ADVERTISEMENT

ವಿಶ್ಲೇಷಣೆ | ರಾಜ್ಯಪಾಲ: ಕತ್ತಿ ಇಲ್ಲದ ರಾಜ

ದಿನೇಶ್ ಅಮಿನ್ ಮಟ್ಟು
Published 23 ಜನವರಿ 2026, 23:30 IST
Last Updated 23 ಜನವರಿ 2026, 23:30 IST
   
ಮೇಲ್ನೋಟಕ್ಕೆ ಶಕ್ತಿಶಾಲಿಯಾಗಿ ಕಾಣಿಸುವ ರಾಜ್ಯಪಾಲರ ಸ್ಥಾನ ಅತ್ಯಂತ ಅಸುರಕ್ಷಿತವೂ ಹೌದು. ಈ ಹುದ್ದೆಯ ಅಗತ್ಯ ಮತ್ತು ಅದರ ಸ್ಥಾನ–ಮಾನದ ಚರ್ಚೆಗೆ ಕೆಲವು ರಾಜ್ಯಪಾಲರೇ ಅವಕಾಶ ಕಲ್ಪಿಸಿದ್ದಾರೆ. ಈ ಆಲಂಕಾರಿಕ ಹುದ್ದೆಯನ್ನು ಬಲಪಡಿಸುವ ಬಗ್ಗೆ, ಇಲ್ಲವೇ ಲೋಕ ಭವನವನ್ನು ಮುಚ್ಚುವ ಬಗ್ಗೆ ರಾಜಕೀಯ ಪಕ್ಷಗಳು ನಿರ್ಧರಿಸಲು ಇದು ಸಕಾಲ.

ರಾಜ್ಯಪಾಲರಷ್ಟು ಶೋಷಣೆಗೀಡಾದ ಸಾಂವಿಧಾನಿಕ ಹುದ್ದೆ ಮತ್ತೊಂದಿಲ್ಲ. ರಾಜ್ಯಪಾಲರದ್ದು ಒಂದು ರೀತಿಯಲ್ಲಿ ಒರೆಯಲ್ಲಿ ಕತ್ತಿ ಇಲ್ಲದೆ ತಲೆಗೆ ಕಿರೀಟ ತೊಟ್ಟ ಅರಸನ ಕತೆ. ಸಂವಿಧಾನದ ಪಾಲನೆ, ರಕ್ಷಣೆ ಹಾಗೂ ಸಮರ್ಥನೆಯ ಪ್ರಮಾಣವಚನದೊಂದಿಗೆ ಅಧಿಕಾರ ಸ್ವೀಕರಿಸುವ ರಾಜ್ಯಪಾಲರು, ಏಕಕಾಲಕ್ಕೆ ರಾಜ್ಯದಲ್ಲಿ ಸಾಂವಿಧಾನಿಕ ಮುಖ್ಯಸ್ಥರು ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳೂ ಆಗಿರುತ್ತಾರೆ. ಇಂತಹ ದ್ವಿಪಾತ್ರವೇ ಹಲವಾರು ಬಾರಿ ಈ ಹುದ್ದೆಯನ್ನು ವಿವಾದದ ಸುಳಿಗೆ ಸಿಕ್ಕಿಸಿದೆ.

ರಾಜ್ಯಪಾಲರು ಇಚ್ಛಿಸುವವರೆಗೆ ಮಾತ್ರ ಮುಖ್ಯಮಂತ್ರಿ ಅಧಿಕಾರದಲ್ಲಿರಬಹುದು ಎನ್ನುತ್ತದೆ ಸಂವಿಧಾನದ 164(1)ನೇ ಪರಿಚ‍್ಛೇದ. ರಾಜ್ಯದ ಆಡಳಿತ ಅಧಿಕೃತವಾಗಿ ನಡೆಯುವುದೆಲ್ಲವೂ ರಾಜ್ಯಪಾಲರ ಹೆಸರಿನಲ್ಲಿ. ಅವರ ಅಂಕಿತ ಇಲ್ಲದೆ ಯಾವ ಮಸೂದೆಯೂ ಕಾನೂನಿನ ರೂಪ ಪಡೆಯುವ ಹಾಗಿಲ್ಲ. ರಾಜ್ಯಪಾಲರೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಕೊಂಡಿ... ಹೀಗೆ ಹೇಳುತ್ತಾ ಹೋದರೆ ರಾಜ್ಯಪಾಲರದು ಶಕ್ತಿಶಾಲಿ ಹುದ್ದೆ ಅನಿಸುವುದು ಸಹಜವೇ. ಆದರೆ, ರಾಜ್ಯಪಾಲರಷ್ಟು ದುರ್ಬಲ ಮತ್ತು ಕಳಂಕಿತ ಹುದ್ದೆ ಇನ್ನೊಂದಿಲ್ಲ.

