
ಕ್ರಿಕೆಟ್ ಮೂಲಕ ಬದುಕು ಕಟ್ಟಿಕೊಳ್ಳುವ ಬಡ ಹಾಗೂ ಮಧ್ಯಮ ವರ್ಗದ ತರುಣರಿಗೆ ‘ಐಪಿಎಲ್’ ಲಾಟರಿಯಂತೆ ಕಾಣಿಸುತ್ತದೆ. ಒಮ್ಮೆಗೇ ಕೋಟ್ಯಂತರ ರೂಪಾಯಿ ದೊರಕಿಸಿಕೊಡುವ ಅಂಗಳವಾಗಿದೆ. ಆದರೆ, ಹಣವಷ್ಟೇ ಆಟಗಾರನಿಗೆ ಸಾಕೆ? ದೇಶದ ಕ್ರಿಕೆಟ್ ಪರಂಪರೆಯ ಭಾಗವಾಗುವುದು ಬೇಡವೆ?
ಕ್ರಿಕೆಟ್ ಅಂಗಳಕ್ಕಿಳಿಯುವ ಬಹುತೇಕ ಆಟಗಾರರಿಗೆ ‘ಟೆಸ್ಟ್ ಕ್ಯಾಪ್’ ಎಂಬುದು ಕನಸಿನ ಕಿರೀಟವಿದ್ದಂತೆ. ಅದರಲ್ಲೂ ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಿ, ಈ ‘ಉಣ್ಣೆಯ ಟೋಪಿ’ ಧರಿಸುವುದು ಜೀವಮಾನದ ಸಾಧನೆಯೇ ಹೌದು. ಕ್ರಿಕೆಟ್ ಆಟವನ್ನು ಆರಾಧಿಸುವ ಭಾರತದಲ್ಲಿ ಇದುವರೆಗೆ ಟೆಸ್ಟ್ ಕ್ಯಾಪ್ ಧರಿಸಲು ಸಾಧ್ಯವಾಗಿರುವುದು 318 ಜನರಿಗೆ ಮಾತ್ರ!
1932ರಲ್ಲಿ ಮೊದಲ ಟೆಸ್ಟ್ ಆಡಿದ ಕರ್ನಲ್ ಸಿ.ಕೆ. ನಾಯ್ಡು ನಾಯಕತ್ವದ ಭಾರತ ತಂಡದ ಅಮರಸಿಂಗ್ ಅವರಿಂದ ಶುರುವಾಗಿ, ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಪದಾರ್ಪಣೆ ಮಾಡಿದ ಅನ್ಷುಲ್ ಕಂಬೋಜ್ ಅವರವರೆಗೂ ಈ ಪಟ್ಟಿ ಬೆಳೆಯುತ್ತದೆ. ಟೆಸ್ಟ್ ಕ್ಯಾಪ್ ಧರಿಸುವ ಕಠಿಣ ಹಾದಿಯನ್ನೂ ಈ ಯಾದಿ ಪ್ರತಿಬಿಂಬಿಸುತ್ತದೆ. ದೊಡ್ಡ ಕ್ರಿಕೆಟಿಗರಾಗುವ ಕನಸು ಕಾಣುತ್ತ ಮೈದಾನಕ್ಕೆ ಬರುವ ಎಷ್ಟು ಜನರಿಗೆ ಈ ಅವಕಾಶ ಸಿಗಲು ಸಾಧ್ಯ?
