ADVERTISEMENT

ಎನ್‌ಆರ್‌ಸಿ ಜಾರಿ ಮಾಡುವ ಪ್ರಸ್ತಾವ ಕೇಂದ್ರದ ಮುಂದಿಲ್ಲ: ಅಮಿತ್‌ ಶಾ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 14:59 IST
Last Updated 24 ಡಿಸೆಂಬರ್ 2019, 14:59 IST
   

ನವದೆಹಲಿ: ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆ ಜಾರಿಗೊಳಿಸುವ ಯಾವುದೇ ಪ್ರಸ್ತಾವ ಸದ್ಯಕ್ಕೆ ಕೇಂದ್ರದ ಮುಂದಿಲ್ಲ ಎಂದು ಗೃಹ ಸಚಿವ ಅಮಿತ್‌ ಶಾ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಹೊತ್ತಲ್ಲೇ ಎರಡು ದಿನಗಳ ಹಿಂದಷ್ಟೇ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ‘ಎನ್‌ಆರ್‌ಸಿ ಕುರಿತು ಸರ್ಕಾರ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಹೀಗಾಗಿ ಅದರ ಜಾರಿ ಪ್ರಸ್ತಾವ ಇಲ್ಲ,’ ಎಂದು ಹೇಳಿದ್ದರು.

ಈ ಬಗ್ಗೆ ಮಂಗಳವಾರ ಮಾತನಾಡಿರುವ ಅಮಿತ್‌ ಶಾ,‘ಎನ್‌ಆರ್‌ಸಿ ಬಗ್ಗೆ ಯಾವುದೇ ನಿರ್ಧಾರಗಳು ಇನ್ನೂ ಕೈಗೊಂಡಿಲ್ಲ. ಆದ್ದರಿಂದ ಅದರ ಬಗ್ಗೆ ಈಗ ಚರ್ಚೆಗಳು ಅನಗತ್ಯ. ಪ್ರಧಾನಿ ಹೇಳಿರುವುದು ಸತ್ಯ. ಎನ್‌ಆರ್‌ಸಿ ಕುರಿತು ಕೇಂದ್ರ ಸರ್ಕಾರದ ಸಂಪುಟ ಸಭೆಯಲ್ಲಾಗಲಿ, ಸಂಸತ್‌ನಲ್ಲಾಗಲಿ ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ,’ ಎಂದಿದ್ದಾರೆ.

ADVERTISEMENT

ರಾಷ್ಟ್ರೀಯ ಸುದ್ದಿ ಸಂಸ್ಥೆಎಎನ್‌ಐಗೆ ಜೊತೆಗೆ ಮಾತನಾಡುತ್ತಾ ಅವರು ಈ ವಿಷಯ ಪ್ರಕಟಿಸಿದ್ದಾರೆ.

ಭಾನುವಾರ ದೆಹಲಿಯಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ‘2014ರಲ್ಲಿ ನನ್ನ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಈ ವರೆಗೆ ಎನ್‌ಆರ್‌ಸಿ ಬಗ್ಗೆ ಯಾವುದೇ ನಿರ್ಧಾರಗಳನ್ನೂ ಕೈಗೊಂಡಿಲ್ಲ ಎಂದು ನಾನು ಈ ಮೂಲಕ ದೇಶದ 130 ಕೋಟಿ ಜನರಿಗೆ ತಿಳಿಸಲು ಇಚ್ಛಿಸುತ್ತೇನೆ. ಸುಪ್ರೀಂ ಕೋರ್ಟ್‌ ಆದೇಶ ಪ್ರಕಟಿಸಿದ ನಂತರವಷ್ಟೇ ನಾವು ಅಸ್ಸಾಂನಲ್ಲಿ ಮಾತ್ರ ಇದನ್ನು ಜಾರಿಗೆ ತಂದಿದ್ದೆವು,’ ಎಂದು ಹೇಳಿದ್ದರು.

ಇನ್ನು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಮತ್ತು ಎನ್‌ಆರ್‌ಸಿಅನ್ನು ಹೊಂದಿಕೆ ಮಾಡುವ ಪ್ರಸ್ತಾವವೂ ಇಲ್ಲ ಎಂದೂ ಅಮಿತ್‌ ಶಾ ಹೇಳಿದ್ದಾರೆ.

ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌)ಪರಿಷ್ಕರಣೆಗೆ ₹3,941 ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟ ಇಂದು ಒಪ್ಪಿಗೆ ನೀಡಿದೆ. ಇದು ರಾಷ್ಟ್ರೀಯ ಜನಗಣಿಗೆ ಪೂರಕವಾದ ಪ್ರಕ್ರಿಯೆಯಾಗಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.