ರಾಜ್ಯಪಾಲರಿಗೆ ಒಬ್ಬ ಸಾಮಾನ್ಯ ಸರ್ಕಾರಿ ನೌಕರನಿಗೆ ಇರುವ ಸೇವಾಭದ್ರತೆ ಇಲ್ಲವೇ ಸ್ವಾತಂತ್ರ್ಯ ಇಲ್ಲ. ಕೇಂದ್ರದಲ್ಲಿರುವ ಆಡಳಿತಾರೂಢ ಪಕ್ಷ ತನ್ನ ಮರ್ಜಿಗೆ ತಕ್ಕಂತೆ ರಾಜ್ಯಪಾಲರ ನೇಮಕಾತಿ ಮಾಡಬಹುದು, ಇಲ್ಲವೇ ಕಿತ್ತುಹಾಕಬಹುದು. ಈ ಅಭದ್ರತೆಯ ಕಾರಣದಿಂದಾಗಿಯೇ ಪಕ್ಷಾತೀತವಾಗಿ ಕೇಂದ್ರದ ಆಡಳಿತಾರೂಢ ಪಕ್ಷಗಳು ತಮ್ಮ ರಾಜಕೀಯ ಅಜೆಂಡಾಗಳಿಗೆ ಅನುಗುಣವಾಗಿ ರಾಜ್ಯಪಾಲರನ್ನು ಸೂತ್ರದ ಗೊಂಬೆಗಳಂತೆ ದುರ್ಬಳಕೆ ಮಾಡುತ್ತಾ ಬಂದಿವೆ. ಸ್ವಾತಂತ್ರ್ಯಾನಂತರದ ಮೊದಲ ಮೂವತ್ತು ವರ್ಷ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಕಾರಣ, ಲೋಕ ಭವನದ ದುರುಪಯೋಗಕ್ಕೆ ಚಾಲನೆ ನೀಡಿದ್ದು ಕಾಂಗ್ರೆಸ್ ಎನ್ನುವುದು ನಿರ್ವಿವಾದ. ಆದರೆ, ಕೇರಳದಲ್ಲಿ ಇ.ಎಂ.ಎಸ್. ನಂಬೂದಿರಿಪಾಡ್ ನೇತೃತ್ವದ ಕಮ್ಯುನಿಸ್ಟ್ ಸರ್ಕಾರವನ್ನು ಪ್ರಧಾನಿ ಜವಾಹರಲಾಲ್‌ ನೆಹರೂ ಕಿತ್ತುಹಾಕಿದ ನಂತರ 1967ರವರೆಗೆ ಲೋಕ ಭವನದ ರಾಜಕೀಯ ದುರುಪಯೋಗದ ಪ್ರಕರಣಗಳು ನಡೆದಿರಲಿಲ್ಲ ಎನ್ನುವುದೂ ನಿಜ. 1977ರಲ್ಲಿ ಅಧಿಕಾರ ಹಿಡಿದ ಜನತಾ ಸರ್ಕಾರ– ಕರ್ನಾಟಕ, ಪಂಜಾಬ್ ಮತ್ತು ಆಂಧ್ರಪ್ರದೇಶದ ರಾಜ್ಯಪಾಲರನ್ನು ಮನೆಗೆ ಕಳಿಸಿತ್ತು. ವಿ.ಪಿ. ಸಿಂಗ್ ಪ್ರಧಾನಿಯಾದಾಗ ಕಾಂಗ್ರೆಸ್ ಕಾಲದಲ್ಲಿ ನೇಮಕಗೊಂಡಿದ್ದ 18 ರಾಜ್ಯಪಾಲರನ್ನು ವಜಾಮಾಡಿತ್ತು. 1998ರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಧಿಕಾರ ವಹಿಸಿಕೊಂಡಾಗ, ಹಿಂದಿನ ಸರ್ಕಾರ ನೇಮಿಸಿದ್ದ ಆರು ರಾಜ್ಯಪಾಲರು ರಾಜೀನಾಮೆ ನೀಡಬೇಕಾಯಿತು. ಅವರಲ್ಲೊಬ್ಬರು, 2 ತಿಂಗಳ ಹಿಂದೆಯಷ್ಟೇ ಗೋವಾ ರಾಜ್ಯಪಾಲರಾಗಿ ನೇಮಕಗೊಂಡಿದ್ದ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಟಿ.ಆರ್. ಸತೀಶ್ ಚಂದ್ರನ್.

