ADVERTISEMENT

ವಿಶ್ಲೇಷಣೆ | ನಾಯಕತ್ವದ ಪ್ರಯೋಗಶಾಲೆ ಐಪಿಎಲ್

‘ಗೋಲ್ಡ್ ಮತ್ತು ಬೋಲ್ಡ್‌’ ಪೀಳಿಗೆಗಳಿಂದ ಕ್ರಿಕೆಟ್‌ಗೆ ನವತಾರುಣ್ಯ

ಗಿರೀಶದೊಡ್ಡಮನಿ
Published 25 ಮಾರ್ಚ್ 2025, 0:30 IST
Last Updated 25 ಮಾರ್ಚ್ 2025, 0:30 IST
   

ಮೇರುನಟ ರಾಜ್‌ಕುಮಾರ್ ಅವರು ಹೇಳುತ್ತಿದ್ದ ‘ಅಭಿಮಾನಿಗಳೇ ನಮ್ಮ ದೇವ್ರು’ ಎಂಬ ಮಾತನ್ನು ಎರಡು ದಿನಗಳ ಹಿಂದಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟೀದಾರ್ ಯೂಟ್ಯೂಬ್‌ನಲ್ಲಿ ಪುನರುಚ್ಚರಿಸಿದ್ದರು. ಅದಕ್ಕೆ ತಕ್ಕಂತೆ, ತಾವು ನಾಯಕತ್ವ ವಹಿಸಿದ ಮೊದಲ ಪಂದ್ಯದಲ್ಲಿಯೇ ಅಭಿಮಾನಿಗಳಿಗೆ ಗೆಲುವಿನ ಸಿಹಿ ಹಂಚಿದ್ದಾರೆ.

ಅದರೊಂದಿಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಬೆಂಗಳೂರು ತಂಡವು ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಅದರ ತವರಿನಲ್ಲಿಯೇ ಮಣಿಸಿತು. ನಾಯಕತ್ವದ ಮೊದಲ ಪಂದ್ಯವಾದ ಕಾರಣಕ್ಕೆ ಆರಂಭದಲ್ಲಿ ರಜತ್ ತುಸು ಒತ್ತಡದಲ್ಲಿ ಇದ್ದಂತೆ ಕಂಡರು. ನಂತರ ನಿಧಾನವಾಗಿ ನಿರಾಳರಾದರು. ಬ್ಯಾಟಿಂಗ್‌ನಲ್ಲಿಯೂ ರಜತ್ ಮಿಂಚಿದರು. ಪಂದ್ಯದ ಪ್ರತಿ ಹಂತದಲ್ಲಿಯೂ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಅವರು ಮಾರ್ಗದರ್ಶನ ನೀಡಿದ್ದು ಇದಕ್ಕೆ ನೆರವಾಯಿತು. ಫೀಲ್ಡಿಂಗ್ ಸಂಯೋಜನೆ ಮತ್ತು ಬೌಲರ್‌ಗಳ ನಿಯೋಜನೆಯಲ್ಲಿ ಕೊಹ್ಲಿ ಅವರು ರಜತ್‌ಗೆ ನೆರವಾದರು.