19 ವರ್ಷಗಳ ಹಿಂದೆ ಭಾರತದಲ್ಲಿ ಜನ್ಮತಳೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಿಂದಾಗಿ ಈಗ ಕ್ಯಾಪ್ ಧರಿಸದ ತಲೆಗಳಿಗೂ ಕೋಟಿ ಕೋಟಿ ಬೆಲೆ ಬಂದಿದೆ. ಈಚೆಗೆ ನಡೆದ 2026ರ ಐಪಿಎಲ್ ಟೂರ್ನಿಯ ಬಿಡ್ ಪ್ರಕ್ರಿಯೆಯ ಪಟ್ಟಿಯನ್ನೇ ತೆಗೆದು ನೋಡಿ; 33 ಅನ್‌ಕ್ಯಾಪ್ಡ್ (ರಾಷ್ಟ್ರೀಯ ತಂಡವನ್ನು ಇನ್ನೂ ಪ್ರತಿನಿಧಿಸದ) ಆಟಗಾರರು ದೊಡ್ಡ ಮೊತ್ತ ಪಡೆದು ಬೇರೆ ಬೇರೆ ತಂಡಗಳಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಇದರಲ್ಲಿ ‘ಝೆನ್ ಜೀ’ ಪ್ರತಿಭೆಗಳದ್ದೇ (1997ರ ನಂತರದಲ್ಲಿ 2012ಕ್ಕೆ ಮೊದಲು ಜನಿಸಿದವರು) ಮೇಲುಗೈ. ಕಾಶ್ಮೀರದಿಂದ ಕೇರಳದವರೆಗಿನ ಪ್ರತಿಭೆಗಳು ಇದರಲ್ಲಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಮತ್ತು ಮಧ್ಯಮವರ್ಗದ ಮಕ್ಕಳು ಕೋಟ್ಯಧಿಪತಿಗಳಾಗಿ ರೂಪುಗೊಳ್ಳುತ್ತಿದ್ದಾರೆ.
ಈ ಬಾರಿ ತಲಾ ₹14.20 ಕೋಟಿ ಗಳಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾದ ಉತ್ತರಪ್ರದೇಶದ ಪ್ರಶಾಂತ್ ವೀರ್ ಮತ್ತು ರಾಜಸ್ಥಾನದ ಕಾರ್ತಿಕ್ ಶರ್ಮಾ ಅವರೇ ಇದಕ್ಕೆ ಉತ್ತಮ ನಿದರ್ಶನ.
ಅಮೇಥಿಯ 20 ವರ್ಷದ ಹುಡುಗ ಪ್ರಶಾಂತ್ ವೀರ್ ಅವರ ತಂದೆ ಶಿಕ್ಷಕರು. ಅವರಿಗೆ ಸಿಗುತ್ತಿದ್ದದ್ದು ತಿಂಗಳಿಗೆ ₹12 ಸಾವಿರ ಸಂಬಳವಷ್ಟೇ. ಪ್ರಶಾಂತ್ ಅವರ ಅಜ್ಜನ ಪಿಂಚಣಿ ಹಣ ಮತ್ತು ಅಪ್ಪನ ಅಲ್ಪ ಆದಾಯದಲ್ಲಿ ಐವರು ಸದಸ್ಯರ ಸಂಸಾರ ನಡೆಯಬೇಕು. ಪ್ರಶಾಂತ್ ಕ್ರಿಕೆಟ್ ಆಸಕ್ತಿಯನ್ನು ಗಮನಿಸಿದ ಅಜ್ಜ ತಮ್ಮ ಪಿಂಚಣಿಯಲ್ಲಿಯೇ ಒಂದಿಷ್ಟು ಸಹಾಯ ಮಾಡುತ್ತಿದ್ದರು. ಆದರೆ, ಅಜ್ಜ ತೀರಿಹೋದಾಗ ಪ್ರಶಾಂತ್ ಆಟ ಅಂತ್ಯವಾಗುವ ಆತಂಕ ಎದುರಾಯಿತು. ಉತ್ತರಪ್ರದೇಶದಲ್ಲಿರುವ ಕ್ರಿಕೆಟ್ ತರಬೇತಿ ಹಾಸ್ಟೆಲ್ ಸೇರಲು ಎರಡೂವರೆ ಸಾವಿರ ರೂಪಾಯಿಯೂ 14 ವರ್ಷದ ಪ್ರಶಾಂತ್ ಬಳಿ ಇರಲಿಲ್ಲ. ಆಗ ಪಾನ್ ಬೀಡಾ ಅಂಗಡಿ ನಡೆಸುತ್ತಿದ್ದ ಗೆಳೆಯನೊಬ್ಬ ಪ್ರಶಾಂತ್ ಕೈಹಿಡಿದ. ತನ್ನ ಪರಿಚಯದ ಕೋಚ್ ಬಳಿ ಸೇರಿಸಿದ.