ADVERTISEMENT

ಎಲ್ಲ ಸಂದರ್ಭಗಳಲ್ಲಿಯೂ ರಾಜ್ಯಪಾಲರನ್ನು ಕೇಂದ್ರ ಸರ್ಕಾರವೇ ತಾಳಕ್ಕೆ ತಕ್ಕಂತೆ ಕುಣಿಸುತ್ತಾ ಬಂದಿದೆ ಎಂದು ಹೇಳಲಾಗುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಹುದ್ದೆಯ ಅಭದ್ರತೆ ಮತ್ತು ಅದರಿಂದ ಹುಟ್ಟಿಕೊಂಡ ಕೀಳರಿಮೆಯ ಕಾರಣದಿಂದಲೋ ಏನೋ ಕೆಲವು ರಾಜ್ಯಪಾಲರು ಅತಿಕ್ರಿಯಾಶೀಲ ರಾಗಲು ಹೋಗಿ ವಿವಾದದಲ್ಲಿ ಸಿಕ್ಕಿಹಾಕಿಕೊಳ‍್ಳುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ, ಕರ್ನಾಟಕದ ರಾಜ್ಯಪಾಲರಾಗಿದ್ದ (2009–2014) ಹಂಸರಾಜ ಭಾರದ್ವಾಜ. ಇವರು ಆಗಿನ ವಿರೋಧಪಕ್ಷದ ನಾಯಕರಿಗಿಂತ ಹೆಚ್ಚು ಆಕ್ರಮಣಕಾರಿಯಾಗಿ ಬಿ.ಎಸ್. ಯಡಿಯೂರಪ್ಪ ಸರ್ಕಾರದ ವಿರುದ್ಧ ಮುಗಿಬೀಳುತ್ತಿದ್ದರು. 2011ರಲ್ಲಿ ವಿಧಾನಸಭೆಯನ್ನು ಅಮಾನತಿನಲ್ಲಿರಿಸಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂಬ ಭಾರದ್ವಾಜರ ಶಿಫಾರಸನ್ನು ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವೇ ತಿರಸ್ಕರಿಸಿತ್ತು.

ಒಂದು ಕಾಲದಲ್ಲಿ ಲೋಕ ಭವನಗಳು ಸುದ್ದಿ ಆಗುತ್ತಿದ್ದುದು ಕೇಂದ್ರ ಸರ್ಕಾರಗಳು ಸಂವಿಧಾನದ 356ನೇ ಪರಿಚ‍್ಛೇದದಡಿ ರಾಜ್ಯ ಸರ್ಕಾರವನ್ನು ವಜಾಮಾಡಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುತ್ತಿದ್ದ ಪ್ರಕರಣಗಳಲ್ಲಿ. ಎಸ್.ಆರ್. ಬೊಮ್ಮಾಯಿ ಮತ್ತು ಕೇಂದ್ರ ಸರ್ಕಾರದ ನಡುವಿನ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ನಂತರ ಈ ಪರಿಚ್ಛೇದದ ದುರುಪಯೋಗ ಹೆಚ್ಚುಕಡಿಮೆ ನಿಂತಿದೆ. ಆದರೆ, ವಿರೋಧಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಕ್ಕೆ ಕಿರುಕುಳ ನೀಡಲು ರಾಜ್ಯಪಾಲರನ್ನು ದುರ್ಬಳಕೆ ಮಾಡುವ ಕೇಂದ್ರ ಸರ್ಕಾರದ ಪ್ರಯತ್ನಗಳು ನಿಂತಿಲ್ಲ. ಇದಕ್ಕೆ ತಮಿಳುನಾಡು ಮತ್ತು ಕೇರಳ ರಾಜ್ಯಗಳ ರಾಜ್ಯಪಾಲರ ನಡವಳಿಕೆಗಳೇ ಸಾಕ್ಷಿ. ಈ ‘ಸಾಂಕ್ರಾಮಿಕ ರೋಗ’ಕ್ಕೆ ಈಗ ಕರ್ನಾಟಕದ ರಾಜ್ಯಪಾಲರಾದ ಥಾವರಚಂದ್ ಗೆಹಲೋತ್‌ ಅವರೂ ಬಲಿಯಾಗಿದ್ದಾರೆ.

ಲೋಕ ಭವನದ ದುರ್ಬಳಕೆ ತಡೆಯಬೇಕೆಂದು ರಾಜಕೀಯ ಪಕ್ಷಗಳು ಬಯಸಿದರೆ ಅದಕ್ಕೆ ದಾರಿ ಇದೆ. ಅದಕ್ಕಾಗಿ ರಾಜ್ಯಪಾಲರ ಹುದ್ದೆಗೆ ನಿಜವಾದ ಸ್ವಾಯತ್ತತೆಯನ್ನು ನೀಡಿ ಅದನ್ನು ಬಲಗೊಳಿಸಬೇಕು. ರಾಜ್ಯಪಾಲರ ಹುದ್ದೆಗೆ ಭದ್ರತೆ ಒದಗಿಸಬೇಕೆಂಬ ಬಗ್ಗೆ ಸಂವಿಧಾನ ರಚನಾಸಭೆ ಸುದೀರ್ಘ ಚರ್ಚೆ ನಡೆಸಿತ್ತು. ರಾಜ್ಯಪಾಲರನ್ನು ನೇರವಾಗಿ ಶಾಸಕರೇ ಆಯ್ಕೆ ಮಾಡಬಹುದೆಂಬ ಸಲಹೆಯೂ ಆ ಚರ್ಚೆಯಲ್ಲಿ ವ್ಯಕ್ತವಾಗಿತ್ತು. ಆದರೆ, ಚುನಾವಣೆ ಮೂಲಕ ನೇಮಕ ಗೊಂಡ ರಾಜ್ಯಪಾಲರು ರಾಜ್ಯದಲ್ಲಿ ನಿಷ್ಪಕ್ಷಪಾತವಾಗಿ ಉಳಿಯದೆ ಪ್ರಾಂತೀಯ ಭಾವನೆಗೆ ಉತ್ತೇಜನ ನೀಡುವ ಸಾಧ್ಯತೆ ಇದೆ ಎಂದು ನೆಹರೂ ಸೇರಿದಂತೆ ಕೆಲವರು ಆತಂಕ ವ್ಯಕ್ತಪಡಿಸಿದ್ದರು.

ರಾಜ್ಯ ಸರ್ಕಾರಗಳನ್ನು ನಿಯಂತ್ರಿಸಿಕೊಂಡು ಹೋಗುವ ರೀತಿಯಲ್ಲಿ ಕೇಂದ್ರವನ್ನು ಬಲಗೊಳಿಸ ಬೇಕೆಂಬ ಅಭಿಪ್ರಾಯವೇ ಆ ಕಾಲದಲ್ಲಿ ಬಲವಾಗಿದ್ದ ಕಾರಣದಿಂದಾಗಿ ಚುನಾಯಿತ ಪ್ರತಿನಿಧಿಗಳ ತಲೆಯ ಮೇಲೆ ರಾಜ್ಯಪಾಲರ ಹುದ್ದೆಯನ್ನು ಸೃಷ್ಟಿಸಲಾಗಿತ್ತು. ಈ ಸದುದ್ದೇಶವನ್ನು ದುರುಪಯೋಗಪಡಿಸಿಕೊಂಡ ರಾಜಕೀಯ ಪಕ್ಷಗಳು ಅರ್ಹತೆಯನ್ನು ಪಕ್ಕಕ್ಕೆ ಸರಿಸಿ, ಪಕ್ಷನಿಷ್ಠೆ ಮತ್ತು ರಾಜಕೀಯ ಲಾಭ–ನಷ್ಟದ ಲೆಕ್ಕಾಚಾರದ ಆಧಾರದಲ್ಲಿ ರಾಜ್ಯಪಾಲರನ್ನು ನೇಮಿಸ ತೊಡಗಿದವು. ಅದರ ಪರಿಣಾಮವೇ ಇಂದಿನ ಸ‍್ಥಿತಿ.