ಹೀಗೆ, ಕಡಿಮೆ ಅನುಭವ ಇರುವ ಯುವ ಆಟಗಾರನನ್ನು ‘ನಾಯಕ’ನನ್ನಾಗಿ ರೂಪಿಸುವ ಪ್ರಕ್ರಿಯೆ ಆರ್‌ಸಿಬಿಯಲ್ಲಿ ಆರಂಭವಾಗಿದೆ. 2008ರಿಂದ ಇಲ್ಲಿಯವರೆಗೂ ತಂಡದ ಸಾರಥ್ಯವನ್ನು ರಾಹುಲ್ ದ್ರಾವಿಡ್, ಇಂಗ್ಲೆಂಡ್‌ನ ಕೆವಿನ್ ಪೀಟರ್ಸನ್, ಅನಿಲ್ ಕುಂಬ್ಳೆ, ನ್ಯೂಜಿಲೆಂಡ್‌ನ ಡೇನಿಯಲ್ ವೆಟೋರಿ, ವಿರಾಟ್ ಮತ್ತು ದಕ್ಷಿಣ ಆಫ್ರಿಕಾದ ಫಾಫ್ ಡುಪ್ಲೆಸಿ ಅವರಂತಹ ಖ್ಯಾತನಾಮರು ವಹಿಸಿದ್ದರು. ಐಪಿಎಲ್‌ನಲ್ಲಿ ಬರೀ 28 ಪಂದ್ಯಗಳನ್ನು ಆಡಿರುವ ಬ್ಯಾಟರ್‌ ರಜತ್‌ ಅವರಿಗೆ ಈಗ ಪಟ್ಟ ಕಟ್ಟಲಾಗಿದೆ. 18 ವರ್ಷಗಳಿಂದ ಐಪಿಎಲ್ ಟ್ರೋಫಿ ಗೆಲ್ಲುವ ಆರ್‌ಸಿಬಿ ಕನಸು ಈ ಬಾರಿ ನನಸಾದರೆ ರಜತ್‌ ಕೂಡ ತಾರೆಯಾಗಿ ಮೆರೆಯುವುದು ಖಚಿತ.

ADVERTISEMENT

ಯುವ ನಾಯಕತ್ವವನ್ನು ಪ್ರೋತ್ಸಾಹಿಸುವ ಇಂತಹ ಪ್ರಯತ್ನವು ಆರ್‌ಸಿಬಿಗಷ್ಟೇ ಸೀಮಿತವಾಗಿಲ್ಲ. ಐಪಿಎಲ್ ಟೂರ್ನಿಯ ಬಹುತೇಕ ತಂಡಗಳಲ್ಲಿ ಕಂಡುಬರುತ್ತಿದೆ. ಇಂತಹದ್ದೊಂದು ಪ್ರಯತ್ನವು ಸದ್ಯದ ಅಗತ್ಯವೂ ಆಗಿದೆ. ಏಕೆಂದರೆ, ಈ ಟೂರ್ನಿ ಆರಂಭವಾದಾಗಿನಿಂದಲೂ ಆಡುತ್ತಿರುವ ವಿರಾಟ್, ರೋಹಿತ್ ಶರ್ಮಾ, ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜ, ಆರ್‌. ಅಶ್ವಿನ್ ಅವರು ಕೆಲವು ವರ್ಷಗಳ ನಂತರ ವಿದಾಯ ಹೇಳಬಹುದು. ಅವರ ನಿರ್ಗಮನದಿಂದ ತಂಡದಲ್ಲಿ ಉಂಟಾಗುವ ನಿರ್ವಾತದಿಂದ ಅಭಿಮಾನಿಗಳ ಸಂಖ್ಯಾಬಲ ಕಡಿಮೆ ಆಗುವುದನ್ನು ತಡೆಯಲು ಮತ್ತು ‘ಬ್ರ್ಯಾಂಡ್‌ ಮೌಲ್ಯ’ ಉಳಿಸಿಕೊಳ್ಳಲು ಫ್ರಾಂಚೈಸಿಗಳು ಕಂಡುಕೊಂಡಿರುವ ಪರಿಹಾರ ಸೂತ್ರ ಇದು. ಅನುಭವಿ ಮತ್ತು ಖ್ಯಾತನಾಮ ಆಟಗಾರರು ತಂಡದಲ್ಲಿ ಇರುವಾಗಲೇ ಯುವನಾಯಕ ರನ್ನು ಮುಂಚೂಣಿಗೆ ತರಲಾಗುತ್ತಿದೆ. ಹೊಸ ನಾಯಕರು ತಮ್ಮ ಸ್ಥಾನ ಉಳಿಸಿಕೊಳ್ಳಲು ಪೂರ್ಣ ಸಾಮರ್ಥ್ಯದಿಂದ ಆಡುತ್ತಾರೆ. ಇನ್ನೊಂದೆಡೆ, ಈ ಪೈಪೋಟಿಯಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹಿರಿಯ ಆಟಗಾರರೂ ತಮ್ಮ ಅನುಭವವನ್ನು ಪಣಕ್ಕೊಡ್ಡುತ್ತಾರೆ.