ಪ್ರಶಾಂತ್ ಎಡಗೈ ಆಲ್‌ರೌಂಡರ್ ಆಗಿ ರೂಪುಗೊಂಡರು. ರವೀಂದ್ರ ಜಡೇಜ ಅವರ ಆಟದ ಪಡಿಯಚ್ಚಿನಂತೆ ಬೆಳೆದ ಪ್ರಶಾಂತ್, ಈಚೆಗೆ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಏಳು ಪಂದ್ಯಗಳಲ್ಲಿ 169 ರನ್ ಗಳಿಸಿದರು. 6 ವಿಕೆಟ್‌ಗಳನ್ನೂ ಪಡೆದರು. ಯುಪಿ ಟಿ20 ಪ್ರೀಮಿಯರ್ ಲೀಗ್ನಲ್ಲಿ ನೋಯ್ಡಾ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಿ 320 ರನ್ ಕಲೆಹಾಕಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ರವೀಂದ್ರ ಜಡೇಜ ಅವರನ್ನು ಈಚೆಗೆ ಬಿಡುಗಡೆ ಮಾಡಲಾಗಿತ್ತು. ಅವರ ಸ್ಥಾನ ತುಂಬಬಲ್ಲ ಲಕ್ಷಣಗಳನ್ನು ಪ್ರಶಾಂತ್ ಅವರಲ್ಲಿ ಕಂಡಿರುವ ಚೆನ್ನೈ ದುಬಾರಿ ಬೆಲೆ ತೆತ್ತು ಖರೀದಿಸಿತು. ಪ್ರತಿವರ್ಷವೂ ಅನುಭವಿ ಆಟಗಾರರನ್ನು ಖರೀದಿಸಿ ‘ಡ್ಯಾಡೀಸ್ ಆರ್ಮಿ’ ಎಂದು ಕರೆಸಿಕೊಳ್ಳುತ್ತಿದ್ದ ಚೆನ್ನೈ ತಂಡ ಈ ಸಲ ಚಿಗುರುಮೀಸೆ ಹುಡುಗರಿಗೆ ಆದ್ಯತೆ ನೀಡಿದೆ.
ರಾಜಸ್ಥಾನದ ಭರತಪುರದ ಹುಡುಗ ಕಾರ್ತಿಕ್ ಶರ್ಮಾ ವಿಕೆಟ್‌ಕೀಪರ್–ಬ್ಯಾಟರ್. ಅವರನ್ನು ಕ್ರಿಕೆಟ್ ಆಟಗಾರನನ್ನಾಗಿ ಬೆಳೆಸಲು ತಂದೆ ಮನೋಜ್ ಶರ್ಮಾ ಮತ್ತು ತಾಯಿ ರಾಧಾ ಪಟ್ಟ ಕಷ್ಟಗಳು ಒಂದೆರಡಲ್ಲ. ಪಿತ್ರಾರ್ಜಿತ ಸಣ್ಣ ನಿವೇಶನ, ಮನೆಯಲ್ಲಿದ್ದ ಒಡವೆಗಳನ್ನೆಲ್ಲ ಮಾರಿ ಕಾರ್ತಿಕ್‌ಗೆ ತರಬೇತಿ ಕೊಡಿಸಿದರು. ಟೂರ್ನಿಗಳಿಗೆ ಕರೆದುಕೊಂಡು ಹೋಗಲೂ ಸಾಲ ಮಾಡುತ್ತಿದ್ದರು. ದಾರಿ ಬದಿಯ ಶೆಲ್ಟರ್‌ನಲ್ಲಿ ಮಲಗಿ, ಉಪವಾಸವಿದ್ದು ಕಳೆದ ರಾತ್ರಿಗಳೂ ಹಲವು. ಈ ಕಷ್ಟಗಳ ನಡುವೆಯೂ ಅಪಾರ ಶ್ರದ್ಧೆಯಿಂದ ಕ್ರಿಕೆಟ್ ಕಲಿತ ಕಾರ್ತಿಕ್, 19ನೇ ವಯಸ್ಸಿಗೇ ರಣಜಿ ತಂಡದಲ್ಲಿ ಸ್ಥಾನ ಪಡೆದಿದ್ದು ದೊಡ್ಡ ಸಾಧನೆಯೇ ಸರಿ. ಇದೀಗ ದಿಗ್ಗಜ ಮಹೇಂದ್ರಸಿಂಗ್ ಧೋನಿಯೊಂದಿಗೆ ಚೆನ್ನೈ ತಂಡದಲ್ಲಿ ಆಡುವ ಸುಯೋಗ ಲಭಿಸಿದೆ. ಅಂದಹಾಗೆ, ಪ್ರಶಾಂತ್ ಮತ್ತು ಕಾರ್ತಿಕ್ ಅವರಿಗೆ ಐಪಿಎಲ್ ಬಿಡ್‌ನಲ್ಲಿ ₹30 ಲಕ್ಷ ಮೂಲಬೆಲೆ ನಿಗದಿಯಾಗಿತ್ತು. ಪ್ರಮುಖ ತಂಡಗಳ ನಡುವೆ ಬಿಡ್ ಪೈಪೋಟಿ ಏರ್ಪಟ್ಟು ದೊಡ್ಡ ಬೆಲೆ ಲಭಿಸಿದೆ.
‘ಹಾಲಿ ಚಾಂಪಿಯನ್’ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೂ ಈ ಬಾರಿ ಇಂತಹದೊಂದು ಮಹತ್ವದ ಹೆಜ್ಜೆ ಇಟ್ಟಿತು. 24 ವರ್ಷದ ಎಡಗೈ ಮಧ್ಯಮವೇಗಿ ಮಂಗೇಶ್ ಯಾದವ್ ಅವರನ್ನು ₹5.2 ಕೋಟಿಗೆ ಸೆಳೆದುಕೊಂಡಿತು. ಯಾರ್ಕರ್ ಎಸೆತಗಳನ್ನು ಹಾಕುವಲ್ಲಿ ಮಂಗೇಶ್ ಚಾಣಾಕ್ಷರಾಗಿದ್ದಾರೆ. ಮಧ್ಯಪ್ರದೇಶ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅವರು ಒಟ್ಟು 21 ಓವರ್ ಬೌಲಿಂಗ್ ಮಾಡಿ 14 ವಿಕೆಟ್ ಗಳಿಸಿದ್ದರು. ಆರ್‌ಸಿಬಿ ತನ್ನ ಬೌಲಿಂಗ್ ವಿಭಾಗವನ್ನು ಬಲಿಷ್ಠ ಮಾಡುವ ಇರಾದೆಯೊಂದಿಗೆ ದೊಡ್ಡ ಮೊತ್ತ ಕೊಟ್ಟು ಖರೀದಿಸಿದೆ. ಆದರೆ, ಆರ್‌ಸಿಬಿ ಈ ಬಾರಿಯೂ ಕರ್ನಾಟಕದ ಪ್ರತಿಭೆಗಳತ್ತ ಒಲವು ತೋರಿಲ್ಲವೆಂಬುದೂ ದಿಟ.