ಲೋಕ ಭವನದ ಸಮಸ್ಯೆಗೆ ಪರಿಹಾರ ಇಲ್ಲವೆಂದಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಬಂಧ ಸುಧಾರಣೆಗಾಗಿ ರಚನೆಗೊಂಡ ನ್ಯಾಯಮೂರ್ತಿ ಆರ್.ಎಸ್. ಸರ್ಕಾರಿಯಾ ಆಯೋಗ ಮತ್ತು ಸಂವಿಧಾನ ಕಾರ್ಯ ನಿರ್ವಹಣೆಯ ಪುನರ್ ಪರಿಶೀಲನಾ ಆಯೋಗದ ಶಿಫಾರಸುಗಳಲ್ಲಿ ಪರಿಹಾರಗಳಿದ್ದು, ಕೆಲವು ಶಿಫಾರಸುಗಳು ಹೀಗಿವೆ:

* ರಾಜ್ಯಪಾಲರಾಗಿ ನೇಮಕಗೊಳ್ಳುವವರು ಯಾವುದಾದರೂ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಿರಬೇಕು. ಹುಟ್ಟಿದ ರಾಜ್ಯದಲ್ಲಿ ರಾಜ್ಯಪಾಲ ರಾಗಬಾರದು. ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ಕ್ರೀಯಾಶೀಲರಾಗಿರಬಾರದು.

* ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಸೇರಿದವರನ್ನು ವಿರೋಧಪಕ್ಷಗಳ ಆಡಳಿತ ಇರುವ ರಾಜ್ಯಕ್ಕೆ ರಾಜ್ಯಪಾಲರಾಗಿ ನೇಮಕ ಮಾಡ ಬಾರದು. ರಾಜ್ಯಪಾಲರಾಗಿ ಹೋಗುವವರು ರಾಜ್ಯ ರಾಜಕೀಯದಲ್ಲಿ ಆಸಕ್ತಿಹೊಂದಿರಬಾರದು.

* ರಾಜ್ಯಪಾಲರನ್ನು ನೇಮಕ ಮಾಡುವ ಮೊದಲು ಕೇಂದ್ರವು ಸಂಬಂಧಿತ ರಾಜ್ಯಗಳ ಮುಖ್ಯಮಂತ್ರಿ ಜೊತೆ ಸಮಾಲೋಚನೆ ನಡೆಸಬೇಕು.ರಾಜ್ಯಪಾಲರ ನೇಮಕಾತಿ ಬಗ್ಗೆ ಉಪರಾಷ್ಟ್ರಪತಿ ಮತ್ತು ಲೋಕಸಭಾಧ್ಯಕ್ಷರ ಜೊತೆ ರಹಸ್ಯ, ಅನೌಪಚಾರಿಕ ಸಮಾಲೋಚನೆ ನಡೆಸಬೇಕು.

* ಒಮ್ಮೆ ರಾಜ್ಯಪಾಲರ ಹುದ್ದೆಯಿಂದ ನಿರ್ಗಮಿಸಿದ ನಂತರ ಅವರು ಯಾವುದೇ ರಾಜಕೀಯ ಅಧಿಕಾರದ ಸ್ಥಾನಮಾನ, ಲಾಭದಾಯಕ ಹುದ್ದೆ ಹೊಂದಬಾರದು. ಬೇಕಿದ್ದರೆ ಇನ್ನೊಂದು ರಾಜ್ಯಕ್ಕೆ ರಾಜ್ಯಪಾಲರಾಗಿ ಹೋಗಬಹುದು.