ಈ ಪೈಪೋಟಿಯನ್ನು ಕೋಲ್ಕತ್ತ ನೈಟ್ ರೈಡರ್ಸ್‌ ತಂಡದ ಮಾಲೀಕ ಮತ್ತು ಬಾಲಿವುಡ್ ತಾರೆ ಶಾರುಕ್ ಖಾನ್ ಅವರು ‘ಗೋಲ್ಡ್‌ ಮತ್ತು ಬೋಲ್ಡ್‌ ಜನರೇಷನ್‌ಗಳ ಸ್ಪರ್ಧೆ’ ಎಂದು ಟೂರ್ನಿಯ ಉದ್ಘಾಟನಾ ಕಾರ್ಯಕ್ರಮ ದಲ್ಲಿ ಹೇಳಿದ್ದು ಅರ್ಥಪೂರ್ಣ. ಅವರ ಪ್ರಕಾರ, ಗೋಲ್ಡ್‌ ಜನರೇಷನ್ ಎಂದರೆ ವಿರಾಟ್, ರೋಹಿತ್, ಧೋನಿ, ಕೆ.ಎಲ್.ರಾಹುಲ್ ಅವರ ಪೀಳಿಗೆಯ ಆಟಗಾರರು. ಬೋಲ್ಡ್ ಎಂದರೆ ರಿಂಕು ಸಿಂಗ್, ಅಭಿಷೇಕ್ ಶರ್ಮಾ, ರಜತ್ ಪಾಟೀದಾರ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್... ತಲೆಮಾರಿನ ಆಟಗಾರರು. ಶಾರುಕ್ ಮಾತಿಗೆ ಪ್ರತಿಕ್ರಿಯಿಸಿದ ವಿರಾಟ್, ‘ಹೊಸ ಪೀಳಿಗೆಯ ಹುಡುಗರು ದಿಟ್ಟತನದಿಂದ ಆಡುತ್ತಿದ್ದಾರೆ. ಬಲವಾದ ಪೈಪೋಟಿ ಒಡ್ಡುತ್ತಿದ್ದಾರೆ. ಆದರೆ, ಅನುಭವಿ ಆಟಗಾರರೂ ಕಣದಲ್ಲಿದ್ದಾರೆ. ಹೊಸಬರ ಪೈಪೋಟಿಯ ನಡುವೆಯೂ ತಮ್ಮ ಹೆಜ್ಜೆಗುರುತು ಮೂಡಿಸಲು
ಸಿದ್ಧರಾಗಿದ್ದಾರೆ. ಈ ಸ್ಪರ್ಧೆಯು ಐಪಿಎಲ್ ಅಭಿಮಾನಿ ಬಳಗಕ್ಕೆ ಭವಿಷ್ಯದಲ್ಲಿ ಹಲವಾರು ಅವಿಸ್ಮರಣೀಯ ನೆನಪುಗಳನ್ನು ಕಟ್ಟಿಕೊಡಲಿದೆ’ ಎಂದರು.

