವೂ ಈ ಎಲ್ಲರೂ ಜಡಗೊಂಡಿವೆ. ಚಿಗುರುತ್ತಿಲ್ಲ.
ಹೀಗಿರುವಾಗ ಭಾರತಕ್ಕೆ ದಿಕ್ಕು ಕಾಣಿಸುವವರು ಯಾರು? ಕ್ರಿಯಾಶೀಲರಾಗಬೇಕಾಗಿರುವವರು ಯಾರು? ಯಾರು ನಾಳೆ ಬದುಕಿ ಬಾಳಬೇಕು ಎಂದುಕೊಂಡಿರುವವರೊ ಅವರು, ಅಂದರೆ ವಿದ್ಯಾರ್ಥಿ ಯುವಜನತೆ, ಅವರು ನಾಳೆ ಬದುಕಿ ಬಾಳಬೇಕು ಎಂಬ ಕಾರಣಕ್ಕಾಗಿಯೇ, ಈಗಲೇ ಸಂಘಟಿತರಾಗಿ ಮಾತಾಡಬೇಕಾಗಿದೆ.
ಅವರು ಕೇಳಬೇಕಾಗಿದೆ, ಬಹುಶಃ ಇವು, ಇಂಥವು: 1. ಮೋದಿಯವರು ಈ ಹಿಂದೆ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಗಳ ಪಾಲನ್ನು ಶೇ 50ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿದ್ದರು. ನಾವೀಗ ಇದನ್ನೇ ಮೋದಿಯವರಿಗೆ ಕೇಳಬೇಕಾಗಿದೆ. 2. ಸೆಸ್ ಮತ್ತು ಸರ್‌ಚಾರ್ಜ್‌ಗಳನ್ನು ರಾಜ್ಯಗಳು ಮತ್ತು ಕೇಂದ್ರ ಎರಡೂ ಹಂಚಿಕೊಳ್ಳುವಂತಾಗಬೇಕು. 3. ಜನಜೀವನದೊಡನೆ ಸಂಬಂಧವಿರುವ ಪರೋಕ್ಷ ತೆರಿಗೆಯನ್ನು ಕಮ್ಮಿ ಮಾಡುತ್ತ, ನೇರ ತೆರಿಗೆಯನ್ನು ಹೆಚ್ಚು ಮಾಡಬೇಕು. ಆದಾಯ ಹೆಚ್ಚಿದಂತೆ ತೆರಿಗೆಯು ಆದಾಯದ ಪ್ರಮಾಣಕ್ಕೆ ಅನುಗುಣವಾಗಿ ಹೆಚ್ಚಾಗುತ್ತಾ ಹೋಗಬೇಕು. 4. ಕಾರ್ಪೊರೇಟ್ ತೆರಿಗೆಯನ್ನು ಈ ಹಿಂದೆ ಇದ್ದಂತೆಯೇ ಶೇ 30ಕ್ಕೆ ಹೆಚ್ಚಿಸಬೇಕು ಹಾಗೂ ಕಾರ್ಪೊರೇಟ್ ಸಂಸ್ಥೆಗಳಿಗೆ ನೀಡುತ್ತಿರುವ ಯದ್ವಾತದ್ವಾ ರಿಯಾಯಿತಿಗಳಿಗೆ ಕಡಿವಾಣ ಹಾಕಬೇಕು. 5. ಈಗ ಇರುವ ‘ನೀತಿ ಆಯೋಗ’ವನ್ನು ರದ್ದುಪಡಿಸಿ ಮತ್ತೆ ಮೊದಲಿದ್ದಂತೆಯೇ ಯೋಜನಾ ಆಯೋಗವನ್ನು ಮರು ಸ್ಥಾಪಿಸಬೇಕು, ಹೀಗೆ ಇಂಥವು.
ಜೊತೆಗೆ, ನಾವು ಮರೆಯಬಾರದು. ರಾಜ್ಯವೊಂದು ತನ್ನ ಹಿಂದುಳಿದ ಪ್ರದೇಶಗಳಿಗೆ ಒಂದಿಷ್ಟು ಹೆಚ್ಚು ಖರ್ಚು ಮಾಡುವಂತೆಯೇ ದೇಶವೊಂದು ಕೂಡ ತನ್ನ ಹಿಂದುಳಿದ ರಾಜ್ಯಗಳಿಗೆ ಒಂದಿಷ್ಟು ಹೆಚ್ಚು ಖರ್ಚು ಮಾಡಬೇಕಾಗಿರುತ್ತದೆ. ಹಾಗಾಗಿ, ರಾಜ್ಯಗಳು ಸೊರಗದಂತೆ ಕೇಂದ್ರಕ್ಕೂ ನ್ಯಾಯಯುತವಾದ ಪಾಲು ಇರಬೇಕು. ಈ ಮಾನವೀಯ ಹೊಣೆಗಾರಿಕೆ ಬೇಕಾಗಿದೆ, ಎಲ್ಲರಿಗೂ. ಜೊತೆಗೆ ನಾವು ಇದನ್ನು ಮರೆಯಲೇಬಾರದು. ಸ್ವಾತಂತ್ರ್ಯ ಹೋರಾಟಗಾರರ ಕನಸಾಗಿದ್ದ ‘ಫೆಡರೇಷನ್ ಆಫ್ ಸ್ಟೇಟ್ಸ್’ ಕಡೆಗೆ, ಅರೆಬರೆ ಒಕ್ಕೂಟದಿಂದ ಪೂರ್ಣ ಒಕ್ಕೂಟದ ಕಡೆಗೆ ನಾವು ಚಲಿಸಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.