ಸರ್ಕಾರಿಯಾ ಆಯೋಗದ ಕೆಲವು ಶಿಫಾರಸು ಗಳನ್ನು ಬೆಂಬಲಿಸುವ ಜೊತೆಯಲ್ಲಿ, ಸಂವಿಧಾನದ ಕಾರ್ಯನಿರ್ವಹಣೆಯ ಪುನರ್ ಪರಿಶೀಲನಾ ಆಯೋಗ ಇನ್ನಷ್ಟು ಹೊಸ ಶಿಫಾರಸು ಮಾಡಿದೆ:

* ರಾಜ್ಯಪಾಲರ ನೇಮಕಕ್ಕೆ ಪ್ರಧಾನಮಂತ್ರಿ, ಲೋಕಸಭಾಧ್ಯಕ್ಷರು ಮತ್ತು ಸಂಬಂಧಿತ ರಾಜ್ಯಗಳ ಮುಖ್ಯಮಂತ್ರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಬೇಕು. ಅದರಲ್ಲಿ ಉಪರಾಷ್ಟ್ರಪತಿಗಳನ್ನು ಸೇರಿಸಿಕೊಳ್ಳಬಹುದು. ಸರ್ಕಾರಿಯಾ ಆಯೋಗದ ಶಿಫಾರಸಿನಂತೆ ಈ ಸಮಿತಿಯ ಸಮಾಲೋಚನೆ ರಹಸ್ಯ ಮತ್ತು ಅನೌಪಚಾರಿಕ ರೀತಿಯಲ್ಲಿ ನಡೆಯ ಬೇಕಾಗಿಲ್ಲ. ಪಾರದರ್ಶಕವಾಗಿದ್ದರೆ ಒಳಿತು.

* ರಾಜ್ಯಪಾಲರ ಅವಧಿ ಕಡ್ಡಾಯವಾಗಿ ಐದು ವರ್ಷಗಳಾಗಿರಬೇಕು. ಸಂಸತ್ ಮೂರನೇ ಎರಡರಷ್ಟು ಬಹುಮತದಿಂದ ರಾಷ್ಟ್ರಪತಿಯನ್ನು ವಜಾಗೊಳಿಸಲು ಅವಕಾಶ ಇರುವಂತೆ ವಿಧಾನ ಮಂಡಲಕ್ಕೂ ರಾಜ್ಯಪಾಲರನ್ನು ಬಹುಮತದ ಮೂಲಕ ವಜಾಗೊಳಿಸುವ ಅಧಿಕಾರ ಇರಬೇಕು.

* ಚುನಾವಣಾ ಪೂರ್ವ ಮೈತ್ರಿಕೂಟವನ್ನು ಒಂದು ರಾಜಕೀಯ ಪಕ್ಷವೆಂದು ಪರಿಗಣಿಸಿ, ಅದಕ್ಕೆ ಬಹುಮತ ಇದ್ದಲ್ಲಿ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕು.

ರಾಜ್ಯಪಾಲರ ಹುದ್ದೆಯ ದುರುಪಯೋಗವನ್ನು ತಡೆಯಬೇಕೆಂಬ ಸದುದ್ದೇಶವನ್ನು ದೇಶದ ರಾಜಕೀಯ ಪಕ್ಷಗಳು ಹೊಂದಿದ್ದರೆ ಅವುಗಳ ಎದುರು ಎರಡು ಆಯ್ಕೆಗಳಿವೆ. ಒಂದೋ, 38 ವರ್ಷಗಳ ಹಿಂದೆ ಸರ್ಕಾರಿಯಾ ಆಯೋಗ ಮಾಡಿದ್ದ ಶಿಫಾರಸು ಗಳು ಮತ್ತು 22 ವರ್ಷಗಳ ಹಿಂದೆ ಸಂವಿಧಾನದ ಕಾರ್ಯನಿರ್ವಹಣೆಯ ಪುನರ್ ಪರಿಶೀಲನಾ ಆಯೋಗ ನೀಡಿದ ವರದಿಗಳನ್ನು ಒಪ್ಪಿಕೊಂಡು ರಾಜ್ಯಪಾಲ ಹುದ್ದೆಗೆ ಬಲ ತುಂಬುವ ಕೆಲಸ ಮಾಡಬೇಕು. ಇಲ್ಲವೇ, ರಾಜ್ಯಪಾಲರ ಹುದ್ದೆಯನ್ನೇ ರದ್ದುಗೊಳಿಸಿ ಲೋಕ ಭವನವನ್ನು ಮುಚ್ಚಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.