ಕಳೆದ ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮಿಂಚಿದ್ದ ಕುಡ್ಲದ ಹುಡುಗ ಯಶ್ ರಾಜ್ ಪೂಂಜಾ ಐಪಿಎಲ್‌ನಲ್ಲಿ ಆಡಲಿದ್ದಾರೆ. ಲೆಗ್‌ಸ್ಪಿನ್– ಆಲ್‌ರೌಂಡರ್ ಆಗಿರುವ ಪೂಂಜಾ ಅವರನ್ನು ರಾಜಸ್ಥಾನ ರಾಯಲ್ಸ್ ಮೂಲಬೆಲೆಗೆ ಸೆಳೆದುಕೊಂಡಿದೆ. ಹೋದ ವರ್ಷ 14 ವರ್ಷದ ವೈಭವ್ ಸೂರ್ಯವಂಶಿಯನ್ನು ಸೇರಿಸಿಕೊಂಡು ಸುದ್ದಿ ಮಾಡಿದ್ದ ರಾಜಸ್ಥಾನ, ಈ ಬಾರಿ 19ರ ಹರೆಯದ ಯಶ್‌ರಾಜ್‌ಗೆ ಮಣೆ ಹಾಕಿದೆ. ಬಾಲ್ಯದಲ್ಲಿ ವೇಗದ ಬೌಲರ್ ಆಗಲು ಪ್ರಯತ್ನಿಸಿದ್ದ ಯಶ್ ರಾಜ್ ಶೈಲಿ ಅಷ್ಟೇನೂ ಸರಿಯಿರಲಿಲ್ಲ. ಆದ್ದರಿಂದ ಸ್ಪಿನ್ನರ್ ಆಗಿ ಪರಿವರ್ತನೆಗೊಂಡರು. ಕಳೆದ ಸಲ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಫೈನಲ್ ತಲಪಿದ್ದ ಹುಬ್ಬಳ್ಳಿ ಟೈಗರ್ಸ್ ತಂಡದಲ್ಲಿ ಆಡಿದ್ದ ಯಶ್, 23 ವಿಕೆಟ್ ಕಬಳಿಸಿದ್ದರು. ಕೋಚ್ ಯರೇಗೌಡ, ಆರ್. ವಿನಯಕುಮಾರ್ ಮತ್ತು ಮನ್ಸೂರ್ ಅಲಿ ಖಾನ್ ಅವರ ಶೋಧ ಈ ಪ್ರತಿಭೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ₹8.2 ಕೋಟಿ ಗಳಿಸಿ ಸೇರ್ಪಡೆಯಾದ ಕಾಶ್ಮೀರದ ಅಕೀಬ್ ನಬಿ ಧಾರ್ ಅವರದ್ದು ಇನ್ನೊಂದು ಬಗೆಯ ಕತೆ. ತಂದೆ ಗುಲಾಂ ನಬಿ ಶಾಲಾ ಶಿಕ್ಷಕರು. ಭಯೋತ್ಪಾದನೆ ಮತ್ತಿತರ ಕಾನೂನುಬಾಹಿರ ಚಟುವಟಿಕೆಗಳಿಂದ ಮಕ್ಕಳನ್ನು ರಕ್ಷಿಸಿಕೊಂಡು ಬೆಳಸುವುದು ಪಾಲಕರಿಗೆ ದೊಡ್ಡ ಸವಾಲು. ಮಗ ಕ್ರಿಕೆಟಿಗನಾಗಿ ಉತ್ತಮ ಹೆಸರು ಮಾಡಲಿ ಎಂಬ ಆಸೆ ತಂದೆಯದ್ದಾಗಿತ್ತು. ಅದಕ್ಕೆ ತಕ್ಕಂತೆ ಬಲಗೈ ವೇಗದ ಬೌಲರ್ ಆಗಿ ಹೆಸರು ಮಾಡಿದ ಅಕೀಬ್, 29ನೇ ವಯಸ್ಸಿನಲ್ಲಿ ಐಪಿಎಲ್ ಆಡಲು ಸಿದ್ಧರಾಗಿದ್ದಾರೆ. ಇದುವರೆಗೆ ಅವರಿಗೆ ಭಾರತ ತಂಡದಲ್ಲಿ ಆಡುವ ಅವಕಾಶ ಲಭಿಸಿಲ್ಲ. ಆ ನಿರಾಸೆ ಮಾಯವಾಗಲು ಐಪಿಎಲ್ ಆಯ್ಕೆ ಕಾರಣವಾಗಿದೆ.