ಈ ಸಲ ಕೋಲ್ಕತ್ತ ನೈಟ್ ರೈಡರ್ಸ್ (ಅಜಿಂಕ್ಯ ರಹಾನೆ) ಮತ್ತು ಸನ್‌ರೈಸರ್ಸ್ ಹೈದರಾಬಾದ್ (ಪ್ಯಾಟ್ ಕಮಿನ್ಸ್) ಬಿಟ್ಟರೆ ಉಳಿದೆಲ್ಲ ತಂಡಗಳೂ ಹೆಚ್ಚೇನೂ ಅನುಭವ ಹೊಂದಿಲ್ಲದ ನಾಯಕರಿಗೇ ಮಣೆ ಹಾಕಿವೆ. ಅದರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅನುಭವಿ ಕೆ.ಎಲ್.ರಾಹುಲ್ ಅವರಿದ್ದರೂ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರಿಗೆ ಅವಕಾಶ ನೀಡಿದೆ. ರಾಹುಲ್ ಈ ಹಿಂದೆ ಪಂಜಾಬ್ ಕಿಂಗ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳನ್ನು ಮುನ್ನಡೆಸಿದವರು. ಅದೇ ತಂಡದಲ್ಲಿರುವ ಫಾಫ್ ಡುಪ್ಲೆಸಿ ಅವರನ್ನು ಉಪನಾಯಕರನ್ನಾಗಿ ಮಾಡಲಾಗಿದೆ. ಇನ್ನಷ್ಟೇ ಅಕ್ಷರ್ ಅವರ ನಾಯಕತ್ವದ ಪರೀಕ್ಷೆಯಾಗಬೇಕು.

ಇಂತಹ ಪ್ರಯೋಗವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಶುರು ಮಾಡಿತು. 2008ರಿಂದ 2023ರವರೆಗೆ ಧೋನಿ ನಾಯಕರಾಗಿ 235 ಪಂದ್ಯಗಳನ್ನು ಆಡಿದ್ದಾರೆ. ಅವರ ಅವಧಿಯಲ್ಲಿಯೇ ತಂಡವು ಐದು ಸಲ ಚಾಂಪಿಯನ್ ಕೂಡ ಆಗಿದೆ. ಅವರ ಅನುಪಸ್ಥಿತಿಯಲ್ಲಿ ಸುರೇಶ್ ರೈನಾ 6 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದರು. ಧೋನಿ ಮೊದಲ ಬಾರಿಗೆ ನಾಯಕತ್ವದಿಂದ ದೂರ ಸರಿದಿದ್ದು 2022ರಲ್ಲಿ. ಆಗ ಮುಂದಾಳತ್ವ ವಹಿಸಿದ ರವೀಂದ್ರ ಜಡೇಜ ವಿಫಲ ರಾದರು. ಅದೇ ಟೂರ್ನಿಯ ಮಧ್ಯದಲ್ಲಿಯೇ ಮತ್ತೆ ಧೋನಿ ನಾಯಕತ್ವಕ್ಕೆ ಮರಳಿದರು. ಆದರೆ, ಹೋದ ವರ್ಷದ ಟೂರ್ನಿಯ ಆರಂಭದಲ್ಲೇ ಯುವ ಆಟಗಾರ ಋತುರಾಜ್ ಗಾಯಕವಾಡ ಅವರಿಗೆ ನಾಯಕನ ಪಟ್ಟ ನೀಡಲಾಯಿತು. ಈ ವರ್ಷ ತಂಡಕ್ಕೆ ಅನುಭವಿ ಮತ್ತು
ತಮಿಳುನಾಡಿನವರೇ ಆದ ಅಶ್ವಿನ್ ಸೇರ್ಪಡೆಯಾದಾಗ ಋತುರಾಜ್‌ ಅವರನ್ನು ನಾಯಕತ್ವದಿಂದ ಇಳಿಸಿ, ಅಶ್ವಿನ್‌ಗೆ ಅವಕಾಶ ನೀಡಬಹುದು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಋತುರಾಜ್‌ ಅವರನ್ನೇ
ಮುಂದುವರಿಸಲಾಯಿತು.