ಈ ಬಾರಿಯ ಐಪಿಎಲ್ ಬಿಡ್‌ನಲ್ಲಿ ಕೋಟ್ಯಧಿಪತಿಗಳಾಗಿ ಹೊರಹೊಮ್ಮಿರುವ ಮುಕುಲ್ ಚೌಧರಿ, ಅಕ್ಷತ್ ರಘುವಂಶಿ, ನಮನ್ ತಿವಾರಿ, ಸಲೀಲ್ ಅರೋರಾ, ತೇಜಸ್ವಿ ಸಿಂಗ್ ಅವರೂ ತಮ್ಮ ಪ್ರತಿಭೆಯನ್ನು ಜಗತ್ತಿಗೆ ತೋರುವ ಉತ್ಸಾಹದಲ್ಲಿದ್ದಾರೆ. ಆ ಮೂಲಕ ರಾಷ್ಟ್ರೀಯ ತಂಡಕ್ಕೂ ಲಗ್ಗೆ ಹಾಕುವ ಹುಮ್ಮಸ್ಸಿನಲ್ಲಿದ್ದಾರೆ. ಈ ಹಿಂದೆ ಹೈದರಾಬಾದಿನ ರಿಕ್ಷಾ ಚಾಲಕನ ಮಗ ಮೊಹಮ್ಮದ್ ಸಿರಾಜ್ ಅವರು ಐಪಿಎಲ್‌ಗೆ ₹2.4 ಕೋಟಿ ಪಡೆದು ಆಯ್ಕೆಯಾದರು. ನಂತರ ಅವರು ಭಾರತ ಟೆಸ್ಟ್ ಕ್ರಿಕೆಟ್ ತಂಡದ ಪ್ರಮುಖ ಬೌಲರ್ ಆಗಿ ರೂಪುಗೊಂಡಿದ್ದಾರೆ. ಎಲ್ಲ ಮಾದರಿಗಳಲ್ಲಿಯೂ ಛಾಪು ಮೂಡಿಸಿದ್ದಾರೆ. ಯುವ ಆಟಗಾರರಿಗೆ ಅವರು ಮಾದರಿ.
ಎಳೆಯ ವಯಸ್ಸಿನ ಹುಡುಗರು ಕೋಟ್ಯಂತರ ಹಣ ಪಡೆಯುತ್ತಿರುವುದು ಒಂದು ರೀತಿಯಲ್ಲಿ ಸಂತಸ ಮೂಡಿಸಿದರೂ, ಇನ್ನೊಂದು ರೀತಿಯಲ್ಲಿ ಆತಂಕವನ್ನೂ ಮೂಡಿಸುತ್ತದೆ. ಪರಿಪಕ್ವತೆ ಮತ್ತು ಅನುಭವವಿಲ್ಲದ ವಯಸ್ಸಿನಲ್ಲಿ ಇಷ್ಟೊಂದು ಹಣ ಅವರ ದಾರಿ ತಪ್ಪಿಸಬಹುದೆಂಬ ಆತಂಕ ಕಾಡುವುದು ಸಹಜ. ಆದರೆ, ತಾವು ಕ್ರಿಕೆಟ್ ಆಟವನ್ನು ಆಯ್ಕೆ ಮಾಡಿಕೊಂಡಾಗ ಹಣಗಳಿಕೆಯ ಜೊತೆಗೆ ವಿಶ್ವದರ್ಜೆಯ ಆಟಗಾರನಾಗುವ ಕನಸು ಕಂಡಿದ್ದನ್ನು ಮರೆಯಬಾರದು. ಏಕೆಂದರೆ; ಅಂತಹ ಹಲವು ವಿಶ್ವದರ್ಜೆಯ ದಿಗ್ಗಜರಿಂದಾಗಿಯೇ ಇವತ್ತು ದೇಶದ ಕ್ರಿಕೆಟ್ ಶ್ರೀಮಂತವಾಗಿದೆ. ಆ ಪರಂಪರೆಯನ್ನು ಮುಂದುವರಿಸುವ ಹೊಣೆಯು ತಮ್ಮ ಮೇಲಿದೆ ಎಂಬುದನ್ನು ಅರಿತು ‘ಅನ್‌ಕ್ಯಾಪ್ಡ್’ ನಿಂದ ‘ಕ್ಯಾಪ್ಡ್’ ಆಟಗಾರರಾಗುವತ್ತ ಚಿತ್ತ ಹರಿಸಬೇಕಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.