ಹೋದ ವರ್ಷ ಮುಂಬೈ ಇಂಡಿಯನ್ಸ್ ತಂಡವೂ ಇಂತಹದೇ ಪ್ರಯೋಗ ಮಾಡಿತ್ತು. 2022ರಲ್ಲಿ ಗುಜರಾತ್ ಟೈಟನ್ಸ್ ತಂಡಕ್ಕೆ ನಾಯಕರಾಗಿ ಟ್ರೋಫಿ ಗೆದ್ದಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್‌ ತಂಡವು ಸೆಳೆದುಕೊಂಡಿತು. ತಂಡವು ಐದು ಸಲ ಚಾಂಪಿಯನ್ ಆದಾಗ ನಾಯಕರಾಗಿದ್ದ ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ನಾಯಕರಾದರು. ಇದರಿಂದ ರೋಹಿತ್ ಅಭಿಮಾನಿಗಳು ಕುಪಿತಗೊಂಡರು. ಮುಂಬೈ ಇಂಡಿಯನ್ಸ್‌ ತಂಡದ ಪಂದ್ಯಗಳು ನಡೆದಾಗ ಪ್ರೇಕ್ಷಕರು ಹಾರ್ದಿಕ್ ಅವರನ್ನು ನಿಂದಿಸಿದರು. ರೋಹಿತ್ ಮತ್ತು ಹಾರ್ದಿಕ್ ಅಭಿಮಾನಿ ಬಣಗಳ ನಡುವೆ ಸಾಮಾಜಿಕ ಜಾಲತಾಣ
ಗಳಲ್ಲಿ ‘ಸಂಘರ್ಷ’ ನಡೆಯಿತು. ಆದರೆ ಮುಂಬೈ ಇಂಡಿಯನ್ಸ್‌ ತಂಡ ತನ್ನ ಪಟ್ಟು ಸಡಿಲಿಸಲಿಲ್ಲ. ಇದರ ನಂತರ ರೋಹಿತ್ ನಾಯಕತ್ವದ ಭಾರತ ತಂಡವು ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ವಿಜಯ ಸಾಧಿಸಿತು. ಆದರೆ, ಅವರು ಐಪಿಎಲ್‌ನಲ್ಲಿ ಹಾರ್ದಿಕ್ ನಾಯಕತ್ವದಲ್ಲಿ ಕಣಕ್ಕಿಳಿಯುವರು!

ಈ ಬಾರಿ ಪಂಜಾಬ್ ಕಿಂಗ್ಸ್ ತಂಡವು ಶ್ರೇಯಸ್ ಅಯ್ಯರ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡವು ರಿಷಭ್ ಪಂತ್ ಅವರನ್ನು ನಾಯಕರನ್ನಾಗಿ ನೇಮಕ ಮಾಡಿಕೊಂಡಿವೆ. ಶ್ರೇಯಸ್ ಹೋದ ವರ್ಷದ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ್ದರು. ಪಂತ್, ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕತ್ವ ವಹಿಸಿದ್ದರು. ಒಂದಂತೂ ನಿಜ. ಐಪಿಎಲ್‌ನಲ್ಲಿ ನಾಯಕತ್ವ ನಿರ್ವಹಣೆ ತುಸು ಜಟಿಲವಾದದ್ದು. ಆಟದ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಮನರಂಜನೆಗಾಗಿ ಮತ್ತು ಪ್ರಾಯೋಜಕರ ಜಾಹೀರಾತು ಗಳಿಗಾಗಿ ಹಾಡು, ನೃತ್ಯ, ಅಭಿನಯವನ್ನೂ ಕಲಿಯಬೇಕು. ಜೊತೆಗೆ ತಾವು ಪ್ರತಿನಿಧಿಸುವ ತಂಡದ ರಾಜ್ಯಭಾಷೆಯನ್ನು ತಕ್ಕಮಟ್ಟಿಗಾದರೂ ಕಲಿಯಬೇಕು. ಈ ಎಲ್ಲ ಸವಾಲುಗಳ ನಡುವೆಯೇ ನವಪೀಳಿಗೆಯ ನಾಯಕರು ‘ಗೋಲ್ಡ್‌ ಜನರೇಷನ್‌’ ಆಟಗಾರರಿಂದ ಭವಿಷ್ಯದ ಕ್ರಿಕೆಟ್‌ನ ‘ಬೇಟನ್’ ಪಡೆಯಲು ಸಿದ್ಧರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.